Wednesday, July 21, 2010

ಅಂದು ನೀ ಹೋದದ್ದನ್ನು ಸರಿಯಾಗಿ ವಿವರಿಸಲು ಒಂದೇ ಒಂದು ಪದ ಸಿಗಲಿಲ್ಲ...


‘ಮುಂಗಾರು ಮಳೆ’, ‘ಗಾಳಿಪಟ’, ‘ಮನಸಾರೆ’ ಚಿತ್ರಗಳ ಮೂಲಕ ಅಪ್ಪಟ ತಾಜಾತನದ, ಅದ್ಭುತ ಹಿಟ್ ಚಿತ್ರಗಳನ್ನು ಕೊಟ್ಟು ಯುವ ಜನಾಂಗವನ್ನು ಮತ್ತೆ ಕನ್ನಡ ಚಿತ್ರಗಳತ್ತ ಸೆಳೆದ ಶ್ರೇಷ್ಠ ನಿರ್ದೇಶಕ ಯೋಗರಾಜ್ ಭಟ್, ಈಗ ಅವರ ಲೇಟೆಸ್ಟ್ ಚಿತ್ರ "ಪಂಚರಂಗಿ" ಯ ಬಿಡುಗಡೆಯ ಗಡಿಬಿಡಿಯಲ್ಲಿದ್ದಾರೆ. ಅಗಾಧ ಪ್ರತಿಭೆಯ, ವಿಕ್ಷಿಪ್ತ ವ್ಯಕ್ತಿತ್ವದ, ತಮ್ಮ ಲೇವಡಿ ಮಾಡುವ ಸಂಭಾಷಣೆಯಿಂದಲೇ ಪ್ರೇಕ್ಷಕರನ್ನು ಸೆಳೆಯುವ ಯೋಗರಾಜ್ ವಿಭಿನ್ನ ಅಭಿವ್ಯಕ್ತಿಯ ಕವಿ, ಕತೆಗಾರ, ಗೀತಕಾರ ಕೂಡ. ಅವರು ಬರೆದಿರುವ ಒಂದು ಪದ್ಯ ಇಲ್ಲಿ ನಿಮಗಾಗಿ.


ಮುಂದುವರಿಯುವುದು...

ನೀನು ಆ ದಿನ ಅಲ್ಲಿ
ಕಂಡಾಗ ಅನಿಸಿದ್ದಿಷ್ಟು.


ಆ ಕಪ್ಪು ಕೈನೆಟಿಕ್ ನಿಮ್ಮಪ್ಪ ಕೊಡಿಸಿರಬೇಕು,
ಆ ನಿವೃತ್ತ ಅಪ್ಪನ ಪೆದ್ದುತನ ನಿನಗೆ ತುಂಬಾ ಇಷ್ಟವಿರಬಹುದು,


ನಿಂಗೊಬ್ಬ ಅಣ್ಣ, ಅವನಿಗೊಂದಿಷ್ಟು ಸಂಬಳ, ಕನಿಷ್ಟ ಎರಡು ಬ್ಯಾಂಕು ಸಾಲಗಳು,
ಒಂದು ಕಿತ್ತ ಅಮರ ಪ್ರೀತಿ, ಒಂದು ಗ್ಯಾಸು ಕೂರಿಸಿದ ಕಾರು ಇದ್ದಿರಬೇಕು...


ಕದ್ದು ಚಿಕನ್ ತಿನ್ನುವ, ಬಿಯರ್ ಕುಡಿವ ತಮ್ಮ ಇದ್ದಿರಬಹುದು...
ಅವನ ಕುಡಿಮೀಸೆ ಕಂಡರೆ ಅದೇನೋ ಸಣ್ಣ ರೇಜಿಗೆ ನಿನಗೆ...


ನಿನ್ನನ್ನು ಕ್ಯಾರೇ ಅನ್ನದ ಒಬ್ಬ ತಂಗಿ ಇದ್ದಾಳೇನೋ... ಅವಳು
ನಿನಗಿಂತ ಎತ್ತರ ಎಂದು ಅವಳು ನಿಂಗಾಗಲ್ಲ... ಅವಳು
ಕನ್ನಡಿ ಮುಂದಿದ್ದರೆ ಅದೇನೋ ಅಸಹನೆ ನಿನಗೆ...


ನಿಮ್ಮಪ್ಪನಿಗೆ ಇದಕ್ಕಿಂತ ಜಾಸ್ತಿ ಮಕ್ಕಳಿರಲಾರರು...
ಅಮ್ಮನಿಗೆ ಸಕ್ರೆ ಖಾಯಿಲೆ, ಇಳಿ ಹೊಟ್ಟೆ... ಹಸಿರು ಕಲರ್
ಸ್ವೆಟರ್‌ನಲ್ಲಿ ಆಕೆ ದಿನಾ ಬೆಳಗ್ಗೆ ಪಾರ್ಕೊಂದರಲ್ಲಿ ಹ್ಹಾ ಹ್ಹಾ ಎನ್ನುತ್ತಿರಬಹುದು...

ಮಗಳಿಗೆ ಅಮೆರಿಕಾ ಕೆಲಸ ಸಿಕ್ಕರೂ ಹೋಗದ ಬಗ್ಗೆ
ಅಮ್ಮ ಅಲ್ಲಿ ಇಲ್ಲಿ ಹೇಳಿದರೆ ನಿನ್ನಲ್ಲಿ ವಾಂತಿಯಂತಹ ತಿರಸ್ಕಾರ...

ಸಾನಿಯಾ ಮಿರ್ಜಾ ನಿನಗಿಷ್ಟವಿಲ್ಲ... ಅವಳಂತೆ
ಮೂಗುತಿ ಹಾಕುವ ಹುಡುಗಿಯರ ಬಗ್ಗೆ ಅಸಡ್ಡೆ ನಿನಗೆ...


ಕನ್ನಡ ಹಾಡುಗಳು ಅಷ್ಟಾಗಿ ಇಷ್ಟವಿಲ್ಲವೋ ಏನೋ...
ಯಾವುದೋ ಹಾಲಿವುಡ್ ನಟ ನಿಂಗಿಷ್ಟ - ಹೆಸರು ತಕ್ಷಣ ನೆನಪಾಗಲ್ಲ...


ಸಲ್ಮಾನ್ ಖಾನ್ ಬಗ್ಗೆ ಒಂಥರಾ ತಿಳಿ ಬೇಸರ... ಸಹೋದ್ಯೋಗಿಯೊಬ್ಬನ
ಬಟ್ಟೆ ಆಯ್ಕೆ ಇಷ್ಟ... ಅವನ ಬಕ್ಕ ಹೃದಯ ಆಗದೇನೋ...
ಯಾವುದೋ ಇಬ್ಬರು ಗಂಡಸರೂ ಅಲ್ಲದ, ಹುಡುಗರೂ ಅಲ್ಲದ,
ಕಾಫಿ ಡೇ ಕಮಂಗಿಗಳು- ಐ ಲವ್ ಯೂ - ಎಂದು ಆರ್ತನಾದ
ಮಾಡದಂತೆ ನೀ ತಡೆಹಿಡಿದಿರಬಹುದು...


ನಿನ್ನ ಪ್ರಿಪೇಯ್ಡ್ ಮೊಬೈಲಿನ ತುಂಬಾ
ಗುಡ್ ಮಾರ‍್ನಿಂಗ್ ಹಾಗೂ ಜೀವನ ಸುಂದರ-
ಎಂಬ ಗೆಳತಿಯರ ಎಸ್ಸೆಮ್ಮೆಸ್ಸುಗಳು...

ಕೆಲವು ಪೋಲಿ ಮೆಸೇಜುಗಳನ್ನು ನೆನಪಿಟ್ಟುಕೊಂಡು ನೀ
ಅಳಿಸಿ ಹಾಕಿರುವೆ...
ಮೊಬೈಲಿನ ಹೆಸರು ಪಟ್ಟಿಯಲ್ಲಿ ಗಂಡಸರಿಗೆಲ್ಲ ಆಡ್ಡನಾಮ...


ವ್ಯಾನಿಟಿಯಲ್ಲೆರಡು ಬಣ್ಣದ ಕ್ಲಿಪ್ಪುಗಳು, ತುಂಡು ಬಿಳಿ ಕರ್ಚೀಪು,
ಸ್ಟೇಫ್ರೀ, ಲಿಪ್‌ಸ್ಟಿಕ್ಕು, ಒಂದೆರಡು ಟೈಲರ್ ರಶೀತಿ,
ಯಾವುದೂಕಳೆಯಬಾರದೆಂದು ಪೇರಿಸಿದ ಚೀಟಿರಾಶಿ, ಬಿಂದಿ ಪ್ಯಾಕೆಟ್ಟು, ದುಂಡುಮುಳ್ಳಿನ
ಬಾಚಣಿಗೆ, ಎಮರ್ಜೆನ್ಸಿ ಐನೂರರ ಅನಾಥ ನೋಟುಗಳು, ಎಟಿಎಮ್ ಕಾರ್ಡು,
ಯಾವ ಖಾಯಿಲೆಗೋ ಗೊತ್ತಿಲ್ಲದ ಹಳದಿ ಬಣ್ಣದ ಮಾತ್ರೆಪಟ್ಟಿ...!


ಯಾವುದಕ್ಕೂ ಒಬ್ಬ ಜೊತೆಗಿದ್ದರೆ ಹೇಗೆಂಬ ಹುಡುಗಾಟ
ಇದೆಅವನ್ಯಾರು ಗೊತ್ತಿಲ್ಲ... ಯಾಕೋ
ಒಮ್ಮೊಮ್ಮೆಎಲ್ಲರೂ ಇಷ್ಟವಾಗಿ ಇಳಿಸಂಜೆಯಷ್ಟೊತ್ತಿಗೆ ಯಾರೂ
ಬಿಲ್‌ಕುಲ್ ಬೇಡವಾಗುವ ಸನ್ಯಾಸಿನಿಯ
ಪೂಸಿನಲ್ಲಿಅದೀನೂ ಸುಖ ಇರಬಹುದು ನಿನಗೆ...!

ನೀನಾಗಿ ಯಾರನ್ನಿಷ್ಟಪಡಲೂ ನಿಂಗಿಷ್ಟವಿಲ್ಲ...
ಯಾರಾದರೂ ನಿನ್ನಿಷ್ಟಪಟ್ಟರೆ
ಕೊಲೆಮಾಡಿಬಿಡುವ ಕೋಪ ನಿಂಗೆ...
ನೀನು ಹೇರ್‌ಬ್ಯಾಂಡ್ ಹಾಕಿಕೊಳ್ಳುವ
ಗತ್ತಿನಲ್ಲಿಮುಚ್ಕೊಂಡು ನಿಮ್ ಕೆಲ್ಸ ನೋಡ್ಕೊಳಿ
-ಎಂಬ ಮುದ್ದು ಸಂದೇಶ...


ಗಾಡಿಯ ಕಿಕ್ ಹೊಡೆವಾಗ ಸೈಬರ್
ಕೆಫೆಯಲ್ಲಿಏನನ್ನೋ ಕದ್ದು ನೋಡಿದ ನೆನಪಿನ ಮುಗ್ಧ ನಗು
ನಾನಿನ್ನೂ ನಿನ್ನ ಬಗ್ಗೆ-ಸಾಕಷ್ಟು ಕಲ್ಪಿಸಿಕೊಳ್ಳುವುದಿತ್ತು
ನಿನ್ನೆಲ್ಲದನ್ನು ಮೀರಿದ ಹೆಣ್ತನದ ನಾಜೂಕನ್ನೆಲ್ಲ
ಬೆದೆಗೆ ಬಂದಂತೆ ಬಣ್ಣಿಸುವ ತೀಟೆಯಿತ್ತು...

ಯಾಮಾರಿ- ಮಳೆನೀರ ಮುಚ್ಚಿಹಿಡಿದ
ಮುಗಿಲಿನ ಮೌನ ನಿನ್ನಲ್ಲಿ -
ಎಂದೆಲ್ಲ ಬರೆದು ನಾ ತುಂಬಾ
ಗಂಭೀರ ಕವಿಯಾಗಿ
ಬಿಡುವ ದುರಂತ ಸಾಧ್ಯತೆ ಇತ್ತು...!


ಅಷ್ಟರಲ್ಲಿ ನೀ ಕೈನೆಟಿಕ್ ಏರಿ ಹೊರಟು ಹೋದೆ.
ಅಂದು ನೀ ಹೋದದ್ದನ್ನು ಸರಿಯಾಗಿ ವಿವರಿಸಲು
ಒಂದೇ ಒಂದು ಪದ ಸಿಗಲಿಲ್ಲ...

ಈ ಕವಿತೆಯಲ್ಲದ್ದನ್ನು ಮುಗಿಸಲು
ಕೊನೆಗೂ ನನಗೊಂದು ಕೊನೆಯ ಸಾಲು ಸಿಗಲಿಲ್ಲ....


-ಯೋಗರಾಜ್ ಭಟ್