Thursday, February 11, 2010

ತಪ್ಪೊಪ್ಪಿಗೆ


ಇತ್ತೀಚೆಗೆ ನನ್ನ ಸಾಕಷ್ಟು ಗೆಳೆಯರು ನನ್ನ ವಿರುದ್ದ ಸಿಟ್ಟು ಮಾಡಿಕೊಂಡಿದ್ದರು. ೨,೩ ದಿನ ನನ್ನ ಬಗ್ಗೆ ಬರೀ ಕಂಪ್ಲೇಂಟ್ ಗಳೇ. ಕಾರಣ ಇಷ್ಟೇ, ನನ್ನ ದಡ್ಡ ತಲೆಗೆ ಕೆಲವೊಂದು ಸಾಲುಗಳು ಹೊಳೆದವು. ಅವುಗಳನ್ನು ಎಸ್ಸೆಮ್ಮೆಸ್ ನಲ್ಲಿ ಎಲ್ಲರೊಂದಿಗೆ ಹಂಚಿಕೊಂಡೆ. ಪ್ರತೀ ಬಾರಿ ನನ್ನ ಬರಹಗಳನ್ನು ಓದಿದ ನಂತರ ಕೇಳುವಂತೆ ಈ ಬಾರಿಯು, "ಈ ಸಾಲುಗಳು ನಿನ್ನ ಸ್ವಂತ: ಅನುಭವದ ಸಾಲುಗಳೇ?" ಎಂದು ಹಲವರು ಕೇಳಿದ್ದರು. ನಾನು ಯಾವುದೋ ಗುಂಗಿನಲ್ಲಿ, "ಯಾರು ಏನೇ ಬರೆದರೂ ಅದಕ್ಕೆ Inspiration ಇದ್ದೇ ಇರುತ್ತೆ" ಅಂತ ಉತ್ತರಿಸಿದ್ದೆ. ಈ ನನ್ನ ಉತ್ತರ ಕೆಲವರಿಗೆ ’ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ’ ಎಂಬಂತೆ ಅನಿಸಿಬಿಟ್ಟಿದೆ. ಅದರಲ್ಲು ಗೆಳೆಯ ಚೇತನ್ ನನ್ನ ಬಗ್ಗೆ ಈ ರೀತಿಯ ವಿಷಯಗಳಲ್ಲಿ ವಾದಕ್ಕಿಳಿದು ಬಿಡುತ್ತಾನೆ. ಅದು ಯಾಕೆ ಹಾಗೆ ?? ಇದು ಯಾಕೆ ಹೀಗೆ?? ಅಂಥ ಒಂದಷ್ಟು ಜನ ನನ್ನ ಗೆಳೆಯರನ್ನ ನನ್ನ ವಿರುದ್ದಾನೇ ಗುಂಪು ಕಟ್ಟುತ್ತಾನೆ. ಈ ಬಾರಿಯು ಇವನು ತನ್ನ ಹಠ ಬಿಡಲಿಲ್ಲ. ಅಸಲಿಗೆ ಅವನ ವಿರೋಧವಿದ್ದದ್ದು, ನಾನು ಅವರೊಡನೆ ಹಂಚಿಕೊಂಡ ಸಾಲುಗಳಿಗಲ್ಲ. ಅವರ ಪ್ರತಿಕ್ರಿಯೆಗೆ ನಾನು ನೀಡಿದ್ದ ಉತ್ತರಕ್ಕೆ. ಹಾಗಾಗಿ, ನಾನು ನೀಡಿದ ಉತ್ತರವನ್ನು ವಾಪಾಸ್ ಪಡೆಯಬೇಕೆಂದು ಅವನ ಹಠವಾಗಿತ್ತು. ಮೆಸೇಜ್ ನಲ್ಲಿ ಗೆಳೆಯರು ನೀಡಿದ ಪ್ರತಿಕ್ರಿಯೆಗೆ ನಾನೂ ಸಹ ಮೆಸೇಜ್ ನಲ್ಲೇ ಉತ್ತರಿಸಿದ್ದಾಗಿದೆ, ಆ ಮೆಸೇಜ್ ಅನ್ನು ಎಲ್ಲರೂ ಓದಿಯಾಗಿದೆ. ಈಗ ಆ ಉತ್ತರವನ್ನು ವಾಪಾಸ್ ಪಡೆಯಬೇಕೆಂದರೆ ಹೇಗೆ?!
ನನ್ನ ಈ ಗೊಂದಲಕ್ಕೆ ಅವನು ಅದಾಗಲೇ ಪರಿಹಾರ ಹುಡುಕಿದ್ದ. ನಾನು ಯಾರೊಂದಿಗೆಲ್ಲಾ ನನ್ನ ಹುಚ್ಚು ತಲೆಯ ಸಾಲುಗಳನ್ನು ಹಂಚಿಕೊಂಡಿದ್ದೇನೊ, ಅವರ ಪ್ರತಿಕ್ರಿಯೆಗಳಿಗೆ ಉತ್ತರಿಸಿದ್ದೆನೋ, ಅವರಿಗೆಲ್ಲ ಮತ್ತೊಂದು ಮೆಸೆಜ್ ಕಳುಹಿಸುವಂತೆ ನನ್ನ ಹಿಂದೆ ಬಿದ್ದ. ಅಷ್ಟೇ ಅಲ್ಲ, ಆ ಮೆಸೆಜ್ ಅನ್ನು ಅವನೇ ಬರೆದುಕೊಟ್ಟ ಹಾಗು ಅವನ ಮುಂದೆಯೇ ನಾನದನ್ನು ಎಲ್ಲರಿಗೂ ಕಳುಹಿಸುವಂತೆ ನೋಡಿಕೊಂಡ...!!!
ಅವನು ಬರೆದುಕೊಟ್ಟ ಮೆಸೆಜ್ ಹೀಗಿತ್ತು...
"ನನ್ನ ಸಣ್ಣ ಕಥೆಗೆ ಪ್ರತಿಕ್ರಿಯಿಸಿದ್ದ ನಿಮಗೆಲ್ಲ ’ಯಾರು ಏನೇ ಬರೆದರೂ ಅದಕ್ಕೆ ಇದ್ದೇ ಇರುತ್ತೆ’ ಅಂತ ನಾನು ಉತ್ತರಿಸಿದ್ದೆ. ಇದರ ಅರ್ಥ, ನನ್ನ ಆ ಸಣ್ಣ ಕಥೆ ನನ್ನ ಸ್ವಂತ ಅನುಭವದ್ದು ಎಂದಲ್ಲ. ಬದಲಿಗೆ, ನಾನು ಮೊದಲಿನಿಂದ ಹೇಳುತ್ತಾ ಬಂದಿರುವಂತೆ, ನನ್ನ ಸುತ್ತಮುತ್ತಲಿನ ಜನ, ಅವರ ಮಾತು, ನಡುವಳಿಕೆಗಳೆ ಹಾಗು ಎಲ್ಲರಿಗೂ ತಿಳಿದಿರುವ ಕೆಲವು ಸಂಗತಿಗಳೇ ನನ್ನ ಬರಹಗಳಿಗೆ ಆಹಾರ ಅಥವಾ ಮುಲ. ಆ ನನ್ನ ಸಣ್ಣ ಕಥೆಯೂ ಇದರಿಂದ ಹೊರತಲ್ಲ. ನಿಮ್ಮ ಪ್ರತಿಕ್ರಿಯೆಗೆ ಹಾಗು ತೋರಿದ ಕಾಳಜಿಗೆ ಧನ್ಯವಾದಗಳು"
ನಾನು ಬರೆದ ಆ ಸಾಲುಗಳಿಗಿಂತ ಉದ್ದವಾಗಿವೆ ಅವನು ಬರೆದುಕೊಟ್ಟ ಈ ತಪ್ಪೊಪ್ಪಿಗೆ ಮೆಸೆಜ್...ಹ್ಹಹ್ಹಹ್ಹ :-)

ಅಷ್ಟಕ್ಕೂ ಈ ಚೇತನ್ ಮತ್ತ್ಯಾರು ಅಲ್ಲ, ನನ್ನ ಆತ್ಮೀಯ ಗೆಳೆಯರ ಬಳಗದ ಖಾಯಂ ಗೆಳೆಯ. ಈತ, ನಾನು ಪ್ರತೀಬಾರಿ ಏನಾದರು ಹೊಸದಾಗಿ ಬರೆದಾಗ, open feedback ಕೊಡುತ್ತಾನೆ. ನನ್ನ ಬರವಣಿಗೆಗೆ ಹೊಸ ಹೊಸ ವಿಷಯಗಳನ್ನು ಕೊಟ್ಟು, ನನ್ನ ಬೆಳವಣಿಗೆಗೆ ಕಾರಣವಾಗುತ್ತಾನೆ :-)

ಹೌದು.... ಇಷ್ಟೇಲ್ಲ ಸರ್ಕಸ್ ಗೆ ಕಾರಣವಾದ ಆ ಸಾಲುಗಳು ಯಾವುದು..?! ಅವು ನನ್ನ ತಲೆಗೆ ಹೇಗೆ ಹೊಳೆದವು...?!

ಬಹುಶ: ಇದು ಎಲ್ಲರಿಗೂ ಗೊತ್ತಿರುವ ಜೋಕ್. ದೂರದ ಊರಿನಲ್ಲಿರುವ ಗಂಡ, ತನ್ನ ಹೆಂಡತಿ ಮೇಲಿನ ಪ್ರೀತಿಯಿಂದ ಹಾಗು ಅಷ್ಟೇ ತುಂಟತನದಿಂದ ಹೆಂಡತಿಗೆ, "ಪ್ರಿಯೆ, ಅನಿವಾರ್ಯ ಕಾರಣಗಳಿಂದ ಈ ತಿಂಗಳ ಸಂಬಳ ಕಳುಹಿಸಲು ಸ್ವಲ್ಪ ತಡವಾಗಲಿದೆ. ಅಲ್ಲಿಯವರೆಗು ನಿನಗೆ ನಿರಾಸೆಯಾಗದಿರಲಿ ಎಂದು 500 ಸಿಹಿಮುತ್ತುಗಳನ್ನು ಕಳುಶಿಸುತ್ತಿದ್ದೇನೆ, ಜೋಪಾನ." ಎಂದು ಪತ್ರ ಬರೆಯುತ್ತಾನೆ. ಅಷ್ಟೇ ತುಂಟತನ ಹಾಗು ಬುದ್ದಿವಂತಿಕೆಯಿಂದ ಆಕೆ, "ನೀವು ಕಳುಹಿಸಿದ 500 ಸಿಹಿಮುತ್ತುಗಳಲ್ಲಿ, 300 ಮುತ್ತುಗಳನ್ನು ಹಾಲಿನವನಿಗೂ, ಉಳಿದ 200 ಮುತ್ತುಗಳನ್ನು ಕೇಬಲ್ ನವನಿಗೂ ಕೊಟ್ಟಿದ್ದೇನೆ.!!!! ನಿಮ್ಮ ಸಂಬಳವನ್ನು ಬೇಗ ಕಳುಹಿಸಿ." ಎಂದು ಪತಿರಾಯನ ಪತ್ರಕ್ಕೆ ಉತ್ತರಿಸುತ್ತಾಳೆ. :-)

ಇದು ಮದುವೆಯಾದವರ ಕಥೆಯಾಯಿತು. ಇನ್ನು ಈಗಷ್ಟೇ ಪ್ರೀತಿಸಲು ಶುರು ಮಾಡಿದ ಯುವ ಜೋಡಿಗಳ ಪಾಡೇನು..?!! ಈಗ ಎಲ್ಲರಿಗೂ ಪತ್ರ ಬರೆಯುವ ಅಭ್ಯಾಸವೇ ಮರೆತುಹೋಗಿದೆ. ಈಗಿನವರ ಪ್ರೀತಿ (ಕೆಲವರ ಹೊರತಾಗಿ) ಮೊಬೈಲ್ ನಂಬರ್ ನಲ್ಲಿ ಹುಟ್ಟಿ, ಎಸ್ಸೆಮ್ಮೆಸ್, ಕಾಲ್ ಗಳಲ್ಲಿ ಬೆಳೆದು, ಮೊಬೈಲ್ ಕರೆನ್ಸಿ ಖಾಲಿಯಾಗುವ ಹೊತ್ತಿಗೆ ಕರಗಿಹೋಗಿ ಬಿಟ್ಟಿರುತ್ತೆ. ಅಂಥದರಲ್ಲಿ, ಈಗಿನವರು ಸಂಗಾತಿಗಳಿಗಾಗಿ ಪತ್ರ ಬರೆಯಲು ಕುಳಿತರೆ, ಏನು ಬರೆಯಬೇಕೆಂದು ತೋಚುವುದೇ ಇಲ್ಲ. ಆದರೂ ಪತ್ರ ಬರೆಯಬೇಕು ಎಂಬ ಹಠದಿಂದ ಎಂಥ ಪತ್ರ ಸಿದ್ದವಾಗಬಹುದು...?!!

ಹೀಗೆ, ಹೆಂಡತಿ ಮೇಲಿನ ಪ್ರೀತಿಯಿಂದ ಪತ್ರದಲ್ಲಿ ಸಿಹಿಮುತ್ತುಗಳನ್ನು ಕಳುಹಿಸುವ ಗಂಡ ಹಾಗೂ ಸಂಗಾತಿಗೆ ಪತ್ರ ಬರೆಯಲು ಕುಳಿತು, ಏನು ಬರೆಯುವುದು ಎಂದು ತಿಳಿಯದೆ ಮೂಕರಾಗುವ ಜೋಡಿಗಳು. ಈ ಎರಡು ಸಂಗತಿಗಳು ನನ್ನ ದಡ್ಡ ತಲೆಯಲ್ಲಿ ಆ ಹೊಸ ಸಾಲುಗಳನ್ನು ಹುಟ್ಟುಹಾಕಿದವು.

"ಒಲವಿನ ಪತ್ರ ಬರೆಯಲು ಕುಳಿತ ನಲ್ಲೆಗೆ, ಅಕ್ಷರಗಳೇ ಮರೆತು ಹೋದವು.

ತಕ್ಷಣವೇ, ಪತ್ರದ ಮೇಲೆ ಮುತ್ತಿನ ಮುದ್ರೆ ಮುಡಿಸಿ ಪೋಸ್ಟ್ ಮಾಡಿದಳು."

ಒಂದೇ ಓದಿಗೆ ಬಹಳ ಆಕರ್ಷಿಸುವ ಈ ಸಾಲುಗಳು ನನಗೇ ಬಹಳ ಖುಷಿಕೊಟ್ಟವು.
ಸರಿ ಇದನ್ನು ಯಾವುದಾದರು ದಿನಪತ್ರಿಕೆಗೆ ಕಳುಹಿಸಿ, ಪ್ರಕಟವಾಗುವಂತೆ ಮಾಡಿ ಆ ನಂತರದಲ್ಲಿ ಗೆಳೆಯರೊಂದಿಗೆ ಹಂಚಿಕೊಳ್ಳೋಣ ಎನಿಸಿತು. ಆದರೆ, ಯಾವ ಪತ್ರಿಕೆಗೆ ಕಳುಹಿಸುವುದು ?!!

ಹಿಂದೊಮ್ಮೆ, ನಾನು ಬಿ.ಕಾಂ ಓದುತ್ತಿರುವಾಗ, ಗೆಳೆಯನೊಬ್ಬ ಕಳುಹಿಸಿದ ಮೆಸೇಜ್ ಒಂದನ್ನು ದಿನಪತ್ರಿಕೆಯೊಂದಕ್ಕೆ ಕಳುಹಿಸಿದ್ದೆ. ಆ ಜೋಕ್ ಪ್ರಕಟವಾಗಿ ಬಹಳ ಜನ ಓದುಗರು ನನಗೆ ಫೋನ್ ಮಾಡಿದ್ದರು. ಈಗಲೂ ಆ ದಿನಪತ್ರಿಕೆಯಲ್ಲಿ ’ದಿನಚರಿ’ ಅಂಕಣದಲ್ಲಿ ಪತ್ರಿಕೆಯವರ ಮೊಬೈಲ್ ನಂಬರ್ ನೀಡಲಾಗುತ್ತದೆ.
ಆ ನಂಬರ್ ಗೆ ಯಾರು ಬೇಕಾದರೂ ಮೆಸೆಜ್ ಕಳುಹಿಸಬಹುದು. ಆಯ್ದ ಕೆಲವು ಜೋಕ್ ಗಳನ್ನೊ, ಸುಭಾಷಿತಗಳನ್ನೋ ಪತ್ರಿಕೆಯವರು ಪ್ರಕಟಿಸುತ್ತಾರೆ. ಹಾಗಾಗಿ, ಅದೇ ನಂಬರ್ ಗೆ ನನ್ನ ಈ ಸಾಲುಗಳನ್ನು ಕಳುಹಿಸಿದ್ದಾಯಿತು.
ಸುಮಾರು ದಿನಗಳಾದರೂ, ನನ್ನ ಮೆಸೆಜ್ ಪ್ರಕಟವಾಗಲೇ ಇಲ್ಲ.!!! ನನ್ನ ಸಾಲುಗಳ ಬಗ್ಗೆ ನನಗಿದ್ದ ನಂಬಿಕೆ ಕಡಿಮೆಯಾಗುತ್ತಾ ಬಂದಿತು. ಹಾಗಾಗಿ ಯಾರೊಂದಿಗೂ ಅದರ ಬಗ್ಗೆ ಹೇಳಿಕೊಳ್ಳಲಿಲ್ಲ. ಕೊನೆಗೊಂದು ದಿನ ನನಗೆ ಆಶ್ಚರ್ಯ ಕಾದಿತ್ತು.

ನನ್ನ ಮೆಸೆಜ್ ಬೇರೊಂದು ಪತ್ರಿಕೆಯಲ್ಲಿ, ಬೇರೆಯವರ ಹೆಸರಿನೊಂದಿಗೆ ಪ್ರಕಟಗೊಂಡಿತ್ತು. ನನ್ನ ಸಾಲುಗಳೊಂದಿಗೆ, ಇತರ ಕೆಲ ಬಿಡಿ ಬಿಡಿ ಸಾಲುಗಳೂ ಸಹ ಪ್ರಕಟಗೊಂಡಿತ್ತು. ಆ ಸಾಲುಗಳೆಲ್ಲ ಯಾರದ್ದೊ...??! ಅವರಿಗೂ ಅಚ್ಚರಿ ಜೊತೆಜೊತೆಗೇ ಕೋಪ ಉಂಟಾಗಿರುತ್ತೆ. ವಾರದ ಹಿಂದಷ್ಟೇ, ಮಾಧ್ಯಮಗಳಲ್ಲಿ ನಡೆಯುವ ಭ್ರಷ್ಟಾಚಾರ, ರಾಜಕೀಯ ಅಂಶಗಳನ್ನು ಒಳಗೊಂಡ ಹಿಂದಿಯ "ರಣ್" ಚಿತ್ರ ನೋಡಿದ್ದ ನನಗೆ, ಈ ವಿಷಯದ ಬಗ್ಗೆ ಯಾವುದೇ ಅಭಿಪ್ರಾಯ ಹುಟ್ಟಲಿಲ್ಲ. ಆದರೆ, ಹೊಸದೊಂದು ಅನುಭವವಾಗಿತ್ತು, ಪಾಠ ಕಲಿತಾಗಿತ್ತು.

ಗೆಳೆಯರೊಂದಿಗೆ ಹಂಚಿಕೊಳ್ಳದೇ ಹಾಗೆ ಇಟ್ಟಿದ್ದ ಸಾಲುಗಳನ್ನು, ಅಂದೇ ಎಲ್ಲರಿಗೂ ಮೆಸೆಜ್ ನಲ್ಲಿ ಕಳುಹಿಸಿದ್ದೇ..!!!