Saturday, August 15, 2015

ನಿಮ್ಮ ಬಾಯಿ ಸುಮ್ಮನಿರಲಿ, ಹೃದಯ ತೆರೆದಿರಲಿ.


ಭಾರತದ ಏಳಿಗೆಗೆ ನಾವು ಮಾಡಬೇಕಾದ ಕಾರ್ಯ ಎಂಬ ವಿಷಯದ ಬಗ್ಗೆ ಮಾತನಾಡುತ್ತಾ ಸ್ವಾಮಿ ವಿವೇಕಾನಂದರು ಹೇಳಿದ ಕೆಲವು ಮಾತುಗಳನ್ನು ಇಲ್ಲಿ ನಿರೂಪಿಸುವ ಪ್ರಯತ್ನ ಮಾಡಿದ್ದೀನಿ.  ಈ ಮಾತುಗಳು ಸ್ವಾತ್ರಂತ್ರ್ಯ ದಿನದ ಈ ಸಂದರ್ಭದಲ್ಲಿ ಕೂಡ ಸೂಕ್ತವೆನಿಸುವುದು ಆಶ್ಚರ್ಯ!
ನನ್ನ ದೇಶಬಾಂಧವರೇ,  ನಮ್ಮ ಮಾತೃಭೂಮಿ ಎಂಬ ಹಡಗು ಸಹಸ್ರಾರು ವರ್ಷಗಳಿಂದಲೂ ಸಂಚರಿಸುತ್ತಿದೆ.  ಇಂದು ಅದು ಎಲ್ಲೋ ಸ್ವಲ್ಪ ಸೋರುತ್ತಿರಬಹುದು; ಅದರ ಯಾವುದೋ ಭಾಗ ಸ್ವಲ್ಪ ಸವೆದು ಹೋಗಿರಬಹುದು. ಬಹುಶ: ನಮ್ಮ ಅಜಾಗರೂಕತೆಯಿಂದಲೇ ಹಡಗು ಶಿಥಿಲವಾಗಿದೆ, ರಂಧ್ರ ಬಿದ್ದಿದೆ.  ಇದನ್ನು ಈಗ ನಿಂದಿಸುವಿರಾ?! ಈ ಜನಾಂಗದ ಹಡಗಿನಲ್ಲಿ, ಅಂದರೆ ನಮ್ಮ ಜನಾಂಗದಲ್ಲಿ ಕುಂದು ಕೊರತೆಗಳಿದ್ದರೆ ನಾವು, ಅದರ ಮಕ್ಕಳು, ಹೋಗಿ ಆ ರಂಧ್ರವನ್ನು ಮುಚ್ಚೋಣ.  ನಮ್ಮ ಹೄದಯದ ರಕ್ತವನ್ನಾದರೂ ಕೊಟ್ಟು ಸಂತೋಷದಿಂದ ಈ ಕಾರ್ಯವನ್ನು ಸಾಧಿಸೋಣ.  ಅವಶ್ಯವಿದ್ದರೆ, ನಮ್ಮ ತಲೆಯನ್ನಾದರೂ ಛೇದಿಸಿ ರಂಧ್ರವನ್ನು ಮುಚ್ಚೋಣ.  ಇದು ನಿಮ್ಮ ಮತ್ತು ನನ್ನ ಪವಿತ್ರ ಕರ್ತವ್ಯ.  ಈ ಅಪಾಯವನ್ನು ನಮ್ಮ ದೇಶದ ಜನರ ಗಮನಕ್ಕೆ ತರೋಣ; ಅವರು ಜಾಗೃತರಾಗಿ ನಮ್ಮ ಸಹಾಯಕ್ಕೆ ಬರಲಿ.  ಜನರಿಗೆ ಅಪಾಯವನ್ನು ಮನಗಾಣಿಸಲು, ಕರ್ತವ್ಯವನ್ನು ನೆನಪಿಸಲು, ದೇಶದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ, ತಾರಸ್ವರದಲ್ಲಿ ಕೂಗುತ್ತಾ ಹೋಗುವೆನು.  ಅವರು ನನ್ನನ್ನು ಕೇಳಲಿಲ್ಲ ಎಂದು ಭಾವಿಸೋಣ.  ಆದರೂ ಅವರನ್ನು ದೂರುವುದಿಲ್ಲ, ಶಪಿಸುವುದಿಲ್ಲ. ಶಾಪ ಮತ್ತು ನಿಂದೆ – ಇವುಗಳಿಂದ ನಾವು ಏನನ್ನೂ ಸಾಧಿಸಲಾರೆವು.  ಇದನ್ನು ನೀವು ಲಕ್ಷ್ಯದಲ್ಲಿಡಿ. ಹಲವು ವರ್ಷಗಳಿಂದ ಹೀಗೇ ಮಾಡಿರುವರು.  ಅದರಿಂದ ಯಾವುದೇ ಪ್ರಯೋಜನವೂ ಆಗಲಿಲ್ಲ.  ಸಹಾನುಭೂತಿಯಿಂದ ಮತ್ತು ಪ್ರೀತಿಯಿಂದ ಮಾತ್ರ ಒಳ್ಳೆಯ ಪರಿಣಾಮ ದೊರಕುವುದು. ನಿಮ್ಮ ಬಾಯಿ ಸುಮ್ಮನಿರಲಿ, ಹೃದಯ ತೆರೆದಿರಲಿ.  ಪ್ರತಿಯೊಂದು ಆತ್ಮದಲ್ಲಿರುವ ಸುಪ್ತ ಪಾವಿತ್ರ್ಯವನ್ನು ಜಾಗೃತಗೊಳಿಸಿ.  ಅನಂತರ ನೀವು ಎಷ್ಟೇ ಅಲ್ಪವನ್ನು ಸಾಧಿಸಿದ್ದರೂ ನೀವು ಒಂದು ಮಹಾ ಆದರ್ಶಕ್ಕಾಗಿ ಬಾಳಿ, ದುಡಿದು, ಮಡಿದಿರಿ ಎಂಬ ತೃಪ್ತಿಯಾದರೂ ಇರುತ್ತದೆ.  ಈ ಮಹಾತ್ಕಾರ್ಯವು ಯಾವ ರೀತಿಯಿಂದಲಾದರೂ ಸಿದ್ದಿಸಿದರೂ ಸರಿಯೇ; ಅದರ ಮೇಲೆ ಮಾನವ ಕೋಟಿಯ ಇಂದಿನ ಮತ್ತು ಮುಂದಿನ ಕಲ್ಯಾಣ ನಿಂತಿದೆ.

ಒಂದು ವೇಳೆ, ನೀವು ನನ್ನನ್ನು ಆಲಿಸಿದರೆ ನಿಮ್ಮೊಂದಿಗೆ ಕೆಲಸ ಮಾಡಲು ನಾನು ಸಿದ್ದನಾಗಿರುವೆನು.  ನೀವು ಕೇಳದೆ ನನ್ನನ್ನು ಭರತ ಖಂಡದಿಂದ ನೂಕಿದರೂ ನಾನು ಪುನ: ಬಂದು ನಾವೆಲ್ಲಾ ಮುಳುಗುತ್ತಿರುವೆವು ಎಂದು ಹೇಳುವೆನು.  ನಾನು ನಿಮ್ಮ ಸಮೀಪದಲ್ಲಿದ್ದು,ಕಾರ್ಯೋನ್ಮುಖನಾಗಲು ಬಂದಿರುವೆನು. ಪೂರ್ವದಲ್ಲಿ ನಮ್ಮ ದೇಶ ಮಹಾತ್ಕಾರ್ಯಗಳನ್ನು ಸಾಧಿಸುತ್ತು.  ನಾವು ಅದಕ್ಕೂ ಮಿಗಿಲಾದ ಮಹತ್ಕಾರ್ಯಗಳನ್ನು ಮುಂದೆ ಮಾಡದೇ ಇದ್ದರೆ ನಾವೆಲ್ಲಾ ನೀರಿನಲ್ಲಿ ಒಟ್ಟಿಗೆ ಮುಳುಗಿ ಶಾಂತಿಯಿಂದ ಸಾಯಬಲ್ಲೆವೆಂಬ ಸಮಾಧಾನವಾದರೂ ಇರಲಿ.  ಆದರೆ, ಎಂದಿಗೂ ಶಾಪವನ್ನು ಉಚ್ಚರಿಸದೆ ಇರೋಣ.

-ಸ್ವಾಮಿ ವಿವೇಕಾನಂದ

(ಸಂಪಾದನೆ /ನಿರೂಪಣೆ :ರೋಹಿತ್)

Wednesday, March 11, 2015

ಮದುಮಗಳ ದಿಬ್ಬಣದಲ್ಲಿ ಹೊರಟಾಗ....

ಮೊದಲಿಗೇ ತಿಳಿಸಿಬಿಡುತ್ತೇನೆ, ನಾನು ಕಾದಂಬರಿಯನ್ನು ಸಂಪೂರ್ಣವಾಗಿ ಇನ್ನೂ ಓದಿಲ್ಲ.  ಬೆಂಗಳೂರಿನ ಎನ್.ಎಸ್.ಡಿ.ಯಲ್ಲಿ ವಿದ್ಯಾರ್ಥಿಯಾಗಿರುವ ನನ್ನ ಗೆಳೆಯ ’ಮುಂದಿನ ಮಾರ್ಚ್ ಗೆ ಬೆಂಗಳೂರಿನಲ್ಲಿ ಮದುಮಗಳು ನಾಟಕ ಎನ್.ಎಸ್.ಡಿ ಸ್ಟೂಡೆಂಟ್ಸಿಂದ ಇರುತ್ತೆ’ ಅಂತ ತಿಳಿಸಿದ ದಿನವೇ, ’ಅಂಕಿತ ಪುಸ್ತಕ’ಕ್ಕೆ ಹೋಗಿ ಕಾದಂಬರಿಯನ್ನ ತಂದು, ಓದಲು ಶುರುಮಾಡಿದ್ದೆ.  ಆ ನಂತರ, ಟ್ರೆಕ್ಕಿಂಗ್, ಆಫೀಸಿನ ಪ್ರವಾಸ, ನಾಟಕದ ಪ್ರದರ್ಶನ ಎಲ್ಲವೂ ಸಾಲು ಸಾಲಾಗಿ ಬಂದಿದ್ದರಿಂದ ೮ನೇ ಅಧ್ಯಾಯಕ್ಕಿಂತ ಮುಂದೆ ಓದಲು ಸಾಧ್ಯವಾಗಲೇ ಇಲ್ಲ.  ಅಷ್ಟರಲ್ಲಿ ಮದುಮಗಳು ನಾಟಕದ ಪ್ರದರ್ಶನ ಪ್ರಾರಂಭವಾಗಿತ್ತು.  ಅವಿರತದ ಗೆಳೆಯರೆಲ್ಲರು ಸೇರಿ, ಈ ಪ್ರದರ್ಶನ ನಮಗಾಗಿಯೇ ಏರ್ಪಡಿಸಿದ ಖಾಸಗಿ ಪ್ರದರ್ಶನವೇನೋ ಎಂಬಂತೆ ದೊಡ್ಡ ಸಂಖ್ಯೆಯಲ್ಲಿ ಹೊರಟು ನಿಂತಾಗ, ಅದನ್ನು ತಪ್ಪಿಸಿಕೊಳ್ಳುವುದಾದರೂ ಹೇಗೆ?! J  ನಾನೂ ಹೊರಟೆ, ಅಷ್ಟು ದೊಡ್ದ ಜನಸಾಗರದಲ್ಲಿ ಒಂದು ಬಿಂದುವಾಗಿ, ಅದ್ಬುತ ಮಲೆನಾಡನ್ನು ನನ್ನೊಳಗಿನ ಭಾವಲೋಕದಲ್ಲಿ ಇಳಿಸಿಕೊಳ್ಳುವುದಕ್ಕಾಗಿ.


’ಮಲೆನಾಡ ಲೋಕವನೇ ಕಣ್ಣು ಮುಂದೆ ತಂದವಗೆ, ಪಾದಕ್ಕೊಂದು ಪುಷ್ಪವೂ’

ಮಲೆನಾಡು.  ಹೆಸರು ಕೇಳಿದೊಡನೆ ಏನೋ ಒಂದು ರೀತಿಯ ಪುಳಕ.  ಮಹಾ ಸಾಗರದ ಬೃಹತ್ ಅಲೆಗಳಂತೆ ಅನಂತದವರೆಗೂ ವಿಸ್ತರಿಸಿರುವ ಪರ್ವತ ಶ್ರೇಣಿಗಳು, ಸುದೀರ್ಘ ಕಾಲದಿಂದ ಗಂಭೀರ ತಪಸ್ಸಿನಲ್ಲಿರುವಂತೆ ಕಾಣುವ ಬೆಟ್ಟಗಳು, ದಟ್ಟವಾದ ಕಾಡುಗಳು, ಉಕ್ಕಿ ಹರಿವ ತೊರೆ, ನದಿ, ಜಲಪಾತಗಳು, ಅಸಂಖ್ಯ ಪ್ರಾಣಿ-ಪಕ್ಷಿ-ಸಸ್ಯ ಸಂಕುಲಗಳು, ಕಣಿವೆಗಳಲ್ಲಿ, ಬೆಟ್ಟಗಳಲ್ಲಿ ಕಂಗೊಳಿಸುವ ವಿಶಾಲವಾದ ತೋಟ, ಗದ್ದೆಗಳು, ಒಂದೊಂದೇ ಮನೆಯಿರುವ ಊರುಗಳು, ಹೀಗೆ ಎಲ್ಲವೂ ಕಣ್ಮುಂದೆ ಸುಳಿದು, ಒಂದು ಬೆಚ್ಚನೆಯ ಭಾವ ಮೂಡುತ್ತದೆ; ಮನದೊಳಗಿನ ಆ ಖುಷಿ, ನಗುವಾಗಿ ಮುಖದಲ್ಲಿ ಪ್ರತಿಫಲಿಸುತ್ತದೆ.
ಈ ಮನೋಹರವಾದ ಮಲೆನಾಡಿನಲ್ಲಿ ನಡೆಯುವ ಕಥೆಯನ್ನು ಆಡಿ ತೋರಿಸುವುದಕ್ಕೆ, ಕಲಾಗ್ರಾಮದಲ್ಲಿ ಸಿದ್ದವಾಗಿ ನಿಂತ ರಂಗದಲ್ಲಿ ಮಲೆನಾಡಿನ ಸೌಂದರ್ಯವಿದೆ; ನಾಟಕದ ಹಾಡುಗಳಲ್ಲಿ ಮಲೆನಾಡಿನ ಹಕ್ಕಿಗಳ ಕಲರವದ ಮಾಧುರ್ಯವಿದೆ; ಇನ್ನು, ಇಡೀ ರಾತ್ರಿ ಉತ್ಸಾಹ ಕುಗ್ಗದಂತೆ ನಾಟಕ ಆಡಿ ತೋರಿಸುವ ಕಲಾವಿದರಲ್ಲಿ ಹಾಗೂ ತಂಡದವರಲ್ಲಿ ಮಲೆನಾಡಿನ ಜನರ ಔದಾರ್ಯವಿದೆ.

’ಮಲೆಗಳಲ್ಲಿ ಮದುಮಗಳು – ಅಂದ್ರೆ, ಇದೇನು ಲವ್ ಸ್ಟೋರಿನಾ?!’ ಅಂತ ಮೊದಲ ಬಾರಿಗೆ ನಾಟಕ ನೋಡಲು ಬರುತ್ತಿದ್ದ ನನ್ನ ಸ್ನೇಹಿತನೊಬ್ಬ ಕೇಳಿದ್ದ. ಮೇಲ್ನೋಟಕ್ಕೆ ಇದು ಪ್ರೇಮ ಕಥೆಯೇ ಇರಬಹುದು.  ಒಬ್ಬರನ್ನೊಬ್ಬರು ಮೆಚ್ಚಿ, ಪ್ರೀತಿಸಿ, ಮದುವೆಯಾಗಲಿಚ್ಚಿಸುವ ಎರಡು ಜೋಡಿಗಳ ಕಥೆ ಎನಿಸಬಹುದು.  ಆದರೆ, ಈ ಜೋಡಿಗಳ ಪ್ರೇಮ ಕಥೆ ಅಥವಾ ಮದುವೆ ಪ್ರಹಸನವಷ್ಟೇ ಈ ನಾಟಕದ ( ಕಾದಂಬರಿಯ ) ಮುಖ್ಯ ಅಂಶವಲ್ಲ ಎಂಬುದೂ ಅಷ್ಟೇ ಸತ್ಯ.  ಇವತ್ತಿಗೂ ಮಲೆನಾಡಿನ ಹಲವಾರು ಜಾಗಗಳಿಗೆ ಪ್ರವಾಸಕ್ಕಾಗಿಯೋ, ಚಾರಣಕ್ಕಾಗಿಯೋ ಹೋಗುವ ನಾವೆಲ್ಲ ಅಲ್ಲಿನ ನಿಗೂಢತೆಯನ್ನು, ಅಲ್ಲಿನ ದೈನಂದಿನ ಬದುಕಿಗೆ ಇರುವ ಸವಾಲುಗಳನ್ನು ನೆನೆದು, ’ಅಬ್ಬಾ! ಇಲ್ಲಿ ಜನ ಹೇಗೆ ಜೀವನ ಮಾಡುತ್ತಾರೇ?!” ಎಂದು ಆಶ್ಚರ್ಯಪಡುತ್ತಾ ಹುಬ್ಬೇರಿಸುತ್ತೇವೆ.  ಸೌಲಭ್ಯಗಳು, ಅನುಕೂಲಗಳು ದೊರೆತಿರುವ ಆಧುನಿಕ ಕಾಲದ ಈ ದಿನಗಳಲ್ಲೂ  ನಾವು ಹೀಗೆ ಅಚ್ಚರಿಪಡುವಂತಾದರೆ, ಹಿಂದಿನ ಕಾಲದಲ್ಲಿ – ಅಂದರೆ ನೂರಾರು ವರ್ಷಗಳ ಹಿಂದಿನ ಕಥೆ ಏನು?!  ಈ ನಿಟ್ಟಿನಲ್ಲಿ ಯೋಚಿಸಿದಾಗ ಮಲೆಗಳಲ್ಲಿ ಮದುಮಗಳು ನಾಟಕದ ಕ್ಯಾನ್ವಾಸ್ ಬಹಳ ದೊಡ್ಡದು.  ೧೯ನೇ ಶತಮಾನದ ಕೊನೆಯಲ್ಲಿ, ೨೦ನೇ ಶತಮಾನದ ಆರಂಭದಲ್ಲಿ ನಡೆಯುವ ಈ ಕಥೆಯಲ್ಲಿ, ಸಮಾಜದ ವಿವಿಧ ವರ್ಗಗಳ ಪರಿಚಯ, ಅವುಗಳ ನಡುವಿನ ಸಂಬಂಧ, ಆಚರಣೆಯಲ್ಲಿದ್ದ ಮೂಢನಂಬಿಕೆಗಳು, ದೇವರು, ದೈಯ್ಯ, ಭೂತಾರಾಧನೆ ಆಚರಣೆಗಳು, ಜಾತಿಪದ್ದತಿ, ಆರ್ಥಿಕ ವ್ಯವಸ್ಥೆ, ಕ್ರೈಸ್ತ ಮಿಷನರಿಗಳ ಮತಾಂತರ ಕಾರ್ಯಾಚರಣೆ, ಕೌಟುಂಬಿಕ ಕಲಹಗಳು, ಬೇಟೆ, ಆಳುಗಳನ್ನು ಆಸ್ತಿಗಳೆಂದು ಭಾವಿಸುವ ಪರಿ, ಗಂಡಿನ ದಬ್ಬಾಳಿಕೆ, ಹೆಣ್ಣಿನ ಅಸಹಾಯಕತೆ, ಸಹಬಾಳ್ವೆ, ಬದಲಾಗುತ್ತಿದ್ದ ಕಾಲದಲ್ಲಿ ಚಿಗುರೊಡೆದ ವಿಚಾರಮತಿ ಧೋರಣೆ, ಹೀಗೆ ಹತ್ತು ಹಲವು ಅಂಶಗಳು ಸೇರಿಕೊಂಡು ಅಂದಿನ ಮಲೆಸೀಮೆಯ ವ್ಯವಸ್ಥೆಯನ್ನೂ, ಜನ-ಜೀವನದ ಸ್ಥಿತಿಗತಿಗಳನ್ನು ಇಂದಿನ ಪ್ರೇಕ್ಷಕರೆದುರಿಗೆ ವಿವರವಾಗಿ ಪ್ರಸ್ತುತಪಡಿಸುವುದರಲ್ಲೇ ಈ ನಾಟಕದ ವೈಶಾಲ್ಯತೆಯಿದೆ ಎಂದು ತಿಳಿಯಬಹುದು.


ನಮ್ಮ ಆಯಸ್ಸಿಗಿಂತ ಮೊದಲೇ, ನಾವು ಹೇಳ್ತಿದ್ದ ಪುರಾಣಗಳ ಆಯಸ್ಸು ಮುಗ್ದೋಗ್ಯಾದೆ.  ಜನಕ್ಕೆ ಬೇಕಾದ ಕತೆ ನಮ್ಮ ಹತ್ತಿರ ಇಲ್ಲಾ ಸ್ವಾಮಿ ನಾವೇನ್ಮಾಡೋಣಾ’

ಊರೂರು ತಿರುಗುತ್ತಾ, ಪುರಾಣವನ್ನು, ಕಥೆಗಳನ್ನು ಹೇಳುತ್ತಾ, ಹಾಡುತ್ತಾ, ಜನರಿಂದ ಅನ್ನದ ಭಿಕ್ಷೆಪಡೆದು ಜೀವನ ನಡೆಸುವ ಜೋಗಿಗಳು, ತಮ್ಮ ಈ ಕುಲ ಕಸುಬನ್ನು ಬಿಟ್ಟು, ಮುಂದಿನ ದಾರಿ ಹುಡುಕುವ ಯೋಚನೆಯಲ್ಲಿ ಕಂಗಾಲಾಗಿರುತ್ತಾರೆ.  ತಲತಲಾಂತರದಿಂದ ಇವರು ಹೇಳುತ್ತಾ ಬಂದಿರುವ ಕಥೆಗಳನ್ನು, ಪುರಾಣವನ್ನು ಕೇಳಲು ಇವತ್ತಿನ ಕಾಲದಲ್ಲಿ ಯಾರಿಗೂ ಆಸಕ್ತಿಯೂ ಇಲ್ಲ, ಪುರುಸೊತ್ತು ಇಲ್ಲ. ಹೇಳಲು, ಕಥೆ ಕಟ್ಟಿ ಹಾಡಲು ಇವರಿಗೆ ಬೇರೆ ಕಥೆಯೂ ಗೊತ್ತಿಲ್ಲ.  ಈ ಸಮಯದಲ್ಲಿ, ಗೋಸಾಯಿಗಳು- ಕೃಷ್ಣ ಪರಮಾತ್ಮನ ಭಕ್ತರು- ಒಂದು ಉಂಗುರವನ್ನು ಭಿಕ್ಷೆಯಾಗಿ ನೀಡುತ್ತಾ ’ಈ ಉಂಗುರದಾಗೆ ಲೋಕಕ್ಕೆ ಬೇಕಾದ ಕತೆ ಇದೆ’ ಎಂದು ಹೇಳಿ ಹೊರಡುತ್ತಾರೆ.  ಹೀಗೆ ಆ ಉಂಗುರದ ಮೂಲಕ ಮಲೆನಾಡಿನ ಕತೆ ತೆರೆದುಕೊಳ್ಳುತ್ತದೆ.
ಅಲ್ಲಿಂದೀಚೆಗೆ ಜೋಗಿಗಳಲ್ಲೇ ಕೆಲವರು ಕತೆಯ ಪಾತ್ರಗಳಾದರೆ, ಉಳಿದವರು ಸೂತ್ರಧಾರರಾಗುತ್ತಾರೆ.
ಜೋಗಿಗಳಂತೆಯೆ, ಕಥೆ ಹೇಳುತ್ತಾ, ಹಾಡುತ್ತಾ ಜೀವನ ನಡೆಸುವವರು, ಹೆಳವರು, ಕೊರವಂಜಿಗಳು, ಸುಡುಗಾಡು ಸಿದ್ದರು, ನಾಟಕದ ವಿವಿಧ ಹಂತದಲ್ಲಿ ಈ ಉಂಗುರವು ಜೋಗಿಗಳಿಂದ ಹೆಳವರಿಗೆ, ಹೆಳವರಿಂದ ಸುಡುಗಾಡು ಸಿದ್ದರಿಗೆ ಹಸ್ತಾಂತರವಾಗುತ್ತಾ, ಅವರಿಗೂ ಕಥೆ ಹೇಳುವ ಅವಕಾಶ ಕೊಟ್ಟು ಅವರ ಜೀವನವನ್ನೂ ಕಾಯುತ್ತದೆ. 

ಪ್ರಸ್ತುತ ಕಾಲ ದಿಂದ, ನೂರು-ನೂರಿಪ್ಪತ್ತು ವರ್ಷಗಳ ಹಿಂದಿನ ಕಾಲದ ಕತೆಯನ್ನು ಹೇಳಲು ಬೇಕಾದ ’Transition’ ಗಾಗಿ ನಾಟಕಕಾರರು ಜಾಣ್ಮೆಯಿಂದ ಈ ತಂತ್ರವನ್ನು ಬಳಸಿದ್ದಾರೆ.  ಮೊಬೈಲ್, ಕಂಪ್ಯೂಟರ್, ವಾಟ್ಸಪ್ ಕಾಲದಲ್ಲಿ ಜೋಗಿಗಳಿಗೆ ಸಿಕ್ಕ ಈ ಕತೆ ಅವರ ಕುಲಕಸುಬನ್ನು ಮುಂದುವರೆಸಿ, ಜೀವನ ನಡೆಸುವ ಭರವಸೆ ಹುಟ್ಟುಹಾಕಿದರೆ, ಜೋಗಿಗಳಂತೆಯೇ ಕಂಗಾಲಾಗಿರುವ ಪ್ರೇಕ್ಷಕರಿಗೆ ತಮ್ಮ ನಿನ್ನೆಯನ್ನು ತಿಳಿಸುವುದರ ಮೂಲಕ, ನಾಳೆಯನ್ನು ರೂಪಿಸಿಕೊಳ್ಳುವ ಅವಕಾಶವನ್ನು ಕೊಡುತ್ತದೆ.

 
 
’ಅವರ್ ಬಿಟ್ಟ್ ಇವರ್ ಬಿಟ್ಟ್ ಅವರ್ಯಾರು’

ನಾಟಕದ ಮೊದಲ ರಂಗದ ಭಾಗ, ಪಾತ್ರಗಳ ಪರಿಚಯಕ್ಕೂ, ನಾಟಕ ಪ್ರಾರಂಭವಾಗುವ ವೇಳೆಗೆ ಕತೆಯಲ್ಲಿದ್ದ ಪರಿಸ್ಥಿತಿಯನ್ನು ಅರಿಯುವುದಕ್ಕೂ ಮೀಸಲಾಗಿದೆ ಎಂದು ತಿಳಿಯಬಹುದು.  ಹಾಗಾಗಿ, ಇಲ್ಲಿ ಪಾತ್ರಗಳ ಸಂಭಾಷಣೆಯನ್ನೂ, ಸೂತ್ರಧಾರಿಗಳಾಗಿ ಬರುವ ಜೋಗಿಗಳ ವಿವರಣೆಯನ್ನೂ ಗಮನವಿಟ್ಟು ಕೇಳಬೇಕು.  ತಪ್ಪಿದರೆ, ಮುಂದಿನ ರಂಗಗಳಲ್ಲಿ ಆಗುವ ಸನ್ನಿವೇಶಗಳನ್ನು ತಿಳಿಯಲು ಕಷ್ಟವಾಗುತ್ತದೆ.  ನಾಟಕದ ತುಂಬಾ ಹಲವಾರು ಪಾತ್ರಗಳು ಬರುವುದರಿಂದ ಹಾಗೂ ಈ ಪಾತ್ರಗಳು, ಕುಟುಂಬಗಳು ತಮ್ಮ ತಮ್ಮಲ್ಲೇ ಹೆಣ್ಣನ್ನು-ಗಂಡನ್ನು ಕೊಟ್ಟು ತಂದು ಮಾಡಿರುವುದರಿಂದ ಇಲ್ಲಿನ ಸಂಬಂಧಗಳು ಜಟಿಲವಾದಂತೆ ತೋರುತ್ತದೆ.
ಯಾರು, ಯಾರ ಮನೆಯ ಆಳು?! ಯಾವ ಒಡೆಯ ಯಾವ ಹಳ್ಳಿಯವನು, ಯಾವ ಪೈಕಿಯವನು? ಮತ್ತೊಂದು ಹಳ್ಳಿಯ ಒಡೆಯ ಇವನಿಗೆ ಒಕ್ಕಲೋ, ಗೆಳೆಯನೋ, ವೈರಿಯೋ?! ಹೀಗೆ ಇವುಗಳನ್ನು ತಿಳಿಯದ ಹೊರತು ನಾಟಕ ಸಲೀಸಾಗಿ ನಮ್ಮಲ್ಲಿಳಿಯುವುದಿಲ್ಲ.
ಗದ್ದೆಯ ಕೆಲಸವೆಂದರೆ ನಿರಾಸಕ್ತರಾಗಿ ಇರುವ, ಆದರೆ ಬೇಟೆ ಎಂದೊಡನೆ ಅತ್ಯುತ್ಸಾಹದಿಂದ ಓಡಿ ಬರುವ ಆಳುಗಳು, ತಿಮ್ಮಿಯನ್ನು ಮದುವೆಯಾಗಲೇ ಬೇಕೆಂದು ಹೊರಡುವ ಗುತ್ತಿ, ಗುತ್ತಿಯನ್ನು ಬಿಡದೆ ಸದಾ ಸ್ವಾಮಿನಿಷ್ಠೆಯಿಂದ ಹಿಂಬಾಲಿಸುವ ಅವನ ’ಹುಲಿಯಾ’,  ಸೊಸೆಯನ್ನು ’ಸೀರುಡಿಕೆ’ ಮಾಡಿಕೊಟ್ಟು ನೆಲೆಕಂಡುಕೊಳ್ಳವ ಧೂರ್ತ ಯೋಚನೆಯ ನಾಗತ್ತೆ, ಸಾಲಗಾರ ವೆಂಕ್ಟಪ್ಪನಾಯ್ಕ, ಕಳೆದು ಹೋದ ಹಿರಿಯ ಮಗನನ್ನು ನೆನೆಯುತ್ತಾ ಕೊರಗುವ ಸುಬ್ಬಣ್ಣ ಹೆಗ್ಗಡೆ, ಬ್ರಾಹ್ಮಣರಂತೆ ಮಡಿ-ಮೈಲಿಗೆ ಎಂದು ಶುರುಮಾಡಿರುವ ಶಂಕರ ಹೆಗ್ಗಡೆ, ಅಂತಕ್ಕ ಸೆಟ್ಟಿ, ಅವಳ ಮಗಳು ಕಾವೇರಿ, ಬೈಸಿಕಲ್ಲನ್ನು ಒಂದು ಚಮತ್ಕಾರವೆಂಬಂತೆ ತೋರಿಸಿ ಮರಳು ಮಾಡಿ, ಮತಾಂತರಕ್ಕೆ ಯತ್ನಿಸುವ ಪಾದ್ರಿ, ಅವನಿಗೆ ಜೊತೆಯಾಗಿ ನಿಂತ ದೇವಯ್ಯ, ಆಗಷ್ಟೇ ಮದುವೆಯಾಗಿರುವ ಮುಗ್ದ-ಪ್ರಬುದ್ದ ಜೋಡಿ ಐತ-ಪೀಂಚಲು, ತಾನು ಪ್ರೀತಿಸುತ್ತಿರುವ ಚಿನ್ನವ್ವಳನ್ನು ಸಿಂಭಾವಿಯ ಭರಮೈ ಹೆಗಡೆಯವರಿಗೆ ಮದುವೆ ಮಾಡಿಕೊಡುವ ವಿಷಯ ತಿಳಿದು ಆತಂಕಗೊಳ್ಳುವ ಮುಕುಂದಯ್ಯ. ಹೀಗೆ ಎಲ್ಲರೂ, ಎಲ್ಲ ಸನ್ನಿವೇಶವೂ ಸ್ವಾರಸ್ಯಕರವಾಗಿ ಮೂಡಿಬಂದು, ಮುಂದಿನ ಅಂಕಗಳಿಗೆ ಪ್ರೇಕ್ಷಕರನ್ನ ಸಜ್ಜುಗೊಳಿಸುವಲ್ಲಿ ಯಶಸ್ವಿಯಾಗುತ್ತದೆ.
ಮುಂದಿನ ಅಂಕಗಳಲ್ಲಿ ಕುತೂಹಲಕಾರಿಯಾಗಿ ಸಾಗುವ ನಾಟಕ, ಅಲ್ಲಲ್ಲಿ ವ್ಯವಸ್ಥೆಯ ವಿಡಂಬನೆ ಮಾಡುತ್ತಾ, ಫಿಲಾಸಫಿಯನ್ನು ಹೇಳುತ್ತಾ, ವೆಂಕಟ್ಟಪ್ಪನಾಯ್ಕ-ನಾಗತ್ತೆಯ ಸಂಚನ್ನೂ, ಚೀಂಕ್ರನ ಕಿರಾತಕತನವನ್ನೂ ಬಯಲುಗೊಳಿಸುತ್ತಾ, ಹೆಗ್ಗಡೆಗಳ, ಗೌಡರ ಮನೆಯ ಕೌಟುಂಬಿಕ ಕಥೆಯನ್ನು ಮತ್ತಷ್ಟು ವಿವರಗೊಳಿಸುತ್ತಾ ಸಾಗಿ, ಕೊನೆಗೆ ಜೋಡಿಗಳಿಬ್ಬರೂ,ಎಲ್ಲಾ ಸವಾಲುಗಳನ್ನು ಎದುರಿಸಿ, ತಾವು ಇಚ್ಚಿಸಿದಂತೆ ತಮ್ಮ ಬದುಕ ಕಟ್ಟಿಕೊಳ್ಳಲು ಪ್ರಾರಂಭಿಸುವ ವೇಳೆಗೆ ನಾಟಕ ಅಂತ್ಯಗೊಳ್ಳುತ್ತದೆ

 

“’ಮದುವೆ ಆದ ಮೇಲೆ ನೀನೀಗ ದೊಡ್ಡ ಹೆಗ್ಗಡ್ತಿ ಆಗಿಬಿಟ್ಟಿದ್ದೀಯಾ!”
ಒಮ್ಮೆ, ಐತ ಹಾಗೂ ಪೀಂಚಲು ಏಕಾಂತದಲ್ಲಿ ಏಡಿ ಹಿಡಿಯುವಲ್ಲಿ ಮಗ್ನರಾಗಿದ್ದಾಗ ಅಲ್ಲಿಗೆ ಅಚಾನಾಕ್ಕಾಗಿ ಬರುವ ಮುಕುಂದಯ್ಯ, ಐತನ ಕೈಯಲ್ಲಿ ಹೊಂಬಾಳೆಯಿರುವುದನ್ನು ಗಮನಿಸಿ, ’ಎಲ್ಲಿತ್ತೋ ಹೊಂಬಾಳೆ?! ಬಿದ್ದಿತ್ತೋ ಅಥವಾ ಮರ ಹತ್ತಿ ಉದುರಿಸಿದ್ದೋ?’ ಎಂದು ಕೇಳುತ್ತಾನೆ. ಆಗ ಐತ ಭಯದಿಂದ, “ಬಿದ್ದಿತ್ತು...” ಎಂದು ತಡವರಿಸಿದರೆ,  ಪೀಂಚಲು, ಧೈರ್ಯದಿಂದ, ’ಇಲ್ಲಯ್ಯ, ಹತ್ತಿ ತೆಗೆದದ್ದು’ ಎನ್ನುತ್ತಾಳೆ.  ಅದಕ್ಕೆ ಮುಕುಂದಯ್ಯ, “ಯಾರು ಹತ್ತಿದ್ದು?  ನೀನೋ...ಅವನೋ...” ಎಂದು ಕೇಳಲು, ಪೀಂಚಲು, “ಅಯ್ಯಾ...ನಾನ್ಯಾಕಾ ಹತ್ತಲಿ.  ಅವನೇ ಹತ್ತಿ ಕುಯ್ದುದ್ದು’ ಎಂದುತ್ತರಿಸುತ್ತಾಳೆ.
ಆಗ ಮುಕುಂದಯ್ಯ, ’ಅಲ್ವೇ, ಮೊದಲೆಲ್ಲಾ ನೀನೇ ಮರ ಹತ್ತಿ ಹೊಂಬಾಳೆ ತೆಗೆದುಕೊಡುತ್ತಾ ಇದ್ದೆ ನಮಗೆಲ್ಲಾ?!
ಮದ್ವೆ ಆದ್ಮೇಲೆ ನೀನೀಗ ದೊಡ್ಡ ಹೆಗ್ಗಡ್ತಿ ಆಗಿಬಿಟ್ಟಿದ್ದೀಯಾ’ ಎನ್ನುತ್ತಾನೆ.

ಈ ಮಾತು ಪೀಂಚಲುವನ್ನು ತಮಾಷೆಮಾಡಲು ಹೇಳಲಾಗಿದೆ ಎಂದೆನಿಸಿದರೂ, ನಾಟಕದಲ್ಲಿ ಪೀಂಚಲು ನಿಜ ಅರ್ಥದಲ್ಲಿ ಹೆಗ್ಗಡತಿಯೇ ಆಗಿ ತೋರುತ್ತಾಳೆ.  ಯಾರೊಂದಿಗೆ, ಯಾವ ಸಂದರ್ಭದಲ್ಲಿ ಹೇಗೆ ವ್ಯವಹರಿಸಬೇಕೆಂಬ ಅವಳ ಪ್ರಬುದ್ದತೆಯೇ ಇದಕ್ಕೆ ಸಾಕ್ಷಿ.  ಈಕೆ ಮುಕುಂದಯ್ಯನ ತೋಟದಾಳು. ಹಾಗೆಂದು, ಈಕೆ ಭಯದಿಂದ ಮುಕುಂದಯ್ಯ-ಚಿನ್ನಮ್ಮನಿಗೆ ಸಹಾಯ ಮಾಡುವಂತೆ ತೋರುವುದೇ ಇಲ್ಲ.  ಅಲ್ಲಿ, ತುಳುನಾಡಿನಿಂದ ಬಂದ ಅಂತಕ್ಕ ಸೆಟ್ಟಿ ಹಾಗೂ ಕಾವೇರಿಯನ್ನು ಸುಬ್ಬಣ್ಣ ಹೆಗ್ಗಡೆ ತಮ್ಮ ಒಕ್ಕಲಿನವರಂತೆ ಕಾಣುತ್ತಿದ್ದರೆ, ಇಲ್ಲಿ, ಪೀಂಚಲು ಮುಕುಂದಯ್ಯ-ಚಿನ್ನಮ್ಮನನ್ನು ತನ್ನ ಒಕ್ಕಲಿನವರಂತೆ ಕಂಡು ಅವರಿಗೆ ಸಹಾಯ ಮಾಡುತ್ತಿರುತ್ತಾಳೆ.
ಪ್ರೀತಿಯ ಗಂಡ ಐತನಿಗೆ ಗೊತ್ತಾಗದಂತೆ ಹೂವಳ್ಳಿಗೆ ಕದ್ದು ಬಂದು ಚಿನ್ನಮ್ಮನಿಗೆ ಮುಕುಂದಯ್ಯನ ಬಗ್ಗೆ ತಿಳಿಸುತ್ತಾಳೆ, ಇಷ್ಟವಿಲ್ಲದ ಮದುವೆಯಿಂದ ತಪ್ಪಿಸಿಕೊಳ್ಳಲು ಮನೆ ಬಿಟ್ಟು ಓಡಿ ಬಂದ ತಿಮ್ಮಿ ಹಾಗೂ ಗುತ್ತಿಗೆ ತನ್ನ ಮನೆಯಲ್ಲೇ ಆಶ್ರಯ ನೀಡುತ್ತಾಳೆ, ಅತ್ತ ಕಡೆ ಮುಕುಂದಯ್ಯ-ಚಿನ್ನಮ್ಮ ಹೊಸ ಬಾಳನ್ನು ಆರಂಭಿಸುವಾಗ ಐತನ ಜೊತೆ ಕೂಡಿ ಅವರಿಬ್ಬರಿಗೆ ಆಸರೆಯಾಗಿ ನಿಲ್ಲುವ ಮನಸ್ಸು ಮಾಡುತ್ತಾಳೆ

ಮತ್ತೊಂದು ಅಂಶವನ್ನು ಗಮನಿಸಲೇ ಬೇಕು.  ತಿಮ್ಮಿ ಹಾಗೂ ಗುತ್ತಿ ಒಬ್ಬರನ್ನೊಬ್ಬರು ಪ್ರೀತಿಸಿರುತ್ತಾರೆ.  ತಿಮ್ಮಿಯ ಅಪ್ಪನ ಆಸೆಬುರುಕತನಕ್ಕೆ, ಮೂರ್ಖತನಕ್ಕೆ ಮಗಳ ಬದುಕು ಹಾಳಾಗುವುದನ್ನು ಸಹಿಸದ ತಿಮ್ಮಿಯ ಅವ್ವ ಸೇಸಿಯು ತಿಮ್ಮಿಯನ್ನು ಗುತ್ತಿಯೊಡನೆ ತಾನೇ ಖುದ್ದಾಗಿ ಕಳುಹಿಸಿಕೊಡುತ್ತಾಳೆ.  ತಿಮ್ಮಿ ಕಾಣೆಯಾಗಿರುವ ಸಂಗತಿ ತಿಮ್ಮಿಯ ಅಪ್ಪ ದೊಡ್ಡಬೀರನಿಗೆ ಗೊತ್ತಾದಾಗಲೂ, ತನಗೆ ಏನೂ ಗೊತ್ತೇ ಇಲ್ಲವೆಂಬಂತೆ ನಟಿಸುತ್ತಾಳೆ. 

ಆದರೆ, ಚಿನ್ನಮ್ಮ ಎಳೆಯ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ನತದೃಷ್ಟೆ.  ತಂದೆಯಾದ ವೆಂಕ್ಟಪ್ಪನಾಯ್ಕ ತನ್ನ ಮಗಳ ವಯಸ್ಸಿನ ನಾಗಕ್ಕಳ ಜೊತೆ ಕೂಡಿಕೆಗೆ ಹವಣಿಸುತ್ತಿರುವಾಗ, ಚಿನ್ನಮ್ಮಳಿಗೆ ಇವನಲ್ಲಿ ತಾಯಿಯಾದರೂ ಹೇಗೆ ಕಾಣಬೇಕು?!
ಇವಳ ಯೋಗಕ್ಷೇಮಗಳನ್ನು ನೋಡಿಕೊಂಡಿದ್ದವಳು ಇವಳ ಅಜ್ಜಿ ಹಾಗೂ ಜೊತೆಯಾಗಿದ್ದವಳು ನಾಗಕ್ಕ ಮಾತ್ರ.  ಆದರೆ, ಚಿನ್ನಮ್ಮಳನ್ನು ಮುಕುಂದಯ್ಯನೊಂದಿಗೆ ಸೇರಿಸುವಲ್ಲಿ ಪೀಂಚಲು ಥೇಟ್ ಚಿನ್ನಮ್ಮಳ ತಾಯಿಯಂತೆಯೇ ಕಾಣುತ್ತಾಳೆ. 
ತನ್ನ ಹಾಗೂ ಮುಕುಂದ ಭಾವನ ಮದುವೆಗೆ ಎದುರಾಗುತ್ತಿರುವ ಸವಾಲುಗಳಿಂದ ಅಧೀರಳಾಗುವ ಚಿನ್ನಮ್ಮಳನ್ನು ಕಂಡು, ಪೀಂಚಲು, “ಹೆದರಬ್ಯಾಡಿ ಚಿನ್ನಕ್ಕ.  ನೋಡಾನ.  ದ್ಯಾವರಿದ್ದಾನೆ! ಒಂದು ವ್ಯಾಳೆ ಕೈಮೀರ್ತು ಅಂದ್ರೆ ನಾವೆಲ್ಲಾ ಇಲ್ಲೇನು?!”
ಎಂದು ಹೇಳುವಾಗಲೂ,
ಹಾಗೂ
ಮುಂದೆ, ಚಿನ್ನಮ್ಮ ತನ್ನ ಹೂವಳ್ಳಿಯ ಮನೆ ಬಿಟ್ಟು ಪೀಂಚಲುವಿನ ಜೊತೆಯಲ್ಲಿರುವಾಗ, ಪೀಂಚಲು ತನ್ನ ಹಾಗೂ ಐತನ ದಾಂಪತ್ಯದ ಬಗ್ಗೆ ಹೇಳುತ್ತಾ, ಸಂಸಾರದ ಬಗ್ಗೆ ತಿಳಿಸಿಕೊಡುವಾಗಲಂತೂ ಪೀಂಚಲು ಚಿನ್ನಮ್ಮಳ ತಾಯಿಯೇ ಆಗಿರುತ್ತಾಳೆ.
 

“ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ”

ಈ ಕಥೆ ನಡೆಯುತ್ತಿರುವುದು ನೂರು-ನೂರಿಪ್ಪತ್ತು ವರ್ಷಗಳ ಹಿಂದೆ; ಜಾತಿ ಪದ್ದತಿಯೆಂಬುದು ಗಾಢವಾಗಿ ಬೇರುಬಿಟ್ಟಿದ್ದ ಸಮಯ.  ಆಗ ಅಸ್ಪ್ರುಶ್ಯತೆಯೂ ಇತ್ತು ಎಂಬುದನ್ನ ಬಿಡಿಸಿ ಬೇರೆ ಹೇಳಬೇಕಿಲ್ಲವೆನಿಸುತ್ತದೆ.  ಹೊಲೆಯರೆಂಬುವರ ಶ್ರಮದಿಂದ ಗದ್ದೆಯಲ್ಲಿ ಬೆಳೆದು ಬಂದ ಭತ್ತವನ್ನು ಪಡೆಯುತ್ತಿದ್ದ, ಅದರ ಅನ್ನವನ್ನು ತಿನ್ನುತ್ತಿದ್ದ ಮೇಲ್ಜಾತಿಯವರೆಂದು ಕರೆಸಿಕೊಳ್ಳುತ್ತಿದವರು, ಅದೇ ಹೊಲೆಯರನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲ.  ನಾಟಕದ ಪೂರ್ತಿ ಆಗಾಗ ಈ ಅಂಶ ಎದ್ದು ಕಾಣಿಸುತ್ತದೆ.  ಗುತ್ತಿ ತಾನು ತಂದ ಪತ್ರವನ್ನು ಸುಬ್ಬಣ್ಣ ಹೆಗ್ಗಡೆಯವರಿಗೆ ಕೊಡುವಾಗ, ಕಣ್ಣಾಪಂಡಿತ ಗುತ್ತಿಗೆ ಮದ್ದನ್ನು, ಅಂತ್ರವನ್ನು ಕೊಡುವಾಗ, ಹೊಲೆಯರೆಲ್ಲರೂ ಹಂದಿ ಬೇಟೆಯಾಡುವ ಸಂದರ್ಭದಲ್ಲಿ ಶಂಕರ ಹೆಗ್ಗಡೆ ಮನೆ ಮುಂದಿನ ತುಳಸಿ ಕಟ್ಟೆಯನ್ನು ಬೀಳಿಸಿದಾಗ, ದೇವಮ್ಮ ತನ್ನ ಮನೆಗೆ ಬಂದ ಪಾದ್ರಿಗೆ ಊಟಕ್ಕೆ ಬಡಿಸಲು ಪಾತ್ರೆಯನ್ನು ಅವಳ ಮನೆಯಾಳಿಗೆ ಕೊಟ್ಟಾಗ, ಹೀಗೆ ನಾಟಕದುದ್ದಕ್ಕೂ ಇದು ಕಾಣಿಸುತ್ತಾ ಹೋಗುತ್ತದೆ. 
ವಿಶೇಷವೆಂದರೆ, ಈ ರೀತಿಯ ಧೋರಣೆ ಕೇವಲ ಮೇಲ್ಜಾತಿಯವರೆಂದೆನಿಸಿಕೊಂಡಿದ್ದ ಹೆಗ್ಗಡೆಯವರ, ಗೌಡರ ಮನೆಯವರಲ್ಲಿ ಮಾತ್ರವಲ್ಲ, ಹೊಲೆಯರಲ್ಲೂ ಇತ್ತು ಎನ್ನುವುದು.  ಉದಾಹರಣೆಗೆ, ದೇವಯ್ಯನ ಮನೆಗೆ ಪಾದ್ರಿ ಜೀವರತ್ನನನ್ನು ಊಟಕ್ಕೆಂದು ಕರೆತಂದಾಗ, ಅವನಿಗೆ ಊಟ ಬಡಿಸುವ ದೇವಯ್ಯನ ಮನೆ ಆಳು ಸಹ, ಆ ಪಾದ್ರಿಯನ್ನು ಮುಟ್ಟಿಸಿಕೊಳ್ಳದಂತೆಯೇ ದೂರದಿಂದ ಊಟ ಬಡಿಸುತ್ತಾನೆ.  ಮತ್ತೊಂದು ಕಡೆ, ಸಾಬಿ ಅಜೀಜು ಹೊಲೆಯರ ಕೇರಿಗೆ ಹೋದಾಗ, ದೊಡ್ಡಬೀರ ’ನಮ್ಮ ಜಾತಿ ಕೆಟ್ಟು ಹೋಗ್ತದೆ, ನಮಗೂ ದೇವರು, ದಿಂಡರು ಅವ್ರೆ, ನೀವು ನಮ್ಮ ಕೇರಿಗೆ ಬರಬ್ಯಾಡ್ರಿ’ ಅಂತ ಕಿರುಚಾಡಿರುತ್ತಾನೆ.

ಆದರೆ, ಈ ರೀತಿಯ ಧೋರಣೆ ನಮಗೆ ಐತ-ಮುಕುಂದಯ್ಯ, ಪೀಂಚಲು-ಚಿನ್ನಕ್ಕರಲ್ಲಿ ಕಾಣುವುದಿಲ್ಲ. ಪೀಂಚಲು ತಾನು ತಂದ ಸುದ್ದಿಯನ್ನು ಗುಟ್ಟಾಗಿ ತಿಳಿಸಲು ಚಿನ್ನಕ್ಕನ ಕೈಯನ್ನು ಹಿಡಿದು ಪಕ್ಕಕ್ಕೆ ಎಳೆದಾಗಲೂ, ಚಿನ್ನಕ್ಕ ಹೂವಳ್ಳಿ ಬಿಟ್ಟು ಬಂದಾದ ಮೇಲೆ ಪೀಂಚಲುವಿನ ಜೊತೆಯಿರುವಾಗಲೂ, ಮುಕುಂದಯ್ಯ ಐತನೊಂದಿಗೆ ಮಾತನಾಡುವಾಗಲಿ ಅವರಿಗೆ ಈ ವಿಷಯ ಭಾದಿಸಿದಂತೆ ಕಾಣುವುದಿಲ್ಲ.  ಅತ್ತ ಕಡೆ, ದೇವಯ್ಯ ನಮ್ಮಲ್ಲಿರುವ ಮೂಢ ಆಚರಣೆಗಳನ್ನು ನಿಲ್ಲಿಸಬೇಕು ಎಂದು ಉತ್ಸಾಹಿಯಾಗಿ, ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಕ್ರೈಸ್ತ ಮತದೆಡೆಗೆ ನೋಡುತ್ತಿರುತ್ತಾನೆ.  ಇತ್ತ ಕಡೆ, ಮುಕುಂದಯ್ಯ ಹಾಗೂ ಚಿನ್ನಕ್ಕ, ಅವರ ನಡುವೆಯೇ ಇರುವ ಪ್ರೀತಿ-ಸ್ನೇಹಗಳನ್ನು ಗುರುತಿಸುತ್ತಾ, ಅಡೆ-ತಡೆಗಳನ್ನು ಮೀರುತ್ತಾ ಉಳಿದವರಿಗೆ ಮಾದರಿಯಾಗಿರುತ್ತಾರೆ; 
ದೂರದ ದೇಶದಲ್ಲಿ ನಿಂತು, ಭಾರತದ ವೇದಾಂತದ ಸಾರವನ್ನು ಇಡೀ ಜಗತ್ತಿಗೇ ಸಾರಿದ ವಿವೇಕಾನಂದರ ಮಾತಿನಂತೆ.

 

“ಇಲ್ಲಿ ಎಲ್ಲಕ್ಕೂ ಇದೆ ಅರ್ಥ, ಯಾವುದೂ ಅಲ್ಲ ವ್ಯರ್ಥ”
ನಾಟಕದ ಉದ್ದಕ್ಕೂ ಗುತ್ತಿಯ ಜೊತೆಗೇ ಇರುವ ಆತನ ನಾಯಿ ಹುಲಿಯಾ, ಗುತ್ತಿ ತನ್ನ ಹೊಸ ಬದುಕನ್ನ ಪ್ರಾರಂಭಿಸುವ ಮುನ್ನ ಅವನಿಂದ ದೂರಾಗುತ್ತದೆ. 
ಬಹು ಮುಖ್ಯ ಸಂದರ್ಭಗಳಲ್ಲಿ ಇಬ್ಬರೂ ಜೋಡಿಗಳಿಗೆ ಆಶ್ರಯ ನೀಡುವುದು ಹುಲಿಕಲ್ಲ್ ನೆತ್ತಿ ಎಂಬ ಜಾಗ.
ಹೀಗೆ ಕೆಲವು ವಿಷಯಗಳು ಕೇವಲ ರೋಚಕತೆಗಾಗಿಯೋ, ಸಾಹಸಕ್ಕಾಗಿಯೋ ಅಲ್ಲದೇ, ಯಾವುದೋ ಮುಖ್ಯ ವಿಷಯವೊಂದರ ಹೋಲಿಕೆಯಾಗಿರಬಹುದಾ?! ಗೊತ್ತಿಲ್ಲ.

ಮೊದಲೇ ಹೇಳಿದಂತೆ ಇದು ಕೇವಲ ಮದುವೆಯ ಕಥೆಯಲ್ಲ.  ಆದರೆ, ಇಲ್ಲಿ, ಆಗಷ್ಟೇ ಮದುವೆಯಾಗಿ ಹೊಸ ಜೀವನದ ಸುಖ-ಸಂತೋಷಗಳನ್ನು ಕಾಣುತ್ತಿರುವ ಪೀಂಚಲು ಇದ್ದಾಳೆ, ತಾವು ಇಷ್ಟಪಟ್ಟವರೊಂದಿಗೆ ಮದುವೆಯಾಗ ಬಯಸುವ ಚಿನ್ನಕ್ಕ ಹಾಗೂ ತಿಮ್ಮಿ ಇದ್ದಾರೆ, ಮದುವೆಯಾಗಿ ಮಗುವನ್ನು ಪಡೆಯದೆ, ಗಂಡನನ್ನು ಕಳೆದುಕೊಂಡು, ನಾಗತ್ತೆಯ ಹುನ್ನಾರಕ್ಕೆ ಬಲಿಯಾದ ನಾಗಕ್ಕ ಇದ್ದಾಳೆ, ಕಾಣೆಯಾದ ಗಂಡನ ನೆನೆಪಿನಲ್ಲಿ ಮಗನ ಜೊತೆ ದಿನ ನೂಕುತ್ತಿರುವ ರಂಗಮ್ಮ ಇದ್ದಾಳೆ, ಮದುವೆಯಾಗಿ ಗಂಡನೊಂದಿಗೆ ಸುಖ ಜೀವನ ನಡೆಸಬೇಕಿದ್ದ ಕಾವೇರಿ, ಮೋಸಕ್ಕೆ ಬಲಿಯಾಗುತ್ತಾಳೆ, ಮದುವೆ ಗಂಡಿಗಾಗಿ ಕಾದಿರುವ ಮಂಜಮ್ಮಳಿದ್ದಾಳೆ. ಮದುವೆಯಾಗದೇ ಉಳಿದಿರುವ ಲಕ್ಕಮ್ಮಳಿದ್ದಾಳೆ, ಮಕ್ಕಳಾಗಿಲ್ಲವೆಂಬ ಕಾರಣಕ್ಕಾಗಿ ವಯಸ್ಸಾಗಿರುವ ತನ್ನ ಗಂಡನಿಗೆ ಮತ್ತೊಂದು ಮದುವೆ ಮಾಡಿಸಲು ಸಿದ್ದವಿರುವ ಜಕ್ಕಮ್ಮಳಿದ್ದಾಳೆ. ಈ ಎಲ್ಲಾ ಗಟ್ಟಿಗಿತ್ತಿಯರಿಂದಾಗಿ ಕಾದಂಬರಿಗೆ ಮಲೆಗಳಲ್ಲಿ ಮದುಮಗಳು ಎಂದು ಶೀರ್ಷಿಕೆ ಆಯಿತೇ?! ಗೊತ್ತಿಲ್ಲ.

ಕಾದಂಬರಿ ಓದಿದಾಗಲಾದರೂ ಅಥವಾ ಬಲ್ಲವರಿಂದ ತಿಳಿದಾದರೂ ಇವುಗಳನ್ನು ಕಂಡುಕೊಳ್ಳಲು ಸಾಧ್ಯವೋ? ಪ್ರಯತ್ನಿಸಬೇಕು J 

 

“ನೀರೆಲ್ಲವೂ ತೀರ್ಥ; ತೀರ್ಥವೂ ನೀರೇ”
ಮದುಮಗಳು ನಾಟಕವನ್ನು ನೋಡಿದ ಯಾರೋ ಒಬ್ಬರೂ, ’ಅರೆ! ಕುವೆಂಪುರವರ ಈ ಕಾದಂಬರಿಯೂ ಮದುಮಕ್ಕಳ ಬಗ್ಗೆ, ಮದುವೆ ಬಗ್ಗೆ ಇದೆ, ಇವತ್ತಿನ ಕನ್ನಡ ಸೀರಿಯಲ್‍ಗಳೂ ಸಹ ಯುವ ಜೋಡಿಗಳ ಮದುವೆ ಬಗ್ಗೆ, ಕುಟುಂಬ ಕಲಹಗಳ ಬಗ್ಗೆಯೇ ಇದೆ!’ ಎಂದು ಹರಟುತ್ತಿದ್ದರು.