Monday, June 27, 2011

ಅವಳು, ಅವನು ಮತ್ತು ನೆಟ್ ವರ್ಕ್.....

"ಅಲ್ಲಿ ಮೋಡಗಳ ದೊಡ್ಡ ಗುಂಪೇ ಇದೆ.

ಜೊತೆಗೆ, ಜೋರು ಗಾಳಿ ಬೀಸುತ್ತಾ ಇದೆ.

ಇದು, ಮಳೆ ಬರುವ ಸೂಚನೇನೊ ಅಥವಾ

ಮೋಡಗಳನ್ನ ಓಡಿಸೋ ಯೋಚನೇನೊ...?!!"






---------------------------------------------------------------------------------




ಕಳೆದ ೧೦ ನಿಮಿಷದಲ್ಲಿ, ಅವನು ಅವಳಿಗೆ ೮ ಮೆಸೇಜ್ ಕಳಿಸಿದ್ದ..!!


--


ಯಾವುದೋ ಒಂದು ಮಹತ್ತರ ಸತ್ವ ಪರೀಕ್ಷೆಗಾಗಿ, ಎರಡು ದಿನದಿಂದ ಅವಳು ಅವನೊಂದಿಗೆ ಮಾತಾಡುತ್ತಿರಲಿಲ್ಲ..!! ಈ ವಿಷಯದಲ್ಲಿ ಅವಳು ಸ್ಪಷ್ಟವಾಗಿದ್ದಷ್ಟು, ಅವನು ಸ್ಪಷ್ಟವಾಗಿರಲಿಲ್ಲ...ಮನಸನ್ನ ಗೊಂದಲದ ಗೂಡು ಮಾಡಿಕೊಂಡು,  ಹೇಗೋ ಒಂದು ರಾತ್ರಿ ಕಳೆದಿದ್ದ..


ಮಾರನೇ ದಿನ ಎದ್ದವನೇ, ಅವಳಿಗೆ ಮೆಸೇಜ್ ಮಾಡಿದ್ದ..! ಆದರೆ, ಅವಳು ತನ್ನ ಸ್ಟೈಕ್ ನಿಲ್ಲಿಸೋ ಸೂಚನೇನೆ ಇರಲಿಲ್ಲ..ಅವನ ಕಡೆಯಿಂದ ಮೆಸೇಜ್ ಗಳಿದ್ದವೇ ಹೊರತು ಅವಳ ಕಡೆಯಿಂದ ಉತ್ತರವಿರಲಿಲ್ಲ.....!!


ಅವಳು ಮೌನದ ಆಭರಣ ಧರಿಸಿ ಕೂತಿದ್ದರೆ, ಅವನು ಅವಳ ಮಾತಿಗೆ ಹಪಹಪಿಸಿ, ಧ್ಯಾನಿಸುತ್ತಿದ್ದ.....


ಅಂತು ಎರಡು ದಿನದ ನಂತರ ಮೆಸೇಜ್ ಮಾಡಿದಳು.!!! ಅವಳ ಪರೀಕ್ಷೆ ಮುಗಿದಿತ್ತೋ ಅಥವಾ ಅವಳಿಗೆ ಪರೀಕ್ಷೆ ಬೇಡವೆಂದೆನಿಸಿತ್ತೋ ಗೊತ್ತಿಲ್ಲ.


ಪ್ರತಿದಿನ ಮಧ್ಯಾಹ್ನ ಅವರಿಬ್ಬರು ಊಟ ಮಾಡುವ ಸಮಯಕ್ಕೆ ಸರಿಯಾಗಿ, ಅವತ್ತು ಸಹ "ಊಟ ಮಾಡೋಣ ಬಾ" ಅಂತ ಮೆಸೇಜ್ ಮಾಡಿ, ಮಾತಾಡುವ ಮೂಲಕ ತನ್ನ ಮೌನ ಮುರಿದ್ದಿದ್ದಳು..!!!


ಅವಳ ಆದೊಂದು ಮೆಸೇಜ್ ಅವನ ಎರಡು ದಿನಗಳ ಬೇಸರವನ್ನು ನೀವಾಳಿಸಿ ಎಸೆದಿತ್ತು.!! :)


ಅದೇ ಖುಷಿಯಲ್ಲಿ, "ಸರಿ, ಸರಿ ಊಟ ತನ್ನಿ, ನಾನು ತರುತ್ತೀನಿ" ಎಂದು ಉತ್ತರಿಸಿದ್ದ.


ಆದರೆ, ಆವಳಿಂದ ಯಾವುದೇ ಪ್ರತಿ ಉತ್ತರ ಬರಲೇ ಇಲ್ಲ..!! ಹಾಗಾಗಿ, ಮುಂದಿನ ೧೦ ನಿಮಿಷದಲ್ಲಿ ೮ ಮೆಸೇಜ್ ಕಳಿಸಿದ್ದ..!!


--


ಅವನಿಗೆ ಮತ್ತೆ ಆತಂಕ...!! ಅವಳ ಮತ್ತು ಅವಳ ಮೆಸೇಜಿಗಾಗಿ ಕಾದು ಕೂತಿದ್ದ ಅವನಿಗೆ, ಅವಳಿಂದ ಮೆಸೇಜ್ ಬಂದಿದ್ದೆ ಭ್ರಮೆಯೇನೊ ಎಂದೆನಿಸಿ, ಮೊಬೈಲ್ ನ ಇನ್ ಬಾಕ್ಸ್ ನೋಡಿ, ಮೆಸೇಜ್ ಬಂದಿರುವುದನ್ನು ಖಾತ್ರಿ ಮಾಡಿಕೊಂಡ.

ಹಾಗೆ, ಸೆಂಟ್ ಐಟೆಮ್ಸ್ ನೋಡಿದಾಗಲೆ ತಿಳಿದಿದ್ದು, ಅವನು ಕಳಿಸಿದ್ದ ಅಷ್ಟೂ ಮೆಸೇಜ್ ಗಳು ಅವಳಿಗೆ ತಲುಪೇ ಇಲ್ಲ ಎಂದು..!!!


--


     ಅವರಿಬ್ಬರ ಮಧ್ಯೆ ಸದ್ಯಕ್ಕೆ ಇದ್ದ ಏಕೈಕ ತೊಂದರೆ ಅಂದರೆ, ಇದೇ ಇರಬೇಕು. ಕ್ಷಮಿಸಿ!! ಅವರಿಬ್ಬರ ಮಧ್ಯೆ ಅಂದರೆ ತಪ್ಪಾಗುತ್ತೆ...ಅವರಿಬ್ಬರ ಮೊಬೈಲ್ ಮಧ್ಯೆ ಇದ್ದ ತೊಂದರೆ ಅಂತ ಹೇಳೋದೆ ಸರಿ.

ಅವನ ಮೊಬೈಲ್ ಬ್ಯಾಟರಿ ಅಗಾಗ ಆತ್ಮಹತ್ಯೆ ಮಾಡಿಕೊಳ್ಳುತಿತ್ತು.(ದೇಹವಿದ್ದೂ, ಜೀವವಿಲ್ಲದಂತ ಪರಿಸ್ಥಿತಿ.....)
ಅವಳ ಮೊಬೈಲ್ ನೆಟ್ ವರ್ಕ್ ಹೇಳದೆ, ಕೇಳದೆ ’ಕೋಮ’ ಸ್ಥಿತಿ ತಲುಪುತಿತ್ತು. (ಜೀವ ಇದ್ದು, ದೇಹಾನೂ ಇದ್ದು, ಚಲನೆ ಇಲ್ಲದಂತಹ,ಅರಿವೇ ಇಲ್ಲದಂತಹ ಪರಿಸ್ಥಿತಿ...)


ಈ ಪರಸ್ಪರ ಮೊಬೈ ಲ್ ತೊಂದರೆ ಇಂದ ಅವರಿಬ್ಬರ ನಡುವಿನ ಮಾತು ಎಷ್ಟೋ ಸಲ ನಿಧಾನ ಆಗಿದೆ...ಕೆಲವೊಂದು ಸಲ ನಿಂತೇ ಹೋಗಿದೆ.

ಇಂಥದೊಂದು ತೊಂದರೆ ಇದೆ ಅಂತ ಗೊತ್ತಿದ್ರು, ಅದನ್ನ ಅವರಿಬ್ಬರು ಒಪ್ಪದಿದ್ದರೂ, ಆ ತೊಂದರೆ ಇದ್ದದ್ದು, ಸೂರ್ಯ ಚಂದ್ರರ ಆಣೆಗೂ ಸತ್ಯ..ಸತ್ಯ..ಸತ್ಯ..!! :)


--


     "ಥತ್, ಡಬ್ಬಾ ನೆಟ್ ವರ್ಕ್...ಮತ್ತೆ, ಕೋಮ ಸ್ಟೇಜ್ ಗೆ ಹೋಗಿಬಿಡ್ತು..!! ಸರಿಯಾದ ಟೈಮಿಗೆ ಕೈ ಕೊಡ್ತು..!!"

ಅಂತ ಅವಳ ಮೊಬೈಲ್ ನೆಟ್ ವರ್ಕ್ ಮೇಲೆ  ಸಿಡುಕಿದ..!!

"ಅವಳು ಪರಿಸ್ಥಿತಿ ಅರ್ಥ ಮಾಡಿಕೊಂಡು ಮಾತಾಡ್ತಾ ಇದ್ದಾಳೇ...ಆದೇ ರೀತಿ ಈ ಮೊಬೈಲ್ ನೆಟ್ ವರ್ಕ್ ಅರ್ಥ ಮಾಡಿಕೊಳ್ಳೋ ಹಾಗಿದ್ರೆ, ಈ ಸಮಸ್ಯೆನೇ ಇರ್ತಿರಲಿಲ್ಲ..!! ಎಲ್ಲ ನಮ್ಮ ಹಣೆಬರಹ"

ಅಂತ ತನ್ನ ಮನಸ್ಸಲ್ಲೇ ಗೊಣಗಿಕೊಂಡ.






"ಮೈ ಡಿಯರ್ ಫ್ರೆಂಡ್,...."
ಆಂತ ಯಾರೊ ಆತ್ಮೀಯಾವಾಗಿ ಕರೆದಂತಾಯಿತು.

’ಯಾರಿರಬಹುದು?’ಅಂತ ನೊಡಿದರೆ, ಯಾರು ಇರಲಿಲ್ಲ.


ಮತ್ತೆ ಬಂದು ತಾನಿದ್ದ ಜಾಗದಲ್ಲಿ ಕೂತು, ಅವಳಿಂದ ಮೆಸೇಜ್ ಬಂದಿರಬಹುದ ಅಂತ ನೋಡುತ್ತಿರುವಾಗ..ಮತ್ತೆ ಅದೇ ಆತ್ಮೀಯ ದ್ವನಿ.


"ಹೆಲೋ ಫ್ರೆಂಡ್, ನನ್ನ ಗುರುತು ಹಿಡಿಯೋಲ್ವ, ನನ್ನ ಜೊತೆ ಮಾತಾಡೋಲ್ವ.." ಎಂದಿತು.


"ನನ್ನದೇ ನನಗಾಗಿದೆ,...ಇದ್ಯಾರಪ್ಪ ಈ ಹೊತ್ತಲ್ಲಿ...!! ಯಾರಿರ ಬಹುದು..?!"
ಅಂತ ಮನಸಲ್ಲೇ ಸಿಡುಕಿದ.


ಅವನ ಸಿಡುಕಿಗೆ, ಉತ್ತರವೆಂಬಂತೆ,

"ಹ್ಹ..ಹ್ಹ..ಹ್ಹ... ನಿನ್ನ ಸದ್ಯದ ಸಿಡುಕಿಗೆ, ಬೇಸರಕ್ಕೆ ಕಾರಣನಾದ ’ನೆಟ್ ವರ್ಕ್’" ಎಂದಿತು ಆ ಧ್ವನಿ..!!


"ಏನು..!? ನೆಟ್ ವರ್ಕಾ..?!! ನೆಟ್ ವರ್ಕ್ ನನ್ನ ಜೊತೆ ಮಾತಾಡ್ತಾ ಇದ್ಯಾ..!?!!"


"ಹೌದು...ಆಗೊಮ್ಮೆ, ಈಗೊಮ್ಮೆ, ನಿನ್ನ ಮೆಸೇಜ್ ನ ಅವಳಿಗೆ ಕಳುಹಿಸೊದರಲ್ಲಿ, ತಡ ಮಾಡುವ, ನಿನ್ನಿಂದ ’ಡಬ್ವಾ’ ಅಂಥ ಕರೆಯಿಸಿಕೊಳ್ಳುವ ನೆಟ್ ವರ್ಕ್ ಜೊತೇನೆ ನೀನು ಮಾತಾಡ್ತಾ ಇರೋದು.."


"ಸುಮ್ನೆ ಇರು..!! ಆಗೊಮ್ಮೆ, ಈಗೊಮ್ಮೆ ಅಂತೆ..!! ಆಗೊಮ್ಮೆ, ಈಗೊಮ್ಮೆ ಅಲ್ಲ... ಪದೇ ಪದೇ....ಪದೇ ಪದೇ ಹೀಗೆ, ಮೆಸೇಜ್ ಸರಿಯಾದ ಟೈಮಿಗೆ ತಲುಪಿಸದೆ, ಬಹಳ ತೊಂದರೆ ಕೊಡ್ತೀಯ ನೀನು..!!"


"ಕ್ಷಮಿಸಬೇಕು, ನಿಮಗೆ ತೊಂದರೆ ಕೊಡುವುದು ನನ್ನ ಉದ್ದೇಶ ಅಲ್ಲ... ದೇವರ ಸೃಷ್ಟಿ ನೀವು...ಮನುಷ್ಯರು...ನೀವೇ ಪೂರ್ಣ ಅಲ್ಲ...ಇನ್ನು, ನಿಮ್ಮಿಂದ ಆದವರು ನಾವು, ನಮಗೆ ದೋಷ ಇರೊದಿಲ್ವೇ...?! ಪ್ರಕೃತಿ ಮುಂದೆ, ಅಡೆ ತಡೆ ಇದ್ದೇ ಇರುತ್ತೆ....ನಾವು ಯಾವತ್ತಿಗೂ, ಪ್ರಕೃತಿನ ಮೀರೋಕೆ ಸಾಧ್ಯಾನೆ ಇಲ್ಲ.."


"ಮ್ ಮ್....ಹೌದು...ನೀನ್ ಹೇಳುವುದು ಸರಿಯಾಗಿಯೆ ಇದೆ....ಆದರೂ...ಒಂದೆರಡು ನಿಮಿಷ ನಿಧಾನ ಅಂದ್ರೆ ಪರವಾಗಿಲ್ಲ... ಸಹಿಸಬಹುದು...ಆದರೆ, ಅದಕ್ಕೂ ಮೀರಿ ಕೆಲವೊಮ್ಮೆ, ನೀನು ನಿಧಾನ ಮಾಡಿಬಿಡ್ತೀಯ..ಆಗೆಲ್ಲ ನಿನ್ನ ಮೇಲೆ ಸಿಟ್ಟು ಬರುತ್ತೆ.!!"


ಅವನು ಸಿಡುಕುತ್ತಾ ದೂರಿದ ಈ ಪರಿಗೆ, ಅಷ್ಟೇ ಶಾಂತವಾಗಿ ನಗುತ್ತಾ..


":) ನಿನಗೊಂದು ಮಾತು ಹೇಳ್ತೀನಿ, ಕೇಳು...ಹಾಗೆ ಒಬ್ಬರನ್ನೊಬ್ಬರು ಮಿಸ್ ಮಾಡಿಕೊಂಡಾಗಲೆ, ಆತ್ಮೀಯತೆ ಹೆಚ್ಚಾಗೋದು... ನಾನು ಮೆಸೇಜ್ ತಲುಪಿಸುವುದು ನಿಧಾನ ಆದಾಗ, ನನ್ನ ಮೇಲೆ, ಸಿಟ್ಟು ಮಾಡಿಕೊಳ್ಳಬೇಡ...ಬದಲಿಗೆ, ನೀವಿಬ್ಬರು, ಒಬ್ಬರನೊಬ್ಬರು ಎಷ್ಟು ಹಚ್ಚಿಕೊಂಡಿದ್ದೀರ ಅಂತ  ನೆನೆದು ಖುಷಿಯಾಗು.." ಅಂದಿತು.


ಈ ಮಾತಿಗೆ ಏನು ಹೇಳಬೇಕೆಂದು ತಿಳಿಯದೆ, ಮನಸ್ಸಲ್ಲೇ ಖುಷಿ ಪಟ್ಟು ಸುಮ್ಮನಾಗಿದ್ದ. ಹಿಂದೆಯೇ...ಮತ್ತೊಂದು ವಿಷಯ ನೆನಪಾಗಿತ್ತು...!!


"ಸರಿ.... ಹೀಗೆ ಒಂದೆರಡು ನಿಮಿಷ ತಡ ಆದರೆ ಪರವಾಗಿಲ್ಲ...ಆದರೆ, ಒಂದೆರಡು ದಿನಗಳಷ್ಟು ತಡವಾದರೆ ತುಂಬಾ ಬೇಸರ ಆಗುತ್ತೆ, ಸಿಟ್ಟು ಬರುತ್ತೆ.."


"ಓಹ್, ಒಂದು ತಿಂಗಳ ಹಿಂದೆ, ಊರಿಗೆ ಹೋಗಿದ್ದಾಗ, ನೆಟ್ ವರ್ಕ್ ಸಿಗದೆ, ನೀನು ಅವಳು ಒಂದು ದಿನ ಮಾತಾಡೊಕ್ಕೆ ಆಗದೇ ಇರದುದರ ಬಗ್ಗೆ ಹೇಳುತ್ತಿದ್ದೀಯ..?!"


"ಹೌದು ಮತ್ತೆ...!! ಅವಳ ಜೊತೆಯಿದ್ದ, ಎಲ್ಲರ ಮೊಬೈಲ್ ನಲ್ಲೂ ನೆಟ್ ವರ್ಕ್ ಇದೆ, ಅದರಿಂದ ಕಾಲ್ಸ್ ಹೋಗ್ತಾ ಇವೆ, ಅವರ ಮೊಬೈಲ್ ಗೆ ಕಾಲ್ಸ್ ಬರ್ತಾ ಇವೆ... ಅವಳೊಬ್ಬಳ ಮೊಬೈ ಲ್ ನಲ್ಲಿ ಮಾತ್ರ ನೆಟ್ ವರ್ಕ್ ಇಲ್ಲ, ಸಿಗ್ನಲ್ ಇಲ್ಲ... ಆ ಒಂದಿನ ಇಬ್ಬರೂ ಮಾತಾಡೋಕೆ ಆಗದೆ, ಒಬ್ಬರನ್ನೊಬ್ಬರು ವಿಚಾರಿಸಿಕೊಳ್ಳದೆ ಎಷ್ಟು ಕಷ್ಟ, ನೋವು, ಬೇಸರ ಆಗಿತ್ತು ಗೊತ್ತಾ...?!! ಕಡೇ ಪಕ್ಷ ನನಗಾದರು ಹಾಗೆ ಆಗಿತ್ತು..."


ಅಂತ ಒಂದೇ ಸಮನೆ ಹತಾಶೆ ಯಿಂದ ತನ್ನ ಅಸಹಾಯಕತೆಯನ್ನು, ನೋವನ್ನು ಬಡಬಡಿಸಿದನು...ಎಷ್ಟು ಕಷ್ಟದಿಂದ ತಡೆ ಹಿಡಿದಿದ್ದನೊ ಇಷ್ಟು ದಿನ.


"ಕ್ಷನಿಸು ಫ್ರೆಂಡ್....ಈ ವಿಷಯದಲ್ಲಿ, ನಿನ್ನಷ್ಟೇ ಅಸಹಾಯಕ ನಾನು. ನಿಮ್ಮಿಬ್ಬರ ಮಾತು ಕಥೆಗೆ ಸಾಕ್ಷಿಯಾಗಿರುವ ನಾನು ಅವತ್ತಿನ ದಿನ ನನ್ನ ಶಕ್ತಿ ಮೀರಿ, ಸಿಗ್ನಲ್ ಗೆ ಪ್ರಯತ್ನಪಟ್ಟರು, ಆಗಲಿಲ್ಲ.. ಇದರಲ್ಲಿ, ನನ್ನ ತಪ್ಪೇನು ಇಲ್ಲ..ಹಾಗೆ ಇದಕ್ಕೆ ನಾನು ಜವಾಬ್ದಾರನೂ ಅಲ್ಲ.. ಇದು ನನ್ನನು ಸಾಕುತ್ತಾ ಇರೊ ಕಂಪನಿಯದ್ದು.."


ಎಂದು ನಿರಾಶೆಯಿಂದ ಹೇಳಿತು.


"ನೀನು ಹೇಳುವುದೂ ಸರಿಯೇ...ಅವರು ನೆಟ್ ವರ್ಕ್ ಹೆಚ್ಚಿಸದ ಹೊರತು, ನಿನಗೆ ಸಿಗ್ನಲ್ ಸಿಗುವುದರಲ್ಲಿ ತೊಂದರೆ ತಪ್ಪಿದ್ದಲ್ಲ...."

ಇಷ್ಟು ಹೇಳಿ, ಇಬ್ಬರು ತಮ್ಮ ತಮ್ಮ ಅಸಹಾಯಕತೆ ಬಗ್ಗೆ ಒಂದರೆಕ್ಷಣ ಮೌನವಾದರು...ತಕ್ಷಣ ಅವನಿಗೆ ಏನೋ ನೆನಪಾದಂತಾಗಿ,




"ಹೇ, ನಿನ್ನ ಮೇಲೆ ಎಷ್ಟೋ ಬಾರಿ ರೇಗಿರುವಂತೆ ಈಗಲೂ ರೇಗಿದೆ..ಆದ್ರೆ, ಇವತ್ತು ಯಾಕೆ, ಹೇಗೆ ನನ್ನವರೆಗೂ ಬಂದೆ..?"


ಅಂತ ಸಂಶಯ ನಿವಾರಿಸಿಕೊಳ್ಳುವ ಸಲುವಾಗಿ ಕೇಳಿದ...


"ಯಾವಾಗಲು ನನ್ನನ್ನು, ’ಡಬ್ಬಾ ನೆಟ್ ವರ್ಕ್’ ಅಂತ ಕರೀತಿದ್ದ ನೀನು, ಇವತ್ತು ’ನನಗೆ ಪರಿಸ್ಥಿತಿ ಅರ್ಥ ಆಗೊದಿಲ್ಲ’ಅಂತ ಹೇಳಿದಕ್ಕೆ, ನನಗೆ ಬೇಜಾರಾಗಿ ಬಂದೆ.. ನಿನ್ನ ಜೊತೆ ಸ್ವಲ್ಪ ಮಾತಾಡಿ ಹೋಗುವುದಕ್ಕೆ.
ಅಲ್ಲ...’ನೀವು ಮಾತಾಡೊ ಮನಸ್ಸು ಮಾಡಿದ್ದೀರ..ಆದರೆ, ನಿಮ್ಮ ನೆಟ್ ವರ್ಕ್, ನಾನು ನಿಮ್ಮ ಜೊತೆ ಮಾತಾಡೋಕೆ ಅವಕಾಶ ಮಾಡಿಕೊಡುವ, ಮನಸ್ಸು ಮಾಡಿಲ್ಲ ಇನ್ನು" ಅಂತ ಎಷ್ಟು ಸುಲಭವಾಗಿ ಹೇಳಿದೆ ನೀನು...ನಿಮ್ಮಿಬ್ಬರ ಎಷ್ಟೋ ಮಾತಿಗೆ, ನಗುವಿಗೆ, ಬೇಸರಕ್ಕೆ ಸಾಕ್ಷಿಯಾಗಿದ್ದೇನೆ ನಾನು...ನಿಮ್ಮಿಬ್ಬರಿಗೆ
ಮೆಸೇಜ್ ಗಳನ್ನ ತಲುಪಿಸುವುದರಲ್ಲಿ ಖುಷಿ ಇದೆ ನನಗೆ..ಅದು ಎಷ್ಟರ ಮಟ್ಟಿಗೆ ಅಂದರೆ, ನನಗೆ ಅವಳ ಫ್ರೆಂಡ್ಸ್ ಗಳ ನಂಬರ್ರೇ ಮರೆತುಹೋಗಿವೆ...ಮೊನ್ನೆ ದಿವಸ ಅವಳು ಅವಳ ಫ್ರೆಂಡ್ಸ್ ಗಳಿಗೆ ಕಳುಹಿಸಿದ ಮೆಸೇಜ್ ಗಳು ಅವರಿಗೆ ತಲುಪಲೇ ಇಲ್ಲ.. ಆದರೆ, ಅದೇ ಸಮಯದಲ್ಲಿ, ನಿನಗೆ ಕಳುಹಿಸುತ್ತಿದ್ದ ಮೆಸೇಜ್ ಗಳು ಯಾವುದೇ ತೊಂದರೆ ಇಲ್ಲದೆ ನಿನ್ನನ್ನು ತಲುಪುತ್ತಲೇ ಇದ್ದವು..!!!’


ಅಂತ ನೆಟ್ ವರ್ಕ್ ತನ್ನ ಸೇವೆಯನ್ನು, ಅದರಲ್ಲಿನ ತನ್ಮಯತೆಯನ್ನು ಅವನ ಮುಂದೆ ಬಿಡಿಸಿಟ್ಟಿತು...
ಹೀಗೆ, ನೆಟ್ ವರ್ಕ್ ನ ಇಷ್ಟೆಲ್ಲ ಮಾತನ್ನು ಕೇಳಿ, ಅದರ ಸಹಾಯ ಗುಣವನ್ನು ಅರಿತ ಅವನು, ಈಗ ನೆಟ್ ವರ್ಕ್ ಅನ್ನು ಸಂತೈಸುವ ಸಲುವಾಗಿ...


"ಐ ಅಮ್ ವೆರಿ ಸ್ಸಾರಿ ನೆಟ್ ವರ್ಕ್.....ನಿನ್ನ ಬಗ್ಗೆ ನನಗೆ ಯಾವುದೇ ಶಾಶ್ವತವಾದಂತಹ ಕೋಪ ಇಲ್ಲ.. ನಿಜ ಹೇಳಬೇಕು ಅಂದ್ರೆ, ನಿನ್ನ ಸಹಾಯ ಇರೋದ್ರಿಂದಾನೆ ನಾವು ಪ್ರತಿ ದಿನ ಆರಾಮಾಗಿ ಮಾತಾಡೋದು..ನನಗೆ ಇದರ ಅರಿವಾಗಿದೆ...ನಾನು ಆ ಕ್ಷಣದ ಸಿಟ್ಟಿನಿಂದ ನಿನ್ನ ಮೇಲೆ ರೇಗಿರಬಹುದು..ಆದರೆ ಖಂಡಿತ ನಿನ್ನ ಮೇಲೆ ದ್ವೇಷ ಇಲ್ಲ..."


" :) ನನಗೆ ಗೊತ್ತು ಮೈ ಫ್ರೆಂಡ್...ಸರಿ.. ನಾನಿನ್ನು ಹೊರಡುತ್ತೀನಿ.. ಹ್ಹಾ...ನಿನ್ನೆಯಿಂದ, ’ಮೋಡ ಇದೆ, ಮಳೆ ಬರುತ್ತಿಲ್ಲ’ಅಂತಿದ್ದೆಯಲ್ಲ, ಈಗ ಸ್ವಲ್ಪ ಹೊತ್ತಲ್ಲಿ, ಮಳೆ ಬರುತ್ತೆ ಅನಿಸುತ್ತೆ.. ಆಗ ಸ್ವಲ್ಪ ನೆಟ್ ವರ್ಕ್ ತೊಂದರೆ ಆಗಬಹುದು...ಮತ್ತೆ ಸಿಡುಕಬೇಡ..ಮೊದಲೇ ಹೇಳಿದ್ದೀನಿ..


"ಹ್ಹ..ಹ್ಹ...ಹ್ಹ.... ಮಳೆ ಆಗಲೇ ಬಂತು..!!"
ಅಂತ ಯಾವುದೋ ಗುಟ್ಟು ಇವನೊಬ್ಬನಿಗೇ ತಿಳಿದಿರೊ ಹಾಗೆ ನಗಲಾರಂಭಿಸಿದ...

ನನಗೇ ಗೊತ್ತಾಗದಂತೆ, ಮಳೆ ಯಾವಾಗ ಬಂತು ಅನ್ನೋ ಗೊಂದಲದಲ್ಲೆ, ನೆಟ್ ವರ್ಕ್, "ಯಾವಾಗ?" ಅಂತ ಕೇಳಿತ್ತು...

ಅವನು ನಗುತ್ತಾ,
’ನನ್ನ, ಮೊಬೈಲ್ ಇನ್ ಬಾಕ್ಸ್ ಗೆ ಅವಳ ಮೆಸೇಜ್ ಬಂದಾಗಲೇ, ಅವಳು ಮೌನ ಮುರಿದು ಮಾತಾಡಿದಾಗಲೇ, ಇಲ್ಲಿ ಮಳೆ ಬರೋಕೆ ಶುರುವಾಯಿತು.. :) ’
ಅಂದಾಗ,

ನೆಟ್ ವರ್ಕ್ ಗೆ ಏನೂ ತಿಳಿಯಲಿಲ್ಲ...ಇದನ್ನು ಅರ್ಥಮಾಡಿಕೊಂಡವನಂತೆ,


"ಹೋಗ್ಲಿ ಬಿಡು, ಇದು ಅವಳಿಗೂ ಗೊತ್ತಾಗಲಿಲ್ಲ, ನಿನಗು ಗೊತ್ತಾಗೊಲ್ಲ.."
ಅಂತ ನಕ್ಕು ಸುಮ್ಮನಾದ...


ಆದರೆ, ಆ ನೆಟ್ ವರ್ಕ್ ಇವನನ್ನು ಬಿಡುವಂತಿರಲಿಲ್ಲ....
"ಸರಿಯಾಗಿ ಬಿಡಿಸಿ ಹೇಳು ಏನದು..?" ಅಂತ ಪಟ್ಟುಹಿಡಿಯಿತು...!


"ಸರಿ, ಹೇಳುತ್ತೇನೆ..!! ಗಮನಕೊಟ್ಟು ಕೇಳು.. :) ನಿನ್ನೆಯಿಂದ ವಾತಾವರಣ ಹೇಗಿದೆ..!?


ಬಿಸಿಲಿನ ಬೇಗೆಗೆ ಭೂಮಿ ಕಾದಿದೆ...ಅದೇ ಸಮಯಕ್ಕೆ ಆಕಾಶದಲ್ಲಿ ದೊಡ್ಡ ದೊಡ್ಡ ಮೋಡಗಳ ಗುಂಪೇ ಇದೆ..


ಇದು ಮಳೆ ಆಗುವ ಸೂಚನೆ ನೀಡಿದರೆ, ಈ ಹುಚ್ಚು ಗಾಳಿ ಮನಬಂದಂತೆ ಬೀಸಿ

ಮೋಡಗಳನ್ನ ಓಡಿಸೊ ಯೋಚನೆ ಮಾಡ್ತಿವೆ..!!


ಅದೇ ರೀತಿ, ಅವಳಿಗಾಗಿ, ಅವಳ ಮಾತಿಗಾಗಿ ಭೂಮಿಯಂತೆ ಕಾದು ಕೂತಿದ್ದ ನನಗೆ,..

ಎರಡೂ ದಿನಗಳಿಂದ ಅವಳು ನನ್ನೊಂದಿಗೆ ಮಾತಾಡದೇ ಇದ್ದ ಮಾತುಗಳೆಲ್ಲ  ಸೇರಿ ದೊಡ್ದ ಮೋಡಗಳಂತೆ ಹೆಪ್ಪುಗಟ್ಟಿರುವಂತೆ ಕಾಣುತ್ತಿದೆ...

ಮಹಾಪರೀಕ್ಷೆ ಎಂದು ಅವಳು ತೆಗೆದುಕೊಂಡ ಆ ಕಾರ್ಯ ಹುಚ್ಚುತನದ ಗಾಳಿಯಂತೆ, ಮೋಡಗಳನ್ನ  ಚದುರಿಸಿ, ಮಳೆಯಾಗದಂತೆ ಮಾಡಿ, ಅವಳ ಮಾತುಗಳು ನನ್ನನ್ನು ಸೇರದಂತೆ ಮಾಡುತ್ತಿವೆ ಏನೊ ಅನಿಸುತ್ತಿತ್ತು....!!

ಕೊನೆಗೂ, ಆ ಹುಚ್ಚು ಗಾಳಿ ಇಲ್ಲವಾಗಿ, ಹೆಪ್ಪುಗಟ್ಟಿದ್ದ ಮಾತಿನ ಮೋಡ ಕರಗಿ, ಮಳೆಯಾಗಿ ಕಾದ ನನ್ನನ್ನ ಸೇರಿದೆ.. :)’


"ಆಬ್ಬಾ..!!! ಕೇವಲ ಹವಾಮಾನದ ವರದಿಯಂತೆ ಇದ್ದ ನಿನ್ನ ಆ ಚಿಕ್ಕ ಮೆಸೇಜ್ ನಲ್ಲಿ ಇಷ್ಟು ದೊಡ್ಡ ವಿಚಾರ ಅಡಗಿದೆ ಅಂತ ನನಗೆ ನಿಜವಾಗಲೂ ಗೊತ್ತಿರಲಿಲ್ಲ... ನಿನ್ನನ್ನು ಮೆಚ್ಚಲೇ ಬೇಕು..!! ಈ ವಿಚಾರವಾಗಿ ಮಾತಾಡಲು ಮತ್ತೆ ಸಿಗುತ್ತೇನೆ..."


ಎಂದು ಹೇಳಿ ನೆಟ್ ವರ್ಕ್ ಆ ಕಡೆ ಹೊರಡುತ್ತಿದ್ದಂತೆ, ಈ ಕಡೆ ಮಳೆ ಸುರಿಯಲಾರಂಭಿಸಿತು...................