Thursday, August 5, 2010



ಮುಗಿಯದಿರಲಿ ಬಂಧನ.......


ಈ ಪ್ರಪಂಚದಲ್ಲಿ ನಿರೀಕ್ಷೆಗಿಂತ ದೊಡ್ಡ ನೋವು ಇನ್ನೊಂದಿಲ್ಲ. ಹೌದು, ನಿರೀಕ್ಷೆಯೇ ಎಲ್ಲ ನೋವಿಗೆ ಕಾರಣ. ಅವತ್ತು ಪ್ರತಿಸಲದಂತೆ ಈ ಸಲ ಕೂಡ ನನ್ನ ಹುಟ್ಟುಹಬ್ಬದಂದು ನಾನು ನಿನ್ನ ಕರೆಗಾಗಿ ಕಾಯುತ್ತಾ ಇದ್ದೆ. ನಿನ್ನ ಒಂದೇ ಒಂದು ಫೋನ್ ಕರೆಗೆ, ಶುಭಾಷಯದ ಮಾತಿಗೆ ನಾನಿಲ್ಲಿ ಕಾದು ಕೂತಿದ್ದಾಗಲೇ, ನೀನು ಅಲ್ಲಿ ಮದುವೆಯ ಸಡಗರದಲ್ಲಿ ಇರಬಹುದು...!!! ನಿನ್ನ ಗೆಳೆಯರಿಗೆ, ನೆಂಟರಿಷ್ಟರಿಗೆಲ್ಲ ಮದುವೆಯ ಕರೆಯೋಲೆಯನ್ನು ಹಂಚುತ್ತಿರಬಹುದು...ನಗುವಿನ ಮುಖವಾಡದೊಂದಿಗೆ, ಮನದೊಳಗಿನ ನೋವು ಯಾರಿಗೂ ಕಾಣದಂತೆ, ತಿಳಿಯದಂತೆ......


ಹೌದು, ನೀನು ಈವಾಗ ಇನ್ನೊಬ್ಬನನ್ನು ಮದುವೆ ಆಗೋಕೆ ಹೊರಟ್ಟಿದ್ದೀಯಾ....ಅಲ್ಲಲ್ಲ, ಈ ಕ್ರೂರ ವಿಧಿ ಹಾಗೆ ಮಾಡಿಸುತ್ತಿದೆ. ನಾನಿಲ್ಲದ ಕನಸನ್ನೂ ಕಾಣದ ನಿನ್ನನ್ನು, ನಾನಿಲ್ಲದ ಬದುಕಿಗೆ ತಳ್ಳುತ್ತಿದೆ. ಪರಿಸ್ಥಿತಿಯ ಕೈಗೊಂಬೆಗಳಾಗಿರುವ ನಾವು ಇದ್ಯಾವುದನ್ನು ಪ್ರಶ್ನಿಸುವ ಸ್ಥಿತಿಯಲ್ಲಿ ಇಲ್ಲ.

ಆದರೆ, ಒಂದು ವಿಷಯ ನೆನಪಿಟ್ಟುಕೋ ಗೆಳತಿ, ನೀನು ಬೇರೆಯವರ ಹೆಂಡತಿ/ಬಾಳ ಸಂಗಾತಿ ಆಗುತ್ತಿರುವ ಈ ಕ್ಷಣದಲ್ಲಿ ಕೂಡಾ ನಾ ನಿನ್ನನ್ನು ಪ್ರೀತಿಸುತ್ತಾ ಇದ್ದೀನಿ. ಇನ್ನು ಮುಂದೆ ಕೂಡ ಪ್ರ್ರೀತಿಸುತ್ತಾ ಇರುತ್ತೇನೆ. ಪ್ರೀತಿಗೆ ಮದುವೆಯೇ ಕೊನೆಯಲ್ಲ. ಪರಿಶುದ್ದ ಪ್ರೀತಿಗೆ ಯಾವುದೇ ಬಂಧದ ಅಡೆತಡೆಯಿಲ್ಲ. ಅದು ಹರಿಯುವ ನೀರಿನಂತೆ; ಸದಾಕಾಲ ಶಾಂತವಾಗಿ ಹರಿಯುತ್ತಲೇ ಇರುತ್ತದೆ. ನೀನು ಬರದೇ ಹೋಗಿದ್ದರೆ, ಈ ಹಾದಿಗೆ, ಹರಿವ ನದಿಗೆ, ಬೀಸುವ ಗಾಳಿಗೆ, ಸುರುಯುವ ಮಳೆಗೆ, ನನ್ನ ಬಾಳಿಗೆ ಅರ್ಥವೇ ಇರುತ್ತಿರಲಿಲ್ಲವೇನೋ... ನೀನು ನನ್ನ ಪ್ರೀತಿಗೆ ’ಹೂಂ’ ಅಂದ ದಿನದಿಂದ ಎದೆಯ ಬಾಗಿಲಲ್ಲಿ ಹೊಂಗನಸುಗಳ ರಂಗೋಲೆ ಬಿಡಿಸುತ್ತಾ ಸಂಭ್ರಮಿಸಿದ್ದೆ.

ಆಗಸದಲ್ಲಿರುವ ಬೆಳ್ಳಿಚುಕ್ಕಿಗಳನ್ನು ಸೇರಿಸಿ, ಸುಂದರವಾದ ಚಿತ್ತಾರ ಬಿಡಿಸುವುದನ್ನು ಆ ದೇವರು ಮರೆತಿದ್ದಾನ..?!! ಗೊತ್ತಿಲ್ಲ. ಆದರೆ, ಪರಸ್ಪರ ಮೆಚ್ಚುವ, ಪ್ರೀತಿ ತುಂಬಿದ ಎರಡು ಹೃದಯಗಳನ್ನು ಸೇರಿಸಲು ಆ ದೇವರು ಖಂಡಿತ ಮರೆತಿದ್ದಾನೆ...ನಮ್ಮಿಬ್ಬರ ಪ್ರೀತಿಗೆ ಯಾವುದೇ ಒಬ್ಬ ವ್ಯಕ್ತಿ ಅಡ್ಡಿಯಾಗಿರುತ್ತಿದ್ದರೂ, ನಾವು ಜೊತೆಯಾಗ ಬಹುದಾಗಿತ್ತು, ಒಟ್ಟಾಗಿ ಬಾಳಬಹುದಾಗಿತ್ತು. ಆದರೆ, ಈ ಜಾತಿ, ಕುಟುಂಬಗಳ ಆಚಾರ-ವಿಚಾರ ಇವುಗಳ ಕಾಲಡಿಗೆ ಸಿಕ್ಕು ನಮ್ಮ ಪ್ರೀತಿ ನಲುಗಿ ಹೋಯಿತು; ಒಂದಿಷ್ಟೂ ಪ್ರತಿರೋಧ ತೋರದೆ... ಎದೆಯ ತುಂಬೆಲ್ಲಾ ಗಾಯ ಮಾಡಿದ ವಿಧಿಯ ಆಟವನ್ನು ನೆನೆ ನೆನೆದು ರಕ್ತ ಕುದಿಯುತ್ತದೆ, ಅದರ ಬೆನ್ನ ಹಿಂದೆಯೆ ನಮ್ಮ ಅಸಹಾಯಕ ಸ್ಥಿತಿ ನೆನೆದು ಮನ ಮರುಗುತಿದೆ....

ನಮ್ಮ ಇಷ್ಟು ದಿನದ ಒಡನಾಟ, ನಾವಾಡಿದ ಮಾತುಗಳು, ನಾವು ಕಳೆದ ಕ್ಷಣಗಳು, ಇವುಗಳನ್ನೆಲ್ಲಾ ಮರೆಯುವುದಾದರೂ ಹೇಗೆ...!?! ಮನದ ಹಿತ್ತಲಲ್ಲಿ ನಮ್ಮೆಲ್ಲಾ ಭಗ್ನ ಕನಸುಗಳನ್ನು ಹೂತಿಡಬಹುದೇ...?! ಕಾಲ ಕಳೆದಂತೆ ಕನಸನ್ನು ಮರೆಯಬಹುದು, ಕಷ್ಟವಾದರೂ ನಿನ್ನನ್ನು ಕಾಣದ ನೋವನ್ನು ಸಹಿಸಬಹುದು. ಆದರೆ, ಅನುಭವ ತಂದ ಪ್ರೀತಿಯನ್ನು, ಪ್ರೀತಿ ತಂದ ನಿನ್ನನ್ನು ಹೇಗೆ ತಾನೆ ಮರೆಯಲಿ....?!!


ಒಂದಂತೂ ನಿಜ ಗೆಳತಿ, ನಾವಿಬ್ಬರೂ ಪರಿಶುದ್ದ ಮನಸ್ಸಿನಿಂದ ಪ್ರಿತಿಸಿದವರು. ದೀಪದ ಹುಳು ಬೆಳಕಿನ ಮೇಲಿನ ಮೋಹದಿಂದ ತನ್ನನ್ನೇ ತಾನು ಸುಟ್ಟುಕೊಳ್ಳುವಂತೆ ಪ್ರೀತಿಯಲ್ಲಿ ಬರೀ ನೋವು, ವೇದನೆ ಇದೆ ಅಂತ ಗೊತ್ತಿದ್ದರೂ ನಾವಿಬ್ಬರು ಪ್ರೀತಿಸಿದೆವು....ಅದುವೇ, ನಿಷ್ಕಲ್ಮಶ, ನಿಸ್ವಾರ್ಥ ಪ್ರೀತಿ ಎಂಬುದು ನನ್ನ ನಂಬಿಕೆ...

ಗೆಳತಿ, ನೀನು ನನಗೆ ಹುಟ್ಟುಹಬ್ಬದ ಶುಭಾಷಯ ತಿಳಿಸದಿರಬಹುದು, ಆದರೆ ನಿನ್ನು ಮದುವೆಗೆ ಶುಭಾಷಯಗಳನ್ನು ಮುಂಚಿತವಾಗಿಯೇ ತಿಳಿಸುತ್ತಿದ್ದೇನೆ...


ಸ್ವರ್ಗದಲ್ಲಿ ನಿಶ್ಚಯವಾಗಿರುವ ಮದುವೆ ನಿಮ್ಮದು,
ಸುಖ, ಶಾಂತಿ, ನೆಮ್ಮದಿಯ ಬಾಳು ನಿಮ್ಮದಾಗಲಿ,
ಪ್ರೀತಿ ತುಂಬಿದ ನಿಮ್ಮ ಸಂಸಾರ ಸ್ವರ್ಗವನ್ನು
ಈ ಭೂಬಿಯ ಮೇಲೆ ನಾವೆಲ್ಲ ಕಾಣುವಂತಾಗಲಿ..


-ಇಂತಿ ನಿನ್ನ ಪ್ರೀತಿಯ....