Saturday, August 15, 2015

ನಿಮ್ಮ ಬಾಯಿ ಸುಮ್ಮನಿರಲಿ, ಹೃದಯ ತೆರೆದಿರಲಿ.


ಭಾರತದ ಏಳಿಗೆಗೆ ನಾವು ಮಾಡಬೇಕಾದ ಕಾರ್ಯ ಎಂಬ ವಿಷಯದ ಬಗ್ಗೆ ಮಾತನಾಡುತ್ತಾ ಸ್ವಾಮಿ ವಿವೇಕಾನಂದರು ಹೇಳಿದ ಕೆಲವು ಮಾತುಗಳನ್ನು ಇಲ್ಲಿ ನಿರೂಪಿಸುವ ಪ್ರಯತ್ನ ಮಾಡಿದ್ದೀನಿ.  ಈ ಮಾತುಗಳು ಸ್ವಾತ್ರಂತ್ರ್ಯ ದಿನದ ಈ ಸಂದರ್ಭದಲ್ಲಿ ಕೂಡ ಸೂಕ್ತವೆನಿಸುವುದು ಆಶ್ಚರ್ಯ!
ನನ್ನ ದೇಶಬಾಂಧವರೇ,  ನಮ್ಮ ಮಾತೃಭೂಮಿ ಎಂಬ ಹಡಗು ಸಹಸ್ರಾರು ವರ್ಷಗಳಿಂದಲೂ ಸಂಚರಿಸುತ್ತಿದೆ.  ಇಂದು ಅದು ಎಲ್ಲೋ ಸ್ವಲ್ಪ ಸೋರುತ್ತಿರಬಹುದು; ಅದರ ಯಾವುದೋ ಭಾಗ ಸ್ವಲ್ಪ ಸವೆದು ಹೋಗಿರಬಹುದು. ಬಹುಶ: ನಮ್ಮ ಅಜಾಗರೂಕತೆಯಿಂದಲೇ ಹಡಗು ಶಿಥಿಲವಾಗಿದೆ, ರಂಧ್ರ ಬಿದ್ದಿದೆ.  ಇದನ್ನು ಈಗ ನಿಂದಿಸುವಿರಾ?! ಈ ಜನಾಂಗದ ಹಡಗಿನಲ್ಲಿ, ಅಂದರೆ ನಮ್ಮ ಜನಾಂಗದಲ್ಲಿ ಕುಂದು ಕೊರತೆಗಳಿದ್ದರೆ ನಾವು, ಅದರ ಮಕ್ಕಳು, ಹೋಗಿ ಆ ರಂಧ್ರವನ್ನು ಮುಚ್ಚೋಣ.  ನಮ್ಮ ಹೄದಯದ ರಕ್ತವನ್ನಾದರೂ ಕೊಟ್ಟು ಸಂತೋಷದಿಂದ ಈ ಕಾರ್ಯವನ್ನು ಸಾಧಿಸೋಣ.  ಅವಶ್ಯವಿದ್ದರೆ, ನಮ್ಮ ತಲೆಯನ್ನಾದರೂ ಛೇದಿಸಿ ರಂಧ್ರವನ್ನು ಮುಚ್ಚೋಣ.  ಇದು ನಿಮ್ಮ ಮತ್ತು ನನ್ನ ಪವಿತ್ರ ಕರ್ತವ್ಯ.  ಈ ಅಪಾಯವನ್ನು ನಮ್ಮ ದೇಶದ ಜನರ ಗಮನಕ್ಕೆ ತರೋಣ; ಅವರು ಜಾಗೃತರಾಗಿ ನಮ್ಮ ಸಹಾಯಕ್ಕೆ ಬರಲಿ.  ಜನರಿಗೆ ಅಪಾಯವನ್ನು ಮನಗಾಣಿಸಲು, ಕರ್ತವ್ಯವನ್ನು ನೆನಪಿಸಲು, ದೇಶದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ, ತಾರಸ್ವರದಲ್ಲಿ ಕೂಗುತ್ತಾ ಹೋಗುವೆನು.  ಅವರು ನನ್ನನ್ನು ಕೇಳಲಿಲ್ಲ ಎಂದು ಭಾವಿಸೋಣ.  ಆದರೂ ಅವರನ್ನು ದೂರುವುದಿಲ್ಲ, ಶಪಿಸುವುದಿಲ್ಲ. ಶಾಪ ಮತ್ತು ನಿಂದೆ – ಇವುಗಳಿಂದ ನಾವು ಏನನ್ನೂ ಸಾಧಿಸಲಾರೆವು.  ಇದನ್ನು ನೀವು ಲಕ್ಷ್ಯದಲ್ಲಿಡಿ. ಹಲವು ವರ್ಷಗಳಿಂದ ಹೀಗೇ ಮಾಡಿರುವರು.  ಅದರಿಂದ ಯಾವುದೇ ಪ್ರಯೋಜನವೂ ಆಗಲಿಲ್ಲ.  ಸಹಾನುಭೂತಿಯಿಂದ ಮತ್ತು ಪ್ರೀತಿಯಿಂದ ಮಾತ್ರ ಒಳ್ಳೆಯ ಪರಿಣಾಮ ದೊರಕುವುದು. ನಿಮ್ಮ ಬಾಯಿ ಸುಮ್ಮನಿರಲಿ, ಹೃದಯ ತೆರೆದಿರಲಿ.  ಪ್ರತಿಯೊಂದು ಆತ್ಮದಲ್ಲಿರುವ ಸುಪ್ತ ಪಾವಿತ್ರ್ಯವನ್ನು ಜಾಗೃತಗೊಳಿಸಿ.  ಅನಂತರ ನೀವು ಎಷ್ಟೇ ಅಲ್ಪವನ್ನು ಸಾಧಿಸಿದ್ದರೂ ನೀವು ಒಂದು ಮಹಾ ಆದರ್ಶಕ್ಕಾಗಿ ಬಾಳಿ, ದುಡಿದು, ಮಡಿದಿರಿ ಎಂಬ ತೃಪ್ತಿಯಾದರೂ ಇರುತ್ತದೆ.  ಈ ಮಹಾತ್ಕಾರ್ಯವು ಯಾವ ರೀತಿಯಿಂದಲಾದರೂ ಸಿದ್ದಿಸಿದರೂ ಸರಿಯೇ; ಅದರ ಮೇಲೆ ಮಾನವ ಕೋಟಿಯ ಇಂದಿನ ಮತ್ತು ಮುಂದಿನ ಕಲ್ಯಾಣ ನಿಂತಿದೆ.

ಒಂದು ವೇಳೆ, ನೀವು ನನ್ನನ್ನು ಆಲಿಸಿದರೆ ನಿಮ್ಮೊಂದಿಗೆ ಕೆಲಸ ಮಾಡಲು ನಾನು ಸಿದ್ದನಾಗಿರುವೆನು.  ನೀವು ಕೇಳದೆ ನನ್ನನ್ನು ಭರತ ಖಂಡದಿಂದ ನೂಕಿದರೂ ನಾನು ಪುನ: ಬಂದು ನಾವೆಲ್ಲಾ ಮುಳುಗುತ್ತಿರುವೆವು ಎಂದು ಹೇಳುವೆನು.  ನಾನು ನಿಮ್ಮ ಸಮೀಪದಲ್ಲಿದ್ದು,ಕಾರ್ಯೋನ್ಮುಖನಾಗಲು ಬಂದಿರುವೆನು. ಪೂರ್ವದಲ್ಲಿ ನಮ್ಮ ದೇಶ ಮಹಾತ್ಕಾರ್ಯಗಳನ್ನು ಸಾಧಿಸುತ್ತು.  ನಾವು ಅದಕ್ಕೂ ಮಿಗಿಲಾದ ಮಹತ್ಕಾರ್ಯಗಳನ್ನು ಮುಂದೆ ಮಾಡದೇ ಇದ್ದರೆ ನಾವೆಲ್ಲಾ ನೀರಿನಲ್ಲಿ ಒಟ್ಟಿಗೆ ಮುಳುಗಿ ಶಾಂತಿಯಿಂದ ಸಾಯಬಲ್ಲೆವೆಂಬ ಸಮಾಧಾನವಾದರೂ ಇರಲಿ.  ಆದರೆ, ಎಂದಿಗೂ ಶಾಪವನ್ನು ಉಚ್ಚರಿಸದೆ ಇರೋಣ.

-ಸ್ವಾಮಿ ವಿವೇಕಾನಂದ

(ಸಂಪಾದನೆ /ನಿರೂಪಣೆ :ರೋಹಿತ್)