Sunday, November 14, 2010

ನವೆಂಬರ್ ೧೩



ಸಂಗೀತಾರವರು ನನಗೆ ಪರಿಚಯವಾಗಿದ್ದು ೩ ವರುಷಗಳ ಹಿಂದೆ; ನಾನು ಹೊಸದಾಗಿ ಕೆಲಸಕ್ಕೆ ಸೇರಿಕೊಂಡಾಗ. ನಾನು ಸೇರಿಕೊಂಡ ಟೀಮ್ ಕೆಲಸ ಮಾಡುವುದು ನೈಟ್ ಶಿಫ್ಟ್ ನಲ್ಲಿ. ಹೊಸಬರಾಗಿದ್ದ ನಮಗೆ ನೈಟ್ ಶಿಫ್ಟ್ ಬಗ್ಗೆ ಇರೊ ಆತಂಕವನ್ನು ದೂರಮಾಡಲಿಕ್ಕೆ ಅವರು ಮೊದಲ ಸಲ ನಮ್ಮ (ನಾನು ಮತ್ತು ನನ್ನೊಂದಿಗೆ ಸೇರಿದ ಇತರರು) ಜೊತೆ ಮಾತಾಡಿದ್ದರು. ಹಾಗೆ ಮಾತಾಡ್ತಾ, ಕೆಲಸದ ಬಗ್ಗೆ, ಟೀಮ್ ಬಗ್ಗೆ, ಟೀಮ್ ನಲ್ಲಿರೋ ಎಲ್ಲರ ಸಹಕಾರದ ಬಗ್ಗೆ, ರಾತ್ರಿ ಸಮಯದಲ್ಲಿ ಜೋರಾಗಿ ಹಾಡುಗಳನ್ನು ಪ್ಲೇ ಮಾಡುತ್ತಾ, ಒಬ್ಬರಿಗೊಬ್ಬರು ತಮಾಷೆ ಮಾಡುತ್ತಾ ಕೆಲಸ ಮಾಡೊದರ ಬಗ್ಗೆ ಹೇಳಿ ನಮ್ಮ ಆತಂಕವನ್ನ ದೂರ ಮಾಡಿದ್ದರು. ಕಂಪನಿಗೆ ಹೋಗೊ ಕ್ಯಾಬ್ ನಲ್ಲಿ ನಾನು ಮತ್ತು ಅವರು, ಇಬ್ಬರೆ ಇದ್ದರೂ ನಾನು ಅವರ ಜೊತೆ ಮಾತೇ ಆಡುತ್ತಿರಲಿಲ್ಲ. ಅವರೇ ಎಷ್ಟೋ ಸಲ ನನ್ನನ್ನ ಮಾತಿಗೆ ಎಳೆಯುತ್ತಿದ್ದರು ಆದರೆ, ಅವರೇ ನನ್ನ ಟ್ರೈನರ್ ಎಂಬ ಭಯದಿಂದ ಅವರು ಕೇಳಿದಕ್ಕಷ್ಟೇ ಉತ್ತರಿಸಿ, ನಾನು ಸುಮ್ಮನಾಗಿ ಬಿಡುತ್ತಿದ್ದೆ. ಅಲ್ಲದೆ, ನನ್ನ ಬಡ ಇಂಗ್ಲೀಷ್ ಸಹ ಇದಕ್ಕೆ ಒಂದು ಕಾರಣವಾಗಿತ್ತು.


ನಾನು ಸೇರಿಕೊಂಡ ಟೀಮ್ ನಲ್ಲಿ, ಅವರು ಅದಾಗಲೇ ೨೧/೨ ವರುಷದಿಂದ ಇದ್ದರು. ನನಗೆ ಮತ್ತು ನನ್ನ ಜೊತೆ ಕೆಲಸಕ್ಕೆ ಸೇರಿದ ಹೊಸಬರಿಗೆ ಅವರೇ ಟ್ರೈನರ್. ನಮಗೆ ಕೆಲಸದ ಬಗ್ಗೆ ತಿಳಿಸಿಕೊಟ್ಟಿದ್ದು, ಕೆಲಸ ಮಾಡುವುದನ್ನು ಕಲಿಸಿಕೊಟ್ಟಿದ್ದು ಸಂಗೀತಾಅವರೇ..!! ಇವತ್ತು ನನ್ನ ಟೀಮಿಗೆ ಹೊಸದಾಗಿ ಬರುವವರಿಗೆ ನಾನು ಟ್ರೈನ್ ಮಾಡುತ್ತಿದ್ದೇನೆಂದರೆ ಅದಕ್ಕೆ ಅವರೇ ಕಾರಣ. ಕೆಲಸದ ವಿಷಯದಲ್ಲಿ ಅಷ್ಟೇ ಅಲ್ಲದೆ, ಇತರ ಹಲವು ವಿಷಯಗಳ ಬಗ್ಗೆ ಅವರೊಂದಿಗೆ ಅನೇಕ ಸಲ ಚರ್ಚಿಸಿದ್ದೇನೆ. ನಿಧಾನವಾಗಿ, ಶಾಂತಿಯಿಂದ ಕುಳಿತು ಯೋಚಿಸಿದರೆ, ಅವರ ಹೇಳುವುದು ನಿಜವೆನಿಸುತ್ತದೆ. ಆದರೆ, ಆತುರದಲ್ಲಿರುವವರು, ಇವರ ಮಾತುಗಳನ್ನು ತಪ್ಪಾಗಿ ಭಾವಿಸಿರುವ ಸಂಗತಿಗಳಿವೆ.


ಸಂಗೀತಾ ಅವರ ಬಗ್ಗೆ ಹೇಳುವಾಗ, ಆಶಿಷ್ ಬಗ್ಗೆ ಹೇಳದೆ ಹೋದರೆ ಮಾತು ಪೂರ್ಣ ಆಗೊದಿಲ್ಲ. ಆಶಿಷ್ ಮತ್ತು ಸಂಗೀತಾ ಇಬ್ಬರು ಒಂದೇ ಟೀಮ್ ಗೆ ಸೇರಿದವರು. ಆಫೀಸ್ ನ ಯಾವುದೇ ಕೆಲಸದಲ್ಲಿ ಇಬ್ಬರೂ ಒಟ್ಟಿಗೇ ಇರುತ್ತಿದ್ದರು. ಮುಂದೆ ಅವರು ಬಾಳ ಸಂಗಾತಿಗಳಾಗಿದ್ದು ಎಲ್ಲರಿಗೂ ಸಂತೋಷದ ವಿಷಯವೇ. ಆಶಿಷ್ ಮೂಲತ: ಆಗ್ರಾದವರು. ಅವರ ಮದುವೆ ನಡೆದದ್ದು ಆಗ್ರಾದಲ್ಲೇ ಮತ್ತು ಅದೇ ಕಾರಣದಿಂದ ನಾನು ವಿಶ್ವವಿಖ್ಯಾತ ತಾಜ್ ಮಹಲ್, ಆಗ್ರಾ ಕೋಟೆ, ಕೃಷ್ಣ ಜನ್ಮಸ್ಥಳ ಮಥುರೆ, ಕುತುಬ್ ಮಿನಾರ್, ರಾಜಧಾನಿ ದೆಹಲಿ ಇವೆಲ್ಲಾ ಸ್ಥಳಗಳಿಗೆ ಹೋಗಿ ಬಂದದ್ದು. ಅಲ್ಲಿವರೆಗೂ ಪುಸ್ತಕದಲ್ಲಿ, ಟಿ.ವಿ.ಯಲ್ಲಿ ನೋಡುತ್ತಾಇದ್ದ ಆ ತಾಜ್ ಮಹಲ್ ಕಟ್ಟಡವನ್ನು ಅಲ್ಲೆ, ಆಗ್ರಾದಲ್ಲೆ ಹೋಗಿ ನೋಡಿದ್ದು ಒಂದು ಅದ್ಬುತ ಅನುಭವ. ಹಾಗಾಗಿ, ನನಗೆ ಈಗಲೂ ತಾಜ್ ಮಹಲ್ ಅಂದರೆ ಯಾವುದೇ ಉತ್ಪ್ರೇಕ್ಷೆ ಇಲ್ಲದೆ ನೆನಪಾಗೋದು ಇದೇ ಸಂಗೀತಾ-ಆಶೀಷ್..!!


ಸಂಗೀತಾ ಅವರ ಬಗ್ಗೆ ಹೀಗೆ ದಿಡೀರ್ ಅಂತ ಬರೆಯೋಕೆ ಕಾರಣ, ಇದೇ ನವೆಂಬರ್ ೧೩ ಅವರ ಹುಟ್ಟುಹಬ್ಬ. ಇತ್ತೀಚೆಗಷ್ಟೇ ಮುದ್ದು ಕಂದನಿಗೆ ಜನ್ಮ ಕೊಟ್ಟಿರುವ ಅವರು ಈಗ ರಜೆಯಲ್ಲಿದ್ದಾರೆ. ಅವರು ಈಗ ಆಫೀಸಿನಲ್ಲಿ ಇರಬೇಕಿತ್ತು ಅಂತ ಎಷ್ಟೋ ಸಲ ನನಗೆ ಅನಿಸಿದೆ. ಆದಷ್ಟು ಬೇಗ ಅವರು ಆಫೀಸ್ ಗೆ ಬರಲಿ.
ಸಂಗೀತಾ ಅವರಿಗೆ, ಹುಟ್ಟುಹಬ್ಬದ ಹಾರ್ದಿಕ ಶುಭಾಷಯಗಳು. ಈ ಸಲ ನಿಮ್ಮ ಹುಟ್ಟುಹಬ್ಬಕ್ಕೆ ಮುದ್ದಾದ ಕಂದನೇ ಉಡುಗೊರೆಯಾಗಿ ಬಂದು ನಿಮ್ಮ ಖುಷಿ ಡಬಲ್ ಆಗಿದೆ. ಈ ಖುಷಿ, ಸಂತೋಷ, ನೆಮ್ಮದಿ ಯಾವಾಗಲೂ ಹೀಗೆ ಇರಲಿ... :-)

Saturday, November 6, 2010

ಕನ್ನಡವೇ ಸತ್ಯ, ಕನ್ನಡವೇ ನಿತ್ಯ...!!



"ಗುರು ಇನ್ನು ಎದ್ದಿದ್ದೀರಾ..!! ನಿದ್ದೆ ಮಾಡಿಲ್ಲ್ವ..??!!"- ಹೀಗಂತ ಗೆಳೆಯ ಕೌಶಿಕ್, ನನ್ನ ಮೆಸೇಜ್ ಒಂದಕ್ಕೆ ಪ್ರತಿಕ್ರಿಸಿದ್ದರು.


ಅದಾಗಲೇ ೧೩ ಘಂಟೆಯಾಗಿ, ೩೦ ನಿಮಿಷ ಕಳೆದಿದ್ದರಿಂದ ನವೆಂಬರ್ ೧ ಹಾಜರಾಗಿತ್ತು. ನನ್ನ ಕಂಪನಿ ಕೃಪಾಪೋಷಿತ ಲ್ಯಾಪ್ ಟಾಪ್ ನಲ್ಲಿ, ಆಫೀಸಿನ ಸಣ್ಣಪುಟ್ಟ ಕೆಲಸ ಮಾಡುತ್ತಾ, ಅಣ್ಣಾವ್ರು ಹಾಡಿರುವ ಕನ್ನಡ ನಾಡಿನ ಗೀತೆಗಳನ್ನು ಕೇಳುತ್ತಾ ಕನ್ನಡ ರಾಜ್ಯೋತ್ಸವವನ್ನು ಬರಮಾಡಿಕೊಳ್ಲುತ್ತಿದ್ದೆ. ಈ ಕೆಲಸದ ನಡುವೆ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ಗೆಳೆಯರೆಲ್ಲರಿಗೂ ರಾಜ್ಯೋತ್ಸವದ ಶುಭಾಷಯ ಅಂತ ಮೆಸೇಜ್ ಮಾಡಿದ್ದೆ.

ಅದಕ್ಕೆ ಪ್ರತಿಯಾಗಿ, ಕೌಶಿಕ್ "ಗುರು ಇನ್ನು ಎದ್ದಿದ್ದೀರಾ..!! ನಿದ್ದೆ ಮಾಡಿಲ್ಲ್ವ..??!!" ಅಂತ ಉತ್ತರಿಸಿದ್ದರು.

ಕೌಶಿಕ್ ರ ಈ ಮೆಸೇಜ್ ನೋಡಿ ನನಗೆ ಅದೇನನಿಸಿತೊ,

"ನಾವೆಲ್ಲ ಎಚ್ಚರವಾಗಿರೋ ಸಮಯದಲ್ಲಿ ನಿದ್ದೆ ಮಾಡಿದಕ್ಕೆ, ಕನ್ನಡ, ಕರ್ನಾಟಕ ಇವತ್ತು ಈ ಸ್ಥಿತಿ ತಲುಪಿರುವುದು; ಕನ್ನಡ ರಾಜ್ಯೋತ್ಸವದ ಶುಭಾಷಯಗಳು" ಅಂತ ಪ್ರತಿಕ್ರಿಯಿಸಿದ್ದೆ. :-)

ಅದಕ್ಕೆ ಕೌಶಿಕ್ ಸಹ "ಹೌದು, ಹೌದು, ನೀವು ಹೇಳೊದು ಸರಿ" ಅಂತ ಹೇಳಿ ನಕ್ಕು ಸುಮ್ಮನಾಗಿದ್ದರು.

ಆದರೆ, ನನಗೆ ಅಚ್ಚರಿ ಕಾದಿದ್ದು ಮರುದಿನ ಬೆಳಿಗ್ಗೆ ವಿಜಯ ಕರ್ನಾಟಕ ಪತ್ರಿಕೆಯ ’ಬತ್ತಳಿಕೆ’ಯಿಂದ ಪ್ರಕಟವಾಗಿದ್ದ ಈ ವ್ಯಂಗ್ಯ ಚಿತ್ರ ನೋಡಿದಾಗ..!! ಕಳೆದ ರಾತ್ರಿ ನಾನು ಕೌಶಿಕ್ ಮೆಸೇಜ್ ಗೆ ಪ್ರತಿಕ್ರಿಯಿಸಿದ ರೀತಿಗೆ ಸರಿಯಾಗಿ ಹೊಂದಾಣಿಕೆಯಾಗುವಂತೆ ಈ ವ್ಯಂಗ್ಯ ಚಿತ್ರ ಪ್ರಕಟವಾಗಿತ್ತು. ಈ ಚಿತ್ರ ಗಮನಿಸಿ, ವರ್ಷಪೂರ್ತಿ ಕನ್ನಡದ ವಿಷಯದಲ್ಲಿ ನಿದ್ದೆ ಮಾಡೊ ಕನ್ನಡಿಗರು, ಕನ್ನಡ ಸರ್ಕಾರ, ಕನ್ನಡ ಸಂಸ್ಥೆಗಳು, ನವೆಂಬರ್ ಬಂತೆಂದಾಗ ಮಾತ್ರ ಎಚ್ಚರವಾಗಿ ’ಕನ್ನಡ, ಕನ್ನಡ’ ಅಂತ ಬೊಬ್ಬೆ ಹಾಕಿ, ಅರ್ಥವಿಲ್ಲದ ಆಚರಣೆ ಮಾಡಿ ನವೆಂಬರ್ ಮುಗಿವ ಹೊತ್ತಿಗೆ ಮತ್ತೆ ಮಲಗಿಬಿಡುತ್ತಾರೆ. ಹಾಗೆ ಮಲಗುವಾಗ, ಮುಂದಿನ ನವೆಂಬರ್ ಗಷ್ಟೇ ಅಲಾರ್ಮ್ ಇಡುವ ರೂಢಿ. ಅಷ್ಟು ಹೊತ್ತಿಗೆ ಕನ್ನಡ ಮತ್ತಷ್ಟು ಹಳತಾಗಿ, ಅದರ ಮೇಲೆ ಧೂಳು ಕೂತು, ಜೇಡ ಬಲೆ ಕಟ್ಟುತ್ತೆ. ಆ ಬಲೆಯಲ್ಲಿ ಸಿಲುಕಿ ಕನ್ನಡ ನರಳುತ್ತೆ, ಅದರ ಕೂಗು ಮುಂದಿನ ನವೆಂಬರ್ ತನಕ ಗಾಡ ನಿದ್ದೆಯಲ್ಲಿರೋ ಯಾರಿಗೂ ಕೇಳುವುದೇ ಇಲ್ಲ.!! ನರಳಾಟ ಕೇಳಿ, ಸಹಾಯ ಹಸ್ತ ಚಾಚುವವರಿಗೆ ಸಿಗಬೇಕಾದ ಸೌಕರ್ಯ, ಸವಲತ್ತು, ನೆರವು..ಯಾವುದೂ ಸಿಗಲ್ಲ...!! ಇಂಥ ವಿಪರ್ಯಾಸದ ಸ್ಥಿತಿಯಲ್ಲೂ ಸಹ, ಯಾವುದೇ ಪ್ರತಿಫಲ ಬಯಸದೆ, ಕೇವಲ ಕನ್ನಡ ನಾಡು-ನುಡಿ ಅಭಿಮಾನದಿಂದ ಅಲ್ಲೊಮ್ಮೆ, ಇಲ್ಲೊಮ್ಮೆ ಸದಾಕಾಲ ಕನ್ನಡ ಡಿಂಡಿಮವನ್ನು ಬಾರಿಸುತ್ತಿರುವ ನಿಜವಾದ ಕನ್ನಡಾಭಿಮಾನಿಗಳಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು.!! : -)

ಇಂಥ ಒಂದು ಸಮಯೋಚಿತವಾದ ವ್ಯಂಗ್ಯಚಿತ್ರ ಬರೆದ ಚಂದ್ರ ಗಂಗೊಳ್ಳಿ ಯವರಿಗೂ ಹಾಗೂ ಅದನ್ನು ಪ್ರಕಟಿಸಿದ ಕನ್ನಡದ ಹೆಮ್ಮೆಯ ದಿನ ಪತ್ರಿಕೆ ’ವಿಜಯ ಕರ್ನಾಟಕ’ಕ್ಕೂ ವಂದನೆಗಳು.