Tuesday, December 31, 2013

’ಕಳವು’ – ’ಕಳ್ಳರನ್ನೆಲ್ಲಾ ಜೈಲಿಗೆ ಹಾಕೋದಾದ್ರೆ, ಭೂಮಿಗೇ ಬೇಲಿ ಹಾಕಬೇಕಲ್ಲವಾ?’


“ಇವೊತ್ತ್ ರಾತ್ರಿ ಪಂಚಾಯ್ತಿ ಕಟ್ಟೆ ತಾವ ನ್ಯಾಯಾ ತೀರ್ಮಾನ ಐತೆ, ಎಲ್ಲಾ ಮನೆಯಿಂದಾನೂ ಒಬ್ಬೊಬ್ಬರು ಬರಬೇಕ್ರಪ್ಪೋ...” ಅಂತ ಸುದ್ದಿ ಕೊಟ್ಟ ಹಾಗೆ, ರಾತ್ರಿ ಆಗುತ್ತಿದ್ದಂತೆ ಇಡೀ ಹಳ್ಳಿಯೇ ಪಂಚಾಯಿತಿ ಕಟ್ಟೆ ಬಳಿ ಸೇರಿದೆ. ನಿನ್ನೆ ರಾತ್ರಿ ರಂಗಮ್ಮನ ಎಮ್ಮೆ ಕಳುವಾಗಿದೆ ಊರಕಳ್ಳ ಎನಿಸಿಕೊಂಡಿರುವ ಪಟ್ಲನನ್ನು ಹುಡುಕಿ ತಂದು ಪಂಚಾಯ್ತಿ ಕಟ್ಟೆ ಬಳಿಯ ಕಂಬಕ್ಕೆ ಕಟ್ಟಿ ಹಾಕಿದ್ದಾರೆ.

-------------------------------

ರಂಗಮ್ಮಳದು ಬಿರುಕುಬಿಟ್ಟಂತ ಸಂಸಾರ. ಅವಳ ಕಣ್ಣಿನಲ್ಲಿ ಎಂದೋ ನಾಲಾಯಕ್ ಎನಿಸಿಕೊಂಡ ಗಂಡ ಪುಟ್ಟಲಾಯ್ರಿ ಊರೂರು ಅಲೆಯುತ್ತಾ, ನಾಟಕಗಳಲ್ಲಿ ಅಭಿನಯಿಸುತ್ತಾ ಕಾಲ ಕಳೆಯುತ್ತಿದ್ದಾನೆ. ಇವನಿಗೆ ಮನೆ, ಮಡದಿ, ಮಗನ ಯೋಚನೆಯಿಲ್ಲ. ಗಂಡನಿಂದ ದೂರಾಗಿ, ತಾಯಿ, ತಂಗಿ, ಮಗನೊಡನೆ ಜೀವನ ನಡೆಸುತ್ತಿರುವ ರಂಗಮ್ಮಳೇ ಗಂಡು ದಿಕ್ಕಿಲ್ಲದ ಆ ಮನೆಗೆ ಆಸರೆ. ಅವಳಿಗೆ ಆಸರೆಯಾಗಿದ್ದ, ತಾಯಿಸಮಾನವಾದ ಅವಳ ಮನೆಯ ಎಮ್ಮೆ ಒಂದು ರಾತ್ರಿ ದಿಢೀರನೆ ಕಳುವಾಗುತ್ತದೆ. ಹೀಗೆ ಕಳುವಾಗಿರುವ ಎಮ್ಮೆಯ ಹುಡುಕಾಟದೊಂದಿಗೆ ಆರಂಭವಾಗುವ ಕಥೆ ಪಂಚಾಯಿತಿ ಕಟ್ಟೆಯ ಬಳಿಗೆ ಬರುವ ವೇಳೆಗೆ ಪ್ರೇಕ್ಷಕರಲ್ಲಿ ಸಾಕಷ್ಟು ಪ್ರಶ್ನೆಗಳೆದ್ದಿರುತ್ತವೆ, ಕಳುವಾಗಿರುವುದು ಎಮ್ಮೆ ಮಾತ್ರಾನ? ಕಳಕೊಂಡಿರುವುದು ರಂಗಮ್ಮ ಮತ್ತು ಅವಳ ಮನೆಯವರು ಮಾತ್ರಾನ? ಅಸಲಿಗೆ, ಕಳೆದುಕೊಳ್ಳುವುದು ಎಂದರೆ ಏನು? ಯಾವುದನ್ನ? ಹೊರಗಿನದಾ ಅಥವಾ ಒಳಗಿನದಾ? ಕಳೆದುಕೊಂಡದ್ದು ಸಿಗುವುದೇ? ಕದ್ದವನಿಗೆ ಶಿಕ್ಷೆಯಾಗುವುದೇ? ನಿಜವಾದ ಕಳ್ಳ ಪಟ್ಲ ಒಬ್ಬನೇನಾ?

ಹೀಗೆ, ’ಪುಟಗೋಸಿ’ ಎಮ್ಮೆಯೊಂದರ ಕಳವು ಊರಿನ ಇತರರ ಮನೆ, ಮನ, ದೇಹದಲ್ಲಾದ ಕಳವುಗಳ ಬಗ್ಗೆ ತಿಳಿಸುತ್ತಾ, ಕಳೆದುಕೊಂಡವರ ನೋವನ್ನು ದಾಟಿಸುತ್ತಾ, ಕಳವಿನ ಬಗ್ಗೆ ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳುವಂತೆ, ಯೋಚಿಸುವಂತೆ ಮಾಡುತ್ತದೆ.

.ಈ ನಡುವೆ, ಗೌಡನ ಮನೆಯ ಬಂಗಾರದೊಡವೆ ಯಾವುದೇ ಆಯಾಸವಿಲ್ಲದೆ ಕಳ್ಳನ ಕೈ ಸೇರುವ ಸನ್ನಿವೇಶ; ಪ್ರೀತಿಸಿದ ಹುಡುಗನೊಂದಿಗೆ ಓಡಿ ಹೋಗಲು ಪ್ರಯತ್ನಿಸುವ ಗೌಡನ ಮಗಳ ಪ್ರಕರಣ; ಪುಟ್ಟಲಾಯ್ರಿಯ ಯೌವ್ವನದ ಕರಾಳ ಇತಿಹಾಸ; ಮದುವೆ ವಿಷಯದಲ್ಲಿ ರಂಗಮ್ಮಳಿಗಾದ ಮೋಸ, ದೌರ್ಜನ್ಯ; ತಿಪ್ಪೆಯ ಬಳಿ ಸಿಕ್ಕ ಚಿನ್ನದ ಜಡೆಬಿಲ್ಲೆಯನ್ನು, ತಾನು ಕಷ್ಟದಲ್ಲಿದ್ದರೂ ಕಳೆದುಕೊಂಡವರಿಗೇ ಹಿಂದಿರುಗಿಸುವ ರತ್ನಮ್ಮಳ ಆಸೆ ಸತ್ತ ಬದುಕು; ಜಮೀನಿನ ವಿಚಾರವಾಗಿ ಹೊಂಚು ಹಾಕುತ್ತ ಕೂರುವ ಗೌಡನ ಸಂಕಟ; ಎಮ್ಮೆ ಕಳೆದುಕೊಂಡ ರಂಗಮ್ಮನ ತಾಯಿಯ ನೋವು, ಆ ನೋವಿಗೆ ಸ್ಪಂದಿಸುವ ಊರ ಜನ, ಹೀಗೆ ಇವುಗಳಿಗೆಲ್ಲಾ ಪ್ರೇಕ್ಷಕ ಸಾಕ್ಷಿಯಾಗುತ್ತಾನೆ.

ಇಲ್ಲಿ ’ಕಳವು’ ಎಂಬುದಕ್ಕೆ ಜಾತಿ ಭೇದವಿಲ್ಲ. ಎಲ್ಲರೂ ಒಂದಲ್ಲೊಂದು ವಿಷಯದಲ್ಲಿ ಕಳವಾಗಲ್ಪಟ್ಟವರೇ. ಆದ್ದರಿಂದ ಇಲ್ಲಿ ಎಲ್ಲರೂ ಒಂದೇ ಕುಲದವರು. ’ಕಳವು’ ವಿಷಯವನ್ನು ಮಾನವೀಯ ನೆಲೆಯಲ್ಲಿ – ಅಂದರ ವೈಯಕ್ತಿಕ ಹಾಗೂ ಸಂಬಂಧಗಳ ಮಟ್ಟದಲ್ಲಿ – ಚರ್ಚಿಸಿರುವುದರಿಂದ ಇಲ್ಲಿನ ಹಳ್ಳಿಯಲ್ಲಿ ಜಾತಿ ರಾಜಕಾರಣವಾಗಲಿ, ಗಲಾಟೆಯಾಗಲಿ ಇಲ್ಲ.

ಹಾಗೆಯೇ, ಗಂಡು-ಹೆಣ್ಣು, ಹಿರಿಯ-ಕಿರಿಯ ಎಂಬ ಭೇದವಿಲ್ಲದೆ ಎಲ್ಲರೂ ಕಳವಾಗಲ್ಪಟ್ಟವರೇ. ಒಬ್ಬೊಬ್ಬರ ಕಳವು ಒಂದೊಂದು ರೀತಿ. ರಂಗಮ್ಮನ ಮನೆಯ ಎಮ್ಮೆಯ ಕಳವು ನಿಗೂಢವಾದರೆ, ಗೌಡನ ಮನೆಯ ಕಳವು ಗುಟ್ಟು; ಪುಟ್ಟಲಾಯ್ರಿಯ ಗುಟ್ಟು ನುಂಗಲೂ ಆಗದ, ಉಗುಳಲೂ ಆಗದ ಬಿಸಿ ತುಪ್ಪದಂತೆ. ಅಂಜನ ಹಾಕಿ, ಎಮ್ಮೆ ಕದ್ದ ಕಳ್ಳನನ್ನು ತೋರಿಸಲು ರಂಗಮ್ಮನ ಮನೆಗೆ ಬರುವ ಆಚಾರಿಯದು ಹಗಲು ದರೋಡೆ!! ಆದರೂ, ಅವನಿಗೆ ಶಿಕ್ಷೆಯಿಲ್ಲ, ಆ ಕಳುವಿನ ಬಗ್ಗೆ ಯಾರಿಗೂ ಅರಿವಿಲ್ಲ, ನೋವಿಲ್ಲ. ಅಲ್ಲದೇ, ಬೇರೆಯವರ ವಸ್ತು ಕಳೆದು ಹೋದಾಗ, ಅಂಜನ ಹಾಕಿ ಕಳ್ಳನ ಮಾಹಿತಿ ಕೊಡುವ ನಾಟಕವಾಡುವ ಆಚಾರಿಗೆ ತನ್ನ ಮನೆಯಲ್ಲಾದ ಕಳ್ಳತನಕ್ಕೂ ಪಟ್ಲನೇ ಕಾರಣವಿರಬಹುದೋ ಏನೋ ಎಂದು ಅನುಮಾನಿಸುವುದು ಪರಿಸ್ಥಿತಿಯ ವ್ಯಂಗ್ಯ.


ಮನೆಯ ಬಂಗಾರದ ಒಡವೆಯಂತಿದ್ದ ಎಮ್ಮೆ ಕಳುವಾಗಿರುವುದು ರಂಗಮ್ಮನಿಗೆ ನೋವು ತಂದರೆ, ಬಂಗಾರದ ಒಡವೆ ಕಳುವಾದರೂ, ಮಗಳ ವಿಷಯದಲ್ಲಿ ಮಾನ ಉಳಿಯಿತಲ್ಲ ಎಂಬ ಸಮಾಧಾನ ಗೌಡನಿಗೆ; ಕನಸುಗಳೇ ಕಳುವಾದ ಜೀವನ ರತ್ನಮ್ಮಳಿಗೆ ಕಷ್ಟವಾದರೆ; ಯಾವುದೇ ತಪ್ಪಿಲ್ಲದೆಯೂ ತನ್ನ ಸಂತಾನ ಭಾಗ್ಯ ಕಳೆದುಕೊಂಡ ಪುಟ್ಟ ಲಾಯ್ರಿಗೆ ಅವಮಾನದ/ಹಿಂಜರಿಕೆಯ ಭಯ. ಹೀಗೆ, ಅವರವರ ಪರಿಸ್ಥಿತಿ, ಅಂತಸ್ತಿಗೆ ತಕ್ಕಂತೆ ಕಳುವಿನಿಂದಾಗುವ ಪರಿಣಾಮವೂ, ಅದನ್ನೆದುರಿಸುವ ಬಗೆಯೂ ಇಲ್ಲಿ ಭಿನ್ನ. ಎಲ್ಲ ಪಾತ್ರಗಳಿಂದಲೂ ಸಮಾಂತರ ದೂರ ಕಾಯ್ದುಕೊಂಡಂತಿರುವ ’ಐಡಿಯಾ’ ಪಾತ್ರವೊಂದೇ ಇಲ್ಲಿ ತಟಸ್ಥ!!

-------------------------------

ನ್ಯಾಯ ಹೇಳುವ ಸ್ಥಾನದಲ್ಲಿರುವ ಗೌಡನಿಗೆ ಕಳೆದುಕೊಂಡವರ ನೋವು ತಿಳಿಯುವುದಾ? ಕಳ್ಳತನದ ಆರೋಪ ಹೊತ್ತಿರುವ ಪಟ್ಲನ ಗತಿ ಏನು? ಕಳೆದುಕೊಂಡಿರುವವರ ಪ್ರತಿನಿಧಿಯಂತಿರುವ ರಂಗಮ್ಮನ ನೋವು ನೀಗುವುದೇ? ನ್ಯಾಯಕ್ಕಾಗಿ ಅವಳು ಹಠ ಹಿಡಿಯುವಳೇ? ಅಥವಾ ರಗಳೆ ಬೇಡವೆಂದು ನೋವ ನುಂಗುವಳೇ? ಗೊತ್ತಿಲ್ಲ. ಈ ’ಕಳವು’ ವಿಷಯವನ್ನು ’ಇದು ಹೀಗೆ’ ಎಂದು ಖಡಾಖಂಡಿತವಾಗಿ ನಿರ್ಧರಿಸಿ ಹೇಳಲಾಗದೆಯೋ ಅಥವಾ ಪ್ರೇಕ್ಷಕರ ವಿವೇಕಕ್ಕೋ ಬಿಟ್ಟು ಕೊಡುತ್ತಾ ಚಿತ್ರ ಕೊನೆಯಾಗುವುದು ನಿಜಕ್ಕೂ ಸಮರ್ಥನೀಯವಾಗಿದೆ ಎನಿಸುತ್ತದೆ.

ಥಿಯೇಟರಿನಿಂದ ಹೊರ ಬರುವಾಗ, ನನಗೇ ಗೊತ್ತಿಲ್ಲದೆ ’ಮಠ’ ಚಿತ್ರದ ಹಾಡಿನ ಸಾಲೊಂದು ಮನದಲ್ಲಿ ಗುನುಗುನಿಸುತ್ತಿತ್ತು!!



****************



ಈ ರೀತಿಯ ಸಂಪೂರ್ಣ ನಮ್ಮ ಮಣ್ಣಿನ ಸೊಗಡಿನ, ದೇಸಿತನದ ಕಥೆಯನ್ನು ಚಿತ್ರಮಾಡಲು ಮುಂದಾದ ಇಡೀ ಚಿತ್ರತಂಡಕ್ಕೆ ಶುಭಾಶಯಗಳನ್ನು, ಮೆಚ್ಚುಗೆಯನ್ನು ತಿಳಿಸಲೇಬೇಕು. ಕಥೆಯಲ್ಲಿರುವ ಸೂಕ್ಷ್ಮತೆಯನ್ನು, ಸಂಕೀರ್ಣತೆಗಳನ್ನು ತೆರೆಯ ಮೇಲೆ ನಿರೂಪಿಸುವಲ್ಲಿ ನಿರ್ದೇಶಕರು ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ. ಚಿತ್ರಕ್ಕಾಗಿ ಆಯ್ದುಕೊಂಡ ಜಾಗ, ಹಳ್ಳಿ, ಪ್ರತಿ ದೃಶ್ಯದ ಫ್ರೇಮ್, ಇವೆಲ್ಲವೂ ಫ್ರೆಶ್ ಎನಿಸುವಂತಿದೆ. ಕೆಲವು ಕಡೆ ಚಿತ್ರವನ್ನು ಮತ್ತಷ್ಟು ಸುಂದರಗೊಳಿಸಬಹುದಿತ್ತು ಎಂದೆನಿಸದರೂ, ಅದನ್ನು ಮಾಡಲಾಗದೇ ಇದ್ದುದ್ದಕ್ಕೆ ಹಲವು ಕಾರಣಗಳಿರಬಹುದು. ರಂಗಮ್ಮನ ಮನೆಯ ಎಮ್ಮೆಯ ಪುರಾಣವನ್ನು ಹರಿಕಥೆಯ ರೂಪದಲ್ಲಿ ನಿರೂಪಿಸುವಾಗ ಅಲ್ಲಿ ರಂಗಮ್ಮನ ಮನೆಯವರೇ ಪಾತ್ರಧಾರಿಗಳಾದದ್ದು ಯಾಕೋ ಸರಿ ಕಾಣಲಿಲ್ಲವೆನಿಸುತ್ತದೆ. ಪಾತ್ರಗಳ ಎಮೋಷನ್, ಸನ್ನಿವೇಶದ ಮೂಡ್ ಅನ್ನು ಅರೆ ಕ್ಷಣ ಘಾಸಿಗೊಳಿಸಿತೆ? ಎನಿಸುತ್ತದೆ. ’ಐಡಿಯಾ’ ಪಾತ್ರದಿಂದ ಅದು ಹಾಸ್ಯವೆನಿಸಿ ಚಿತ್ರ ನೋಡಿಸಿಕೊಂಡು ಹೋಗುತ್ತದೆ.

ಕೆಲವು ದಿನಗಳ ಹಿಂದೆ ’ಜಟ್ಟ’ ಒಂದು ಸೆನ್ಸೇಶನ್ ಸೃಷ್ಟಿಸಿತ್ತು. ಇತ್ತೀಚೆಗಷ್ಟೇ ’ತಲ್ಲಣ’ ಎಂಬ ಸಿನಿಮಾ ಎಲ್ಲರ ಮೆಚ್ಚುಗೆ ಗಳಿಸಿತ್ತು. ಈಗ ’ಕಳವು’ ಅದೇ ದಾರಿಯಲ್ಲಿದೆ. ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ’ನಮ್ಮ’ ಸಿನಿಮಾಗಳ, ವರ್ತಮಾನ ಜೀವನದೊಡನೆ ಅನುಸಂಧಾನ ನಡೆಸುವ ಚಿತ್ರಗಳು ತಯಾರಾಗುವ ಕಾಲ ಬರುತ್ತಿರುವುದರ ಸೂಚನೆ ಇದೇ ಆದರೆ ಬಹಳಾನೇ ಸಂತೋಷ..........

Saturday, November 16, 2013

ಸ್ನೇಹ






ಬನ್ನಿ, ಹೀಗೇ ಸುಮ್ಮನೆ
ಒಂದರೆ ಘಳಿಗೆ ಧ್ಯಾನಿಸೋಣ



ಧುತ್ತೆಂದು ಎದುರಾಗುವ
ವೈರುಧ್ಯ, ವ್ಯಥೆ, ಗೊಂದಲ,
ಯಾತನೆಗಳ ದಾಳಿಗೆ
ಬದುಕು ಮುದುಡಿ ಹೋಗುವಾಗ,



ಆಸಕ್ತಿಯಿಂದ, ಕಾಳಜಿಯಿಂದ
ಬುದ್ದಿಗೆ ವಿವೇಕ ತುಂಬಿ,
ಭಾವಾವೇಶಕ್ಕೆ ತಡೆ ಹಾಕಿ,
ಹೊಸ ಚೈತನ್ಯ ತಂದು,



ಮನಸ್ಸನ್ನು ಹಗುರಾಗಿಸಿ,
ಬದುಕ ಅರಳಿಸುವ
ಶಕ್ತಿ, ಕಲೆ ಇರುವುದು
ಸ್ನೇಹಕ್ಕೇ ಅಲ್ಲವೇ..?!

Friday, November 1, 2013

ಶಪಥ




'ಇದು ನನ್ನ ಶಪಥ'
ಅವನು ಮತ್ತೊಮ್ಮೆ ಶಪಥ ಮಾಡಿದ್ದಾನೆ;
ನೂರಾ ಎಂಟನೇ ಬಾರಿ.
ಹೊಸ ಬದುಕು ಪ್ರಾರಂಭಿಸಲು
ಹೊಸದೇನನ್ನೋ ಸಾಧಿಸಲು


ದಿನ ಕಳೆದಂತೆ, ಮತ್ತದೇ
ಹೊಂದಾಣಿಕೆಗಳು, ಸಲಹೆಗಳು;    
ಪರರ ಆದೇಶಗಳು, ಒತ್ತಾಯಗಳು
ನೂಕುತ್ತಿವೆ ನಿರಾಸೆಯ ಕಡಲಿಗೆ,    
ವಿನಾಶದ ಸುಖಕ್ಕೆ.


ಅನಿಸುತ್ತಿದೆ,

ವಿಧಿಯೂ ಶಪಥ ಮಾಡಿರಬೇಕು;
ಅವನ ವಿರುದ್ದ!!

Sunday, September 29, 2013

ದೌಲತ್ತಾಬಾದಿನ ಕೋಟೆ




ತರುಣ ಕಾವಲುಗಾರ:

ಎಷ್ಟು ಎತ್ತರವಾಗಿದೆ ಈ ಕೋಟೆ! ಛೆ, ತಲೆ ಗಿರ್ರ ಎನಿಸುತ್ತದೆ ನೋಡು...ಮತ್ತು, ಅದೋ ಅಲ್ಲಿ ಬೆಳ್ಳಗೆ ಕಾಣುತ್ತಿರುವುದು ದೌಲತ್ತಾಬಾದಿನಿಂದ ದಿಲ್ಲಿಗೆ ಹೋಗುವ ದಾರಿಯಲ್ಲವೇನು?!




ಮಧ್ಯವಯಸ್ಸಿನ ಕಾವಲುಗಾರ:

ಹೂಂ




ತರುಣ ಕಾವಲುಗಾರ:

ಎಂಥಾ ಕೋಟೆ! ಮೊನ್ನೆ ಯಾರೋ ಹೇಳುತ್ತಿದ್ದರು ವಿದೇಶ ಪ್ರವಾಸಿಗರೆಲ್ಲಾ ಎನ್ನುತ್ತಾರಂತೆ, ದೌಲತ್ತಾಬಾದದ ಕೋಟೆಯಂಥ ಕೋಟೆ ಜಗತ್ತಿನಲ್ಲೇ ಇಲ್ಲ. ಈ ಕೋಟೆ ಯಾವ ಸೈನ್ಯಕ್ಕೂ ಬೀಳುವುದಿಲ್ಲ ಎಂದು.




ಮಧ್ಯವಯಸ್ಸಿನ ಕಾವಲುಗಾರ:

ನಿಜ. ಆದರೆ ಕೋಟೆ ಎಷ್ಟು ಗಟ್ಟಿಯಾಗಿದ್ದರೇನು, ಎತ್ತರವಾಗಿದ್ದರೇನು. ಕುಸಿದರೆ ಒಳಗಿನ ಕುಚೋದ್ಯದಿಂದಲೇ ಕುಸಿಯಬೇಕದು. ನೆಲಕ್ಕಂಟಿಕೊಂಡಿರುವ ಜೀವ ನಾವು.
 
ದೃಶ್ಯ ೮
'ತುಘಲಕ್' ನಾಟಕ
- ಗಿರೀಶ್ ಕಾರ್ನಾಡ್


Monday, August 12, 2013

‘ನಿರುತ್ತರ’ ದೆಡೆಗೆ



ಬಸ್ಸಿನ ಕೊನೆ ಸಾಲಿನ ಕಿಟಕಿ ಪಕ್ಕದ ಸೀಟಿನಲ್ಲಿ ಕೂತು, ಆಗಷ್ಟೇ ನಿದ್ದೆಯಿಂದ ಎಚ್ಚರವಾಗುತ್ತಿದ್ದ ನನ್ನ ಕಣ್ಣಿಗೆ ’ಶ್ರೀ ದುರ್ಗಾ ಶಕ್ತಿ ಚಿಕನ್ ಸೆಂಟರ್, ಕೆ.ಎಂ. ರಸ್ತೆ, ಮೂಡಿಗೆರೆ’ ಎಂಬ ಬೋರ್ಡ್ ನೋಡಿದ್ದೇ ಆಶ್ಚರ್ಯವಾಗಿ, ನಿದ್ದೆ ಎಗರಿ ಹೋಯಿತು. ’ಅರೆ! ಇದೇನಿದು ನಾನು ಮೂಡಿಗೆರೆಯಲ್ಲಿ ಇದ್ದೇನೆ’ ಎಂದು ಗೊಂದಲಗೊಂಡರೂ, ಹಿಂದೆಯೇ ದೊಡ್ಡ ಖುಷಿಯೊಂದು ನಗುವಾಗಿ ಮುಖದ ಮೇಲೆ ಮೂಡಿತ್ತು. ಇದು ಕನಸೇ?! ಎಂದು ಸಣ್ಣಗೆ ಸಂಶಯವುಂಟಾಗಿ ಕೈ ಚಿವುಟಿಕೊಂಡು, ’ಅಲ್ಲ’ ಎಂದು ಖಚಿತಪಡಿಸಿಕೊಂಡ ಮೇಲೆ, ಆ ಸಣ್ಣ ಕಿಟಕಿಯಿಂದಲೇ ಸಾಧ್ಯವಾದಷ್ಟು ಮೂಡಿಗೆರೆಯನ್ನು ಕಣ್ತುಂಬಿಕೊಂಡೆ. ಕಣ್ಣು, ತೇಜಸ್ವಿಯವರ ಕತೆಗಳಲ್ಲಿ ಬರುವ ಮೂಡಿಗೆರೆಯ, ಮುನ್ಸಿಪಾಲಿಟಿ ಕಚೇರಿ, ಆಸ್ಪತ್ರೆ, ಸ್ಕೂಲು ಇವುಗಳು ಕಾಣಬಹುದೇನೋ ಎಂದು ಹುಡುಕಾಟ ಶುರುಮಾಡಿದ್ದರೆ, ಮನಸ್ಸು, ’ಮತ್ತೆ ಮತ್ತೆ ತೇಜಸ್ವಿ’ ಸಾಕ್ಷ್ಯಚಿತ್ರದಲ್ಲಿ ಬರುವ ’ನಿರುತ್ತರ’ ಗೇಟನ್ನು ಕಾಣಲು ಹಪಹಪಿಸುತ್ತಿತ್ತು. ಬೆಳಗ್ಗೆ ಕುಪ್ಪಳಿಗೆ ಭೇಟಿ ನೀಡಿ, ಅಲ್ಲಿಂದ ಸಂಜೆ ೪ ರ ಹೊತ್ತಿಗೆ ಮೂಡಿಗೆರೆಗೆ ಬಂದು ರಾಜೇಶ್ವರಿ ಯವರನ್ನು ಭೇಟಿ ಮಾಡುವ ಯೋಜನೆ ನಮ್ಮದಾಗಿತ್ತು. ರಾಜೇಶ್ವರಿಯವರಿಗೂ ಈ ವಿಷಯ ತಿಳಿಸಿ, ಮೂರು-ನಾಲ್ಕು ದಿನಗಳ ಹಿಂದೆಯೆ ಅವರ ಒಪ್ಪಿಗೆ ಪಡೆದಿದ್ದೆವೂ ಸಹ. ಆದರೆ, ಕಾರಣಾಂತರಗಳಿಂದ ಕುಪ್ಪಳಿಯಲ್ಲೇ ನಾವು ನಮಗೇ ಅರಿವಿಲ್ಲದೆ ಹೆಚ್ಚಿನ ಸಮಯ ಕಳೆದುದರಿಂದ, ಅಮ್ಮಡಿ ಮುಖಾಂತರ ಊಟ ಮುಗಿಸಿ ಹೊರಡುವಾಗಲೇ ಸಮಯ ೪.೩೦ ಆಗಿತ್ತು. ಕುಪ್ಪಳಿಯಿಂದ ಮೂಡಿಗೆರೆಗೆ ೮೨ ಕಿ.ಮೀ ದೂರ. ಸುರಿಯುತ್ತಿದ್ದ ಮಳೆ ಹಾಗೂ ಸಾಗಬೇಕಾದ ಘಾಟಿ ರಸ್ತೆಯನ್ನು ಗಮನಿಸಿದರೆ ಮೂಡಿಗೆರೆಗೆ ತಲುಪುವ ಹೊತ್ತಿಗೆ ೭ ಘಂಟೆ ಆಗಬಹುದು ಎಂದು ಅಂದಾಜಿಸಿ, ಆ ವೇಳೆಯಲ್ಲಿ ಇಷ್ಟು ಜನ (ನಾವೂ ಒಟ್ಟು ೨೯ ಜನರಿದ್ದೆವು) ಒಟ್ಟಿಗೆ ಹೋಗಿ ರಾಜೇಶ್ವರಿಯವರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಯೋಚಿಸಿ, ’ನಿರುತ್ತರ’ಕ್ಕೆ ಭೇಟಿ ನೀಡುವ ನಮ್ಮ ಯೋಜನೆಯನ್ನು ಕೈಬಿಡುವುದೆಂದು ನಿರ್ಧಾರ ಮಾಡಿದೆವು. ಅಲ್ಲಿಗೇ ನಿರುತ್ತರಕ್ಕೆ ಹೋಗಬೇಕೆನ್ನುವ ನನ್ನ ಕನಸು ಮೂರನೇ ಬಾರಿಯೂ ಮಣ್ಣಾಯಿತೆಂದೆನಿಸಿ, ಪ್ರಯಾಣದಲ್ಲಿ ಯಾವುದೇ ಕುತೂಹಲ ಉಳಿಯದೆ ಬೇಸರದಲ್ಲಿ ಕಣ್ಣು ಮುಚ್ಚಿದವನಿಗೆ ನಿದ್ದೆ ಹತ್ತಿತ್ತು. ಈ ನಡುವೆ, ಹಿರಿಯ ಗೆಳೆಯರಾದ ಸತೀಶ್, ರಾಜೇಶ್ವರಿಯವರಿಗೆ ಫೋನ್ ಮಾಡಿ, ಬರಲಾಗುತ್ತಿಲ್ಲ ಎಂಬ ವಿಷಯವನ್ನು ಕಾರಣ ಸಹಿತ ವಿವರಿಸಿದ್ದಾರೆ. ಆದರೆ, ರಾಜೇಶ್ವರಿಯವರು, ’ಅಯ್ಯೋ..ಪರವಾಗಿಲ್ಲ ಬನ್ನಿ. ನನಗೇನೂ ತೊಂದರೆಯಿಲ್ಲ. ಬರುವುದೇ ಖುಷಿ’ ಎಂದು ಆತ್ಮೀಯವಾಗಿ ಆಹ್ವಾನಿಸಿದ್ದಾರೆ. ನಿದ್ದೆ ಮಾಡುತ್ತಿದ್ದ ನನಗೆ ಈ ವಿಷಯ ಗೊತ್ತಿಲ್ಲ. ಹಾಗಾಗಿ, ಎಚ್ಚರಾದಾಗ ಮೂಡಿಗೆರೆ ಎಂದು ನೋಡಿದ ತಕ್ಷಣ ಆಶ್ಚರ್ಯವಾಯಿತು. ಬಸ್ಸು ’ನಿರುತ್ತರ’ ಗೇಟಿನ ಬಳಿ ಬಂದು ನಿಂತಾಗ ಮನಸ್ಸು ಖುಷಿಯಿಂದ ಕುಣಿದಾಡುತ್ತಿತ್ತು. ಕನಸೊಂದು ನನಸಾದಾಗ ಮೂಡುವ ಖುಷಿಯಲ್ಲ ಅದು. ಕನಸು ನನಸಾಗುವ ಅವಕಾಶವೊಂದು ಕೈ ತಪ್ಪಿಹೋದ ಬೇಸರದ ಹಿಂದೆಯೇ, ಆ ಕೂಡಲೇ ಮತ್ತೊಂದು ಅವಕಾಶ ಕೈ ಹಿಡಿದು, ಕನಸು ನನಸಾಗುವುದಿದೆಯಲ್ಲ, ಆ ರೀತಿಯ ಖುಷಿಯದು. ಅದರ ಸಂಭ್ರಮ, ಸಡಗರವೇ ಬೇರೆ.

ಕೊನೆಗೂ ಮೂಡಿಗೆರೆಯ ’ನಿರುತ್ತರ’ ಮನೆಯ ಗೇಟು ದಾಟಿ ಒಳ ಹೋಗುವಾಗ ೭ ಘಂಟೆಯಾಗಿತ್ತು. ಸುತ್ತಲಿನ ಗಿಡ ಮರಗಳು ಭಯ ಹುಟ್ಟಿಸುವ ರೂಪ ತಾಳುವ ಸಮಯವದು. ಗಾಢಾಂಧಕಾರ ಆವರಿಸುತ್ತಿತ್ತು. ಅಷ್ಟೊತ್ತಿಗಾಗಲೇ ಬೆಳಗಿನಿಂದ ಆಲಸಿಗಳಂತೆ ಬಿದ್ದುಕೊಂಡು, ಕತ್ತಲಾಗುತ್ತಿದ್ದಂತೆ ತಮ್ಮ ಇರುವಿಕೆಯನ್ನು ಸಾರಿ ಸಾರಿ ಹೇಳುವ ಹುಳ ಹುಪ್ಪಟೆಗಳು, ನಿಶಾಚಾರಿಗಳು ಕಾರ್ಯಪ್ರವೃತ್ತವಾಗಿ ವಿಚಿತ್ರವಾದ ಕೀರು ದನಿಯಿಂದ ತಡೆದು ತಡೆದು ಕೂಗುತ್ತಾ, ತಾಳಬದ್ದವಾಗಿ ಸದ್ದು ಮಾಡುತ್ತಿದ್ದವು. ಎರಡು ದಿನಗಳಿಂದ ಬಿಡದೆ ಸುರಿಯುತ್ತಿದ್ದ ಮಳೆ ಯಾವ ಕಾರಣಕ್ಕೋ ಏನೋ ಸ್ವಲ್ಪ ಕಾಲ ವಿರಾಮ ಘೋಷಿಸಿದೆ ಎನಿಸಿದರೂ, ಮೋಡಗಳು ದಟ್ಟವಾಗಿದ್ದವು. ಜೌಗು ನೆಲ, ನೀರು ನಿಂತ ಸಣ್ಣ ಸಣ್ಣ ಹಳ್ಳಗಳು, ಅಲ್ಲೇ ಹರಿದಾಡಿ ಹೋಗುವ ಸಾಧ್ಯತೆಯಿರುವ ಹಾವುಗಳ ಭಯ, ರಕ್ತ ಹೀರುವ ಜಿಗಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ.. ಇವುಗಳ ನಡುವೆ ಮೆಲ್ಲ ಬೀಸುತ್ತಿದ್ದ ತಣ್ಣನೆಯ ಗಾಳಿ, ಚಳಿ ನಮಗ್ಯಾರಿಗೂ ತಟ್ಟಲೇ ಇಲ್ಲ. ಪ್ರಕೃತಿಯ ನಿಗೂಢತೆಯನ್ನು ಅನ್ವೇಷಿಸ ಹೊರಟ ’ಸದಾ ಕುತೂಹಲಿ’ಯ ಮನೆಗೆ ಭೇಟಿ ನೀಡುವಾಗ ಇದಕ್ಕಿಂತಲೂ ಸೊಗಸಾದ, ಸೂಕ್ತವಾದ ಸ್ವಾಗತ, ಪರಿಸರ ಬೇಕೆ?







’ಅಲೆಮಾರಿಯ ಅಂಡಮಾನ್’ ಕೃತಿಯ ಒಂದು ಸಣ್ಣ ಭಾಗ ನಮಗೆ ಹೈಸ್ಕೂಲಿನಲ್ಲಿ ಪಠ್ಯವಾಗಿತ್ತು. ಅಲ್ಲಿಂದ ತೇಜಸ್ವಿಯವರ ಹುಚ್ಚಿಗೆ ಬಿದ್ದವನು ನಾನು. ಮುಂದೆ ಕಾಲೇಜಿಗೆ ಸೇರಿದಾಗ ಕುತೂಹಲ ತಣಿಯಲು ತೇಜಸ್ವಿಯವರ ಮಿಲೇನಿಯಂ ಸರಣಿಯನ್ನು ಓದಿ, ಗೆಳೆಯರ ಮುಂದೆಲ್ಲ ಪ್ರಪಂಚದ ವಿಸ್ಮಯಗಳ ಬಗ್ಗೆ ಹೇಳುತ್ತಾ ಫೋಸು ಕೊಡುತ್ತಿದ್ದೆ.

ಅದೊಮ್ಮೆ, ನಾವು ೪ ಜನ ಗೆಳೆಯರು ಮಂಗಳೂರಿಗೆ ಹೋಗುತ್ತಿದ್ದಾಗ ದಾರಿ ಬದಿ ’ಮೂಡುಬಿದಿರೆ – ೧೨ ಕಿ.ಮೀ.’ ಎಂಬ ಮೈಲಿಗಲ್ಲನ್ನು ನೋಡಿ, ಗೆಳೆಯರಿಗೆಲ್ಲಾ ಬಲವಂತ ಮಾಡಿ ಗಾಡಿಯನ್ನು ಮೂಡುಬಿದಿರೆ ಕಡೆ ತಿರುಗಿಸಿ, ಮೂಡುಬಿದಿರೆಯೆಲ್ಲಾ ಸುತ್ತಾಡಿಸಿದ್ದೆ; ತೇಜಸ್ವಿಯವರ ಮನೆ ಹುಡುಕುತ್ತಾ!!!! ಹೌದು, ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿನ ತೇಜಸ್ವಿ ಮನೆಯನ್ನು, ಮಂಗಳೂರಿನ ಮೂಡುಬಿದಿರೆಯಲ್ಲಿ ಹುಡುಕಾಡಿದ ಮಹಾನ್ ಸಾಹಸಿ ನಾನು! ಅಲ್ಲಿನ ಪೋಸ್ಟಾಫೀಸ್ ಹಾಗೂ ಪೋಲೀಸ್ ಸ್ಟೇಷನ್ ಹೊರತು ಪಡಿಸಿ, ಎಲ್ಲಾ ಕಡೆ ’ಸರ್, ಇಲ್ಲಿ ತೇಜಸ್ವಿ ಅವರ ಮನೆ ಎಲ್ಲಿದೆ?’ ಅಂತ ಕೇಳುತ್ತಾ ತಿರುಗಾಡಿದ್ದೆ. ನನ್ನ ಪ್ರಶ್ನೆ ಕೇಳಿದ ಎಲ್ಲರೂ, ’ತೇಜಸ್ವಿಯಾ? ಅಡ್ರೆಸ್ಸ್ ಉಂಟಾ?’ ಎಂದು ನನ್ನನ್ನೇ ಪ್ರಶ್ನೆ ಕೇಳಿದ್ದರು. ’ತೇಜಸ್ವಿಯಂತ ವ್ಯಕ್ತಿ ಬಗ್ಗೆ ಗೊತ್ತಿಲ್ಲದ ಜನ!!’ ಅಂತ ನನಗೆ ನಾನೇ ಅವರನ್ನು ಬೈಯ್ದುಕೊಂಡಿದ್ದೆ. ಆ ನಂತರ ನನ್ನ ಕನ್ನಡ ಮೇಷ್ಟ್ರಿಗೆ ಫೋನ್ ಮಾಡಿ, ಅದು ಮೂಡುಬಿದಿರೆಯಲ್ಲ, ಮೂಡಿಗೆರೆಯೆಂದು ತಿಳಿದು, ಗೆಳೆಯರ ಮುಂದೆ ನಗೆಪಾಟಲಿಗೆ ಈಡಾಗಿದ್ದೆ. ಆ ನಂತರದಲ್ಲಿ ಅವರ ಕೃತಿಗಳನ್ನು ಹೆಚ್ಚು ಹೆಚ್ಚು ಓದಿದಷ್ಟು ಅವರು ಬಹಳ ಇಷ್ಟವಾಗತೊಡಗಿದರು. ಅವರ ಓದುಗರನೇಕರು ಮೂಡಿಗೆರೆಯ ಅವರ ಮನೆಗೆ ಭೇಟಿ ನೀಡಿ ಬಂದುದರ ಬಗ್ಗೆ ಹೇಳುಕೊಳ್ಳುವುದನ್ನು ಓದಿದಾಗ, ಕೇಳಿದಾಗ ಅವರ ಮನೆಗೊಮ್ಮೆ ಭೇಟಿ ನೀಡಬೇಕು ಎಂಬ ಆಸೆ ಬೆಳೆಯುತ್ತಾ ಬಂದಿತು. ಕೃತಿಗಳನ್ನು ಓದಿದ ಮಾತ್ರಕ್ಕೆ ಲೇಖಕರ ಮನೆಗೆ ಭೇಟಿ ನೀಡಬೇಕೆಂದೆನಿಸುವುದೇ?! ಗೊತ್ತಿಲ್ಲ. ಆದರೆ, ನನ್ನ ಈ ಕನಸಿಗೆ ಬಲವಾದ ಕಾರಣವೆಂದರೆ, ’ಚಿಗುರಿದ ಕನಸು’ ಕಾದಂಬರಿಯನ್ನು ಹಾಗೂ ಚಲನಚಿತ್ರವನ್ನು ಬಹಳವಾಗಿ ಇಷ್ಟಪಡುವ ನನಗೆ, ಆ ಕಥೆಯಲ್ಲಿ ಬರುವ ಶಂಕರನ ಪಾತ್ರದ ಜೀವಂತ ಉದಾಹರಣೆಯಂತೆ ತೇಜಸ್ವಿಯವರು ಕಂಡರು. ಕಥೆಯಲ್ಲಿನ ಶಂಕರ ಸಂಬಂಧಗಳ ನಂಟು ಉಳಿಸಿಕೊಳ್ಳುವ ಹಂಬಲದಿಂದ ನಗರದಿಂದ ಹಳ್ಳಿಗೆ ಬಂದರೆ, ತೇಜಸ್ವಿಯವರೂ ಸಹ ಪ್ರಕೃತಿಯೊಡನೆ ಸಂಬಂಧ ಬೆಸೆದುಕೊಳ್ಳುವುದಕ್ಕೋ, ಬೆರಗುಗೊಳಿಸಲಿಕ್ಕೋ ಏನೋ ನಗರದಿಂದ ಹಳ್ಳಿಗೆ ಹೋಗಿ ಬದುಕಿ ಬೆಳೆದವರು. ಅವರ ಬದುಕಿನ ಈ ನಿರ್ಧಾರ, ನಡೆಯೇ ನನಗೆ ಯಾವಾಗಲೂ ಸ್ಪೂರ್ತಿ ಹಾಗೂ ಅಚ್ಚರಿ ಹುಟ್ಟಿಸುವಂತದ್ದು.

ಈ ಹಿಂದೆ ಮೂಡಿಗೆರೆಯ ಮುಖಾಂತರವಾಗಿ ಎರಡು ಬಾರಿ ಹಾದುಹೋಗುವ ಸಂದರ್ಭ ಬಂದಾಗಲೂ, ಸಮಾನ ಮನಸ್ಕರಿಲ್ಲದೆ ಅಲ್ಲಿಗೆ ಭೇಟಿ ನೀಡಲು ಆಗಲೇ ಇಲ್ಲ. ಇಂತಹ ಯೋಚನೆಗಳು, ನೆನಪುಗಳು ನನ್ನ ಮನಸ್ಸಿನಲ್ಲಿ ಒಂದರ ಹಿಂದೊಂದರಂತೆ ಮೂಡಿ ಮರೆಯಾಗುತ್ತಿರುವಾಗಲೇ, ಅವರದೇ ನೆಲದಲ್ಲಿ ಸಂಭ್ರಮಿಸುತ್ತಾ ನಡೆದು ತೋಟದ ನಡುವಿನ ಮನೆಯನ್ನು ತಲುಪಿದಾಗ ಕಂಡದ್ದು ನಮ್ಮ ತಂಡದವರನ್ನು ನಗು ಮೊಗದಿಂದ, ಸಂತೋಷದಿಂದ ಬರಮಾಡಿಕೊಳ್ಳುತ್ತಿದ್ದ ರಾಜೇಶ್ವರಿ ತೇಜಸ್ವಿಯವರು.



ದಟ್ಟವಾದ ಗಿಡ ಮರಗಳ ಸಮೂಹದಲ್ಲಿ ಹುದುಗಿರುವಂತೆ ತೋರುವ ಆ ಮನೆಯಲ್ಲೀಗ ಜನಜಾತ್ರೆ. ಹೌದು! ಜಾತ್ರೆ, ಜನಜಾತ್ರೆ, ಯಾಕೆಂದರೆ ನಾವು ಒಟ್ಟು ೨೯ ಜನ ಹೋಗಿದ್ದೆವು!! ದಿನದ ಬಿಡುವಿಲ್ಲದ ಕೆಲಸಗಳ ನಂತರ ಸಂಜೆಯ ಹೊತ್ತಲ್ಲಿ ವಿರಮಿಸುತ್ತಲೋ, ಓದುತ್ತಲೋ ಆರಾಮವಾಗಿ ಕಳೆಯ ಬಹುದಾದರೂ, ರಾಜೇಶ್ವರಿಯವರು ನಮ್ಮ ಭೇಟಿಗೆ ಒಪ್ಪಿದ್ದರು. ಪ್ರತಿಯೊಬ್ಬರನ್ನೂ ಬಹಳ ಆತ್ಮೀಯವಾಗಿ, ನಗುಮೊಗದಿಂದ ಬರಮಾಡಿಕೊಂಡರು. ಒಳ ಹೋದ ನಾನು ಕೆಲವು ಸೆಕೆಂಡ್ ಗಳ ಕಾಲ ಆಶ್ಚರ್ಯ ಸ್ತಂಭಿತನಾದೆ. ಆಲಂಕಾರಿಕ, ಆಡಂಬರದ ವಸ್ತುಗಳಿಂದ ಅಚ್ಚುಕಟ್ಟಾದ ಗೋಡೌನ್ ನಂತಿರದ ಸರಳವಾದ ಮನೆಯದು. ಒಂದೆರಡು ಕುರ್ಚಿಗಳು ಹಾಗೂ ತೇಜಸ್ವಿಯವರ ದೊಡ್ಡದೊಂದು ಫೋಟೋವಷ್ಟೇ ಅಲ್ಲಿನ ಅಲಂಕಾರ. ಅಲ್ಲೇ ನಾವೆಲ್ಲಾ ಓತಪ್ರೋತವಾಗಿ ಶಿಸ್ತಿನಿಂದ ಕುಳಿತೆವು, ರಾಜೇಶ್ವರಿಯವರು ತೇಜಸ್ವಿಯವರ ದೊಡ್ಡ ಫೋಟೋದ ಪಕ್ಕ ಕುರ್ಚಿಯಲ್ಲಿ ಕುಳಿತು ನಮ್ಮೆಲ್ಲರ ಹೆಸರನ್ನು, ವೃತ್ತಿಯನ್ನು ಕೇಳಿ ಪರಿಚಯ ಮಾಡಿಕೊಂಡರು. ಆ ಸಮಯದಲ್ಲೇ ಒಂದಷ್ಟು ಜಾಣತನ ತೋರಿ, ತಮಾಷೆ ಮಾಡಿ, ನಮ್ಮಲ್ಲಿದ್ದ ಆತಂಕವನ್ನು ದೂರ ಮಾಡಿದರು.

ಆ ನಂತರ, ಅಲ್ಲಿ ಸುರಿದಿದ್ದು ನೆನಪಿನ ಮಳೆ, ಹರಿದಿದ್ದು ಖುಷಿಯ ಹೊಳೆ. ಕೆಲವು ನೆನಪುಗಳ ತುಂತುರು;



ನಾಯಿಗುತ್ತಿ – ಗುತ್ತಿನಾಯಿ

ನಮ್ಮೊಂದಿಗೆ ಕೆವೈಎನ್ (ಕೆ.ವೈ.ನಾರಾಯಣ ಸ್ವಾಮಿ) ಮೇಷ್ಟ್ರು ಇದ್ದಿದ್ದರಿಂದ ಮಾತು ಸಹಜವಾಗಿ, ’ಮಲೆಗಳಲ್ಲಿ ಮದುಮಗಳು’ ನಾಟಕದ ಮುಖಾಂತರವಾಗಿ ಶುರುವಾಯಿತು. ಮೈಸೂರಿನಲ್ಲಿ ಮಾತ್ರ ಈ ನಾಟಕದ ಪ್ರದರ್ಶನವನ್ನು ನೋಡಿರುವ ರಾಜೇಶ್ವರಿಯವರಿಗೆ ಇಡೀ ನಾಟಕದಲ್ಲಿ ಇಷ್ಟವಾದ ದೃಶ್ಯವೆಂದರೆ, ಗುತ್ತಿ ಹಾಗೂ ನಾಯಿ ಬೇರ್ಪಡುವ ದೃಶ್ಯವಂತೆ. ಆ ದೃಶ್ಯ ಮೈಸೂರಿನ ಪ್ರದರ್ಶನದಲ್ಲಿ ಬಹಳ ಪರಿಣಾಮಕಾರಿಯಾಗಿ ಮೂಡಿ ಬಂದಿತ್ತು. ಆದರೆ, ಬೆಂಗಳೂರಿನಲ್ಲಿ ಆ ದೃಶ್ಯವನ್ನು ಕಡಿತಗೊಳಿಸಲಾಗಿದೆಯೆಂದು ಎರಡೂ ಕಡೆ ನಾಟಕ ನೋಡಿದ್ದ ಅವರ ಮಕ್ಕಳು ಅವರಿಗೆ ಹೇಳಿದ್ದರಂತೆ.



ಕಾಫೀಪುಡಿ ಕಥೆ:

ಒಮ್ಮೆ ಶಿವರಾಮ ಕಾರಂತರು ಇವರ ಮನೆಗೆ ಬಂದು, ಹೊರಡುವಾಗ ಕಾರಂತರಿಗೆ ಇಷ್ಟವಾದ ಕಾಫೀ ಪುಡಿಯನ್ನು ಕೊಡಲು ರಾಜೇಶ್ವರಿಯವರು ಮರೆತುಬಿಟ್ಟರಂತೆ. ಮರೆವಿನಿಂದ ಪೇಚಾಡಿಕೊಂಡ ರಾಜೇಶ್ವರಿಯವರು, ಮರುದಿನವೇ ಕಾಫೀ ಪುಡಿಯನ್ನು ಕೊರಿಯರ್ ಮೂಲಕ ಕಳುಹಿಸಿದ್ದಾರೆ. ಆ ನಂತರ ಕಾರಂತರ ಪತ್ರ ಬಂದಿದೆ – ’ಅಮ್ಮಾ, ನೀನು ಕಳುಹಿಸಿಕೊಟ್ಟ ಕಾಫೀ ಪುಡಿಯನ್ನು ಉಪಯೋಗಿಸಲು ನಾನು ಹೊಸದಾಗಿ ಒಂದು ಹಸುವನ್ನೇ ಖರೀದಿಸಬೇಕು!!’



ಜಸ್ಟ್ ಮಿಸ್!!!

ಅದು ತೇಜಸ್ವಿಯವರು ಬೇಟೆ, ಬೇಟೆ ಎಂದು ಹುಚ್ಚತ್ತಿಸಿಕೊಂಡಿದ್ದ ದಿನಗಳು. ಅಂಥಾ ದಿನಗಳಲ್ಲೇ ಇವರ ಕೈಗೆ ಹೊಸದೊಂದು ರೈಫಲ್ ಬಂದು ಸೇರಿದೆ. ಅದನ್ನು ತೆಗೆದುಕೊಂಡು ಬೇಟೆಗೆಂದು ಹೊರಟವರು, ಎಷ್ಟೋ ಹೊತ್ತಿನ ಬಳಿಕ ಕಾಡಿನಲ್ಲಿ ಹೊಂಚು ಹಾಕಿ, ಸಂಚು ಮಾಡಿ ಹಂದಿಯೊಂದನ್ನು ಹೊಡೆಯುವ ಸಲುವಾಗಿ ಗುಂಡು ಹಾರಿಸಿದ್ದಾರೆ. ಹಾಗೆ ಅವರ ಆ ಹೊಸ ಬಂದೂಕಿನಿಂದ ಚಿಮ್ಮಿದ ಗುಂಡು, ತೇಜಸ್ವಿಯವರ ಮನೆಯ ರೂಮಿನ ಕಿಟಕಿಯನ್ನು ಸೀಳಿ, ಕಿಟಕಿ ಪಕ್ಕದ ಕನ್ನಡಿಯ ಮುಂದೆ ನಿಂತು ತಲೆ ಬಾಚಿಕೊಳ್ಳುತ್ತಿದ್ದ ರಾಜೇಶ್ವರಿಯವರ ಪಕ್ಕದಲ್ಲೇ ಹಾದುಹೋಗಿದೆ! ಇದನ್ನು ಕೇಳಿದ ನಾವೆಲ್ಲರೂ ಒಂದು ಕ್ಷಣ ಸ್ತಬ್ದರಾಗಿಬಿಟ್ಟೆವು!!



ಸಿತಾರ್ ತೇಜಸ್ವಿ

ಒಮ್ಮೆ ತೇಜಸ್ವಿಯವರು ಸೈಕಲ್ ತುಳಿಯುತ್ತಾ ಬರುತ್ತಿರುವಾಗ ರಸ್ತೆ ಬದಿಯಲ್ಲಿರುವ ಅಂಗಡಿಯೊಂದರ ಮುಂದೆ ಅಚಾನಕ್ ಆಗಿ ಸೈಕಲ್ ನಿಲ್ಲಿಸಿ, ಸ್ಟಾಂಡ್ ಹಾಕಿ, ಆ ಅಂಗಡಿಯ ರೇಡಿಯೋದಲ್ಲಿ ಬರುತ್ತಿದ್ದ ಸಂಗೀತವನ್ನು ಕೇಳುತ್ತಾ ನಿಂತು ಬಿಟ್ಟರಂತೆ. ಆ ನಂತರದಲ್ಲಿ, ಆ ಸಂಗೀತದಲ್ಲಿ ಬಳಸಿದ ಉಪಕರಣ ಯಾವುದೆಂದು ಪತ್ತೆ ಮಾಡಿ, ಅದನ್ನು ನುಡಿಸಲು ಕಲಿಯಬೇಕೆಂದು ನಿರ್ಧರಿಸಿಯೇಬಿಟ್ಟರು. ಆ ಸಂಗೀತ ಉಪಕರಣವೇ ಸಿತಾರ್! ಇವರ ಸಿತಾರ್ ಕಲಿಯುವ ಹಾಗೂ ಅದರ ಅಭ್ಯಾಸ ಮಾಡುವ ರೀತಿ ಹೇಗಿತ್ತೆಂದರೆ, ಹಗಲು-ರಾತ್ರಿಯೆನ್ನದೆ ಅಭ್ಯಾಸ ನಿರತರಾಗಿದ್ದ ತೇಜಸ್ವಿಯವರ ಬಳಿ ಒಮ್ಮೆ ಕುವೆಂಪುರವರು ಬಂದು 'ನನಗೆ ಮೌನವೇ ಸಂಗೀತ' ಎಂದು ಹೇಳಿದ್ದನ್ನು ನಮ್ಮೊಂದಿಗೆ ಹಂಚಿಕೊಂಡಾಗಲಂತೂ ಕ್ಷಣಕಾಲ ಅಲ್ಲಿ ನಗುವೇ ಮಾತಾಗಿತ್ತು.



ಹೀಗೆ, ಕಾರಂತರ ಕೊನೆಯ ಭೇಟಿ, ಕುವೆಂಪುರವರು ಅವರನ್ನು 'ಅಕ್ಕಾ' ಎಂದು ಕರೆಯುತ್ತಿದ್ದುದನ್ನು, ಮೈಸೂರಿನ 'ಉದಯರವಿ' ಮನೆಗೆ ಒಂದು ಆಟೋದಲ್ಲಿ ತುಂಬುವಷ್ಟು ಸಾಮಾನುಗಳನ್ನು ಇವರೊಬ್ಬರೇ ತೆಗೆದುಕೊಂಡು ಹೋಗುತ್ತಿದ್ದುದನ್ನು, ಕುವೆಂಪುರವರ ಕೊನೆಯ ದಿನಗಳಲ್ಲಿ, ಮೈಸೂರಿನಲ್ಲಿಯೇ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದುದನ್ನು, ತೇಜಸ್ವಿಯವರು ಮೈಸೂರಿನ ಪ್ರೆಸ್ ಮಾರಿ, ಮೂಡಿಗೆರೆಯ ಕಾಡಿನಲ್ಲಿ ಬಂದಿರುವ ನಿರ್ಧಾರ ತೆಗೆದುಕೊಂಡಿದ್ದರ ಬಗ್ಗೆ, ’ನಿರುತ್ತರ’ ಎಂದು ಹೆಸರಿಟ್ಟಿದ್ದರ ಬಗ್ಗೆ, ತೇಜಸ್ವಿಯವರೊಮ್ಮೆ ಇವರಿಗೆ, 'ನನ್ನ ಬೆನ್ನಿಗೆ ಚೂರಿ ಹಾಕಿಬಿಟ್ಟೆಯಲ್ಲ' ಎಂದು ಹೇಳಿದ್ದರ ಬಗ್ಗೆ, ತೇಜಸ್ವಿ ಮತ್ತವರ ಮಕ್ಕಳ ನಡುವಿನ ಬಾಂಧವ್ಯದ ಬಗ್ಗೆ, ಕಳೆದು ಹೋಗಿರುವ ಪತ್ರವೊಂದನ್ನು ಇನ್ನೂ ಹುಡುಕುತ್ತಿರುವ ಬಗ್ಗೆ, ಅಲ್ಲಿ ಉತ್ತರಾಖಂಡದಲ್ಲಿ ಪ್ರವಾಹವಾಗುತ್ತಿರುವ ಸಂದರ್ಭದಲ್ಲೇ, ಇವರ ಮಗಳು ಲೇಹ್ -ಲಡಾಕ್ ಗೆ ಹೋಗಿದ್ದಾಗಿನ ಇವರ ಆತಂಕದ ಬಗ್ಗೆ, ಇವರ ಮನೆಯಲ್ಲಿ ಸದ್ಯಕ್ಕೆ ಇರುವ ನಾಯಿಯ ಬಗ್ಗೆ, ಹೀಗೆ ಹತ್ತು ಹಲವು ಸಂಗತಿಗಳನ್ನು ನಮ್ಮೊಡನೆ ಹಂಚಿಕೊಂಡರು. ಇವುಗಳಲ್ಲಿ ಹಲವು ಸಂಗತಿಗಳ ಬಗ್ಗೆ ಈಗಾಗಲೇ ಲೇಖನಗಳಲ್ಲಿ ಹಾಗೂ 'ನನ್ನ ತೇಜಸ್ವಿ' ಪುಸ್ತಕದಲ್ಲಿ ಬರೆದಿದ್ದೇನಲ್ಲ ಎಂದು ಅವರು ಹೇಳಿದರೂ, ನಾವೆಲ್ಲ ನಿಮ್ಮ ಮಾತುಗಳಲ್ಲೇ ಅವುಗಳನ್ನು ಕೇಳಬೇಕು ಎಂದು ಆಸೆ ಪಟ್ಟಾಗ ಇಲ್ಲವೆಂದನ್ನಲಿಲ್ಲ.



ಆನಂತರ ನಮ್ಮನ್ನೆಲ್ಲಾ ಮನೆಯ ಮೇಲಿನ ಕೋಣೆಗೆ ಕರೆದುಕೊಂಡು ಹೋಗಿ, ಅಲ್ಲೇ ಕಿಟಕಿಯೊಂದಕ್ಕೆ ಸಣ್ಣದೊಂದು ತೂತು ಮಾಡಿ ನೇತು ಹಾಕಿರುವ ಕಪ್ಪು ಬಟ್ಟೆಯನ್ನು ತೋರಿಸುತ್ತಾ, 'ಅದು ಅವರು ಫೋಟೋ ತೆಗೆಯೋದಕ್ಕೆ ಅಂತ ಮಾಡಿಕೊಂಡಿದ್ದರು' ಎಂದು ಹೇಳಿದರು. ತೇಜಸ್ವಿಯವರ ಸಂಗ್ರಹಾಲಯಕ್ಕೆ ನಡೆಸುತ್ತಿರುವ ತಯಾರಿಯ ಬಗ್ಗೆ ತಿಳಿಸಿದರು, ಅವರು ತೆಗೆಯುತ್ತಿದ್ದ ಫೋಟೋಗಳನ್ನು ಸಂಸ್ಕರಿಸುವ ಸಣ್ಣ ಮೆಷಿನ್ ಒಂದನ್ನೂ ಹಾಗೂ ಫೋಟೋಗಳನ್ನು ತೋರಿಸಿದರು. ಹೀಗೆ, ಇಷ್ಟೆಲ್ಲಾ ಅಚ್ಚರಿ, ಸಂತಸಗಳ ನಡುವೆ ಉಲ್ಲಾಸದಿಂದ ಓಡಾಡಿಕೊಂಡಿದ್ದ ನಮಗೆ ಸಮಯ ಉರುಳಿದ್ದೇ ಗೊತ್ತಾಗಲಿಲ್ಲ.



ಹೊರಡಲು ಸಿದ್ದವಾದಾಗಲೇ ನಮಗೆ ಗೊತ್ತಾಗಿದ್ದು, ಮಳೆಯೂ ಸಹ ನಮ್ಮೊಡನೆ ರಾಜೇಶ್ವರಿಯವರ ಮಾತು ಕೇಳಲು ಇಳಿದುಬಿಟ್ಟಿದೆ ಎಂದು. ಆದರೆ, ನಮಗೆ ಅದರ ಅರಿವೇ ಇರಲಿಲ್ಲ. ಅವರೊಂದಿಗೆ ಮನೆಯ ವರಾಂಡದಲ್ಲಿ ಒಂದು ಗ್ರೂಪ್ ಪೋಟೋ ತೆಗೆಸಿಕೊಂಡು, ನಾವೆಲ್ಲ ತೆಗೆದುಕೊಂಡು ಹೋಗಿದ್ದ ಪೋಂಚೋಸ್ ಧರಿಸಿ, ಕೊಡೆಗಳನ್ನು ತೆರೆದು ಮಳೆಯಲ್ಲಿಯೇ ಹೊರಟೆವು.



'ಅಮ್ಮಾ ಬರುತ್ತೇನೆ' ಎಂದು ಹೇಳಿ ಕೊನೆಯವನಾಗಿ ಹೊರಟು, ಸ್ವಲ್ಪ ದೂರ ಬಂದು ನಿಂತು, ಹಿಂತಿರುಗಿ ನೋಡಿ ನನಗೆ ನಾನೇ ಹೇಳಿಕೊಂಡೆ, 'ಇವರ ಅರಿವು, ತಿಳುವಳಿಕೆ ಎಷ್ಟು ಅಗಾಧವೋ, ಅಂತೆಯೇ ಎಷ್ಟು ಸರಳ!'

ಅಲ್ಲಿಗೆ ಹೋಗಿದ್ದಾಗ ನನಗೊಂದು ಬಗೆಯ ಆನಂದವಿತ್ತು. ನಾನು ಕೇಳಬೇಕೆಂದು ಕೊಂಡಿದ್ದ ಪ್ರಶ್ನೆಗಳು ಈಗಲೂ ಹಾಗೇ ಉಳಿದುಕೊಂಡಿವೆ; ನಿರುತ್ತರ!! ಆದರೂ, ಯಾವುದೋ ಒಂದು ಸತ್ಪ್ರೇರಣೆಯೊಂದಿಗೆ ಹಿಂದಿರುಗಿದೆ.....ಮತ್ತೊಮ್ಮೆ ಅಲ್ಲಿಗೆ ಹೋಗುವ ನಿರ್ಧಾರದೊಂದಿಗೆ.

Tuesday, April 30, 2013

ಗೆಳತಿಯ ಹುಟ್ಟುಹಬ್ಬಕ್ಕೆ........


ಕೆಟ್ಟ ಕತ್ತಲ ನ೦ತರ ಮೂಡಿದ

'ಅರುಣೋ'ದಯದ ಮೋಹಕತೆಯ

ಸವಿಯುತ್ತಿರುವ ನಿನಗೆ,

ಈ ಮೊದಲ ಹುಟ್ಟುಹಬ್ಬ

ಕನಸಿಗಿಂತ ಸುಂದರವಾದ, ನಿರಂತರ

ವಿಸ್ಮಯ,ಅಚ್ಚರಿ,ಸಂತಸ ತರಲಿ :)


ಹುಟ್ಟುಹಬ್ಬದ ಶುಭಾಶಯಗಳು.... :)



(ಸೌಮ್ಯ - ಅರುಣ್ ಮದುವೆಯ ನಂತರದ ಮೊದಲ ಹುಟ್ಟುಹಬ್ಬ)

Monday, April 29, 2013

ಮದುಮಗಳ ಗುಂಗಿನಲ್ಲಿ......

ಸುಮಾರು ಒಂದು ತಿಂಗಳಿನಿಂದ ಕಾಯ್ದಿಟ್ಟುಕೊಂಡಿದ್ದ ಕುತೂಹಲ ಮೊನ್ನೆ, ಶನಿವಾರ, ತಣಿಯಿತು; ಅದರ ಹಿಂದೆಯೇ ಮತ್ತೊಂದು ಕಾತುರವು ಹುಟ್ಟಿಕೊಂಡಿದೆ. ಅದೇನೆಂದರೆ, ಈ 'ಮಲೆಗಳಲ್ಲಿ ಮದುಮಗಳು' ನಾಟಕವನ್ನು ಮತ್ತೊಂದು ಬಾರಿ ನೋಡಿಬಿಡಬೇಕು ಎಂದು!! ಹೌದು, ಈ ಮದುಮಗಳ ವೈಶಿಷ್ಟ್ಯವೇ ಅಂಥದ್ದು. ಮೊದಲು ಇದ್ದ ಕುತೂಹಲಕ್ಕೂ, ಈಗ ಹುಟ್ಟಿಕೊಂಡಿರುವ ಕಾತುರಕ್ಕೂ ಸಾಕಷ್ಟು ಕಾರಣಗಳಿವೆ.



ಕನ್ನಡ ಸಾಹಿತ್ಯಲೋಕದ, ಕವಿ ಕುವೆಂಪುರವರ ಮಹಾನ್ ಕಾದಂಬರಿ 'ಮಲೆಗಳಲ್ಲಿ ಮದುಮಗಳು' ಈ ನಾಟಕದ ಕಥಾವಸ್ತು ಎಂಬುದು ಮೊದಲ ಅಚ್ಚರಿಗೆ ಕಾರಣವಾದರೂ, ಕುತುಹೂಲ ಹುಟ್ಟಿಸಿದ್ದು ಈ ನಾಟಕವನ್ನು ಪ್ರಸ್ತುತ ಪಡಿಸುತ್ತಿರುವ ರೀತಿಗೆ. ಇತರೆ ನಾಟಕಗಳಂತೆ ಇಲ್ಲಿ ವೇದಿಕೆಯ / ರಂಗದ ಮೇಲೆ ಮಲೆನಾಡಿನ ಸೆಟ್ ಹಾಕಿಲ್ಲ. ಬದಲಿಗೆ, ಕಲ್ಲು, ಮಣ್ಣು, ಗಿಡ, ಮರವಿರುವ ಬಯಲಿನಲ್ಲಿ ಅಗತ್ಯಕ್ಕೆ ತಕ್ಕಂತೆ ಜಾಗವನ್ನು ಒಪ್ಪ ಓರಣ ಮಾಡಿ, ಮಲೆನಾಡಿನ ಸಣ್ಣ ಹಳ್ಳಿಯ, ತೋಟದ ಒಂದು ಭಾಗದ ತದ್ರೂಪವನ್ನೇ ಸೃಷ್ಟಿಸಿ ಅದನ್ನೇ ರಂಗಸ್ಥಳವನ್ನಾಗಿಸಿರುವುದು ಇದರ ವೈಶಿಷ್ಟ್ಯ.

 

ಇದೇ ರೀತಿ ಸಿದ್ದಗೊಂಡ ನಾಲ್ಕು ವಿವಿಧ ರಂಗಸ್ಥಳಗಳಲ್ಲಿ ನಾಟಕ ಸರದಿಯಲ್ಲಿ ಸಾಗುವುದನ್ನು ನೋಡುವಾಗ ನಮಗೆ ಸಿಗುವ 'ಫೀಲ್' ನಿಜಕ್ಕೂ ವಿಭಿನ್ನವಾದದ್ದು. ಮಲೆನಾಡಿನಲ್ಲಿ ತೋಟದ ಕಡೆ, ಕೇರಿಯ ಕಡೆ ಸುತ್ತಾಡಲು ಹೋದಾಗ, ಯಾರೋ ಕಿತ್ತಾಡುತ್ತಿರುವುದನ್ನು, ಮಾತನಾಡುತ್ತಿರುವುದನ್ನು, ಬೇಡಿಕೊಳ್ಳುತ್ತಿರುವುದನ್ನು ಮರೆಯಲ್ಲಿ ನಿಂತು ನೋಡಿದಂತೆ :)


ಇನ್ನು, ೭೫೦-೮೦೦ ಪುಟಗಳಷ್ಟು ಮಹಾ ಕಾದಂಬರಿಯನ್ನು , ಇಡೀ ರಾತ್ರಿ ೯ ಗಂಟೆಗಳ ಕಾಲ ನಾಟಕ ಮಾಡುತ್ತಾರೆ ಎಂದಾಗ,ಅಚ್ಚರಿಯ ಜೊತೆ, ಅನುಮಾನವೂ ನುಸುಳಿ ಬಂತು. ರಾತ್ರಿ ನಿದ್ದೆಗೆಟ್ಟು ಅಭ್ಯಾಸವಿಲ್ಲದ, ಹೆಚ್ಚೆಂದರೆ ರಾತ್ರಿ ೧ ರ ತನಕ ನಿದ್ದೆಯನ್ನು ಮುಂದೂಡ ಬಹುದಾದ ನಾನು ಬೆಳಿಗ್ಗೆ ೫.೩೦ರ ತನಕ ನಿದ್ದೆ ಬಿಟ್ಟು, ಎದ್ದು ಕೂತು ನಾಟಕ ನೋಡಬಲ್ಲೆನೆ, ನಾಟಕ ಬೋರ್ ಎನಿಸಿಬಿಟ್ಟರೆ ಅಥವಾ ಕಥಾವಸ್ತು ತುಂಬಾ 'ಹೆವಿ' ಎನಿಸಿ, ಆಸಕ್ತಿ ಜಾರಿ ಹೋದರೆ ಎಂದೆಲ್ಲ ಅನಿಸಿತ್ತು. (ನಾನು ಕಾದಂಬರಿಯನ್ನು ಓದಿಲ್ಲ) ನಾಟಕದ ಪ್ರದರ್ಶನ ಮುಗಿಯುವ ವೇಳೆಗೆ ಈ ಎಲ್ಲಾ ಅನುಮಾನಗಳು ಕೊಚ್ಚಿಕೊಂಡು ಹೋಗಿದ್ದವು.

ಇಲ್ಲಿ ಮಲೆನಾಡ ಪರಿಸರದ ಚಿತ್ರಣವಿದೆ, ಮುಗ್ದ, ಪ್ರಬುದ್ದ, ಬದ್ದ ಪ್ರೇಮಿಗಳ ಕಥೆಯಿದೆ, ವ್ಯವಸ್ಥೆಯ ವಿರುದ್ದದ ವ್ಯಂಗ್ಯವಿದೆ, ಆಚರಣೆಯಲ್ಲಿದ್ದ,ಈಗಲೂ ಇರುವ ಮೂಢಾಚಾರದ ಅಣಕವಿದೆ, ಹಾಸ್ಯವಿದೆ, ಕಳೆದು ಹೋದ ಮಗನ ಬರುವಿಕೆಗೆ ಕಾಯುವ ತಂದೆಯ ನೋವಿದೆ, ಮನುಷ್ಯ ಸಹಜವಾದ ಆಸೆ, ದುರಾಸೆ, ರಾಜಕೀಯದ ದರ್ಶನವಿದೆ, ಹೀಗೆ ಸಾಕಷ್ಟು ಆಸಕ್ತಿಕರ ವಿಷಯಗಳು ನಮ್ಮನ್ನು ಹಿಡಿದಿಡಬಲ್ಲವು. ಎಷ್ಟರ ಮಟ್ಟಿಗೆ ಎಂದರೆ, ಒಂದು ರಂಗಸ್ಥಳದಲ್ಲಿ ಪ್ರದರ್ಶನ ಮುಗಿದು, ಮತ್ತೊಂದು ಕಡೆ ನಾಟಕ ಮುಂದುವರಿಯುವುದು ಎಂದಾಗ, ಅಲ್ಲಿ ಸರಿಯಾದ ಜಾಗ ಹಿಡಿಯಲು ಓಡುತ್ತಿದ್ದೆ. ನನ್ನ ನಿದ್ದೆಯು ಓಡಿಹೋಗಿ, ಅದೆಲ್ಲೋ ಕಳೆದು ಹೋಗಿತ್ತು.


ವಿಶಿಷ್ಟವಾದ ರಂಗಭೂಮಿ, ವಿಸ್ತೃತವಾದ ಕಥೆ, ಇವುಗಳನ್ನು ಸಮರ್ಪಕವಾಗಿ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಕಲಾವಿದರ ಶ್ರಮ ನಿಜಕ್ಕೂ ಅಭಿನಂದನಾರ್ಹ. ಉತ್ತರದ ಗುಲ್ಬರ್ಗಾದಿಂದ, ದಕ್ಷಿಣದ ಚಾಮರಾಜನಗರದಂದ ಆಯ್ದ ಸುಮಾರು ೭೫ ಜನ ಕಲಾವಿದರು ಇದಕ್ಕಾಗಿ ಒಂದೂವರೆ ತಿಂಗಳು ಶ್ರಮಿಸಿ, ಪ್ರತಿಯೊಬ್ಬರೂ ಕನಿಷ್ಟ ೩ ಪಾತ್ರಗಳನ್ನು ನಿಭಾಯಿಸಿರುವುದು ಆಶ್ಚರ್ಯಕರ. ನಾಟಕ ಪ್ರಾರಂಭವಾಗಿ, ನಾಟಕದ ಕೊನೆಯ ಸಂಭಾಷಣೆ ಮುಗಿಸಿ, ಪ್ರೇಕ್ಷಕರಿಗೆ ವಂದನೆ ಸಲ್ಲಿಸುವವರೆಗೂ ಕಲಾವಿದರ ಹುಮ್ಮಸ್ಸು (ಎನರ್ಜಿ) ಒಂದೇ ಮಟ್ಟದಲ್ಲಿತ್ತು; ಎಲ್ಲಿಯೂ ಕಡಿಮೆಯಾದ ನೆನಪೇ ಇಲ್ಲ!! ಈ ಹುಮ್ಮಸ್ಸಿನ ಅಭಿನಯವೂ ಎಲ್ಲಿಯೂ ಕೃತಕವೆನಿಸದೆ, ಸಾಕಷ್ಟು ಸಹಜವಾಗಿರುವುದರಿಂದಲೇ, ನಾಯಿಗತ್ತಿ, ತಿಮ್ಮಿ, ಐತ, ಪೀಂಚಲು, ಮುಕುಂದ, ಚಿನ್ನು, ಸುಬ್ಬಣ್ಣ ಹೆಗಡೆ, ಕಾವೇರಿ, ಅಂತಕ್ಕ, ಸೇರೆಗಾರ ಇವರೆಲ್ಲಾ ನಾಟಕದ ಸಮಯದಲ್ಲೂ ಹಾಗೂ ನಾಟಕದ ನಂತರವೂ ನಿಮ್ಮನ್ನು ಹಿಡಿದಿಟ್ಟಿರುತ್ತಾರೆ. ಏನೂ ಸಂಭಾಷಣೆಯೇ ಇಲ್ಲದ, ಕೇವಲ ಅಭಿನಯದಿಂದಲೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗುವ 'ಗುತ್ತಿ ನಾಯಿ' ಯನ್ನು ನಾವು ನೋಡಿಯೇ ಎಂಜಾಯ್ ಮಾಡಬೇಕು.



ಇಷ್ಟು ದಿನ, ಸಿನಿಮಾ ಲೋಕದಲ್ಲಿ ಕಾಣೆಯಾಗಿದ್ದ ಹಂಸಲೇಖ, ಮದುಮಗಳಿಗಾಗಿ ಅದ್ಬುತವೆನಿಸುವಂತಹ ಸಂಗೀತ ಸಂಯೋಜಿಸಿ ತಮ್ಮ ದೇಸಿತನವನ್ನು ಪರಿಚಯಿಸಿದ್ದಾರೆ. ೪೨ ಹಾಡುಗಳಲ್ಲಿ ಯಾವೊಂದು ಹಾಡೂ ಬೋರ್ ಹೊಡೆಸಲಿಲ್ಲ. ನಾಟಕದ ಓಟಕ್ಕೆ ಪೂರಕವಾಗಿ ಬಂದು ಹೋಗುವ ಹಾಡುಗಳು ಎಷ್ಟರ ಮಟ್ಟಿಗೆ ಸೆಳೆಯುತ್ತವೆ ಎಂದರೆ, ನಾಟಕದ ನಂತರವೂ ಹಾಡುಗಳನ್ನು ಗುನುಗುನಿಸದೇ ಇರಲಾಗುತ್ತಿಲ್ಲ.



ಒಟ್ಟಿನಲ್ಲಿ, ಈ ಅಪರೂಪದ, ಅಪೂರ್ವ ಅನುಭವವನ್ನು ನಮ್ಮದಾಗಿಸಿಕೊಳ್ಳಲು ನಾವು ಮಾಡಬೇಕಿರುವುದು ಎರಡೇ ಕೆಲಸ.

-ಒಂದು, ಮುಂಗಡವಾಗಿ ಟಿಕೇಟ್ ಕಾಯ್ದಿರಿಸುವುದು.

-ಎರಡು, ನಿಗದಿತ ದಿನ ಪ್ರದರ್ಶನದ ವೇಳೆಗೆ ಸರಿಯಾಗಿ ಹೋಗಿ ಕುಳಿತುಕೊಳ್ಳುವುದು.

ಆನಂತರ ನಮ್ಮ ನಿದ್ದೆಯನ್ನು ಮಾಯವಾಗಿಸುವ, ಆಸಕ್ತಿಯನ್ನು ಕೆರಳಿಸುವ ಒಂದು ಮಾಯಾ ಮೋಡಿಗೆ ನಮಗೆ ಗೊತ್ತಿಲ್ಲದೇ ಒಳಗಾಗುತ್ತೇವೆ. ನಾಟಕ ಮುಗಿಯುವ ವೇಳೆಗೆ ನಮಗೇ ಅಚ್ಚರಿಯಾಗುತ್ತದೆ; ವಿಶಿಷ್ಟ ಅನುಭವವೊಂದು ನಮ್ಮ ಕೈ ಹಿಡಿದಿರುತ್ತದೆ. ತಂಡದ ಶ್ರಮ ಹಾಗೂ ಶ್ರದ್ದೆ ನಮ್ಮನ್ನು ಮೂಕರನ್ನಾಗಿಸುತ್ತದೆ.

ರಂಗಭೂಮಿಯ ಸಾಧ್ಯತೆಗಳನ್ನು ವಿಸ್ತಾರ ಮಾಡಿತೋರಿಸಿದ ನಾಟಕಕ್ಕೆ ಜೈ!!

'ಬರಲಾಗಲಿಲ್ಲ, ' ಎಂದು ಹೇಳದೆ,

ಹತ್ತಾರು ಕಾರಣಗಳ ಹುಡುಕದೆ,

ಸಮಯ ಬಿಡುವು ಮಾಡಿಕೊಂಡು ಹೋಗಿಬನ್ನಿ;

ಮಲೆನಾಡ'ಮದುಮಗಳು' ನಿಮ್ಮೂರಿಗೇ ಬಂದಿರುವಾಗ

ಹೋಗದೆ ತಪ್ಪಿಸಿಕೊಳ್ಳುವುದು ಸರಿಯಲ್ಲ...

ಪೋಷಕರಾಗಿ ಹೋಗಿ ಹರಸಿ, ಹರ್ಷಿಸಿ ಬನ್ನಿ;

ಪುಟ್ಟಪ್ಪನ ಕನಸಿನ ಪುಟ್ಟ ಮಗಳ ಸೋದರ ಮಾವ

ಬಸು ಮತ್ತವರ ತಂಡಕ್ಕೆ ಖುಷಿ ತನ್ನಿ








Saturday, April 20, 2013

ಮಾರೀ ಕಾಡು - ಯುಗಾದಿ - ಶ್ರೀ ಕೃಷ್ಣ ಸಂಧಾನ

ಈಚಿನ ದಿನಗಳಲ್ಲಿ ಬರೆಯುವುದಕ್ಕೆ ಸಾಧ್ಯವೇ ಆಗಿರಲಿಲ್ಲ. ಸಾಧ್ಯವೇ ಆಗಿರಲಿಲ್ಲ ಎನ್ನುವುದಕ್ಕಿಂತ, ನನ್ನ ಎಲ್ಲಾ ಸಮಯವನ್ನು ನಾಟಕಕ್ಕೆ ಮೀಸಲಿಟ್ಟಿದ್ದೆ ಎನ್ನುವುದೇ ಸರಿ. ಬೆಳಿಗ್ಗೆ ೪.೩೦ಕ್ಕೆ ನನ್ನ ದಿನಚರಿ ಪ್ರಾರಂಭವಾಗುತ್ತಿತ್ತು. ೫.೩೦ರ ವೇಳೆಗೆ, ಕಂಪೆನಿಯ ಗಾಡಿ ಬಂದು, ೬.೩೦ರ ವೇಳೆಗೆ ಆಫೀಸು ತಲುಪಿ, ೩.೩೦ರ ಹೊತ್ತಿಗೆ ಹೇಗಾದರೂ ಸರಿ (ಹಲವು ಬಾರಿ ಊಟ ತಪ್ಪಿಸಿಕೊಂಡಾದರೂ ಸರಿ) ಕೆಲಸ ಮುಗಿಸಿ ಅಥವಾ ಉಳಿದದ್ದನ್ನು ಮಾರನೇ ದಿನಕ್ಕೆ ಮುಂದೂಡಿ, ಆಫೀಸಿನಿಂದ ಹೊರಟರೆ ಮನೆ ತಲುಪುವ ವೇಳೆಗೆ ೫ ಆಗುತ್ತಿತ್ತು. ಮನೆಗೆ ಬಂದು ಕಂಪೆನಿಯ ಲ್ಯಾಪ್ ಟಾಪ್ ಅನ್ನು ಮನೆಯಲ್ಲಿರಿಸಿ, ವೀರೇಶ್ (ನಾಟಕದ ಗೆಳೆಯ) ಬರುವ ವೇಳೆಗೆ ರೆಡಿಯಾಗಿ, ೫.೪೫ ರ ವೇಳೆಗೆ ದಯಾನಂದ್ ಸಾಗರ್ ಕಾಲೇಜ್ ಬಳಿ ಇರುವ ಕೆ.ವಿ.ಸುಬ್ಬಣ್ಣ ಆಪ್ತ ರಂಗ ಮಂದಿರ ತಲುಪಿ, ೧೫-೨೦ ನಿಮಿಷ ವ್ಯಾಯಾಮ ಮಾಡಿ, ಆ ನಂತರ ನಮ್ಮ 'ಮಾರೀಕಾಡು' ನಾಟಕದ ತಾಲೀಮಿನಲ್ಲಿ ತೊಡಗಿಕೊಳ್ಳುತ್ತಿದ್ದೆವು. ಸೂರಿ ಸರ್ ನಿರ್ದೇಶನದಲ್ಲಿ ಆಸಕ್ತಿಕರವಾಗಿ ೮.೩೦ ರ ತನಕ ತಾಲೀಮು ನಡೆಯುತ್ತಿತ್ತು.  ಅಲ್ಲಿಂದ ಅರ್ಧ ಗಂಟೆಗಳ ಕಾಲ ನಾಟಕದ ಹುಡುಗರ ಜೊತೆ ಹರಟೆ. ೯ ಕ್ಕೆ ಅಲ್ಲಿಂದ ಹೊರಟು ಮನೆ ತಲುಪಿ ಊಟ ಮಾಡಿ, ರೂಮ್ ಸೇರಿದರೆ ಓದುತ್ತಿದ್ದದ್ದು ಕೂಡ ನಾಟಕಗಳನ್ನೇ; ೧೧ ರ ತನಕ. ಆ ನಂತರ ನಿದ್ದೆ. (ವಾರಾಂತ್ಯದಲ್ಲಿ ಬಿಡುವಾದರೂ, ಸಂಪೂರ್ಣ ಸಮಯವನ್ನು ಒಂದು ಪುಸ್ತಕ ರೂಪುಗೊಳಿಸುವ ಕಾರ್ಯಕ್ಕೆ ಮೀಸಲಿಡುತ್ತಿದ್ದೆ)  ಹೀಗೆ, ಸತತ ಒಂದೂವರೆ ತಿಂಗಳು 'ಮಾರೀಕಾಡು' ನಾಟಕಕ್ಕೆ ತಯಾರಾಗಿದ್ದು. ಆ ತಯಾರಿಯ ನಡುವೆ ಬಿಡುವು ದೊರೆತರೆ, ಸಮಯ ಕಳೆಯುತ್ತಿದ್ದದ್ದು ಕೂಡ ರಂಗ ಶಂಕರದಲ್ಲಿ ನಡೆಯುತ್ತಿದ್ದ ಇತರೆ ನಾಟಕಗಳನ್ನು ನೋಡಿಯೇ ಹೊರತು, ಯಾವುದೇ ಸಿನಿಮಾ, ಔತಣ ಕೂಟಗಳಲ್ಲಲ್ಲ. ಈ ಸಮಯದಲ್ಲೇ ನಾಟಕದ ಸೂಕ್ಷ್ಮತೆಗಳ ಬಗ್ಗೆ, ಅಭಿನಯದ ಬಗ್ಗೆ, ರಂಗ ವಿನ್ಯಾಸದ ಬಗ್ಗೆ, ಹೀಗೆ ಒಬ್ಬ ಸಾಮಾನ್ಯ ಪ್ರೇಕ್ಷಕನ ತಿಳುವಳಿಕೆಗೂ ಮೀರಿ ಇರುವಂತಹ ನಾಟಕದ ಇತರೆ ಆಯಾಮಗಳ ಬಗ್ಗೆ ನನ್ನ ಅರಿವಿನ ಬಾಗಿಲು ತೆರೆದುಕೊಂಡದ್ದು. ಆ ಗ್ರಹಿಕೆಯನ್ನು ವಿವರವಾಗಿ ಬರೆಯುವ ಆಸೆಯಿದೆ. ನನ್ನ ನೆನಪಿನ ದಾಖಲೆಗಾಗಿಯಾದರೂ ಬರೆಯಲೇ ಬೇಕು. :)

ಆ ನಾಟಕ ಮುಗಿದ ಕೂಡಲೇ, ನಮ್ಮ 'ಅವಿರತ' ದ ನಾಟಕ 'ಶ್ರೀ ಕೃಷ್ಣ ಸಂಧಾನ' ನಾಟಕದ ತಯಾರಿ!! ಆದರೆ, ನಿಗದಿಪಡಿಸಿದಂತೆ, 'ಶ್ರೀ ಕೃಷ್ಣ  ಸಂಧಾನ' ನಾಟಕದ ಪ್ರದರ್ಶನವಾಗಲಿಲ್ಲ. ಶ್ರೀ ರಾಮ ಸೇನೆ, ಹಿಂದೂ ಜಾಗರಣಾ ವೇದಿಕೆ, ಹೀಗೆ ಸ್ವಯಂಘೋಷಿತ ಧರ್ಮೋದ್ದಾರಕರ ಅರ್ಥಹೀನ ದಾಂಧಲೆಯ ಕಾರಣ ನಮ್ಮ ನಾಟಕ ಪ್ರದರ್ಶನವನ್ನು ಮುಂದೂಡ ಬೇಕಾಯಿತು.  ನಾಟಕದ ಉದ್ದೇಶ, ಅದರ ಹಿನ್ನೆಲೆಯನ್ನು ತಿಳಿದುಕೊಳ್ಳುವಷ್ಟು ತಾಳ್ಮೆ ತೋರದವರ ಅವಿವೇಕಿತನಕ್ಕೆ ನಮ್ಮೆಲ್ಲರ ಶ್ರಮ ವ್ಯರ್ಥವಾಯಿತು.  ಸತ್ಯ ತಿಳಿದುಕೊಳ್ಳುವ ಪ್ರಯತ್ನಪಡಲೂ ಸಾಧ್ಯವಾಗದ ದುರ್ಬಲ ಜನರೆದುರು ವೈಚಾರಿಕತೆಗೆ ಅವಕಾಶವಿಲ್ಲ ಎಂದು ಅರಿತ ಅವಿರತ ನಮ್ಮ ಆತ್ಮಾಭಿಮಾನವೂ ಉಳಿದು, ಬೆಳೆಯುವಂತೆ; ಅವರ ತಿಕ್ಕಲುತನವನ್ನೂ ತಿರಸ್ಕರಿಸುವಂತೆ  ತಕ್ಕ ತೀರ್ಮಾನವನ್ನು ತೆಗೆದುಕೊಂಡು, ನಾಟಕ ಪ್ರದರ್ಶನವನ್ನು ಮುಂದೂಡಿತು.



ಆನಂತರವಷ್ಟೆ, ಬರೆಯಲು ಸಮಯ ಮಾಡಿಕೊಂಡದ್ದು. ಆಗ ಬರೆದ ಸಾಲುಗಳೇ ಇವು.... ಚುಟುಕಾಗಿವೆ....        
 
 
ಕಂಬಾರರ 'ಮಾರೀಕಾಡು'
 
ಶಂಕರನ ರಂಗದ ಮೇಲೆ

 'ಸೂರೀ ಕಾಡು' ಆಗುವ ವೇಳೆಗೆ

ಬರಡು ಮರಗಳಂತಿದ್ದ ನಮ್ಮಲ್ಲಿ

ಹಸಿರು ಚಿಗುರೊಡೆಯುವ

ಖುಷಿ ಮೂಡಿತ್ತು.                                                                                                                                                                               ----------------------------------------------------------------------            
ಮಾವು ಚಿಗುರುವ ಕಾಲದ ಹಬ್ಬಕ್ಕೆ,

ಸಿಹಿ - ಕಹಿಯ ಜೊತೆಗೆ,

     ಮುಪ್ಪಾಗದ ಮರದ ಹುಳಿಯನ್ನು

ಚಪ್ಪರಿಸುವಂತೆ ಮಾಡಿ,

'ಏನಿದು ಸರ್?' ಎಂದು ಕೇಳಿದರೆ,

ತುಂಟನಂತೆ ಕಣ್ಣೊಡೆದು, ತುಟಿಯಂಚಿನಲಿ ನಕ್ಕರು

ನಮ್ಮ ಸೂರಿ ಸರ್ರು...
 
(ರಂಗ ಶಂಕರದಲ್ಲಿ ಸೂರಿ ಸರ್ ರೂಪಿಸಿದ್ದ ರಂಗ ಯುಗಾದಿಯ ಕುರಿತಾಗಿ) 
  -----------------------------------------------------------------------------
 
ಬೇರನ್ನು ಮರೆತು, ರೆಂಬೆಯನ್ನಷ್ಟೇ ಪರೀಕ್ಷಿಸುವವರನ್ನು

ಅವಿವೇಕಿಗಳೆನ್ನದೆ ವಿಧಿಯಿಲ್ಲ:


'ಕಟ್ಟುವುದು ಕಷ್ಟ, ಮೆಟ್ಟುವುದು ಸುಲಭ' ಎಂದರಿತ

ವಿಚಾರಿಗಳು ಎಡವಲು ಸಾಧ್ಯವಿಲ್ಲ! :)
 
 



ರಾಮ...ರಾಮ....

ಸೇನಾನಿಗಳಿವರಲ್ಲ; ಜಾಗೃತಿ ಮೂಡಿಸುವುದಿಲ್ಲ.
 
ವಿಚಾರ ಕೇಳುವಷ್ಟು ತಾಳ್ಮೆಯಿಲ್ಲ,

ಆಲೋಚಿಸುವಷ್ಟು ವಿವೇಕಿಗಳಲ್ಲ;

ಮೂಲ ತಿಳಿಸದ ಮುಖಹೇಡಿಗಳ ಸಂದೇಶಕ್ಕೆ

ವ್ಯಾಘ್ರರಾಗುವ ಇವರು

ನಮ್ಮೊಳಗೇ ಇರುವ ಪ್ರತಿಗಾಮಿಗಳು;

ಸಂಸ್ಕೃತಿಯ ವಿಸ್ತಾರಕ್ಕೆ, ಸಹಬಾಳ್ವೆಯ ಸಾಕಾರಕ್ಕೆ

ಅಡ್ಡಿ ಮಾಡುತ್ತಿರುವ ಸಂಕುಚಿತ ಮನಗಳು

Thursday, February 28, 2013

ಅವಿರತ: ೨೦೧೩ ರ ಮುನ್ನೋಟ

ಅನಾಥ ಮಕ್ಕಳಿಗೆ, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ನೆಲೆ ನೀಡುವುದರೊಂದಿಗೆ, ಅವರ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಂಡು ಆ ಮಕ್ಕಳ ಬಾಳಿಗೆ ಒಂದು ನೆಲೆಯನ್ನು ಕರುಣಿಸುವ ಸತ್ಕಾರ್ಯದಲ್ಲಿ ತೊಡಗಿಸಿಕೊಂಡಿರುವ ’ನೆಲೆ’ ಎಂಬ ಸ್ವಯಂ ಸೇವಾ ಸಂಸ್ಥೆಯಲ್ಲಿ ನಮ್ಮ ಅವಿರತದ ಸಭೆಯನ್ನು ಆಯೋಜಿಸಲಾಗಿತ್ತು.  ಸದಸ್ಯನಾಗಿ ಸಭೆಗೆ ಹೋದ ನಾನು ಪತ್ರಕರ್ತನ ಪಾತ್ರವನ್ನೂ ವಹಿಸಬೇಕಾಗಿ ಬಂತು.

ಪಕ್ಕಾ ಒಬ್ಬ ಪತ್ರಕರ್ತನಂತೆ ಸಭೆಯಲ್ಲಿ ಭಾಗವಹಿಸಿ, ಆನಂತರ ಅದರ ವರದಿಯನ್ನು ಬರೆದಿರುವಂತದ್ದೇ ’ಅವಿರತ: ೨೦೧೩ ರ ಮುನ್ನೋಟ’ ಎಂಬ ಲೇಖನ.  ಇಲ್ಲಿಯವರೆಗೂ, ಅವಿರತದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಅವುಗಳ ಬಗ್ಗೆ ಅನಿಸಿಕೆಯನ್ನು ಬರೆದುಕೊಳ್ಳುತ್ತಿದ್ದ ನನಗೆ, ಭಾನುವಾರದ ಆ ಕಾರ್ಯಕ್ರಮದಂದು,  "ಸಭೆಯಲ್ಲಿ ಚರ್ಚಿಸುವ ವಿಷಯಗಳನ್ನು ನೋಟ್ ಮಾಡಿಕೊಂಡು ಎಲ್ಲರಿಗೂ ಒಂದು ವರದಿ ಕಳಿಸಿಬಿಡು" ಎಂದು ಪುಸ್ತಕ, ಪೆನ್ನು ಕೊಟ್ಟು ಕೂರಿಸಿಬಿಟ್ಟರು.   
ಆಗ ಅನಿವಾರ್ಯವಾಗಿ ಬರೆಯಬೇಕಾದ ಸಂದರ್ಭ ಬಂದೊದಗಿತು.  ಬರೆಯುವುದನ್ನು ಪ್ರೀತಿಸುವ ನಾನು ಸಂತಸದಿಂದಲೇ ಒಪ್ಪಿಕೊಂಡೆ. ಬರೆಯುತ್ತಾ, ಬರೆಯುತ್ತಾ ಒಂದು ತಂಡವಾಗಿ ನಾವು ಹಮ್ಮಿಕೊಳ್ಳಲು ನಿರ್ಧರಿಸಿರುವ ಕಾರ್ಯಕ್ರಮಗಳ ಬಗ್ಗೆ, ಸಭೆಯಲಿ ಹರಿದಾಡಿದ ಯೋಚನಾ ಲಹರಿಯ ಬಗ್ಗೆ ಖುಷಿಯೆನಿಸಿ, ಹೆಮ್ಮೆ ಬೆಳೆಯುತ್ತಾ ಬಂದಿತು.  ಜೊತೆಗೇ, ಮಾಡಬೇಕಾಗಿರುವ ಕೆಲಸಗಳು ಬೆಟ್ಟದಷ್ಟಿವೆ ಎಂಬುದೂ ಅರಿವಾಗುತ್ತಿದೆ.

ಪ್ರೋತ್ಸಾಹ ಕೊಟ್ಟು, ಜವಾಬ್ದಾರಿಯುತ ಕೆಲಸವಹಿಸಿ, ಜೊತೆ ನಿಂತ ಅವಿರತದ ಎಲ್ಲಾ  ಹಿರಿಯರಿಗೂ ವಂದನೆಗಳು.... :) 

ಈ ವರದಿಯನ್ನು ನಾನು ಸಿದ್ದಪಡಿಸುತ್ತೇನೆಂದು ನೆನೆಸಿರಲಿಲ್ಲ...


------------------------------------------------------------------------

ಅವಿರತ: ೨೦೧೩ ರ ಮುನ್ನೋಟ


“ಯಾವುದೇ ಒಬ್ಬ ವ್ಯಕ್ತಿಯ ಅಥವಾ ಸಂಸ್ಥೆಯ ಯಶಸ್ಸು ಸಾರ್ವಜನಿಕ ವಲಯದಲ್ಲಿ ನಿರೀಕ್ಷೆಗಳನ್ನು ಹುಟ್ಟುಹಾಕಿದರೆ, ವೈಯಕ್ತಿಕ ಮಟ್ಟದಲ್ಲಿ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ.“ - ಎಂಬ ಮಾತನ್ನು ನಮ್ಮ ಅವಿರತ ತಂಡವು ಚೆನ್ನಾಗಿ ಅರಿತಿರುವುದು ನಿಜವಾಗಲೂ ಸಂತಸದ ವಿಷಯವಾಗಿದೆ. ತಿಂಗಳ ಹಿಂದಷ್ಟೆ, ಐದನೇ ವಾರ್ಷಿಕೋತ್ಸವವನ್ನು ಸಡಗರದಿಂದ ಆಚರಿಸಿಕೊಂಡ ನಮ್ಮ ತಂಡ ಇನ್ನೂ ಅದೇ ಗುಂಗಿನಲ್ಲಿ ಇರುವ ಹೊತ್ತಿನಲ್ಲೇ, ಆ ನೆನಪುಗಳು ನಮ್ಮನ್ನು ವ್ಯಾಪಿಸಿಕೊಂಡು, ನಮ್ಮನ್ನು ಮರೆಮಾಡಿಬಿಡಬಹುದಾದ ಆತಂಕದಿಂದ / ಅಪಾಯದಿಂದ ಪಾರು ಮಾಡಿದ್ದು ಭಾನುವಾರ ನಡೆದ ಅವಿರತದ ಸಭೆ.
ಉತ್ಸಾಹ, ಹುರುಪಿನಿಂದ ಶುರುವಾಗಿ, ಸದಸ್ಯರೆಲ್ಲರ ಮುತುವರ್ಜಿಯಿಂದ, ಸಂಕಲ್ಪದಿಂದ ಇಲ್ಲಿಯವರೆಗೂ ನಡೆದುಕೊಂಡು ಬಂದಿರುವ ತಂಡ ಹಾಗೂ ತಂಡದ ಯೋಜನೆಗಳಿಗೆ ಭವಿಷ್ಯದಲ್ಲಿ ಸುಭದ್ರವಾದ, ಶಾಶ್ವತವಾದ ನೆಲೆಯನ್ನು ಒದಗಿಸುವ ಬಗ್ಗೆ ’ನೆಲೆ’ಯಲ್ಲಿ ಚರ್ಚಿಸಿದ್ದು ಸಂದರ್ಭೋಚಿತವಾಗಿತ್ತು. ಅಶ್ವಥ್ ಸರ್ ಈ ಸಭೆಗೆ ’ನೆಲೆ’ಯನ್ನು ಆರಿಸಿದ್ದರ ಹಿಂದೆ ಹಾಗೂ ಹೆಜ್ಜೆ-ಗೆಜ್ಜೆಯಲ್ಲಿ ಶಶಿ ಸರ್ ಅವಿರತವನ್ನು ಬೆಳೆಯುತ್ತಿರುವ ಮಗುವಿಗೆ ಹೋಲಿಸಿದ್ದರ ಹಿಂದೆ ಯಾವ ಕಾಣದ ಶಕ್ತಿಯ ಕೃಪೆಯಿದೆಯೋ ಕಾಣೆ, ಎಲ್ಲವೂ ಒಂದಕ್ಕೊಂದು ಪೂರ್ವನಿರ್ಧಾರಿತವಾದಂತೆ ಹೊಂದಿಕೊಂಡಿದೆ. :)

ಮಕ್ಕಳ ಕಾರ್ಯಕ್ರಮ, ನೋಟ್ ಬುಕ್ ವಿತರಣೆಯ ಹೊಸ ರೂಪ, ಶಾಶ್ವತ ನಿಧಿ ಸಂಗ್ರಹಣೆಗೆ ವಿವಿಧ ಮಾರ್ಗಗಳು, ವನ ಮಹೋತ್ಸವ, ವೈದ್ಯಕೀಯ ತಪಾಸಣೆ, ಯೋಜನೆಗಳಲ್ಲಿ ಸ್ಥಳೀಯರ ಪಾಲ್ಗೊಳ್ಳುವಿಕೆ, ಸಾಂಸ್ಕೃತಿಯ ಕಾರ್ಯಕ್ರಮಗಳು, ಮಾಧ್ಯಮ ಮಿತ್ರರ ಸಹಕಾರ, ಹೀಗೆ ಇಷ್ಟೆಲ್ಲಾ ಮಹತ್ವದ ವಿಷಯಗಳು ಸಭೆಯಲ್ಲಿ ತುಂಬಿ, ನಾವು ತಕ್ಷಣ ಕಾರ್ಯೋನ್ಮುಖರಾಗುವುದರ ಅವಶ್ಯಕತೆಯನ್ನು ಪುನ: ಪುನ: ನೆನಪಿಸುತ್ತಿತ್ತು. ಈ ವಿಷಯಗಳ ಬಗ್ಗೆ ಸಭೆಯಲ್ಲಿ ನಡೆದ ಸಂವಾದದ ಸಂಕ್ಷಿಪ್ತ ಸಾರಾಂಶ ಇಲ್ಲಿದೆ.



ಶಾಶ್ವತ ನಿಧಿ / ಕಾರ್ಪಸ್ ಫಂಡ್:

ಹೆಜ್ಜೆ-ಗೆಜ್ಜೆ ಸಮಯದಿಂದಲೂ ಶಶಿ ಸರ್ ಹಾಗೂ ಇತರ ಹಿರಿಯರು ಅವಿರತದ ಶಾಶ್ವತ ನಿಧಿಯ ಬಗ್ಗೆ ಪ್ರಸ್ತಾಪಿಸುತ್ತಲೇ ಇದ್ದಾರೆ. ಕಾರ್ಯಕ್ರಮದ ದಿನ ಈ ವಿಷಯವನ್ನು ದಾನಿಗಳಿಗೆ ತಿಳಿಸಿ, ಸ್ವಲ್ಪ ಮಟ್ಟಿಗಿನ ನಿಧಿ ಸಂಗ್ರಹಣೆಯೂ ಆಯಿತು. ಆದರೆ, ಈ ಶಾಶ್ವತ ನಿಧಿಯ ಸ್ಥಾಪನೆಯ ಹಿನ್ನೆಲೆ ಏನು? ಇದರ ಸಾಧಕ, ಬಾಧಕಗಳೇನು?! ಇದರ ಅವಶ್ಯಕತೆ ಏನು? ಹೀಗೆ ಇನ್ನಿತರ ವಿಷಯಗಳ ಬಗ್ಗೆ ಎಲ್ಲರಲ್ಲೂ ಸ್ಪಷ್ಟ ಅರಿವು ಮೂಡಿಸಿ, ಎಲ್ಲರೂ ಒಕ್ಕೊರಲಿನಿಂದ ’ಅಹುದಹುದು’ ಎನ್ನುವಂತೆ ವಿಷಯ ಮಂಡಿಸಿದ ರವೀಂದ್ರ ಸರ್‍ಗೆ ಹಾಗೂ ಸಭೆಯಲ್ಲಿಯೇ ಇದರ ಬಗ್ಗೆ ತಮ್ಮ ತಮ್ಮ ತಿಳುವಳಿಕೆಯನ್ನು ಹಂಚಿಕೊಂಡು ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು.


-ಶಾಶ್ವತ ನಿಧಿ: ಈ ನಿಧಿಗಾಗಿ ದಾನಿಗಳಿಂದ ಸಂಗ್ರಹಿಸಲಾಗುವ ಹಾಗೂ ಇತರೆ ಯಾವುದೇ ಮೂಲಗಳಿಂದ ಶಾಶ್ವತ ನಿಧಿಗಾಗೆಂದೇ ಬರುವ ಹಣವನ್ನು Fixed Deposit ರೂಪದಲ್ಲಿ ಇಡಲಾಗುವುದು. ಇದರಿಂದ ಬರುವ ಕೇವಲ ಬಡ್ಡಿಯ ಹಣವನ್ನು ಮಾತ್ರ ಸಾಮಾಜಿಕ ಕಾರ್ಯಗಳಿಗೆ ಉಪಯೋಗಿಸಲಾಗುವುದು, ಬಹು ಮುಖ್ಯವಾಗಿ ಅವಿರತದ ವಾರ್ಷಿಕ ಕಾರ್ಯಕ್ರಮ ’ನೋಟ್ ಪುಸ್ತಕ ವಿತರಣೆ’ಗೆ ಉಪಯೋಗಿಸುವುದಾಗಿ ನಿರ್ಧರಿಸಲಾಗಿದೆ.

- ಈ ಒಟ್ಟು ನಿಧಿಯನ್ನು ಯಾವುದೇ ಸಾಮಾಜಿಕ ಕಾರ್ಯಗಳಿಗಾಗಲಿ ಹಾಗೂ ಕಚೇರಿ ನಿರ್ವಹಣೆಗಾಗಲಿ ಉಪಯೋಗಿಸಲಾಗುವುದಿಲ್ಲ. ಒಂದು ವೇಳೆ, ತುರ್ತು ಪರಿಸ್ಥಿತಿಯಲ್ಲಿ, ಅಂದರೆ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ (೨೦೧೦ ರ ಉತ್ತರ ಕರ್ನಾಟಕದ ನೆರೆಯನ್ನು ನೆನಪಿಸಿಕೊಳ್ಳಿ) ಈ ನಿಧಿಯಲ್ಲಿನ ಹಣವನ್ನು ಎಲ್ಲ ಸದಸ್ಯರ, ದಾನಿಗಳ ಒಮ್ಮತದೊಂದಿಗೆ ಬಳಸಬಹುದಾಗಿದೆ.

- ಈ ನಿಧಿಯಿಂದ ಬರುವ ವಾರ್ಷಿಕ ಬಡ್ಡಿಯು, ’ನೋಟ್ ಪುಸ್ತಕ ವಿತರಣೆ’ಗೆ ಕನಿಷ್ಟ ಮೊತ್ತದ ಹಣವಾಗಿ ಸಂದಾಯವಾಗಲಿದೆ. ಅದಕ್ಕೂ ಮೀರಿ ಬೇಕಾಗುವ ಮೊತ್ತವನ್ನು ಪ್ರತಿಯೊಂದು ಉಪ ತಂಡವು ಸ್ವಂತವಾಗಿ ಸಂಗ್ರಹಿಸಬೇಕಾಗಿದೆ.

ವರ್ಷಗಳು ಕಳೆದಂತೆ, ಹೆಚ್ಚಾಗುವ ’ನೋಟ್ ಪುಸ್ತಕ ವಿತರಣೆ’ಯ ಖರ್ಚು ಹಾಗೂ ಕಡಿಮೆಯಾಗುವ ಸಾಧ್ಯತೆಯಿರುವ ಬಡ್ಡಿಯ ಹಣ – ಇವೆರಡನ್ನು ಸಮದೂಗಿಸುವುದು ನಮ್ಮ ಮುಂದಿರುವ ಸವಾಲು.

- ಮಾರ್ಚ್, ೨೦೧೫ ರ ವೇಳೆಗೆ ೨೫ ಲಕ್ಷ ರೂಪಾಯಿಗಳ ಶಾಶ್ವತ ನಿಧಿಯನ್ನು ಸಂಗ್ರಹಿಸುವುದು ತಂಡದ ಗುರಿಯಾಗಿದೆ. ಇದಕ್ಕಾಗಿ, ತಂಡದ ಸದಸ್ಯರಿಂದ ಹಾಗೂ ದಾನಿಗಳಿಂದ, ಅವರು ಇಷ್ಟಪಟ್ಟು ಕೊಡಬಯಸುವ ಒಟ್ಟು ಮೊತ್ತದ ಹಣವನ್ನು ಸಣ್ಣ ಸಣ್ಣ ಕಂತಿನ ರೂಪದಲ್ಲಿ ೨೦೧೫ರ ಮಾರ್ಚ್ ವರೆಗೂ ಪ್ರತಿ ತಿಂಗಳು ಸಂಗ್ರಹಿಸುವ ಯೋಜನೆಯನ್ನು ಮಾಡಲಾಗಿದೆ.

- ಅವಿರತವು ಈ ನಿಧಿಯನ್ನು ಹೊಂದುವುದರಿಂದ,

> ಅವಿರತ ವಾರ್ಷಿಕ ಕಾರ್ಯಕ್ರಮವನ್ನು ತಡೆಯಿಲ್ಲದೆ ನಡೆಸಿಕೊಂಡು ಹೋಗಬಹುದಾಗಿದೆ.

> ಕಾರ್ಪೋರೇಟ್ ಸಂಸ್ಥೆಗಳ, ಎಂ.ಎನ್.ಸಿ.ಗಳ ನಂಬಿಕೆ, ವಿಶ್ವಾಸವನ್ನೂ ಗಳಿಸಿ ಆ ಮೂಲಕ ಮತ್ತಷ್ಟು ನಿಧಿಯನ್ನು ಸಂಗ್ರಹಿಸಬಹುದು ಅಥವಾ ಅವರ ಸಹಭಾಗಿತ್ವವನ್ನು ಪಡೆಯಬಹುದು.



ನೋಟ್ ಪುಸ್ತಕ ವಿತರಣೆ: ಒಂದು ಸ್ವವಿಮರ್ಶೆ

ನಮ್ಮ ತಂಡದ ಬಹುಮುಖ್ಯ ವಾರ್ಷಿಕ ಕಾರ್ಯಕ್ರಮವಾದ ’ನೋಟ್ ಪುಸ್ತಕ ವಿತರಣೆ’ ಇಲ್ಲಿಯವರೆಗು ಯಶಸ್ವಿಯಾಗಿ ನಡೆದುಕೊಂಡು ಬಂದಿರುವುದಲ್ಲದೆ, ತನ್ನ ವ್ಯಾಪ್ತಿಯನ್ನೂ ವಿಸ್ತರಿಸಿಕೊಂಡಿದೆ. ಈ ಸಂದರ್ಭದಲ್ಲಿ, ತಂಡದ ಸದಸ್ಯರು ಈ ಕಾರ್ಯಕ್ರಮದ ಬಗ್ಗೆ ಸ್ವವಿಮರ್ಶೆ ನಡೆಸಿ, ತಮ್ಮ ತಮ್ಮ ಭಿನ್ನ ದೃಷ್ಟಿಕೋನವನ್ನು ಸಭೆಯಲ್ಲಿ ಚರ್ಚಿಸಿದ್ದು ಪ್ರಶಂಸಾರ್ಹವಾದದ್ದು. ಈ ನಿಟ್ಟಿನಲ್ಲಿ ಚರ್ಚಿಸಿದ ಎಲ್ಲಾ ಅಂಶಗಳು ಪುಸ್ತಕ ವಿತರಣೆ ಕಾರ್ಯಕ್ರಮಕ್ಕೆ ಪರಿಷ್ಕೃತ ರೂಪ ನೀಡುವುದಲ್ಲದೆ, ಈ ಕಾರ್ಯಕ್ರಮವನ್ನು ಶಾಶ್ವತಗೊಳಿಸಿ, ಪರಿಣಾಮಕಾರಿಯಾಗಿಸಬಲ್ಲದು.

- ನೋಟ್ ಪುಸ್ತಕ ವಿತರಣೆಯ ಸಂದರ್ಭದಲ್ಲಿ ಮಾತ್ರ ಸಂಬಂಧಪಟ್ಟ ಶಾಲೆಗಳೊಂದಿಗೆ ಸಂಪರ್ಕವಿಟ್ಟುಕೊಳ್ಳುವ ನಾವು, ನಮ್ಮ ಅಭ್ಯಾಸವನ್ನು ಉತ್ತಮಗೊಳಿಸಕೊಳ್ಳಬೇಕಿದೆ. ಪ್ರತಿ ತಂಡವೂ ತಾನು ಜವಾಬ್ದಾರಿ ವಹಿಸಿಕೊಂಡ ಶಾಲೆಯೊಡನೆ ವರ್ಷಪೂರ್ತಿ ನಿಕಟವಾದ ಸಂಪರ್ಕದಲ್ಲಿದ್ದು, ಅಲ್ಲಿನ ಅವಶ್ಯಕತೆಗಳ ಬಗ್ಗೆ, ನಾವು ಹಮ್ಮಿಕೊಂಡ ಕಾರ್ಯಕ್ರಮದ ಬಗ್ಗೆ ಸಲಹೆ, ಸೂಚನೆಗಳನ್ನು ಪಡೆದು ಅವುಗಳಿಗೆ ಪ್ರತಿಕ್ರಿಯಿಸಬೇಕಾಗಿದೆ.

- ಈಗಾಗಲೇ ನೋಟ್ ಪುಸ್ತಕಗಳ ಅಗತ್ಯವನ್ನು ವೈಜ್ನಾನಿಕವಾಗಿ ಅಭ್ಯಸಿಸಿ, ಅದರ ಅಧಾರದ ಮೇಲೆ ಪುಸ್ತಕ ವಿತರಣೆ ನಡೆಯುತ್ತಿದೆಯಾದರೂ, ನಾವು ಅನುಸರಿಸುತ್ತಿರುವ ಕ್ರಮವನ್ನು ಮತ್ತೊಮ್ಮೆ ಅವಲೋಕಿಸಿಕೊಳ್ಳಬೇಕಿದೆ.

- ಪುಸ್ತಕ ವಿತರಣೆಯ ಉಪಯೋಗ ಪಡೆಯಬೇಕಾಗಿರುವ ಮತ್ತಷ್ಟು ಹೊಸ ಶಾಲೆಗಳನ್ನು ಹಾಗೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಬೇಕಿದೆ. ಇದಕ್ಕಾಗಿ, ಈಗಾಗಲೇ ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವ ಸದಸ್ಯರು, ಇದರ ಬಗ್ಗೆ ತಮ್ಮ ತಮ್ಮ ಸ್ನೇಹಿತರ ಬಳಗದಲ್ಲಿ ಹಾಗೂ ಸಂಸ್ಥೆಗಳಲ್ಲಿ ಚರ್ಚಿಸಿ ಅವರನ್ನೂ ಕಾರ್ಯಕ್ರಮಕ್ಕೆ ಕರೆತರಬೇಕಾಗಿ ವಿನಂತಿ.

- ಈಗಾಗಲೇ, ಈ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಂಡು, ಸಹಾಯಕ್ಕೆ ಎದುರುನೋಡುತ್ತಿರುವ ನಿಮ್ಮ ನಿಮ್ಮ ಸ್ನೇಹಿತರ ಬಳಗವನ್ನು ಅವಿರತದ ತೆಕ್ಕೆಗೆ ಸೇರಿಸಿಕೊಳ್ಳಬಹುದಾಗಿದೆ.

-ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಅಥವಾ ಅದಕ್ಕೆ ಸಹಾಯ ಮಾಡುವ ಮುನ್ನ, ಸದಸ್ಯರ ಸ್ನೇಹಿತರು ಅಥವಾ ಸಂಸ್ಥೆಯವರು, ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಬಯಸಿದರೆ, ಅವಿರತ ಅವರನ್ನು ತೆರೆದ ಹೃದಯದಿಂದ ಸ್ವಾಗತಿಸುತ್ತದೆ.

- ವಿಕೇಂದ್ರಿಕರಣದಲ್ಲಿ ನಂಬಿಕೆಯಿರುವ ಅಶ್ವಥ್ ಸರ್ ಪ್ರಸ್ತಾಪಿಸಿದ ’ನಮ್ಮ ಶಾಲೆ – ನಮ್ಮ ಹೆಮ್ಮೆ’ ಎಂಬ ವಿಷಯ ಹಾಗೂ ಸತೀಶ್ ಸರ್ ಮತ್ತು ಶಶಿ ಸರ್ ಪ್ರಸ್ತಾಪಿಸಿದ ’ಒಂದು ಕುಟುಂಬ – ಒಂದು ಶಾಲೆ’ ಎಂಬ ವಿಷಯ ಆಸಕ್ತಿಕರವಾಗಿದೆ ಅಷ್ಟೇ ಅಲ್ಲ, ಸರಿಯಾದ ರೀತಿಯಲ್ಲಿ ಇದನ್ನು ಕಾರ್ಯರೂಪಕ್ಕಿಳಿಸಿದರೆ ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ.

’ನಮ್ಮ ಶಾಲೆ – ನಮ್ಮ ಹೆಮ್ಮೆ’ – ಒಂದು ಶಾಲೆಯ ಉಸ್ತುವಾರಿ ವಹಿಸಿಕೊಂಡ ಸದಸ್ಯರ ಉಪತಂಡವು, ಪುಸ್ತಕ ವಿತರಣೆಗೆ ಬೇಕಾದ ಖರ್ಚು-ವೆಚ್ಚವನ್ನು ಸ್ವತಂತ್ರವಾಗಿ ಕ್ರೋಢೀಕರಿಸಬೇಕು. ಹೀಗೆ ಮಾಡುವುದರಿಂದ ಶಾಲೆಯ ಸಂಪೂರ್ಣ ಜವಾಬ್ದಾರಿ ತಂಡದ್ದಾಗುತ್ತದೆ. ಅಷ್ಟೇ ಅಲ್ಲ, ಆ ಶಾಲೆಯೊಂದಿಗೆ ಭಾವನಾತ್ಮಕ ಸಂಬಂಧ ಬೆಸೆದುಕೊಂಡು, ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಈ ಕಾರ್ಯಕ್ರಮವನ್ನು ನಿಭಾಯಿಸಬಹುದು.

’’ಒಂದು ಕುಟುಂಬ – ಒಂದು ಶಾಲೆ’ – ಆಯಾ ಊರಿನ ಸ್ಥಳೀಯರೂ ಸಹ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸವಂತೆ ಮಾಡುವ ಉದ್ದೇಶವಿರುವ ಯೋಚನೆಯಿದು. ನೋಟ್ ಪುಸ್ತಕ ವಿತರಣೆ ಕೇವಲ ಅವಿರತದ ಕಾರ್ಯವಲ್ಲ, ಇದು ನಿಮ್ಮ ಹಾಗೂ ನಿಮ್ಮ ಊರಿನ ಕಾರ್ಯಕ್ರಮ ಎಂದು ಅರಿವು ಮೂಡಿಸಿ, ಊರಿನ ಕುಟುಂಬದವರೂ ಸಹ ಇದರಲ್ಲಿ ಸಂಪೂರ್ಣ ಅಥವಾ ತಕ್ಕ ಮಟ್ಟಿಗಿನ ಜವಾಬ್ದಾರಿಯನ್ನು ವಹಿಸಿಕೊಳ್ಳಿಸುವುದು.



ವನ ಮಹೋತ್ಸವ / ಗಿಡ ನೆಡುವಿಕೆ:

ನಶಿಸಿಹೋಗುತ್ತಿರುವ ಪರಿಸರ, ಹೆಚ್ಚುತ್ತಿರುವ ಮಾಲಿನ್ಯದ ನಡುವೆ ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿಯ ಧ್ವನಿಯೆತ್ತಿದ ನಮ್ಮ ಡಾಕ್ಟರ್ ಹರ್ಷ ಅವರ ಯೋಜನೆ ಸ್ವಾಗತಾರ್ಹ. ಈಗಾಗಲೇ, ಶಾಲಿಗನೂರಿನಲ್ಲಿ, ಶಾಲೆಯ ಆವರಣದಲ್ಲಿ ನೆಟ್ಟು ಬಂದಿದ್ದ ಗಿಡಗಳೆಲ್ಲಾ ಸೂಕ್ತ ಆರೈಕೆಯಿಲ್ಲದೆ ಸೊರಗಿರುವ ಅಥವಾ ಅಲ್ಲಿನ ಪಶುಗಳಿಗೆ ಆಹಾರವಾಗಿರುವ ಉದಾಹರಣೆಯಿದೆ. ಹೀಗಾಗಿ, ವನ ಮಹೋತ್ಸವದ ಅಂಗವಾಗಿ, ಅವಿರತ ನೆಡುವ ಸಸಿ, ಗಿಡಗಳನ್ನು ಪೋಷಿಸಿ, ಬೆಳೆಸಲು ಸ್ಥಳೀಯರ ಸಹಾಯ ಅತಿಮುಖ್ಯವಾದದು,

ವನ ಮಹೋತ್ಸವ ಎಂಬುದು ಒಂದು ಪ್ರತ್ಯೇಕ ಕಾರ್ಯಕ್ರಮವಾಗಿ ರೂಪುಗೊಳ್ಳಬೇಕೋ ಅಥವಾ ನೋಟ್ ಪುಸ್ತಕ ವಿತರಣೆಯ ಸಮಯದಲ್ಲಿ ಪ್ರತಿ ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಟ್ಟು, ಅವುಗಳ ಆರೈಕೆಯ ಬಗ್ಗೆ ಶಾಲಾ ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಿ ಬರುವುದೋ? ಎಂಬುದು ಈಗ ನಾವೆಲ್ಲ ಉತ್ತರ ಕಂಡುಕೊಳ್ಳಬೇಕಿರುವ ಪ್ರಶ್ನೆ.



ಇತರೆ:

- ನೋಟ್ ಪುಸ್ತಕ ವಿತರಣೆ ಹಾಗೂ ಇತರ ಸಾಮಾಜಿಕ ಕಾರ್ಯಕ್ರಮಗಳಿಗೆ ಅಗತ್ಯವಾಗಿ ಬೇಕಾಗಿರುವ ಹಣವನ್ನು ಕ್ರೋಢೀಕರಿಸಲು ವಿವಿಧ ಮಾರ್ಗಗಳನ್ನು ಯೋಚಿಸಬೇಕಿದೆ/ಚಿಂತಿಸಬೇಕಿದೆ.

ಉದಾಹರಣೆಗೆ, ದುಡ್ಡನ್ನು ದಾನವಾಗಿ ಕೇಳುವ ಬದಲಿಗೆ, ಮನೆಯಲ್ಲಿನ ಹಳೇ ಪೇಪರ್‍ಗಳನ್ನು ಉಚಿತವಾಗಿ ಪಡೆದು, ಅದನ್ನು ಮಾರಿ, ಅದರಿಂದ ಬರುವ ಹಣವನ್ನು ಶಾಶ್ವತ ನಿಧಿಗೋ ಅಥವಾ ಇತರೆ ಕಾರ್ಯಗಳಿಗೋ ಉಪಯೋಗಿಸಬಹುದು.

ಅಪಾರ್ಟ್‍ಮೆಂಟ್‍ಗಳಲ್ಲಿ ವಾಸಿಸುವ ಸದಸ್ಯರು, ಅಪಾರ್ಟ್‍ಮೆಂಟಿನ ಬೋರ್ಡ್ ಮೀಟಿಂಗ್‍ಗಳಲ್ಲಿ ಅವಿರತದ ಕಾರ್ಯಕ್ರಮದ ಬಗ್ಗೆ ತಿಳಿಸಿ, ನಿಧಿ ಸಂಗ್ರಹಣೆಗೆ ಸಹಾಯ ಮಾಡಬಹುದು. ಇದೇ ರೀತಿ, ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸದಸ್ಯರೂ ಸಹ.

- ಜವಾಬ್ದಾರಿಯುತ ಸಂಸ್ಥೆಯಾಗಿ, ಅರ್ಥಪೂರ್ಣ ಸಮಾಜಮುಖಿ ಕೆಲಸಗಳನ್ನು ಹಮ್ಮಿಕೊಂಡು, ಯಶಸ್ವಿಯಾಗಿ ನಿಭಾಯಿಸುತ್ತಿರುವ ಅವಿರತವನ್ನು Marketing ಮಾಡುವ ಕಡೆ ನಾವೆಲ್ಲ ಗಂಭೀರವಾಗಿ ಯೋಚಿಸಬೇಕು ಎಂಬುದೂ ಸಭೆಯಲ್ಲಿ ಚರ್ಚಿತವಾಯಿತು. ಹಾಗಾಗಿ, ಮುಖ್ಯ ವಿಷಯಗಳ ಕುರಿತು marketing materials ಅನ್ನು ಸಿದ್ದಪಡಿಸಲು ಶ್ರೀನಿಧಿ, ದೀಪಕ್.ಎಂ., ದೀಪಕ್.ಪಿ., ರವಿಚಂದರ್ ಹಾಗೂ ಡಾಕ್ಟರ್ ಹರ್ಷ ಇವರುಗಳನ್ನೊಳಗೊಂಡ ತಂಡವನ್ನು ರಚಿಸಲಾಗಿದೆ.

- ಅವಿರತ ತಂಡದ ’ಶ್ರೀ ಕೄಷ್ಣ ಸಂಧಾನ’ ನಾಟಕದ ಪ್ರದರ್ಶನಗಳನ್ನು ಏರ್ಪಡಿಸಿ ಅದರ ಮೂಲಕವೂ ಶಾಶ್ವತ ನಿಧಿಗೆ ಅಥವಾ ನೋಟ್ ಪುಸ್ತಕ ವಿತರಣೆಗೆ ಹಣ ಸಂಗ್ರಹಿಸುವ ಯೋಚನೆಯೂ ಇದೆ.

-೨೦೧೩ರಲ್ಲಿ ಹಮ್ಮಿಕೊಳ್ಳಬೇಕಿರುವ ಕಾರ್ಯಕ್ರಮಗಳ ಪಟ್ಟಿಯೊಂದನ್ನು ಸಿದ್ದಪಡಿಸಬೇಕಿದೆ.

> ಶೈಕ್ಷಣಿಕ ಮಾರ್ಗದರ್ಶನ: ವರ್ಷಕ್ಕೆ ನಾಲ್ಕು ಕಾರ್ಯಾಗಾರವೆಂದು ನಿರ್ಧರಿಸಲಾಗಿದೆ. ಮುಖ್ಯ ತಂಡವು ಕಿರಣ್ ವಾಲಿ, ಜ್ಯೋತಿ, ಅಶ್ವಿನಿ ಹಾಗೂ ರೋಹಿತ್ ಇವರುಗಳನ್ನು ಒಳಗೊಂಡಿದ್ದು, ಕಾರ್ಯಾಗಾರದ ದಿನಾಂಕ, ಸ್ಥಳ ಇವುಗಳನ್ನು ನಿರ್ಧರಿಸಬೇಕಿದೆ.

> ೨೦೧೩ ರಲ್ಲಿ ಹಮ್ಮಿಕೊಳ್ಳಲು ಬಯಸಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿಯನ್ನೂ ಸಿದ್ದಪಡಿಸಬೇಕಿದೆ. ಚಿತ್ರ ಪ್ರದರ್ಶನ,

ನಾಟಕ ಪ್ರದರ್ಶನ, ಸಂಗೀತ ಸಂಜೆ, ಇತರೆ…ಕಾರ್ಯಕ್ರಮ, ಅದರ ದಿನಾಂಕ, ಸ್ಥಳ, ಅತಿಥಿಗಳು, ಕಲಾವಿದರು, ಹೀಗೆ..

> ೨೦೧೩ ರಲ್ಲಿ ಉಚಿತ ವೈದ್ಯಕೀಯ ತಪಾಸಣೆಯನ್ನು ಹಮ್ಮಿಕೊಳ್ಳುವ ಯೋಚನೆಯಿದ್ದು, ಅದರ ಬಗ್ಗೆಯೂ ಸ್ಪಷ್ಟ ಯೋಜನೆಯನ್ನು ತಯಾರಿಸಬೇಕಿದೆ.

> ನಗರದಲ್ಲಿನ ಮಕ್ಕಳಿಗೆ, ಅನಿವಾರ್ಯವಾಗಿ ಇಂಗ್ಲೀಷ್ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳಿಗೆ, ಕನ್ನಡ ಭಾಷೆ – ಸಂಸ್ಕೃತಿಯ ಪರಿಚಯ ಮಾಡಿಕೊಟ್ಟು, ಭಾಷೆಯನ್ನು ಅವರಿಗೆ ಆಪ್ತವಾಗಿಸಿ, ಆ ಮೂಲಕ ಅವರಲ್ಲಿ ಕನ್ನಡಾಭಿಮಾನ ಬೆಳೆಸುವಂತಹ ಕಾರ್ಯಕ್ರಮದ ಯೋಚನೆಯೊಂದು ಅಶ್ವಥ್ ಸರ್ ಕಡೆಯಿಂದ ಸ್ಪಷ್ಟ ರೂಪ ಪಡೆಯಬೇಕಿದೆ.,

> ಅವಿರತದ ವೆಬ್‍ಸೈಟ್ ಅನ್ನು ನಿಗದಿತವಾಗಿ update ಮಾಡುತ್ತಾ, ಸಕ್ರಿಯ ಸದಸ್ಯರ ಹೊರತಾಗಿಯೂ ಇತರ ಹಲವು ಸದಸ್ಯರಿಗೂ,ಕಾರ್ಯಕರ್ತರಿಗೂ ಅವಿರತದಲ್ಲಿನ ಆಗು-ಹೋಗುಗಳನ್ನು ತಿಳಿಸುವ ಅವಶ್ಯಕತೆಯಿದೆ.

ಅವಿರತದ ಬ್ಲಾಗ್ ಅನ್ನೂ ಸಹ create ಮಾಡಿ, ಅದರಿಂದ ಆಯ್ದ ಬರಹಗಳನ್ನು ಸೇರಿಸಿ, ತ್ರೈಮಾಸಿಕ ಅಥವಾ ಅರ್ಧವಾರ್ಷಿಕ ಪತ್ರಿಕೆಯೊಂದನ್ನೂ / ವಿಶೇಷಾಂಕವನ್ನು ತರುವ ಯೋಚನೆಯನ್ನೂ ಚರ್ಚಿಸಲಾಯಿತು.

> ಮಾಧ್ಯಮ ಮಿತ್ರರೊಂದಿಗೆ ಕೈ ಜೋಡಿಸುವುದರ ಮೂಲಕ ’ಅವಿರತ’ದ ಕಾರ್ಯಕ್ರಮಗಳನ್ನು ಹೆಚ್ಚಿನ ಜನರಿಗೆ ತಲುಪಿಸಿ, ಆ ಮೂಲಕ ಮತ್ತಷ್ಟು ಜನರನ್ನು ಅವಿರತಕ್ಕೆ ಬರಮಾಡಿಕೊಳ್ಳಬಹುದಲ್ಲವೇ? ಎಂಬ ವಿಷಯ ಪ್ರಸ್ತಾಪವಾದುದರಿಂದ ಅದರ ಸವಾಲುಗಳನ್ನು ಚರ್ಚಿಸಿ, ಅವುಗಳನ್ನು ನಿವಾರಿಸುವ ಮಾರ್ಗದ ಹುಡುಕಾಟವಾಗಬೇಕಿದೆ.

> ಇಷ್ಟೆಲ್ಲಾ ಯೋಜನೆಗಳ ನಡುವೆ, ಬಿಡುವು ಮಾಡಿಕೊಂಡು ವರ್ಷದಲ್ಲಿ ಕನಿಷ್ಟ ಒಂದು ಪ್ರವಾಸವನ್ನಾದರೂ ಹಮ್ಮಿಕೊಳ್ಳಲೇಬೇಕು. J

‘Some succeed because they are destined to, but few succeed because they are determined to…’

We, Aviratha, are determined!! J



‘ನೆಲೆ’ಯಲ್ಲಿ ಸಭೆ ಸೇರಿ, ’ನೆಲೆ’ ಕಂಡುಕೊಂಡು ಬೆಳೆಯಲು ನಾವೆಲ್ಲ ಆವಿಷ್ಕರಿಸಿರುವ ಇಷ್ಟೆಲ್ಲಾ ಅಂಶಗಳು, ವಿಷಯಗಳು, ನಮ್ಮ ನಮ್ಮ ಕಾಳಜಿಯ, ಸಾಮರ್ಥ್ಯದ, ಸಂಕಲ್ಪದ, ಪ್ರೀತಿಯ, ಪ್ರತಿಭೆಯ ಬೆಳಕಿನಲ್ಲಿ ರೂಪಾಂತರಗೊಂಡು ಮಾನವೀಯ ಅನುಕಂಪವನ್ನು, ಸಂಸ್ಕೃತಿಯೆಡೆಗಿನ ಅಭಿಮಾನವನ್ನು ಎತ್ತಿಹಿಡಿಯಬೇಕಾಗಿದೆ.

Friday, February 8, 2013

ಒಂದೇ ನಾಣ್ಯದ ಎರಡು ಮುಖಗಳು

ಈ ಚಳಿಗಾಲದ ದಟ್ಟ ಚಳಿಯ ಮುಂಜಾವಿನ ಸವಿ ಸವಿ ನಿದ್ದೆಯಿಂದ ಬಲವಂತವಾಗಿ ಎದ್ದೇಳುವ ಯಾತನೆಯ ಕ್ಷಣದಲ್ಲಿ ಯಾವ ಆಫೀಸು, ಕೆಲಸ, ಮನೆ, ಪ್ರೊಮೋಷನ್, ಪ್ರಾಜೆಕ್ಟು ಬೇಡ, ಇನ್ನು ಸ್ವಲ್ಪ ಹೊತ್ತು ನಿದ್ದೆ ಮಾಡಿದ್ರೆ ಅಷ್ಟೇ ಸಾಕು ಅಂತ ಅನ್ನಿಸಿದ್ರು ಬೇರೆ ವಿಧಿಯಿಲ್ಲದೆ ಎದ್ದು, ನಮಗೆ ನಾವೇ ಸಮಾಧಾನ ಹೇಳಿಕೊಳ್ಳುತ್ತಾ, ಸ್ನಾನದ ಮನೆಗೆ ಹೋಗೋವರೆಗೂ ತೂಕಡಿಸುತ್ತಾ, ಹಾಗೂ, ಹೀಗೂ ಸ್ನಾನ ಮುಗಿಸಿ ರೆಡಿಯಾಗಿ, ಚಳಿಯಲ್ಲಿ ನಡುಗುತ್ತಾ ಮನೆ ಮುಂದೆ ಬಂದು ನಿಲ್ಲುವ ಕ್ಯಾಬ್ ಹತ್ತಿದ ನಂತರ ಸಿಕ್ಕ ಸೀಟ್‍ನಲ್ಲೇ ಎಷ್ಟಾಗುತ್ತೋ ಅಷ್ಟು ನಿದ್ದೆ ಕದಿಯುವ ಪ್ರಯತ್ನಕ್ಕೆ ಕೆಟ್ಟ ರಸ್ತೆಗಳು, ಅನವಶ್ಯಕ ರಸ್ತೆ ಉಬ್ಬುಗಳು ಹಾಗೂ ಕ್ಯಾಬ್ ನಲ್ಲಿರೋ ಸಹೋದ್ಯೋಗಿಗಳ ಮಾತುಗಳು ಅಡ್ಡಿ ಮಾಡಿದರೂ...ಇವುಗಳನ್ನೆಲ್ಲಾ ದಾಟಿ ಇನ್ನೇನು ಸ್ವಲ್ಪ ನಿದ್ದೆ ಕಣ್ಣ್ ಹತ್ತುತ್ತಿದೆ, ಕ್ಯಾಬ್ ಹೀಗೆ ಓಡುತ್ತಾ ಇರಲಿ ಅಂದುಕೊಳ್ಳುತ್ತಿರುವಷ್ಟರಲ್ಲಿ, ಬೆಳಗಿನ ಖಾಲಿ ರಸ್ತೆಯನ್ನು ನೋಡಿ ಹುಚ್ಚು ಕುದುರೆಯಂತೆ ಗಾಡಿ ಓಡಿಸುವ ಕ್ಯಾಬ್ ಡ್ರೈವರ್‍‍ಗಳು, ನಮ್ಮನ್ನು ಆಫೀಸ್‍ಗೆ ತಂದು ಬಿಸಾಡಿಬಿಟ್ಟಾಗ, ಬೇರೆ ದಾರಿಯಿಲ್ಲದೆ, ಕ್ಯಾಬ್‍ನಿಂದ ಇಳಿದು, ಲಿಫ್ಟ್ ಹತ್ತಿ, ಅದರೊಳಗಿನ ಕನ್ನಡಿಯಂತಹ ಬಾಗಿಲಿನಲ್ಲಿ ನಿದ್ದೆ ಬೇಡುತ್ತಿರುವ ನಮ್ಮ ಕಣ್ಣುಗಳನ್ನು ಕಂಡು, ನಾವೇ ಮರುಕ ಪಡುವ ವೇಳೆಗೆ ತೆರೆದುಕೊಳ್ಳುವ ಲಿಫ್ಟ್ ನ ಬಾಗಿಲಿನಿಂದ ಆಕಳಿಸುತ್ತಾ ಹೊರ ಬಂದು ನಮ್ಮ ಐ.ಡಿ.ಕಾರ್ಡ್ ಸ್ವೈಪ್ ಮಾಡಿ ಫ್ಲೋರ್ ಒಳಗೆ ಬರುತ್ತಿರುವಾಗ ಅನ್ನಿಸುತ್ತೆ,


"ಛೆ!! ಈ ಆಫೀಸು ಮನೆಯಿಂದ ಇನ್ನೂ ಸ್ವಲ್ಪ ದೂರ ಇರಬೇಕಿತ್ತು" ಅಂತ.



           ----------------------------------------------------------------

                  
           ----------------------------------------------------------------

ಇವತ್ತು ೧.೧೫ ಕ್ಕೆಲ್ಲಾ ಊಟಕ್ಕೆ ಹೋಗಬೇಕು ಅಂತ ೧೨.೩೦ಕ್ಕೆ ಅಂದುಕೊಂಡು ಎರಡು ಕಾಲು ಗಂಟೆಯಾದರೂ, ಊಟಕ್ಕೆ ಹೋಗಲಾಗದೆ, stay back ಮಾಡೋಕೆ ಇಷ್ಟ ಇಲ್ಲದೆ Team Lead ಕೊಟ್ಟಿರೊ ಕೆಲ್ಸಾನ ಮೊದಲು ಮುಗಿಸಿಕೊಟ್ಟು, to-do list ನಲ್ಲಿ ಎರಡು ಮೂರು ಕೆಲಸಗಳನ್ನು ಬಾಕಿ ಉಳಿಸಿಕೊಂಡು, ಅದ್ಯಾರೋ support team ನವರ ಜೊತೆ office communicator ನಲ್ಲಿ ನಡೆಸುತ್ತಿದ್ದ ಮಾತುಕತೆಯನ್ನು ಅರ್ಧಕ್ಕೆ ನಿಲ್ಲಿಸಿ, ನಾಳೆಯಿಂದ ಆಫೀಸಿನಲ್ಲಿ ಫೇಸ್‍ಬುಕ್ ಕಡಿಮೆ use ಮಾಡಬೇಕು ಅಂತ ಅಂದುಕೊಂಡು, ಸಮಯಕ್ಕೆ ಸರಿಯಾಗಿ log out ಆಗಿ, ಸ್ಕೂಲ್ ಮುಗಿದಾಗ ಮಕ್ಕಳೆಲ್ಲಾ ಖುಷಿಯಾಗಿ ಹೊರಗಡೆ ಓಡಿ ಬರುವಂತೆ, ಆಫೀಸಿನಿಂದ ಹೊರಬಂದು ನಮಗಾಗಿ ಕಾಯುತ್ತಾ ನಿಂತಿರುವ ಕ್ಯಾಬ್ ಹತ್ತಿ ಹೊರಟು, ಕ್ಯಾಬ್ ನಲ್ಲಿರುವವರ ಜೊತೆ ಒಂದಷ್ಟು ಹರಟಿ, ಆಫೀಸಿನ ಒಂದಿಷ್ಟು ಗಾಸಿಪ್‍ಗಳನ್ನು ಹಿಡಿದು ಜಾಲಾಡಿ, ಕೊನೆಗೆ ವಿಷಯ ಖಾಲಿಯಾಗಿ ಮಾತಿಲ್ಲದೆ ಬೋರಾಗಿ, ಕ್ಯಾಬ್ ಡ್ರೈವರ್‍‍ಗೆ ಎಫ್.ಎಂ. ಹಾಕುವುದಕ್ಕೆ ಹೇಳಿ ಅಥವಾ ತಮ್ಮ ಮೊಬೈಲ್ ಫೋನಿನ ಇಯರ್ ಫೋನ್ ಅನ್ನು ಕಿವಿಗೆ ಸಿಕ್ಕಿಸಿಕೊಂಡು ಹಾಡುಗಳನ್ನು ಕೇಳುತ್ತಾ, ಕೇಳುತ್ತಾ... ಹೆಚ್ಚಿದ ಕೆಲಸ, ತಪ್ಪಿದ ಊಟದಿಂದ ಸುಸ್ತಾಗಿ ಅರಿವಿಲ್ಲದೆ ಕಣ್ಣು ಮುಚ್ಚಿ ನಿದ್ದೆಗೆ ಜಾರಿ...ಕೊನೆಗೆ ಬಿಸಿಲ ತಾಪಕ್ಕೆ ಬೆವರಿ ಎಚ್ಚರಾಗಿ, ಗಾಳಿ ಬೀಸಲಿ ಎಂದು ಕಿಟಕಿ ಕೆಳಗಿಳಿಸಿದರೆ, ಹೊರಗೆ ಸಹಿಸಲಸಾಧ್ಯವಾದ ಅದೇ ಧೂಳು, ಹೊಗೆ, ಕಿಕ್ಕಿರಿದ ಟ್ರಾಫಿಕ್ಕು....ಒಳಗೆ ಎಲ್ಲರೂ ಶಿಸ್ತಾಗಿ ತಲೆಯನ್ನು ಕೆಳಗೆ ಹಾಕಿ ಸ್ಪ್ರಿಂಗಿನಂತೆ ಆಡಲು ಬಿಟ್ಟು ನಿದ್ದೆಯಲ್ಲಿ ಕಳೆದುಹೋಗಿದ್ದಾರೆ...’ಮಂಡ್ಯ ಹುಡುಗರ ಹಾರ್ಟು...ಸಕ್ಕರೆಯಂತೆ ಸ್ವೀಟು’ ಎಂದು ಕ್ಯಾಬಿನ ಒಳಗಡೆ ಬರೆಸಿಕೊಂಡಿರುವ ಕ್ಯಾಬ್ ಡ್ರೈವರ್ ಫೋನಿನಲ್ಲಿ ಅದ್ಯಾರೊಂದಿಗೊ ಪಿಸುಗುಡಿತ್ತಿದ್ದಾನೆ...ಹೊರಗೆ ೧೨೯, ೧೨೮, ೧೨೭....ಎಂದು ತೋರಿಸುತ್ತಿರುವ ಸಿಗ್ನಲ್‍ನ ಒಂದೊಂದು ಸೆಕೆಂಡ್ ಕೂಡ ಗಂಟೆಯಂತೆ ಭಾಸವಾಗಿ, ಇನ್ನು ಹೋಗಬೇಕಿರುವ ದಾರಿ, ಸಿಗ್ನಲ್, ಟ್ರಾಫಿಕ್ಕ್ ಅನ್ನು ನೆನೆದು ಅಸಹಾಯಕನಾದಾಗ ಅನ್ನಿಸುತ್ತೆ.....

’ಛೇ!! ಈ ಆಫೀಸು ಮನೆಗೆ ತುಂಬಾ ಹತ್ತಿರದಲ್ಲಿ ಇರಬೇಕಿತ್ತು’ ಅಂತ.

Tuesday, January 15, 2013

ಒಂದಷ್ಟು ಅಚ್ಚರಿ, ಒಂದಿಷ್ಟು ಬೇಸರ ಹಾಗೂ ಒಂದೊಳ್ಳೆ ಪಾಠ


ಮೊನ್ನೆ ದಿನ, ಶನಿವಾರ, ಮಧು, ದೀಪಕ್, ಯೋಗೇಶ್ ಹಾಗೂ ನಾನು, ಅವಿರತದ ೫ನೇ ವಾರ್ಷಿಕೋತ್ಸವದ 'ಹೆಜ್ಜೆ-ಗೆಜ್ಜೆ' ಕಾರ್ಯಕ್ರಮಕ್ಕೆ ಅವಿರತದ ಸದಸ್ಯರನ್ನು ಆಹ್ವಾನಿಸುವ ಕೆಲಸ ನಿಗದಿಪಡಿಸಿಕೊಂಡಿದ್ದೆವು. ಗಿರಿನಗರ, ಶ್ರೀನಗರ, ಹನುಮಂತನಗರ, ಬಸವನಗುಡಿ, ಜಯನಗರದಲ್ಲಿನ ಸುಮಾರು ೧೫ ಜನ ಅವಿರತ ಸದಸ್ಯರ ಮನೆಗೆ ಹೋಗಿ, ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವುದು ನಮ್ಮ ತಂಡದ ಜವಾಬ್ದಾರಿಯಾಗಿತ್ತು. ನಾನು ಸುಮಾರು ೧೦.೨೦ ರ ವೇಳೆಗೆ ಬಸವನಗುಡಿಯ ಹಳ್ಳಿ ತಿಂಡಿ ಹೋಟೆಲ್ ಬಳಿ ದೀಪಕ್ ಹಾಗೂ ಮಧು ಅವರನ್ನು ಸೇರಿಕೊಂಡೆ. ಆನಂತರ, ಜಯನಗರದಲ್ಲಿ ಯೋಗೇಶ್ ಜೊತೆಯಾದರು.

ನನಗೆ ದೀಪಕ್ ಅವರ ಪರಿಚಯವಿತ್ತಾದರೂ, ಭೇಟಿಯಾದ ಸಂದರ್ಭಗಳು ಬಹಳ ಕಡಿಮೆ. ಯೋಗೇಶ್ ಅವರ ಪರಿಚಯ ಚೆನ್ನಾಗಿಯೇ ಇದೆ; ಕೆಲಸದ ಸಲುವಾಗಿ ಆಗಾಗ ಅಮೆರಿಕಾಗೆ ಹೋಗಿ ಬರುವ ಅವರು ಬೆಂಗಳೂರಿನಲ್ಲಿದ್ದಾಗ ಅವಿರತದ ಯಾವುದೇ ಕಾರ್ಯಕ್ರಮವಿದ್ದರೂ ತಪ್ಪದೇ ಹಾಜರಾಗುತ್ತಾರೆ. ಅಲ್ಲದೇ, ಅವಿರತದ ಎರಡು ಪ್ರವಾಸಗಳಿಗೂ ಬಂದಿದ್ದರು. ಮಧುಸೂದನ್ ಅವರ ಪರಿಚಯ ತೀರಾ ತೀರಾ ಕಡಿಮೆ. ಅವಿರತದ ಕಾರ್ಯಕ್ರಮವೊಂದರಲ್ಲಿ ಅವರನ್ನು ನೋಡಿದ್ದ ನೆನಪು ಬಿಟ್ಟರೆ, ಅವರ ಪರಿಚಯ ಅಷ್ಟಾಗಿ ಇರಲಿಲ್ಲ. ಆಹ್ವಾನ ಪತ್ರಿಕೆ ವಿತರಿಸುವ ನಮ್ಮ ತಂಡದ ಉಸ್ತುವಾರಿಯನ್ನು ಮಧು ಅವರಿಗೆ ವಹಿಸಲಾಗಿತ್ತು. ಇವರಿಗೆ ಈ ಪ್ರದೇಶದ ರಸ್ತೆ, ಗಲ್ಲಿಗಳೆಲ್ಲಾ ಚಿರಪರಿಚಿತ!! ನಾವು ಹೋಗಬೇಕಿರುವ ಸದಸ್ಯರಿಗೆ ಕರೆ ಮಾಡಿ, ಅವರ ವಿಳಾಸವನ್ನು ಕೇಳಿ, ಚಿಟಿಕೆ ಹೊಡೆಯುವಷ್ಟರಲ್ಲಿ, ಯಾವುದೇ ಶ್ರಮವಿಲ್ಲದೆ, ಅಲ್ಲಿಗೆ ತಲುಪಲು ಬೇಕಿರುವ ’ರೋಡ್ ಮ್ಯಾಪ್’ ಅನ್ನು ಸಿದ್ದಮಾಡಿಬಿಡುತ್ತಿದ್ದರು!! ನಂತರ ಯಾವುದೇ ಗೊಂದಲವಿಲ್ಲದೆ, ಒಂದು ತಿರುವೂ ಹೆಚ್ಚು-ಕಡಿಮೆ ಮಾಡದೆ ಆ ಮನೆ ತಲುಪಿಸುತ್ತಿದ್ದರು! ಇತರ ಎಲ್ಲಾ ವಾಹನ ಸವಾರರಂತೆ, ಇವರಿಗೂ ಸಿಗ್ನಲ್‍ಗಳಲ್ಲಿ ನಿಲ್ಲುವುದೆಂದರೆ ಇಷ್ಟವಿಲ್ಲ. ಅಲ್ಲದೆ, ಪ್ರತಿನಿತ್ಯ ಇದೇ ಮಾರ್ಗದಲ್ಲಿ ಹೆಚ್ಚಾಗಿ ಓಡಾಡುವುದರಿಂದ, ಸಿಗ್ನಲ್‍ಗಳನ್ನು ತಪ್ಪಿಸಿಕೊಳ್ಳಲು ಒಳದಾರಿಗಳನ್ನು ಕಂಡುಹಿಡಿದುಕೊಳ್ಳುವುದು ಅನಿವಾರ್ಯವಾಯಿತೆಂದು ಹೇಳಿದರು. ಮಾರ್ಗ ಮಧ್ಯೆ, ಖಾಲಿ ಸೈಟುಗಳನ್ನೋ, ಮತ್ತ್ಯಾವುದೋ ಕಟ್ಟಡವನ್ನೋ ನೋಡಿ ಅಚ್ಚರಿ ಹುಟ್ಟುವಂತಹ ಸಂಗತಿಗಳನ್ನು ಹೇಳುತ್ತಿದ್ದರು. ಬೆಂಗಳೂರಿನ ’Shopping Centre' ಅಥವಾ ’Commercial Area' ಅನ್ನುವ ಹೆಗ್ಗಳಿಕೆ, ಎಂ.ಜಿ. ರಸ್ತೆಯಿಂದ ಕೋರಮಂಗಲಕ್ಕೆ ವರ್ಗಾವಣೆಯಾಗಿ ವರ್ಷಗಳೇ ಕಳೆದಿವೆ. ಈಗ ಕೋರಮಂಗಲವೂ ಸಹ ಈ ವಿಷಯದಲ್ಲಿ ’Saturation Point' ತಲುಪುತ್ತಿದೆ ಎನ್ನುವ ವದಂತಿಯ ಹಿನ್ನೆಲೆಯಲ್ಲಿ ಪತ್ರಿಕೆಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ ಮುಂದಿನ ದಿನಗಳಲ್ಲಿ ಆ ಹೆಗ್ಗಳಿಕೆಯು ಕೋರಮಂಗಲದಿಂದ ಜಯನಗರಕ್ಕೆ ವರ್ಗಾವಣೆಯಾಗುವ ಸಾಧ್ಯತೆಗಳು ಹೆಚ್ಚಿವೆಯಂತೆ ಎಂದು ತಿಳಿಸಿದರು! ಒಂದು ವೇಳೆ ಹಾಗೇನಾದರೂ ಆದರೆ, ಜಯನಗರ ನಾಲ್ಕನೇ ಬ್ಲಾಕ್‍ನಲ್ಲಿ ಈಗಿರುವ ಒಂದು ಆಹ್ಲಾದತೆ, ಸಾಂಪ್ರಾದಾಯಿಕತೆಗೆ ಯಾವುದೇ ತೊಂದರೆ ಆಗದೇ ಇರಲಿ ಎಂದು ಮನ ಬೇಡುತ್ತಿರುವ ವೇಳೆಗೆ, ಜಯನಗರದಲ್ಲಿರುವ ಸಣ್ಣ ಹೋಟೆಲೊಂದರ ದೊಡ್ಡ ಸಾಮರ್ಥ್ಯವನ್ನು ಹೇಳಿ ನಮ್ಮೆಲ್ಲರಿಗೂ ಅಚ್ಚರಿ ಹುಟ್ಟಿಸಿದರು. ತನ್ನ ಹೋಟೆಲ್ ಸುತ್ತ ಇರುವ ಸರ್ಕಾರಿ ಕಛೇರಿಗಳು, ಸರ್ಕಾರಿ ಆದೇಶದಂತೆ ಜಯನಗರದಲ್ಲೇ ಇರುವ ಮತ್ತಷ್ಟು ವ್ಯವಸ್ಥಿತ ಜಾಗಕ್ಕೆ ಸ್ಥಳಾಂತರಗೊಂಡರೆ, ತನ್ನ ವ್ಯಾಪಾರಕ್ಕೆ ಭಾರಿ ಹೊಡೆತ ಬೀಳುತದೆ ಎನ್ನುವ ಕಾರಣಕ್ಕಾಗಿ ಸಾರ್ವಜನಿಕ ಪರವಾದ ಒಂದು ಸರ್ಕಾರಿ ನಿರ್ಧಾರವನ್ನು ತಡೆ ಹಿಡಿದಿರುವುದನ್ನು ಕೇಳಿ ನಿಜಕ್ಕೂ ಆಶ್ಚರ್ಯವಾಯಿತು.

ಹೀಗೆ, ಆಸಕ್ತಿಕರ ಸಂಗತಿಗಳನ್ನು ಹೇಳುತ್ತಾ, ಕೆಲವೊಮ್ಮೆ ವ್ಯಂಗ್ಯ ಮಾಡುತ್ತಾ ಮಧು ಅವರು ದೀಪಕ್ ಅವರಿಗೆ ದಾರಿ ತೋರಿಸುತ್ತಿದ್ದರು. ಮಧು ಅವರ ನಿರ್ದೇಶನದಂತೆ ಕಾರು ಓಡಿಸುತ್ತಿದ್ದ ದೀಪಕ್ ಅವರು, ಶ್ರಮವಾಗದಂತೆ ಕಾರು ಓಡಿಸಲು ಪ್ರಯತ್ನಿಸುತ್ತಿದ್ದರು. ಈಗೀಗ ಕಾರು ಕಲಿಯುತ್ತಿರುವ ದೀಪಕ್ ಅವರಿಗೂ, ಹಾಗೂ ಬೈಕ್ ಕಲಿಯುತ್ತಿರುವ ನನಗೂ ಗಾಡಿ ಓಡಿಸುವ ಬಗ್ಗೆ ಒಂದೇ ರೀತಿಯ ಸಂದೇಹಗಳಿವೆ. :) ’ಸಿಟಿಯಲ್ಲಿ ಗಾಡಿ ಓಡಿಸುವಾಗ, ಸಣ್ನ ಅಂತರದಲ್ಲಿಯೇ ಹಲವು ಬಾರಿ ಗೇರ್ ಬದಲಾಯಿಸಬೇಕಾಗುತ್ತದೆ. ಇದು ಸರಿಯಾ?! ಇದರಿಂದ ಎಂಜಿನ್ನಿಗೆ ತೊಂದರೆಯಾಗುತ್ತದೆಯಾ?! ’, ’ಯಾವ ಸ್ಪೀಡಿನಲ್ಲಿ ಯಾವ ಗೇರ್‌ನಲ್ಲಿ ಓಡಿಸಬೇಕು?’ ಹೀಗೆ ದೀಪಕ್ ಅವರು ಮಧು ಅವರನ್ನು ಕೇಳುತ್ತಿದ್ದ ಪ್ರಶ್ನೆಗಳು ನನ್ನ ಪ್ರಶ್ನೆಗಳೂ ಆಗಿದ್ದವು. ಇದಕ್ಕೆಲ್ಲಾ ಉತ್ತರವಾಗಿ ಮಧು ಅವರು ಹೇಳುತ್ತಿದ್ದ ಮಾತುಗಳು ಕೆಲವು ಅರ್ಥವಾಗುತ್ತಿದ್ದರೆ, ಮತ್ತಷ್ಟು ಅರ್ಥವೇ ಆಗುತ್ತಿರಲಿಲ್ಲ.

ಯಾವುದೇ ಸದಸ್ಯರ ಮನೆಗೆ ಹೋಗುವ ಮೊದಲು, ಅವರ ವಿಳಾಸ ಕೇಳಲು ಅವರಿಗೆ ಕರೆ ಮಾಡುತ್ತಿದ್ದೆವು. ಹೀಗೆ, ಕರೆ ಮಾಡಿದಾಗ, ಪ್ರತಿ ಸದಸ್ಯರೂ, ’ಅಯ್ಯೋ, ನಮ್ಮ ಮನೆ ಕಾರ್ಯಕ್ರಮಕ್ಕೆ ನಾವೇ ಕರೆಸಿಕೊಳ್ಳುವುದೇ?!! ನಾವು ಖಂಡಿತ ಬರುತ್ತೇವೆ’ ಎಂದು ಹೇಳುತ್ತಿದ್ದರು. ಹೀಗೆ ಹೇಳುತ್ತಿದ್ದುದು ಅವಿರತದೆಡೆಗಿನ ಸದಸ್ಯರೆಲ್ಲರ ಪ್ರೀತಿ, ಗೌರವಗಳನ್ನು ತೋರುತ್ತಿತ್ತು. ಅವರಂತೆ, ಅವರ ಮನೆಯವರಿಗೂ ಅವಿರತದ ಕಾರ್ಯಕ್ರಮ ಮನೆ ಕಾರ್ಯಕ್ರಮವೆನಿಸುವಂತೆ ಮಾಡುವ ಸಲುವಾಗಿಯೇ ಈ ಬಾರಿಯ ಕಾರ್ಯಕ್ರಮವನ್ನು ಅವಿರತದ ಸದಸ್ಯರ ಕುಟುಂಬಗಳಿಗಷ್ಟೇ ಮೀಸಲುಮಾಡಲಾಗಿದೆ. ತುಂಬಾ ಜನ ಸದಸ್ಯರ ಮನೆಯಲ್ಲಿ ಅವಿರತ ಮತ್ತದರ ಧ್ಯೇಯೋದ್ದೇಶಗಳ ಬಗ್ಗೆ ಸ್ಪಷ್ಟವಾಗಿ ತಿಳಿದಿಲ್ಲವಾದರೂ, ಒಂದು ಕಲ್ಪನೆಯಾದರೂ ಇದೆ. ಆಶ್ಚರ್ಯವೆಂದರೆ, ಐದನೇ ವಾರ್ಷಿಕೋತ್ಸವದ ಕಾರ್ಯಕ್ರಮದ ಬಗ್ಗೆ ಅವರಲ್ಲಿ ಈಗಾಗಲೇ ಒಂದಷ್ಟು ನಿರೀಕ್ಷೆಗಳಿವೆ. ಅದರಲ್ಲೂ ಕೆಲವು ಸದಸ್ಯರು, ಯಾವ ಯಾವ ಕಾರ್ಯಕ್ರಮಗಳಿವೆ?! ಕಾರ್ಯಕ್ರಮಗಳ ಸಿದ್ದತೆ ಹೇಗಿದೆ? ಯಾರು ಯಾವ ಜವಾಬ್ದಾರಿ ವಹಿಸಿಕೊಂಡಿದ್ದಾರೆ? ಎಂದೆಲ್ಲಾ ವಿಚಾರಿಸಿಕೊಂಡರು.

ಸುಮಾರು ಎರಡು-ಮೂರು ತಿಂಗಳ ಹಿಂದೆ, ವಿಜಯನಗರದಲ್ಲಿರುವ ನಟ ಶ್ರೀನಾಥ್ ವಸಿಷ್ಠ ಅವರ ಮನೆಯ ಮಹಡಿಯ ಮೇಲೆ ಅವಿರತದ ಸದಸ್ಯರೆಲ್ಲ ಭೇಟಿಯಾಗಿ ಐದನೇ ವಾರ್ಷಿಕೋತ್ಸವದ ಕಾರ್ಯಕ್ರಮದ ರೂಪು ರೇಷೆಗಳನ್ನು ಚರ್ಚಿಸುತ್ತಾ, ಈ ಬಾರಿಯ ಕಾರ್ಯಕ್ರಮವನ್ನು ಸಾರ್ವಜನಿಕಗೊಳಿಸದೆ, ಕೇವಲ ಸದಸ್ಯರುಗಳೆಲ್ಲಾ ಸೇರುವ ವಾರ್ಷಿಕ ಸಭೆಯಂತೆ ಮಾಡದೆ, ಕಾರ್ಯಕ್ರಮದಲ್ಲಿ ಸದಸ್ಯರ ಕುಟುಂಬದವರನ್ನು ಆಹ್ವಾನಿಸಿ, ಅವರಿಗೂ ಅವಿರತದ ಪರಿಚಯ ಮಾಡಿಕೊಡೋಣ ಎಂದು ತೆಗೆದುಕೊಂಡ ನಿರ್ಧಾರಕ್ಕೆ ಮೊದಲ ಹಂತದ ಪ್ರತಿಕ್ರಿಯೆಗಳನ್ನು ಆಹ್ವಾನ ಪತ್ರಿಕೆ ವಿತರಣೆ ಸಂದರ್ಭದಲ್ಲಿ ಕಂಡು ಬಹಳ ಖುಷಿಯಾಯಿತು. ಇನ್ನೇನಿದ್ದರೂ, ಅವರ ನಿರೀಕ್ಷೆಗಳನ್ನು ತಲುಪುವಂತೆ ನಮ್ಮ ಕಾರ್ಯಕ್ರಮಗಳನ್ನು ಮತ್ತಷ್ಟು ಮುತುವರ್ಜಿಯಿಂದ, ಕಾಳಜಿಯಿಂದ ಪ್ರಸ್ತುತಪಡಿಸುವ ಕಡೆ ನಾವೆಲ್ಲಾ ಗಮನ ಕೊಡಬೇಕಿದೆ.

ಇದೇ ಸಂದರ್ಭದಲ್ಲಿ, ತಿಳಿಯದೆ ನನ್ನಿಂದ ಒಂದು ತಪ್ಪು ನಡೆದು ಹೋಯಿತು. ಯೋಗೇಶ್ ಅವರ ಮನೆಯಲ್ಲಿರುವಾಗ ಅವರ ಶ್ರೀಮತಿಯವರು ನಮಗೆಲ್ಲಾ ಟೀ ಮಾಡಿ ತಂದರು. ಕಾಫೀ, ಟೀ ಅಭ್ಯಾಸ ಇಲ್ಲದ ನಾನು ಎಂದಿನಂತೆ, ’ಕ್ಷಮಿಸಿ, ಮೇಡಮ್..ನಾನು ಟೀ ಕುಡಿಯೋದಿಲ್ಲ’ ಎಂದು ವಿನಯದಿಂದಲೇ, ನಗುತ್ತಾ ಹೇಳಿಬಿಟ್ಟೆ. ಆಗ ಅವರು, ’ಓಹ್, ಸ್ಸಾರಿ...ಹಾಲು ಕೊಡ್ತೀನಿ ಇರಿ’ ಎಂದು ಏನೋ ತಪ್ಪಾದವರಂತೆ, ಕೂಡಲೇ ಅಡುಗೆ ಮನೆ ಕಡೆ ನಡೆದುಬಿಟ್ಟರು. ಕೇವಲ ಒಂದೆರಡು ಸೆಕೆಂಡ್‍ಗಳಲ್ಲಿ ಇದು ನಡೆದುಹೋದರು, ನನಗೂ ನಾನು ಮಾಡಿದ್ದು ಸರಿಯಲ್ಲವೆನಿಸಲು ಅಷ್ಟೇ ಸಮಯ ಸಾಕಾಯಿತು.

ಸ್ನೇಹಿತರು, ಕುಟುಂಬದರು, ಸಂಬಂಧಿಕರು, ಆಫೀಸಿನ ಸಹ್ಯೋದೊಗಿಗಳು, ಹೀಗೆ ಇವರೆಲ್ಲರ ಜೊತೆಗಿನ ಒಡನಾಟ ಪ್ರತಿದಿನ ಇರುವಂತದ್ದು. ಇವರಿಗೆಲ್ಲಾ ನನ್ನ ಅಹಾರಾಭ್ಯಾಸಗಳ ಪರಿಚಯವಿರುತ್ತದೆ. ಹಾಗಾಗಿ, ಇವರಿಗೆಲ್ಲಾ, ನಾನು ಕಾಫೀ, ಟೀ ಕುಡಿಯುವುದಿಲ್ಲ, ಮಾಂಸಾಹಾರಿ ಅಲ್ಲ, ಊಟದ ವಿಚಾರದಲ್ಲಿ ನಾನು ಹೆಚ್ಚಿನ ಆಯ್ಕೆಗಳಿಟ್ಟುಕೊಂಡಿಲ್ಲ ಎಂದು ತಿಳಿದಿದೆ. ಆದ್ದರಿಂದ,ಅವರಲ್ಲಿ ಯಾರಾದರೂ ಒಮ್ಮೊಮ್ಮೆ ’ಟೀ ತಗೊಳ್ಳೊ..’, ’ಕಾಫೀ ಕುಡಿಯೋ’ ಅಂದಾಗ, ’ಇಲ್ಲಪ್ಪಾ, ಟೀ-ಕಾಫೀ ಕುಡಿದು ಅಭ್ಯಾಸವಿಲ್ಲವಲ್ಲ’ ಅಂತ ಹೇಳಿದರೆ ನಡೆಯುತ್ತದೆ. ಅಷ್ಟಕ್ಕೂ, ನಾನು ಕಾಫಿ, ಟೀ ಸೇವನೆಯಿಂದಾಗುವ ಅನಾನುಕೂಲಕ್ಕೆ ಹೆದರಿ ಅದನ್ನು ಸೇವಿಸುದಿಲ್ಲ ಅಂತಲ್ಲ. ಯಾಕೋ ಅಭ್ಯಾಸ ಮಾಡಿಕೊಂಡಿಲ್ಲ ಅಷ್ಟೆ. ಆದರೆ, ಇದ್ಯಾವುದೂ ತಿಳಿಯದೆ, ಮನೆಗೆ ಬಂದ ಅತಿಥಿಗಳನ್ನು ಸತ್ಕರಿಸುವ ಸಲುವಾಗಿ, ವಿಶ್ವಾಸದಿಂದ ಟೀ ಮಾಡಿ ತಂದಾಗ ’ನಾನು ಟೀ ಕುಡಿಯೋದಿಲ್ಲ’ ಅಂತ ಹೇಳಿ ಅವರನ್ನು ಪೇಚಿಗೆ ಸಿಲುಕುವಂತೆ ಮಾಡಿ ತಪ್ಪು ಮಾಡಿಬಿಟ್ಟೆ. :(

ಆ ಕ್ಷಣವೇ, ಇನ್ನು ಮುಂದೆ ಹೀಗಾಗದಂತೆ ಎಚ್ಚರವಹಿಸಬೇಕು ಎಂದು ನಿರ್ಧರಿಸಿ, ಮನೆಯಿಂದ ಹೊರಬಂದ ನಂತರ ಯೋಗೇಶ್ ಅವರಲ್ಲಿ ನನ್ನ ಮನಸ್ಸಲ್ಲಿನ ತಳಮಳವನ್ನು ಹೇಳಿಕೊಂಡು ಕ್ಷಮೆ ಕೇಳಿದೆ.

ಅಲ್ಲಿಂದ ಮುಂದೆ, ಜಯನಗರದಲ್ಲಿರುವ ವಿಶ್ವನಾಥ್ ಅವರ ಮನೆಗೆ ಹೋದಾಗ, ಅಲ್ಲಿಯೂ ಸಹ ಟೀ ಕೊಟ್ಟರು, ಕುಡಿದೆ. ಅವರ ಅತಿಥಿ ಸತ್ಕಾರಕ್ಕೆ ತೊಡಕಾಗಲಿಲ್ಲ, ನನಗೂ ಸಮಾಧಾನವಾಯಿತು.


Tuesday, January 1, 2013

೨೦೧೨

ನಸಾಗುವುದೇ ಇಲ್ಲವೆಂದು ನಾನು ನೆನೆಸಿದ್ದ ಹಲವು ಕನಸುಗಳು ಅಚ್ಚರಿಯೆನಿಸುವಂತೆ ನನಸಾಗಿ ತಂದ ಖುಷಿಯ ನಡುವೆಯೇ, ನನಸಾಗಲಿ ಎಂದು ಬಯಸಿದ್ದ ಆಪ್ತ ಕನಸೊಂದು ಕರಗಿ ಹೋದಂತಹ ವರ್ಷ ೨೦೧೨!!

೨೦೧೩ ಎಲ್ಲರಿಗೂ ಶುಭ ತರಲಿ.... :)