Tuesday, December 6, 2011

‘ಅವಿರತ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ’, ಶಾಲಿಗನೂರು

ಶಾಲಿಗನೂರು: ‘ಜಗದ ಗೊಂದಲ ಬೇಡಾss ನಮಗೆ...’ ಎಂದು ದೂರದ ತುಂಗಾನದಿಯ ತೀರದಲ್ಲಿ ಹೀಗೊಂದು ಹೆಸರಿನ ಪುಟ್ಟ ಗ್ರಾಮವಿದೆ ಎಂದು ಜಗತ್ತಿಗೇ ತಿಳಿದಿದ್ದು, ೨೦೦೯ರಲ್ಲಿ ಉತ್ತರ ಕರ್ನಾಟಕ ನೆರೆಹಾವಳಿಯಿಂದ ತತ್ತರಿಸಿದಾಗ! ಶಾಲಿಗನೂರಿನಂತಹ ಅನೇಕ ಪುಟ್ಟ ಗ್ರಾಮಗಳು ಹೀಗೆ ಪ್ರಕೃತಿಯ ವಿಕೋಪಕ್ಕೆ ಸಿಲುಕಿ ನಲುಗುತ್ತಿದ್ದಾಗ ಬೇಧಭಾವ ಮರೆತು, ಎಲ್ಲರೂ ಅಗತ್ಯಕ್ಕೆ ತಕ್ಕಂತೆ ಸ್ಪಂದಿಸಿದರು. ದಾನಿಗಳು ದೇಣಿಗೆ ನೀಡಿದರು, ಸ್ವಯಂ ಸೇವಾ ಸಂಸ್ಥೆಗಳು ಹಳ್ಳಿಗರ ಸಹಾಯಕ್ಕೆ ಧಾವಿಸಿದರು, ತಮ್ಮಿಂದ ಏನೂ ಕೊಡಲಿಕ್ಕಾಗದವರೂ ಪ್ರಾರ್ಥಿಸಿದರು, ಪಶ್ಚಾತ್ತಾಪ ಪಟ್ಟುಕೊಂಡರು. ಹೀಗೆ ಎಲ್ಲರೂ ತಮ್ಮ ತಮ್ಮ ಶಕ್ತಿಯಮಿತಿಯಲ್ಲಿ ಆ ತಕ್ಷಣಕ್ಕೆ ನೆರವುನೀಡಿ ಮಾನವೀಯತೆ ಮೆರೆದವರೇ.



ಆದರೆ, ಈ ಗ್ರಾಮಗಳ ಪುನರ್ನಿರ್ಮಾಣ ಕಾರ್ಯದಲ್ಲಿ ದೃಢ ಸಂಕಲ್ಪದೊಂದಿಗೆ, ನಿಸ್ವಾರ್ಥತೆಯಿಂದ ತಮ್ಮನ್ನು ತಾವು ತೊಡಗಿಸಿಕೊಂಡ, ಸರ್ಕಾರದ ಜೊತೆ ಕೈ ಜೋಡಿಸಿದ ಸೇವಾ ಸಂಸ್ಥೆಗಳು, ವ್ಯಕ್ತಿಗಳು ಅತಿ ವಿರಳ. ಆ ಸಾಲಿನಲ್ಲಿ ಮೊದಲು ಬರುವುದು, ’ನಾಡಿಗಾಗಿ ನಿರಂತರ’ ಎಂಬ ಧ್ಯೇಯವಾಣಿ ಹೊಂದಿರುವ ’ಅವಿರತ ಬಳಗ’/ ’ಅವಿರತ ಪ್ರತಿಷ್ಠಾನ’.




ಕನ್ನಡ ನಾಡು, ನುಡಿ, ಸಂಸ್ಕೃತಿ ಯನ್ನು ಎತ್ತಿ ಹಿಡಿಯುತ್ತಾ, ಕನ್ನಡಿಗರ ಪರಿಸರವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಮೌಲ್ಯಯುತ ಸಮಾಜವನ್ನು ಕಟ್ಟುವ ಕೆಲಸದಲ್ಲಿ ನಿರತವಾಗಿರುವ ಉತ್ಸಾಹದ ಯುವಪಡೆಯೇ ಅವಿರತ ಬಳಗ. ೨೦೦೭ರ ಮಾರ್ಚ್ ನಲ್ಲಿ ಆರಂಭವಾದ ಅವಿರತ ಪ್ರತಿಷ್ಠಾನವು ಶಿಕ್ಷಣ, ತರಬೇತಿ, ಆರೋಗ್ಯ, ಕಲೆ-ಸಾಹಿತ್ಯ, ಮಹತ್ವ ವಿಷಯಗಳ ಚಿಂತನೆ, ವಿಚಾರ ಗೋಷ್ಠಿ, ಹೀಗೆ ವಿವಿಧ ಕ್ಷೇತ್ರಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಾಡಿಗಾಗಿ ನಿರಂತರ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. ನಾಡಿನ ಸಮತೋಲನ ಅಭಿವೃದ್ದಿಗಾಗಿ ಮೌಲ್ಯಯುತ ಮತ್ತು ತರ್ಕಬದ್ದ ಸಂಘಟನೆಯಾಗಿ ಶ್ರಮಿಸುತ್ತಿರುವ ಅವಿರತ ಪ್ರತಿಷ್ಥಾನವು, ವೈದ್ಯರು, ಸಾಫ್ಟ್ ವೇರ್ ತಂತ್ರಜ್ಣರು, ಶಿಕ್ಷಕರು, ವಕೀಲರು, ಪತ್ರಕರ್ತರು, ಕಲಾವಿದರು, ಸಾಹಿತಿಗಳನ್ನೊಳಗೊಂಡಿದ್ದು, ಹಲವಾರು ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದೆ.



೨೦೦೯ರಲ್ಲಿ ಉತ್ತರ ಕರ್ನಾಟಕವು ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದಾಗ, ಘಟನೆಯ ಬಗ್ಗೆ ಅವಿರತವು ಕೇವಲ ಮರುಕ ಪಡದೆ, ’ಸಣ್ಣ ತಂಡ, ಕೈಲಾದ ಕನಿಷ್ಥ ಸಹಾಯ’ ಎಂದು ನಿರ್ಧರಿಸಿ, ಸುಮಾರು ೪೫-೫೦ ನೆರೆ ಸಂತ್ರಸ್ತರ ಕುಟುಂಬಗಳಿಗೆ ಆಹಾರ ಒದಗಿಸುವ ಯೋಜನೆಯೊಂದಿಗೆ ನೆರವಿಗೆ ಧಾವಿಸಿತು. ಇತರರೆಲ್ಲರಂತೆ, ಅವಿರತದ ಈ ಪರಿಹಾರ ಕಾರ್ಯವು ಆ ಕ್ಷಣಕ್ಕೆ ಸ್ಪಂದಿಸುವ ಕಾರ್ಯವಾಗಿತ್ತಷ್ಟೇ. ಆದರೆ, ಈ ಕಾರ್ಯ ಮುಗಿಸುವ ವೇಳೆಗಾಗಲೆ, ಅವಿರತಕ್ಕೆ ದಾನಿಗಳಿಂದ ಹಾಗೂ ತನ್ನದೇ  ಬಳಗದವರಿಂದ ಹರಿದು ಬಂದ ನೆರವು, ಸಹಾಯ ಹೇಗಿತ್ತೆಂದರೆ,  ೪೫-೫೦ ಕುಟುಂಬಗಳಿಗೆ ಎಂದು ಪ್ರಾರಂಭವಾದ ಪರಿಹಾರ ಕಾರ್ಯ ಸುಮಾರು ೫೦೦ ಕುಟುಂಬಗಳನ್ನು ತಲುಪಿತ್ತು!!   ಸಂತ್ರಸ್ತರಿಗೆ ಕೇವಲ ಕನಿಷ್ಠವನ್ನಲ್ಲದೆ, ಗರಿಷ್ಥ ಸಹಾಯವನ್ನು ನೀಡುವಂತೆ ಪ್ರಚೋದನೆಗೊಳಿಸಿತ್ತು!!




ಎಲ್ಲೆಡೆಯಿಂದ ಹರಿದುಬಂದ ನೆರವನ್ನು ಬಲು ವಿವೇಚನೆಯಿಂದ ಬಳಸಿದ ಅವಿರತವು, ಶಾಲಿಗನೂರು ಗ್ರಾಮದ ಪುನರ್ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ದೃಢನಿರ್ಧಾರ ಮಾಡಿತು. ಆದರೆ ಯಾವ ರೀತಿಯ ಯೋಜನೆ ಕೈಗೊಳ್ಳಬೇಕು ಎಂಬುದು ಪ್ರಶ್ನೆಯಾಗೇ ಉಳಿದಿದ್ದ ಸಂದರ್ಭದಲ್ಲಿ ಅವಿರತ ಆಯ್ದುಕೊಂಡಿದ್ದು ಶಿಕ್ಷಣ ಕ್ಷೇತ್ರವನ್ನು.

ಸರ್ಕಾರಿ ದಾಖಲೆಗಳ ಪ್ರಕಾರ, ೬ ರಿಂದ ೧೪ ವರ್ಷ ವಯಸ್ಸಿನ, ಪ್ರತಿಶತ ೫೦ರಷ್ಟು ಮಕ್ಕಳು ಶಾಲೆಗೆ ಹೋಗದೆ, ಶಿಕ್ಷಣದಿಂದ ವಂಚಿತರಾಗುತ್ತಾರೆ!! ಮೂರನೇ ಒಂದಕ್ಕಿಂತ ಸ್ವಲ್ಪ ಹೆಚ್ಚಿನ ಸಂಖ್ಯೆಯ ಮಕ್ಕಳು ಪ್ರೌಢಶಾಲಾ ಶಿಕ್ಷಣದ ವೇಳೆಗೆ ಶಾಲೆಯನ್ನು ತೊರೆಯುತ್ತಾರೆ!! ’೬ ರಿಂದ ೧೪ ವರ್ಷ ವಯಸ್ಸಿನ ಪ್ರತಿಯೊಂದು ಮಗುವಿಗೂ ಶಿಕ್ಷಣ ಮೂಲಭೂತ ಹಕ್ಕು’ ಎಂದು ಸಂವಿಧಾನದಲ್ಲಿ ಬರೆದುಕೊಂಡಿರುವ ನಮ್ಮ ಭಾರತದಲ್ಲಿನ ಸದ್ಯದ ಶಿಕ್ಷಣ ವ್ಯವಸ್ಥೆಯ ಸ್ಥಿತಿಯಿದು.
ಇದಕ್ಕೆ ಕಾರಣಗಳು ಹಲವಾರಿರಬಹುದು. ಆದರೆ, ಶಿಕ್ಷಣವನ್ನು ಸರ್ವವ್ಯಾಪಿಯಾಗಿಸಲು, ಅನಕ್ಷರತೆಯನ್ನು ಹೋಗಲಾಡಿಸುವ ಏಕೋದ್ದೇಶವನ್ನಿಟ್ಟುಕೊಂಡು ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಶ್ರಮಿಸುತ್ತಿರುವುದು ಸುಳ್ಳಲ್ಲ.




ಸರ್ಕಾರವು ಮಕ್ಕಳನ್ನು ಶಾಲೆಗೆ ತರಲು, ’ಮರಳಿ ಬಾ ಶಾಲೆಗೆ’, ’ಬಿಸಿಯೂಟ’, ’ಸೈಕಲ್ ವಿತರಣೆ’, ’ಸಮವಸ್ತ್ರ ವಿತರಣೆ’ ಹೀಗೆ ಹಲವಾರು ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಹಮ್ಮಿಕೊಂಡಿದೆ. ಸರ್ಕಾರದ ಜೊತೆಗೆ, ಹಲವು ಸೇವಾ ಸಂಸ್ಥೆಗಳಿಂದಲೂ ಸಹ ಮಕ್ಕಳು ಶಾಲೆಗೆ ಹೋಗುವುದನ್ನು ಉತ್ತೇಜಿಸಲು ನೋಟ್ ಬುಕ್ ವಿತರಸುವುದು, ಸಮವಸ್ತ್ರ ಕೊಡಿಸುವುದು, ಶಾಲಾ ವಾಹನ ಕೊಡಿಸುವುದು, ಮಕ್ಕಳ ಶೈಕ್ಷಣಿಕ ಖರ್ಚುವೆಚ್ಚವನ್ನು ಭರಿಸುವುದು. ಹೀಗೆ ಹಲವು ರೀತಿಯ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಆದರೆ, ಶಾಲೆ ನಡೆಸಲು ಅವಶ್ಯವಿರುವ ಶಾಲಾ ಕಟ್ಟಡವೇ ದುಸ್ಥಿತಿಯಲ್ಲಿದ್ದರೆ, ಸ್ಥಳದ ಅಭಾವವಾದರೆ ಅಥವಾ ಕಟ್ಟಡವೇ ಇಲ್ಲವಾದರೆ ಮಕ್ಕಳನ್ನು ಶಾಲೆಗೆ ತರಲು ಹಮ್ಮಿಕೊಂಡಿರುವ ಯೋಜನೆಗಳೆಲ್ಲವೂ ವ್ಯರ್ಥವಲ್ಲವೇ!? ಅನಾನುಕೂಲಕರವಾದ ಶಾಲಾ ಕಟ್ಟಡಗಳೂ ಕೂಡ ಮಕ್ಕಳು ಶಾಲೆಯಿಂದ ಹೊರಗುಳಿಯಲು ಒಂದು ಕಾರಣ.  ’ಅಣೆಕಟ್ಟುಗಳು ಆಧುನಿಕ ಭಾರತದ ದೇವಾಲಯಗಳು’ ಎಂದು ವಿಶ್ವೇಶ್ವರಯ್ಯನವರು ಹೇಳಿದ್ದಾರೆ. ಅಂತೆಯೇ, ’ಶಾಲೆಗಳು ನಾಗರೀಕ ಸಮಾಜದ ದೇವಾಲಯಗಳು’ ಎಂದು ಹೇಳಬಹುದಲ್ಲವೇ?!
ಹೀಗಾಗಿ, ಗ್ರಾಮದ ಪುನರ್ ನಿರ್ಮಾಣದಲ್ಲಿ ತೊಡಗಿಕೊಳ್ಳುವ ನಿರ್ಧಾರ ಮಾಡಿದ್ದ ಅವಿರತ ಬಳಗವು, ಮಾನವೀಯತೆ ಹಾಗೂ ಶೈಕ್ಷಣಿಕ ನೆಲೆಗಟ್ಟಿನ ಮೇಲೆ ಇಡೀ ಗ್ರಾಮಕ್ಕೆ ಒಂದು ಶಾಲಾ ಕಟ್ಟಡವನ್ನು ನಿರ್ಮಿಸಿಕೊಡುವ ಸಂಕಲ್ಪ ತೊಟ್ಟಿತು.


ಆ ನಂತರ ನಡೆದದ್ದೆಲ್ಲಾ ಸಂಕಲ್ಪಕ್ಕೆ ನಿಷ್ಠವಾದ ಕಾರ್ಯಗಳು, ಯೋಜನೆಯ ಒಟ್ಟು ಖರ್ಚು ವೆಚ್ಚಗಳ ಅಂದಾಜು, ಅಗತ್ಯ ಸಂಪನ್ಮೂಲಗಳ ಸಂಗ್ರಹ, ಸರ್ಕಾರಿ ಅಧಿಕಾರಿಗಳ ಜೊತೆ ಮಾತುಕತೆ, ಊರಿನವರ ಅಗತ್ಯಗಳ ಚರ್ಚೆ. ಹೀಗೆ ಅಗತ್ಯ ಸಿದ್ದತೆಗಳೊಂದಿಗೆ ೨೦೧೦ ರ ನವೆಂಬರ್ ತಿಂಗಳಿನಲ್ಲಿ ಪ್ರಾರಂಭವಾದ ಶಾಲಾ ಕಟ್ಟಡ ನಿರ್ಮಾಣ ಕಾರ್ಯವು ಕೆಲವು ಏರು-ಪೇರುಗಳನ್ನು ಕಂಡಿತಾದರೂ, ಅದನ್ನು ಸಮರ್ಥವಾಗಿ ಎದುರಿಸಿ, ೨೦೧೧ ರ ನವೆಂಬರ್ ತಿಂಗಳಿನಲ್ಲಿ ಪೂರ್ಣಗೊಂಡಿತು. ಇದೇ ತಿಂಗಳಿನ, ೨೬ನೇ ದಿನಾಂಕದಂದು ಶಾಲಾ ಕಟ್ಟಡದ ಉದ್ಘಾಟನೆಯೂ ನೆರವೇರಿತು.





ಕಟ್ಟಡದ ಉದ್ಘಾಟನೆಯ ದಿನ ಊರಿನಲ್ಲಿ ಅಕ್ಷರಶಃ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು. ೧ ರಿಂದ ೪ನೇ ತರಗತಿಯ, ಸುಮಾರು ೬೫-೭೦ ಮಕ್ಕಳಿಗಾಗುವಂತೆ, ೩ ಕೊಠಡಿಗಳಿರುವಂತೆ ನಿರ್ಮಿಸಿರುವ ’ಅವಿರತ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ’ಯು ನಿಸರ್ಗದ ಮಡಿಲಲ್ಲಿ, ಸ್ವಚ್ಛಂದದ ಪರಿಸರದಲ್ಲಿ ಸಿಂಗಾರಗೊಂಡು, ಉದ್ಘಾಟನೆಗೆ ಸಿದ್ದವಾಗಿತ್ತು.




ಕಛೇರಿ ಕೆಲಸದ ಒತ್ತಡದ ನಡುವೆ ಹಾಗೂ ವಾರಾಂತ್ಯದಲ್ಲಿ ಸಿಗುವ ಸಮಯದಲ್ಲೇ ನಿರ್ಮಾಣ ಕಾರ್ಯದ ಸಕಲ ಅಗತ್ಯತೆಗಳನ್ನು ಪೂರೈಸಿ, ಅಂದುಕೊಂಡಂತೆ ಕಟ್ಟಡ ನಿರ್ಮಾಣವನ್ನು ಪೂರ್ಣಗೊಳಿಸಿದ ಅವಿರತ ಬಳಗ ಹಿರಿಯರಿಗೆ, ಆ ದಿನ ಸಾರ್ಥಕತೆಯ ಕ್ಷಣವಾದರೆ, ಸಮಾಜಪರ ಕೆಲಸದಲ್ಲಿ ಕೈ ಜೋಡಿಸಿ ಸಹಕರಿಸಿದ ಸರ್ಕಾರಿ ಅಧಿಕಾರಿಗಳಿಗೆ ಹಾಗೂ ಗ್ರಾಮದ ಜನತೆಗೆ ಧನ್ಯತಾ ಭಾವ. ಉದ್ಘಾಟನಾ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಸ್ವಾಮೀಜಿಯವರು ಸಮಾಜದಲ್ಲಿನ ಸಂಘಟನೆ, ಸಹಬಾಳ್ವೆಯನ್ನು ಅವಿರತದ ಮೂಲಕ ಕಂಡು ಹರ್ಷಿತರಾಗಿ ತಮ್ಮ ಸಮಯೋಚಿತ ಹಿತನುಡಿಗಳಿಂದ ಆಶೀರ್ವಚನ ನೀಡಿ ಹರಸಿದರು. ಅಷ್ಟೇ ಅಲ್ಲದೆ, ಅವಿರತದ ಕೆಲಸವನ್ನು ಕಂಡು ತಾವೂ ಉತ್ತೇಜಿತರಾಗಿ, ಶಾಲೆಯ ಕಾಂಪೌಂಡ್ ಕಟ್ಟಿಸಲು ೫೦,೦೦೦/- ರೂಪಾಯಿಗಳ ನೆರವನ್ನೂ ತಮ್ಮ ಮಠದ ಮೂಲಕ ನೀಡುವುದಾಗಿ ತಿಳಿಸಿದರು. ಹೊಸ ಶಾಲೆಯನ್ನು ಪಡೆದ ಸಂಭ್ರಮದಲ್ಲಿದ್ದ ಶಿಕ್ಷಕರು ಮತ್ತು ಮಕ್ಕಳು ಬಂದವರನ್ನೆಲ್ಲಾ ಸ್ವಾಗತಿಸಿ, ಹಿರಿಯರನ್ನು, ದೇವರನ್ನು ನೆನೆದು, ವಂದಿಸಿದರು..



ಹೀಗೆ, ಹೆಸರಿನಲ್ಲೇ ಶಾಲೆಯನ್ನಿರಿಸಿಕೊಂಡಿರುವ ಊರಿಗೆ ( ’ಶಾಲಿ’ಗನೂರು ), ಅವಿರತ ಬಳಗ ಶಾಲೆಯನ್ನು ಕಟ್ಟಿಸಿಕೊಟ್ಟಿರುವುದು ಒಂದು ಸೋಜಿಗವೇ ಸರಿ.


ಇಂಗ್ಲೀಷಿನಲ್ಲಿ ಒಂದು ಅರ್ಥಪೂರ್ಣವಾದ ಮಾತಿದೆ;
“Give a man a fish; you have fed him for today.
Teach a man to fish; and you have fed him for a lifetime."
ಅವಿರತದ ಕಾರ್ಯ ಈ ಅರ್ಥಪೂರ್ಣವಾದ ಮಾತಿಗೆ ಒಂದು ಉತ್ತಮ ಉದಾಹರಣೆಯಾಗುವ ದಿಕ್ಕಿನಲ್ಲಿ ಮೊದಲ ಹೆಜ್ಜೆ.!! ಹೌದು, ಕೊಟ್ಟ ಮಾತಿನಂತೆ ಶಾಲಾ ಕಟ್ಟಡವನ್ನು ಯಶಸ್ವಿಯಾಗಿ ನಿರ್ಮಿಸಿರುವ ಅವಿರತದ ಜವಾಬ್ದಾರಿ ನಿಜಕ್ಕೂ ಈಗ ಪ್ರಾರಂಭವಾಗಿದೆ. ಈ ಜವಾಬ್ದಾರಿಯನ್ನು ಎಚ್ಚರಿಕೆಯಿಂದ ನಿರ್ವಹಿಸುವುದರ ಮೂಲಕ, ನಾಡಿಗಾಗಿ ನಿರಂತರ ತುಡಿಯುವ,  ನಿಸ್ವಾರ್ಥತೆಯಿಂದ ದುಡಿಯುವ ಮತ್ತಷ್ಟು ಉತ್ಸಾಹಿಗಳಿಗೆ ಅವಿರತ ಪ್ರೇರಣೆಯಾಗಬೇಕಿದೆ.












ಯೋಚನಾ ಲಹರಿಗೊಂದೆರಡು ತುತ್ತು:


೧. ಬಹುರಾಷ್ಟ್ರೀಯ ಕಂಪನೆಗಳಲ್ಲಿ ಉದ್ಯೋಗಿಗಳಾಗಿರುವ ಹಲವಾರು ಮಂದಿಯ ಒಂದು ಸಂಬಳದ ಸಣ್ಣ ಸಣ್ಣ ಭಾಗ ಕೂಡಿ, ಈ ರೀತಿಯ ಸಮಾಜ ಪರ ಕೆಲಸಕ್ಕೆ ನೆರವು ನೀಡುವ ಸಾಮಾರ್ಥ್ಯವಿದೆ ಎಂದಾದರೆ, ಆ ಕಂಪನೆಗಳಿಗೆ ಪರವಾನಗಿ ನೀಡಿ, ಕಾಲ ಕಾಲಕ್ಕೆ ಅವುಗಳಿಂದ ತೆರಿಗೆಯನ್ನು ಪಡೆಯುತ್ತಿರುವ ಸರ್ಕಾರ ಮತ್ತು ಅಧಿಕಾರಿಗಳು ಯೋಜಿತ ರೀತಿಯಲ್ಲಿ, ನಿಷ್ಠವಾಗಿ ನಡೆದುಕೊಂಡರೆ ಮತ್ತಷ್ಟು ಸಮಾಜಪರ ಕಾರ್ಯಗಳು ಸಿದ್ದಿಯಾಗುವುದರಲ್ಲಿ ಅನುಮಾನವಿಲ್ಲ, ಅಲ್ಲವೇ?


೨. ’ಶಾಲೆಗಳು, ನಾಗರೀಕ ಸಮಾಜದ ದೇವಾಲಯಗಳು’ಎಂದ ಮಾತನ್ನು ವಿಸ್ತರಿಸುವುದಾದರೆ, ಶಾಲೆಗಳು ನಾಗರೀಕ ಸಮಾಜದ ದೇವಾಲಯಗಳು, ಶಿಕ್ಷರೇ ಗುರುಗಳು/ ಅರ್ಚಕರು, ಅಕ್ಷರಗಳೇ ಮಂತ್ರಗಳು, ಜ್ಣಾನವೇ ದೇವರು, ವಿನಯವೇ ಪೂಜೆ.






ಇತರೆ ಅಂಕಿಅಂಶಗಳು:


೨೦೦೮ ರ ಮಾಹಿತಿಯ ಪ್ರಕಾರ,


- ಪ್ರತಿಶತ ೨೯ ರಷ್ಟು ಶಾಲೆಗಳಿಗೆ ಈಗಲೂ ಸುಸಜ್ಜಿತವಾದ ಕಟ್ಟಡವಿಲ್ಲ.


- ಪ್ರತಿಶತ ೪೨ ರಷ್ಟು ಶಾಲೆಗಳಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲ.


- ಇತ್ತಕಡೆ ಮಾಹಿತಿ ತಂತ್ರಜ್ಣಾನದ ಕ್ಷೇತ್ರದಲ್ಲಿ ಭಾರತವು ಪ್ರಪಂಚದ ಗಮನ ಸೆಳೆಯುತ್ತಿದ್ದರೆ, ಅತ್ತಕಡೆ ಕೇವಲ ೧೩ ಪ್ರತಿಶತ ಶಾಲೆಗಳಲ್ಲಿ ಕಂಪ್ಯೂಟರ್ ವ್ಯವಸ್ಥೆ ಇದೆ. ಇನ್ನು ಅಸ್ಸಾಂ, ಜಾರ್ಖಂಡ್, ಚತ್ತಿಸ್ ಘಡ್, ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಕೇವಲ ೬ ಪ್ರತಿಶತ ಶಾಲೆಗಳಲ್ಲಷ್ಟೇ ಕಂಪ್ಯೂಟರ್ ನ ಪರಿಚಯವಾಗಿದೆ.


- ೧೫ ಪ್ರತಿಶತ ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ.


- ೬ ರಿಂದ ೧೪ ವರ್ಷ ವಯಸ್ಸಿನ, ಪ್ರತಿಶತ ೫೦ರಷ್ಟು ಮಕ್ಕಳು ಶಾಲೆಗೆ ಹೋಗದೆ, ಶಿಕ್ಷಣದಿಂದ ವಂಚಿತರಾಗುತ್ತಾರೆ


- ಮೂರನೇ ಒಂದಕ್ಕಿಂತ ಸ್ವಲ್ಪ ಹೆಚ್ಚಿನ ಸಂಖ್ಯೆಯ ಮಕ್ಕಳು ಪ್ರೌಢಶಾಲಾ ಶಿಕ್ಷಣದ ವೇಳೆಗೆ ಶಾಲೆಯನ್ನು ತೊರೆಯುತ್ತಾರೆ


- ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುವ ನಾಲ್ಕು ಜನ ಮಕ್ಕಳಲ್ಲಿ, ಮೂರು ಜನರು ನೀಡುವ ಮುಖ್ಯ ಕಾರಣ: ೧. ದುಬಾರಿ ಶಿಕ್ಷಣ. ೨. ಕೆಲಸ ಮಾಡಿ ಸಂಸಾರದ ಕಷ್ಟಕ್ಕೆ ಹೆಗಲು ಕೊಡುವ ಅನಿವಾರ್ಯತೆ


- ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಪ್ರಗತಿ ಕಂಡುಬಂದಿದ್ದರೂ, ಏರುತ್ತಿರುವ ಜನಸಂಖ್ಯೆಯ ಜೊತೆ ಅದು ತಾಳೆಯಾಗುತ್ತಿಲ್ಲ.