Tuesday, March 10, 2015

ಬರೆಯುವೆ ಖುಷಿಯಾಗಿ.....


ಆಶ್ಚರ್ಯವಾಗುತ್ತಿದೆ!  ೨೦೧೪ ರಲ್ಲಿ ನನ್ನ ಬ್ಲಾಗ್ ನಲ್ಲಿ ಒಂದೂ ಪೋಸ್ಟ್ ಇಲ್ಲ!!  ಹಾಗಂತ ೨೦೧೪ ರಲ್ಲಿ ನಾನೇನನ್ನೂ ಬರೆದೇ ಇಲ್ಲ ಎಂದಲ್ಲ.  ಒಂದೆರಡು ಅನುವಾದ, ವರದಿ, ಕಾರ್ಯಕ್ರಮಗಳ ಸುತ್ತೋಲೆ, ನಿರೂಪಣಾ ಸ್ಕ್ರಿಪ್ಟ್, ಅನುಭವ ಕಥನ, ಎರಡು ನಾಟಕಗಳ ರಚನೆ, ಹೀಗೆ ಕೆಲವು ವಿಷಯಗಳ ಕುರಿತು ಬರೆದಿದ್ದೇನೆ.  ಆದರೆ, ಬ್ಲಾಗಿನಲ್ಲಿ ಪೋಸ್ಟ್ ಮಾಡಲು ಆಗಿಲ್ಲ.  ಗೊತ್ತಿದೆ, ಕಾರಣಗಳನ್ನು ಕೊಡುವುದು ಸಮಂಜಸವಲ್ಲ.  ಹೊಸ ವರ್ಷದ ಆರಂಭಕ್ಕೇ ಆಫೀಸಿನಲ್ಲಿ ಹೊಸ ಹುದ್ದೆ, ಕಾಲಿಡುತ್ತಿದ್ದಂತೆ ಅತಿ ಕ್ಲಿಷ್ಟಕರವಾದ ಪ್ರಾಜೆಕ್ಟ್, ಒಬ್ಬನೇ ಇದನ್ನು ನಿಭಾಯಿಸಬೇಕಾದ ಅನಿವಾರ್ಯತೆ, ದಿನ ನಿತ್ಯ ಕನಿಷ್ಠ ೧೨ ಘಂಟೆಗಳ ಕಾಲ ಆಫೀಸಿನ ಕೆಲಸಕ್ಕೆ ವಿನಿಯೋಗವಾಗುತ್ತಿದ್ದ ಪರಿಸ್ಥಿತಿ.  ಇನ್ನು ಆಫೀಸಿನ ಹೊರಗೆ,  ಹೊಸ ನಾಟಕಗಳ ತಾಲೀಮು, ಹಳೆ ನಾಟಕದ ಭರ್ಜರಿ ಮರು ಪ್ರದರ್ಶನಗಳು, ಅವಿರತ ದ ಕಾರ್ಯಕ್ರಮಗಳು, ಹೀಗೆ ಸಾಲು ಸಾಲು ಚಟುವಟಿಕೆಗಳು, ’ಎಲ್ಲಿಯಾದರೂ ಸಮಯ ಸಾಲ ಸಿಗುವುದೆ?’ ಎಂದು ಅಲೆದಾಡುವ ಹಾಗೆ ಮಾಡಿದ್ದವು.  ಜೊತೆಗೆ, ಜುಲೈ ನಂತರ ಹೊಸ ಡಿ.ಎಸ್.ಎಲ್.ಆರ್ ಕ್ಯಾಮೆರ ಕೊರಳನ್ನಲಂಕರಿಸಿದ್ದರಿಂದ ಅದರ ಕಲಿಕೆಗೂ ಒಂದಷ್ಟು ಸಮಯವನ್ನು ವಿನಿಯೋಗಿಸ ಬೇಕಾಗಿತ್ತು; ಕನಸೊಂದು ನನಸಾಗಿ ಕೈಯಲ್ಲಿ ಕುಳಿತು, ’ಮುಂದೇನು?’ ಎಂದು ಕೇಳುವಾಗ, ಉತ್ತರಿಸದೆ ಸುಮ್ಮನಿರಲಾಗುತ್ತದೆಯೇ?!

ನನ್ನೆಲ್ಲಾ ಖುಷಿ, ತೃಪ್ತಿ, ಈ ರೀತಿಯ ಚಟುವಟುಕೆ, ಕಲಿಕೆ, ಕಾರ್ಯಕ್ರಮ, ಕೆಲಸಗಳಲ್ಲೇ ಇರುವುದರಿಂದ, ೨೦೧೪ನೇ ವರ್ಷದಲ್ಲಿನ ನನ್ನ ಜೀವನದ ಬಗ್ಗೆ ನನ್ನಲ್ಲಿ ಯಾವುದೇ ದೂರುಗಳಿಲ್ಲ; ಬದಲಿಗೆ ಬಹಳ ಸಮಾಧಾನವಿದೆ.   :-)

No comments:

Post a Comment