Sunday, December 26, 2010

ಗವಿರಂಗಾಪುರ

ಕೆಲವು ವಾರಗಳ ಹಿಂದೆ ಈ ಬೆಂಗಳೂರೆಂಬ ಮಹಾನಗರವನ್ನು ಬಿಟ್ಟು, ಬಯಲುಸೀಮೆಯ ಹಳ್ಳಿಯೊಂದಕ್ಕೆ ಹೋಗಿದ್ದೆ. ನಮ್ಮ ಮನೆದೇವ್ರುಎಂದು ಪೂಜಿಸುವ ಗವಿರಂಗನಾಥಸ್ವಾಮಿಯ ಮೂಲ ನೆಲೆ, ದೇವಸ್ಥಾನವಿರುವುದು ಗವಿರಂಗಾಪುರದಲ್ಲಿ. ಇಲ್ಲಿನ ಬೆಟ್ಟದ ಮೇಲಿರುವ ಗುಹೆ/ಗವಿಯಲ್ಲಿ ರಂಗ ದೇವರ ಮೂರ್ತಿ ಇರುವುದರಿಂದ ಈ ಹಳ್ಳಿಗೆ ಗವಿರಂಗಾಪುರ ಎಂಬ ಹೆಸರು. ಗವಿಯಲ್ಲಿರುವ ಈ ಮೂರ್ತಿ ಸ್ವಾಭಾವಿಕವಾದ ಉದ್ಭವ ಮೂರ್ತಿ ಎಂಬ ಪ್ರತೀತಿ. ಭಗವಾನ್ ವಿಷ್ಣುವಿನ ದಶಾವತಾರಗಳಲ್ಲಿ ಎರಡನೇ ಅವತಾರವಾದ, ಕೂರ್ಮಾವತಾರದ (ಆಮೆ ಅವತಾರ) ಪ್ರತಿರೂಪ ಈ ಗವಿರಂಗ.


ಬೆಂಗಳೂರಿನ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿರುವ ಬಸವನ ಮೂರ್ತಿ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿತ್ತುಎಂಬ ನಂಬಿಕೆಯಂತೆ, ಇಲ್ಲಿನ ಗವಿರಂಗ ದೇವರ ಮೂರ್ತಿ ಸಹ ಬೆಳೆಯುತ್ತಿದೆ ಎಂಬ ನಂಬಿಕೆ ಇದೆ. ಇಲ್ಲಿನ ಬಹು ಮುಖ್ಯ ವಿಶೇಷತೆ ಎಂದರೆ, ದೇವರ ಬಳಿ ಭಕ್ತರು ’ಹೂ ’ಕೇಳುವ ರೂಢಿ. ಭಕ್ಥರ ಹಾಗೂ ದೇವರ ನಡುವೆಮಾನಸಿಕೆ ಸ್ಥಿತಿಯಲ್ಲಿ ನಡೆಯುವ ಮಾತುಕತೆ. ತಮ್ಮ ಯಾವುದಾದರು ಹೊಸ ಕೆಲಸಗಳನ್ನು ಪ್ರಾರಂಭ ಮಾಡುವ ಮೊದಲುಇಲ್ಲಿಗೆ ಬರುವ ಭಕ್ತರು, ಆ ಕೆಲಸದಿಂದ ತಮಗಾಗುವ ಒಳಿತು, ಕೆಡಕುಗಳನ್ನು ತಿಳಿಯಲು ದೇವರ ಮುಂದೆ ಬೇಡಿಕೆ ಇಟ್ಟು, ಗಂಟೆ ಗಂಟೆಗಟ್ಟಲೆ ಹೂವಿಗಾಗಿ ಕಾಯುತ್ತಾರೆ. ದೇವರ ತನ್ನ ಬಲಗಡೆಯಿಂದ ಹೂವನ್ನು ಕರುಣಿಸಿದರೆ, ಕೆಲಸ ಆಗುವುದೆಂದು, ಒಳಿತೆಂದು, ಎಡಗಡೆಯಿಂದ ಹೂವನ್ನು ಕರುಣಿಸಿದರೆ, ಕೆಲಸ ಆಗದೆಂದು ನಂಬಿಕೆ. ಹೀಗೆ ಭಕ್ತರು ದೇವರ ಬಳಿ ಹೂ ಕೇಳುವುದನ್ನು ನೋಡುವುದೆ ಒಂದು ರೋಚಕತೆ, ಹಾಗೆ ಹೂ ಕೇಳಿ ಜೀವನದಲ್ಲಿ ಒಳಿತು, ಕೆಡುಕುಗಳನ್ನು ಕಂಡವರ ಅನುಭವಗಳನ್ನು ಕೇಳಿದರೆ ದೇವರಲ್ಲಿ ಭಯ-ಭಕ್ತಿ ಮೂಡದೇ ಇರುವುದಿಲ್ಲ.ಏನಾದರಾಗಲಿ, ಆ ದೇವರನ್ನು ಬೆಣ್ಣೆ ಅಲಂಕಾರದಲ್ಲಿ ಹಾಗೂ ಹೂವಿನ ಅಲಂಕಾರದಲ್ಲಿ ನೋಡುವುದೇ ಒಂದು ಖುಷಿ.
ಈ ಗವಿರಂಗಾಪುರ ಇರುವುದು, ಚಿತ್ರದುರ್ಗ ಜಿಲ್ಲೆಯ, ಹೊಸದುರ್ಗ ತಾಲ್ಲೂಕಿನಲ್ಲಿ. ಗವಿರಾಂಗಪುರ ಬಯಲುಸೀಮೆಗೆಉದಾಹರಣೆಯಂತಿರುವ ಒಂದು ಚಿಕ್ಕ ಹಳ್ಳಿ. ಈ ಹಳ್ಳಿಯನ್ನು ನಾನು ಚಿಕ್ಕಂದಿನಿಂದಲೂ ನೋಡುತ್ತಾ ಬಂದಿದ್ದೇನೆ, ಈ ಜಾಗದ ಬಗ್ಗೆ ನನ್ನ ಹಿರಿಯರು ಹೇಳಿರುವುದನ್ನುಕೇಳಿದ್ದೇನೆ. ನೆನಪಿನಲ್ಲಿ ಉಳಿಯುವಂತಹ ನನ್ನ ಜೀವನದ ಕೆಲವು ದಿನಗಳನ್ನು ಅಲ್ಲಿ ಕಳೆದಿದ್ದೇನೆ. ಆದರೆ, ಅಂದಿಗೂ, ಇಂದಿಗೂ ಆಗಿರುವ ಹಲವು ಬದಲಾವಣೆಗಳನ್ನ ನೆನೆಸಿಕೊಂಡರೆ ಯಾಕೋ ಒಂದು ರೀತಿಯ ಕಸಿವಿಸಿ ಉಂಟುಮಾಡುತ್ತದೆ; ಕೆಲವೊಮ್ಮೆ ಆ ಜಾಗದಲ್ಲಿನ ಬದಲಾವಣೆಯ ಬಗ್ಗೆಯಾದರೆ, ಇನ್ನೊಮ್ಮೆ ನಮ್ಮ ಜೀವನದಲ್ಲಿನ ಬದಲಾವಣೆಗಳ ಬಗ್ಗೆ.


ದೇವರ ದರ್ಶನಕ್ಕೆ ದೂರದ ಊರುಗಳಿಂದ ಬರುವವರಿಗಾಗಿಯೇಹಲವು ಧರ್ಮ ಛತ್ರಗಳಿವೆ. ಇಲ್ಲಿನ ಯಾವುದೇ ಛತ್ರಗಳಲ್ಲಿ ಇದ್ದರೂ ಒಂದೇ ರೀತಿಯ ಅನುಭವ. ಹೊರಗೆಬಣ ಬಣ ಸುಡುವ ಬಿಸಿಲು, ಅರ್ಧ ಗಂಟೆಗೊಮ್ಮೆ ಬೀಸುವ ಗಾಳಿ ಕೂಡ ಬಿಸಿ, ಬಿಸಿ, ಬೆಚ್ಚಗೆ, ಬಿಸಿಲಿಂದ ದಣಿದ ದೇಹಕ್ಕೆ,ಸುತ್ತಲಿನ ನಿಶ್ಯಬ್ದ, ಪ್ರಶಾಂತವಾದ ವಾತಾವರಣ ಪೂರಕವಾಗಿ ನಿದ್ದೆಯ ಮಂಪರು ಹತ್ತುವಷ್ಟರಲ್ಲಿಯೇ, ದೂರದಿಂದಲೇ ಧೂಳೆಬ್ಬಿಸಿ ಕೊಂಡು, ದೊಡ್ಡದಾಗಿ ಹಾರ್ನ್ ಮಾಡುತ್ತಾ ಬಂದು ನಿಲ್ಲುವ ಖಾಸಗಿ ಬಸ್ಸುಗಳು, ಎಬ್ಬಿಸಿದ ಧೂಳು ಕರಗುವಮುಂಚೆಯೇ, ಒಂದಷ್ಟು ಜನರನ್ನು ಇಳಿಸಿ, ಮತ್ತೊಂದಷ್ಟು ಜನರನ್ನು ಹತ್ತಿಸಿಕೊಂಡು ಅದೇ ದೊಡ್ಡದಾಗಿ ಹಾರ್ನ್ ಮಾಡುತ್ತಾ,ಮತ್ತೆ ಧೂಳೆಬ್ಬಿಸಿಕೊಂಡು ಕ್ಷಣಾರ್ಧದಲ್ಲಿ ಹೊರಟುಬಿಡುತ್ತವೆ. ಮತ್ತದೇ ನಿಶ್ಯಬ್ದ, ಪ್ರಶಾಂತ ವಾತಾವರಣ...ನಿದ್ದೆಯ ಮಂಪರಿನಲ್ಲಿದ್ದವರಿಗೆ, ಬಸ್ಸು ಬಂದು ಹೋಗಿದ್ಡು ಒಂದು ಭ್ರಮೆಯಂತೆ, ಕನಸಂತೆ ಆಗಿಬಿಡುತ್ತಿತ್ತು. ನಗರ ಬದುಕಿನ ಧಾವಂತ, ಗಡಿಬಿಡಿ ಈ ಪರಿಸರದಲ್ಲಿ ಇಲ್ಲದೇ ಇರುವುದರಿಂದ, ಇಲ್ಲಿ ಸಮಯವೇ ಸರಿಯುವುದಿಲ್ಲ. ಸಮಯವೇ ನಿಂತುಹೋಗಿದೆಯೇ ಎಂಬ ಅನುಮಾನ ಕಾಡುತ್ತಿತ್ತು..


ಆದರೆ, ಇತ್ತೀಚಿನ ಕೆಲವು ಬೆಳವಣಿಗೆಗಳ ಬಗ್ಗೆ ಬರೆಯಲೇಬೇಕು. ಇತ್ತೀಚೆಗೆ ಹೆಚ್ಚಾಗಿರುವ ಭಕ್ತ ಜನರಿಂದ ಇಲ್ಲಿಗೆ ಬರುತ್ತಿರುವ ಕಾಣಿಕೆಗಳೂ ಹೆಚ್ಚಾಗಿರಬೇಕು. ದೇವಸ್ಥಾನದ ಜೀರ್ಣೋದ್ದಾರದಹೆಸರಿನಲ್ಲಿ ದೇವಸ್ಥಾನಕ್ಕೆ ಹೈ-ಟೆಕ್ ಟಚ್ ನೀಡಲಾಗುತ್ತಿದೆ. ಹೀಗಾಗಿ, ಮೊದಲಿನ ಹಾಗೆ ಗವಿಯೊಳಗಿದ್ದ ಆ ರಂಗನನ್ನು ನೋಡುವ ಆನಂದ, ಈಗ ಕಣ್ಮರೆಯಾಗುತ್ತಿದೆ ಎನಿಸುತ್ತಿದೆ. ದೇವರ ಗರ್ಭಗುಡಿಯನ್ನು ಕಬ್ಬಿಣದ ಬಾಗಿಲುಗಳಿಂದ ಮುಚ್ಚುವುದು ನನಗೆ ಬ್ಯಾಂಕ್ ಗಳಲ್ಲಿನ ಲಾಕರ್ ನಂತೆ ಕಾಣುತ್ತದೆ. ಅದರ ಜೊತೆಗೇ, ಮನುಷ್ಯನನ್ನು ಸೃಷ್ಟಿಸಿದ ದೇವರೂ ಕೂಡ ಇಂದು ಮನುಷ್ಯನ ಅಂಕುಶದಲ್ಲಿದ್ದಾನಾ ಎಂಬ ಅನುಮಾನವು ಉಂಟಾಗುತ್ತದೆ. ಅಲ್ಲಿನ ವಾತಾವರಣ ವಾಣಿಜ್ಯೀಕರಣವಾಗುತ್ತಿದೆಯೇ ಎಂಬ ಸಂಶಯ ಬೇಸರ ತರುತ್ತಾದರೂ, ತಳ್ಳಿ ಹಾಕುವಂತಿಲ್ಲ. ಅಲ್ಲಿನ ಕಚ್ಚಾ ಮಣ್ಣು ರಸ್ತೆ ಈಗ ಆಗಲವಾಗಿ, ಡಾಂಬರೀಕರಣಗೊಂಡಿದೆ, ಹೆಚ್ಛಿನ ಸ್ಠಳೀಯರ ಬಳಿ ಬೈಕ್ ಗಳಿವೆ, ಹಲವರು ಆಟೋ ಓಡಿಸುವುದನ್ನೆ ಕಾಯಕ ಮಾಡಿಕೊಂಡಿದ್ದಾರೆ. ಆಲ್ಲಿನ ಆಟೋ ಸ್ಟ್ಯಾಂಡ್ ನಲ್ಲಿ ಕೇಳುವುದು ಸಹ ಹಿಂದಿ ಚಿತ್ರಗೀತೆಗಳೇ..ಈ ಆಧುನೀಕರಣದ ಬಗ್ಗೆ ನನ್ನ ವಿರೋಧವಿಲ್ಲ, ಆದರೆ, ಈ ರೀತಿಯ ಆಧುನೀಕರಣದ ಅವಶ್ಯವಿದೆಯಾ..?! ಬಸ್ ಸ್ಟ್ಯಾಂಡಿನಲ್ಲಿ ಬಸ್ಸಿಗಾಗಿ ಕಾಯುತ್ತಾ ಕುಳಿತಿದ್ದ ನನಗೆ, ಅಲ್ಲಿನ ವಾತಾವರಣಕ್ಕು, ಬೆಂಗಳೂರಿನಹೊರವಲಯದ ಬಡಾವಣೆಯೊಂದಕ್ಕು ಯಾವುದೇ ವ್ಯತ್ಯಾಸ ಕಾಣಿಸಲಿಲ್ಲ...ಆ ಹಳ್ಳಿಯಲ್ಲಿ ಬೆಟ್ಟಗುಡ್ಡವಿದೆ ಎಂಬುದನ್ನು ಹೊರತುಪಡಿಸಿ..!!

ಅಷ್ಟೇ ಅಲ್ಲದೆ, ನಮ್ಮಲ್ಲೂ ಹಲವು ಬದಲಾವಣೆಗಳಾಗಿವೆ. ಮೊದಲೆಲ್ಲಾ ಈ ಹಳ್ಲಿಗೆ, ದೇವರ ದರ್ಶನಕ್ಕೆ ಹೋಗಬೇಕಾದಾಗ,ನಾವೆಲ್ಲ ಕುಟುಂಬ ಸಮೇತ ಹೋಗುತ್ತಿದ್ದೆವು. ಅಪ್ಪ, ಅಮ್ಮ, ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಅತೆ, ಮಾವ,ಅವರೆಲ್ಲರ ಮಕ್ಕಳು, ಹಿರಿಯರ ಸ್ನೇಹಿತರು, ಹೀಗೆ ಬಹಳ ಜನ ಒಟ್ಟಿಗೆ, ವ್ಯಾನೊ, ಬಸ್ಸೋ ಮಾಡಿಕೊಂಡು ಹೋಗುತ್ತಿದ್ದೆವು.ಮೂರು - ನಾಲ್ಕು ದಿನಗಳ ಕಾಲ ಒಂದು ರೀತಿ ಹಬ್ಬದ ವಾತಾವರಣ ಇರುತ್ತಿತ್ತು. ಆದರೆ ಇತ್ತೀಚೆಗೆ ಹಾಗೆ ನಾವೆಲ್ಲ ಒಟ್ಟಿಗೆ ಹೋದ ನೆನಪೇ ಇಲ್ಲ..!! ಅವರವರ ಅನುಕೂಲಕ್ಕೆ ತಕ್ಕಂತೆ ಹೋಗಿ ಬರುವುದು ರೂಢಿಯಾಗಿಬಿಟ್ಟಿದೆ. ಹಾಗೆ ಹೋದರೂ, ಒಂದು ರಾತ್ರಿ, ಎರಡು ಹಗಲಿಗಿಂತ ಹೆಚ್ಚಾಗಿ ಉಳಿಯುವುದಿಲ್ಲ. ಹಲವು ಬಾರಿ ಒಂದೇ ದಿನದಲ್ಲಿ ಗಡಿಬಿಡಿಯಿಂದ ಹೋಗಿ ಬರುವುದೂ ಉಂಟು...ಕಾಲ ಕಳೆದಂತೆ, ಕುಟುಂಬದ/ಮನುಷ್ಯ ಸಂಬಂಧಗಳಲ್ಲಿ ಉಂಟಾಗಿರುವ ಬಿರುಕುಗಳಿಂದ ಅಂದಿನ ಆತ್ಮೀಯತೆ ಇಂದಿಗೆ ಉಳಿದಿರುವಂತಿಲ್ಲ ಅಥವಾ ಉಳಿಸಿಕೊಳ್ಳಲ್ಲು ನಮಗೇ ಮನಸ್ಸಿಲ್ಲವೋ, ಸಮಯವಿಲ್ಲವೋ..? ಗೊತ್ತಿಲ್ಲ......