Sunday, April 1, 2012

ಕ್ರಿಕೆಟ್ ಬಗೆಗಿನ ಆತನ ಹಸಿವು ಇನ್ನೂ ಹಿಂಗಿಲ್ಲ…ಪ್ರೀತಿ ಕರಗಿಲ್ಲ

     ಇಡೀ ಕ್ರೀಡಾಂಗಣ ಕಿಕ್ಕಿರಿದು ತುಂಬಿದೆ. ಬಹಳ ದಿನಗಳಿಂದ ಎಲ್ಲರೂ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದ ’ಆ ಕ್ಷಣ’ ಇನ್ನೇನು ಸಂಭವಿಸ ಬಿಡಬಹುದೇ ಎಂಬ ನಿರೀಕ್ಷೆ, ಕುತೂಹಲ ; ಎಲ್ಲರ ಎದೆಯಲ್ಲೂ ಆತಂಕವಿರುವಾಗಲೇ, ಮಾಧ್ಯಮದವರಿಗೆ ಮೀಸಲಿಟ್ಟ ಜಾಗದಲ್ಲಿ ಒಂದು ಗಾಲಿ ಕುರ್ಚಿಯನ್ನು ತಂದಿರಸಲಾಗುತ್ತದೆ. ಹಿಂದೆಯೇ ಇಬ್ಬರು ಸಹಾಯಕರ ನೆರವಿನಿಂದ ಡಾಕ್ಟರ್ ಒಬ್ಬರು ವಯಸ್ಸಾದ ವ್ಯಕ್ತಿಯನ್ನು ಕರೆತಂದು ಆ ಕುರ್ಚಿಯಲ್ಲಿ ಕೂರಿಸುತ್ತಾರೆ. ಆ ವಯಸ್ಸಾದ ವ್ಯಕ್ತಿಗೆ ಯಾವುದೋ ಖಾಯಿಲೆ ಇದ್ದು, ಆತನ ಪರಿಸ್ಥಿತಿಯನ್ನು ನಿಭಾಯಿಸಲು ಡಾಕ್ಟರ್ ಅವಶ್ಯಕತೆಯಿದೆ ಎಂದು ನೋಡಿದವರೆಲ್ಲರಿಗೂ ಅನಿಸುವ ವೇಳೆಗೆ, ಆ ವಯಸ್ಸಾದ ವ್ಯಕ್ತಿಯ ಮುಂದೆ ಕ್ಯಾಮರ ಸ್ಟ್ಯಾಂಡ್ ಅನ್ನು ತಂದಿರಸಲಾಗುತ್ತದೆ; ಆ ವ್ಯಕ್ತಿ ಲೀಲಾಜಾಲವಾಗಿ ಕ್ಯಾಮರದ ಮೇಲೆ ಕೈಯಾಡಿಸುತ್ತಾ, ಫೋಟೋಗಳನ್ನು ಕ್ಲಿಕ್ಕಿಸ ತೊಡಗುತ್ತಾನೆ.!!



     ಆ ವಯಸ್ಸಾದ ವ್ಯಕ್ತಿಯ ಹೆಸರು ಅಲ್ ಹಜ್ ಮಹಮ್ಮದ್ ಜಹಿರುಲ್. ಬಾಂಗ್ಲಾದೇಶದ ’ಆಜ್ ಕಲ್’ ಎಂಬ ದಿನಪತ್ರಿಕೆಯ ಫೋಟೋ ಜರ್ನಲಿಸ್ಟ್. ಸುಮಾರು ೮೦ ವರ್ಷ ವಯಸ್ಸಿನ ಮಹಮ್ಮದ್ ಜಹಿರುಲ್ ಡಯಾಬಿಟಿಕ್ ಹಾಗೂ ಹೈಪರ್ ಟೆನ್ಸಿವ್ ಖಾಯಿಲೆಯಿಂದ ಬಳಲುತ್ತಿದ್ದು, ’ಅಂದಿನ ದಿನ’ ಅವರ ಆರೋಗ್ಯ ಹದಗೆಟ್ಟಿತ್ತು. ಆದರೂ, ಅನಿರೀಕ್ಷಿತವಾಗಿ ಆವರು ಅಂದು ಕ್ರೀಡಾಂಗಣಕ್ಕೆ ಹೋಗಲೇಬೇಕು ಎಂದು ಮನಸ್ಸು ಮಾಡಿ ಹೊರಟು ಬಂದಿದ್ದು ಸಚಿನ್ ಗಾಗಿ, ಸಚಿನ್ ಮೇಲಿನ ಅಭಿಮಾನದಿಂದಾಗಿ!! ಸಚಿನ್ ನ ಅಪ್ಪಟ ಅಭಿಮಾನಿಯಾಗಿರುವ ಮಹಮ್ಮದ್ ಜಹಿರುಲ್, ಸಚಿನ್ ಮಾಡಲಿರುವ ನೂರನೇ ಶತಕದ ಅಪೂರ್ವ ಕ್ಷಣಗಳನ್ನು ತಮ್ಮದೇ ಕ್ಯಾಮರಾದಲ್ಲಿ, ತಾವೇ ಸ್ವತ: ತಮ್ಮ ಕೈಯ್ಯಾರೆ ಸೆರೆ ಹಿಡಿಯುವ ಆಸೆಯಿಂದ, ಮುತುವರ್ಜಿಯಿಂದ.


ಇದು ಸಚಿನ್ ತೆಂಡೂಲ್ಕರ್ ಎಂಬ ಹೆಸರಿನ ಮಾಂತ್ರಿಕನ ಮಾಯೆ!!



 
ಸಚಿನ್ ತೆಂಡೂಲ್ಕರ್ ಎಂಬ ಹೆಸರೇ ಸಾಕು, ಅದೆಷ್ಟೋ ಜನ ಸೂಜಿಗಲ್ಲಿನಂತೆ ಆಕರ್ಷಿತರಾಗಿ ಬಿಡುತ್ತಾರೆ. ಹಿಂದೆಯೆ, ಆತನ ಬ್ಯಾಟಿಂಗ್ ಬಗ್ಗೆ, ಆತನ ಹೆಸರಿನಲ್ಲಿರುವ ದಾಖಲೆಗಳ ಬಗ್ಗೆ, ಏಕಾಂಗಿಯಾಗಿ ಹೋರಾಡಿ ಗೆಲ್ಲಿಸಿಕೊಟ್ಟ ಪಂದ್ಯಗಳ ಬಗ್ಗೆ ನೆನೆದು ’ಇವ ನಮ್ಮವ’ ಎಂಬ ಹೆಮ್ಮೆಯಿಂದ ಹಿರಿ ಹಿರಿ ಹಿಗ್ಗುತ್ತಾರೆ. ಜೊತೆಗೇ, ’ಭಾರತದಲ್ಲಿ ಕ್ರಿಕೆಟ್ ಧರ್ಮವಾದರೆ, ಸಚಿನ್ ದೇವರು’ ಎಂಬ ಪಟ್ಟ ನೀಡಿ ಸಂಭ್ರಮಿಸುತ್ತಾರೆ.



ನೋಡಿದಷ್ಟು ನೋಡಲೇ ಬೇಕೆನಿಸುವ, ತನ್ನಷ್ಟಕ್ಕೆ ತಾನಿರುವ, ಎಲ್ಲಾ ಸಂದರ್ಭದಲ್ಲೂ ತಂಡಕ್ಕೆ ಆಧಾರವಾಗುವ, ತಾನು ಏತಕ್ಕಾಗಿ ಕ್ರಿಕೆಟ್ ಆಡುತ್ತಿದ್ದೇನೆ ಎಂಬುದರ ಬಗ್ಗೆ ಸ್ಪಷ್ಟ ಅರಿವಿರುವ, ಸರಳ, ಸುಂದರ ಸಜ್ಜನಿಕೆಯ ಸಚಿನ್ ಬಗ್ಗೆ ಹೇಳಲು ಆತ ಮಾಡಿರುವ ದಾಖಲೆಗಳನ್ನು ಅಳತೆಗೋಲು ಮಾಡಿಕೊಳ್ಳುವುದು ಸಮಂಜಸವಲ್ಲ. ಯಾಕೆಂದರೆ, ಸಚಿನ್ ಕ್ರಿಕೆಟ್ ಆಟವನ್ನೂ ಮೀರಿ ನಮ್ಮೆಲ್ಲರನ್ನೂ ಆವರಿಸಿಕೊಂಡಿದ್ದಾನೆ. ಆತ ಯಾವತ್ತೂ ಭಾವೋದ್ವೇಗಕ್ಕೊಳಗಾಗುವುದಿಲ್ಲ, ಯಾವತ್ತೂ ಸಮಚಿತ್ತ, ಸಮಸ್ಥಿತಿಯನ್ನು ಕಳೆದುಕೊಳ್ಳುವುದಿಲ್ಲ. ಈ ರೀತಿಯ ಗುಣಗಳೇ ಆತನನ್ನು ಕ್ರಿಕೆಟ್ ಆಡುವವರ, ನೋಡುವವರ ಹೃದಯಕ್ಕೆ ಹತ್ತಿರವಾಗಿಸಿದೆ. ಅದಕ್ಕಾಗಿಯೇ ಸಚಿನ್ ನಮ್ಮ-ನಿಮ್ಮೆಲ್ಲರ ನಡುವಿನ ಜೀವಂತ ದಂತಕಥೆ ಎನಿಸಿರುವುದು.

 
 
ಭಾರತೀಯರು ಕ್ರಿಕೆಟ್ ನೋಡಲು ಪ್ರಾರಂಭಿಸಿದ ದಿನದಿಂದ ಸಚಿನ್ ನನ್ನು ನೋಡುತ್ತಿದ್ದಾರೆ. ಸಚಿನ್ ಕ್ರಿಕೆಟ್ ಮೇಲಿನ ತನ್ನ ಪ್ರೀತಿಯನ್ನು ತನ್ನ ಆಟದ ಮೂಲಕ ಭಾರತೀಯರಿಗೆ, ಇಡೀ ಕ್ರಿಕೆಟ್ ಜಗತ್ತಿಗೆ ಹಂಚಿದ್ದಾನೆ. ಸಮಸ್ತ ಭಾರತೀಯರು ಕ್ರಿಕೆಟ್ ಬಗ್ಗೆ ಒಂದಿಷ್ಟು ಆಸಕ್ತಿ ಇಟ್ಟುಕೊಳ್ಳುವಂತೆ, ಟಿ.ವಿ. ಮುಂದೆ ಕುಳಿತುಕೊಳ್ಳುವಂತೆ ಮಾಡಿದ್ದು ಸಚಿನ್ ಎಂದರೆ ಅತಿಶಯೋಕ್ತಿಯಲ್ಲ. ಭಾರತದಲ್ಲಿ ಇಂದು ಕ್ರಿಕೆಟ್ ಒಂದು ಧರ್ಮವೆನಿಸಿದ್ದರೆ, ಅದಕ್ಕೆ ಸಚಿನ್ ಹೊಣೆಯಾಗುತ್ತಾನೆ  ಇಂದಿನ ಹಿರಿಯರಿಗೆ ಸಚಿನ್ ಇಲ್ಲದೆ ಪಂದ್ಯ ನೋಡುವುದು ಕಷ್ಟವೆನಿಸಬಹುದು, ಆದರೆ ಇಂದಿನ ಕಿರಿಯರು ಸಂಭ್ರಮಿಸುತ್ತಿರುವ ಎಲ್ಲಾ ಆಟಗಾರರೂ (ಸೆಹ್ವಾಗ್, ಕೊಹ್ಲಿ, ರೈನಾ ಮುಂತಾದವರು) ಸಚಿನ್ ಯಿಂದ ಸ್ಪೂರ್ತಿ ಪಡೆದವರೇ!!



ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸಚಿನ್ ನ ಆರಂಭಿಕ ದಿನಗಳು ಅಷ್ಟೇನು ತೃಪ್ತಿಕರವಾಗಿರಲಿಲ್ಲ. ಅಂತರ ರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂದು ಬರುವಾಗಲೇ ದಾಖಲೆ ಮಾಡಿಕೊಂಡು ಬಂದ ಸಚಿನ್ ಹೆಸರುವಾಸಿಯಾದನೇ ಹೊರತು, ಯಶಸ್ವಿಯಾಗಲಿಲ್ಲ. ಆತನ ಮೊದಲ ಏಕದಿನ ಪಂದ್ಯದ ಶತಕ ಬಂದಿದ್ದು ೭೯ನೇ ಪಂದ್ಯದಲ್ಲಿ!!


ಆತನ ಆತ್ಮವಿಶ್ವಾಸ, ಸ್ವಸಾಮರ್ಥ್ಯದ ಬಗೆಗಿನ ನಂಬಿಕೆ, ಎಲ್ಲಕ್ಕಿಂತ ಮುಖ್ಯವಾಗಿ ಕ್ರಿಕೆಟ್ ಗೆ ಬೇಕಿರುವ ಡಿಸಿಪ್ಲೀನ್ ಆವನಲ್ಲಿದ್ದಿದ್ದರಿಂದ ಸಚಿನ್ ತಂಡದಲ್ಲಿ ಮುಂದುವರೆದು, ತನ್ನ ವಿರಾಟ್ ರೂಪ ಪ್ರದರ್ಶಿಸಿ, ಯಶಸ್ವಿಯಾಗಲು ಸಾಧ್ಯವಾಯಿತು.


ಸಚಿನ್ ಎದುರಾಳಿ ತಂಡಕ್ಕೆ ತಲೆನೋವಾಗಿ, ಬೌಲರ್ ಗಳ ಪಾಲಿಗೆ ದುಸ್ವಪ್ನವಾಗಿ, ಭಾರತದ ಹೆಮ್ಮೆಯ ಪ್ರತೀಕವಾಗಿ ಬೆಳೆದಂತೆ, ಯಶಸ್ಸು, ಕೀರ್ತಿ, ಪ್ರಶಸ್ತಿಗಳ ಜೊತೆ-ಜೊತೆಗೆ ಟೀಕೆಗಳೂ ಸಚಿನ್ ನನ್ನು ಬೆನ್ನತ್ತಿದ್ದವು. ’ಸಚಿನ್ ಕೇವಲ ದುರ್ಬಲ ತಂಡಗಳ ವಿರುದ್ದ ಆಡುತ್ತಾನೆ’, ’ಸಚಿನ್ ದಾಖಲೆಗಳಿಗಾಗಿ, ತನಗೋಸ್ಕರ ಆಡುತ್ತಾನೆ, ದೇಶಕ್ಕಾಗಿ ಅಲ್ಲ’, ’ಸಚಿನ್ ಸೆಂಚುರಿ ಮಾಡಿದರೆ ಭಾರತ ಸೋಲುತ್ತದೆ’, ’ಸಚಿನ್ ಪಂದ್ಯ ಗೆಲ್ಲಿಸಿಕೊಡಬಲ್ಲ ಆಟಗಾರ ಅಲ್ಲ’, ಹೀಗೆ ಹಲವು ಟೀಕಾ ಪ್ರಹಾರಗಳು. ಆದರೆ ಸಚಿನ್ ಯಾವುದೇ ಟೀಕೆಗಳಿಂದಲೂ ಎದೆಗುಂದುವುದಿಲ್ಲ. ಭಾವೋದ್ವೇಗಕ್ಕೊಳಗಾಗಿ ಪ್ರತಿಕ್ರಿಯಿಸುವುದಿಲ್ಲ. ಎಲ್ಲದಕ್ಕೂ ತನ್ನ ಆಟದಿಂದಲೇ ಉತ್ತರಕೊಟ್ಟು ಮಂದಹಾಸ ಬೀರಿ, ಟೀಕಾಕಾರರ ಬಾಯಿ ಮುಚ್ಚಿಸುವ ಜಾಣ.



೧೯೯೭-೯೮ ರಲ್ಲಿ, ಷಾರ್ಜಾದಲ್ಲಿ ನಡೆದ ಕೋಕಾ-ಕೋಲಾ ಕಪ್ ನ ಪಂದ್ಯಾವಳಿಯಲ್ಲಿ ನಡೆದ ಈ ಘಟನೆ ಬಹಳ ಜನರಿಗೆ ತಿಳಿದಿಲ್ಲ. ಆಸ್ಟ್ರೇಲಿಯಾ ವಿರುದ್ದದ ಆ ಪಂದ್ಯದಲ್ಲಿ ಗೆದ್ದರಷ್ಟೇ ಭಾರತಕ್ಕೆ ಫೈನಲ್ ಪ್ರವೇಶಿಸುವ ಅವಕಾಶ. ಕಡೇಪಕ್ಷ ೮೭ ಬಾಲ್ ಗಳಲ್ಲಿ ೯೫ ರನ್ ಗಳಿಸಿ, ಸೋತರೂ ರನ್ ಸರಾಸರಿ ಆಧಾರದ ಮೇಲೆ ಫೈನಲ್ ಪ್ರವೇಶಿಸಬಹುದಾಗಿತ್ತು. ಆದರೆ ಮೇಲ್ಪಂಕ್ತಿಯ ನಾಲ್ಕು ಪ್ರಮುಖ ಬ್ಯಾಟ್ಸ್ ಮನ್ ಗಳನ್ನು ಕಳೆದುಕೊಂಡು ಭಾರತ ತಂಡ ಶೋಚನೀಯ ಪರಿಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಇಡೀ ಭಾರತೀಯರ ನಿರೀಕ್ಷೆಯ ಭಾರವನ್ನು ಹೊತ್ತು, ಎದೆಗಾರಿಕೆಯಿಂದ, ಮ್ಯಾಚ್ ಗೆಲ್ಲಿಸುವ ಕಿಚ್ಚಿನಿಂದ ಕ್ರೀಸ್ ನಲ್ಲಿ ನಿಂತು ಆಡುತ್ತಿದ್ದದ್ದು ಸಚಿನ್!! ಪಂದ್ಯ ಮುಗಿದು, ಭಾರತ ಸೋತರೂ ಎಲ್ಲೆಡೆ ಸಂಭ್ರಮಾಚರಣೆ!! ಹೌದು, ಸಚಿನ್ ನ ಏಕಾಂಗಿ ಹೋರಾಟ ಭಾರತವನ್ನು ಫೈನಲ್ ತಲುಪಿಸಿಯಾಗಿತ್ತು. ಆದರೆ, ಡ್ರೆಸ್ಸಿಂಗ್ ರೂಮಿನಲ್ಲಿ ಕೋಚ್ ಆಂಶುಮಾನ್ ಗಾಯಕ್ ವಾಡ್ ಜೊತೆ, ಸಚಿನ್, “ಭಾರತ ಫೈನಲ್ ಪ್ರವೇಶಿಸಲಿ ಎಂದು ನಾನು ಆಡಿದ್ದಲ್ಲ..ಭಾರತ ಗೆಲ್ಲಲ್ಲು” ಎಂದು ಬೇಸರಿಸಿಕೊಂಡದ್ದು ಎಷ್ಟು ಜನರಿಗೆ ತಿಳಿದಿದೆ!!


ಆತನ ಇಪ್ಪತ್ತೊಂದು ವರುಷಗಳ ವೃತ್ತಿಬದುಕಿನಲ್ಲಿ ಈ ರೀತಿಯ ಹಲವಾರು ಸನ್ನಿವೇಶಗಳಿವೆ. ಆದರೆ ನಾಚಿಕೆ ಸ್ವಭಾವದ ಸಚಿನ್ ಎಲ್ಲಿಯೂ, ಯಾವುದನ್ನೂ ಹೇಳಿಕೊಳ್ಳುವುದಿಲ್ಲ. ಎಲ್ಲವೂ ಇತರರು ಬರೆದ ಪುಸ್ತಕಗಳಿಂದಲೋ, ಲೇಖನದಿಂದಲೋ, ಹಂಚಿಕೊಂಡ ಸಂಗತಿಗಳಿಂದಲೋ ತಿಳಿಯುತ್ತದೆ. ಸಚಿನ್ ಕ್ರಿಕೆಟ್ ಜಗತ್ತು ಕಂಡ ಅತ್ಯುತ್ತಮ ಶ್ರೇಷ್ಟ ಆಟಗಾರ. ಸಚಿನ್ ಮೇಲಿನ ಟೀಕೆಗಳು ಕೆಲವು, ಆದರೆ ಆತನ ಸಾಧನೆ ಹಲವು. ಇದು ಸಚಿನ್ ಬಗೆಗಿನ ಕುರುಡು ಅಭಿಮಾನದ ಮಾತಲ್ಲ.


ಗಮನಿಸಿ, ಆತನ ಮೇಲಿನ ಟೀಕೆಗಳೆಲ್ಲಾ, ಆತ ವಿಫಲವಾದಾಗ ಬರುವ ಕೇವಲ ಆ ಕ್ಷಣದ ಸಿಟ್ಟು ಮಾತ್ರ. ಅವು ಯಾವತ್ತೂ ಶಾಶ್ವತವಾದ ಟೀಕೆಗಳಲ್ಲ. ಆ ಟೀಕೆಗಳ ಹಿಂದೆಯೇ ಸಚಿನ್ ದಾಖಲೆ ಮಾಡಿದಾಗ ಸಂಭ್ರಮಿಸುವವರು ನಾವೇ, ಎಲ್ಲಾ ದಾಖಲೆಗಳೂ ಸಚಿನ್ ನ ಹೆಸರಿನಲ್ಲೇ ಇದ್ದರೆ ಚೆನ್ನ ಎಂದು ಬಯಸುವುದೂ ನಾವೇ.


ಕಳೆದ ವರ್ಷ ಭಾರತ ವಿಶ್ವಕಪ್ ಗೆದ್ದಾಗ, ಕ್ರಿಕೆಟ್ ಜಗತ್ತಿನಲ್ಲಿ ಸಚಿನ್ ಎಲ್ಲವನ್ನು ಗಳಿಸಿಯಾಗಿದೆ, ದೇಹವೂ ಮುಪ್ಪಿಡುತ್ತಿದೆ ಇನ್ನು ಆತ ನಿವೃತ್ತಿ ಹೊಂದಬಹುದಷ್ಟೇ ಎಂದು ಹಲವರು ನಿರೀಕ್ಷಿಸಿದ್ದರು. ಮೊನ್ನೆ ಮೊನ್ನೆ ಹಿರಿಯ ಆಟಗಾರ ರಾಹುಲ್ ದ್ರಾವಿಡ್ ಅಂತರ ರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳಿದಾಗಲೂ,’ಸಚಿನ್ ಸರದಿ ಯಾವಾಗ?’ ಎಂದು ಕೇಳಿದ್ದರು. ಆ ಸುದ್ದಿಯ ಹಿಂದೆಯೇ ಸಚಿನ್ ನೂರನೇ ಶತಕ ಸಿಡಿಸಿ ಮತ್ತೊಂದು ದಾಖಲೆ ಮಾಡಿ ತನ್ನೆಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಉಡುಗೊರೆಯನ್ನು ನೀಡಿದ್ದಾನೆ!!


ಇಲ್ಲ, ಕ್ರಿಕೆಟ್ ಬಗೆಗಿನ ಆತನ ಹಸಿವು ಇನ್ನೂ ಹಿಂಗಿಲ್ಲ…ಪ್ರೀತಿ ಕರಗಿಲ್ಲ.


೧೯೮೯ ರಲ್ಲಿ ಭಾರತ ತಂಡದ ಪರ, ಕ್ರೀಡಾಂಗಣಕ್ಕಿಳಿದ ೧೬ ವರ್ಷದ ಪೋರ, ಆ ನಂತರದಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ವರವಾಗಿದ್ದರ ಹಿಂದೆ, ಅ ವಾಮನ ಮೂರ್ತಿ, ದೈತ್ಯ ಪ್ರತಿಭೆಯಾಗಿ ಬೆಳೆದುದರ ಹಿಂದೆ ಕಠಿಣ ಪರಿಶ್ರಮ ಇದೆ, ಸಮರ್ಪಣಾ ಭಾವವಿದೆ, ಏಕಾಗ್ರತೆ ಇದೆ, ಸಹ ಆಟಗಾರರ ಬಗ್ಗೆ ಗೌರವವಿದೆ, ಕಿರಿಯ ಆಟಗಾರರ ಮೇಲಿನ ವಿಶ್ವಾಸವಿದೆ, ಹಿರಿಯರ ಬಗ್ಗೆ ಭಕ್ತಿಯಿದೆ, ಕುಟುಂಬದ ಮೇಲಿನ ಪ್ರೇಮವಿದೆ, ದೇಶದ ಬಗ್ಗೆ ಅಭಿಮಾನವಿದೆ, ಎಲ್ಲಕ್ಕಿಂತ ಮುಖ್ಯವಾಗಿ ಕ್ರಿಕೆಟ್ ಬಗೆಗಿನ ಅನನ್ಯವಾದ ಪ್ರೀತಿಯಿದೆ!!


ಕೆಲವರಿಗೆ ಹಣ ಮಾಡುವುದರಲ್ಲಿ ಖುಷಿ ಇರಬಹುದು, ಕೆಲವರಿಗೆ ಹೆಸರು ಮಾಡುವ ಗುರಿ ಇರಬಹುದು, ಆದರೆ ಸಚಿನ್ ಗೆ ಕ್ರಿಕೆಟ್ ಆಟವನ್ನಷ್ಟೇ ಪ್ರೀತಿಸುವುದರಲ್ಲಿ ಖುಷಿಯಿದೆ; ಸದಾ ಕ್ರಿಕೆಟ್ ಆಡುತ್ತಲೇ ಇರಬೇಕೆಂಬ ಆಸೆ ಇದೆ. ಕ್ರಿಕೆಟ್ ಬಗೆಗಿನ ಸಚಿನ್ ನ ಪ್ರೀತಿ ಕೇವಲ ಆತನನ್ನು ಮಾತ್ರ ಉನ್ನತ ಸ್ತರಕ್ಕೆ ಕೊಂಡೊಯ್ದಿಲ್ಲ….ಸ್ವತ: ಕ್ರಿಕೆಟ್ ಆಟವನ್ನೇ ಒಂದು ಎತ್ತರಕ್ಕೆ ಕರೆದೊಯ್ದಿದೆ ಮತ್ತು ನಮ್ಮ ಭಾರತದ ಘನತೆಯನ್ನೂ ಹೆಚ್ಚಿಸಿದೆ.



                       -------------------------------------------------
 
ಒಂದಷ್ಟು ಕುತೂಹಲ ವಿಷಯಗಳು.....
 
ಬಿ.ಬಿ.ಸಿ.ಯೊಂದಿಗಿನ ಸಂದರ್ಶನವೊಂದರಲ್ಲಿ ’ಕನಸಿನ ಮಹಿಳೆ’ಯ ಬಗ್ಗೆ ಕೇಳಿದಾಗ, ಸಚಿನ್ ತಡಮಾಡದೆ, ’ನನ್ನ ಪತ್ನಿ’ ಎಂದು ಹೇಳಿದ್ದರು.

ಮದುವೆಯಾದ ದಿನದಿಂದ, ಇಂದಿನವರೆಗೂ ಸಚಿನ್ ದೀಪಾವಳಿ ಹಬ್ಬವನ್ನು ಕುಟುಂಬದೊಂದಿಗೆ ಆಚರಿಸಲು ಸಾಧ್ಯವಾಗಿಲ್ಲ!!

೧೯೯೭-೯೮ ರಲ್ಲಿ ಷಾರ್ಜಾದಲ್ಲಿ ನಡೆದ ಕೋಕಾ-ಕೋಲಾ ಕಪ್ ಪಂದ್ಯದ ಶತಕವೊಂದನ್ನು ಸಚಿನ್ ತಮ್ಮ ಪತ್ನಿಗೆ ಅರ್ಪಿಸಿದ್ದರು.


ಸಚಿನ್ ನ ತಂದೆ ಕ್ರಿಕೆಟ್ ನ ಅಭಿಮಾನಿಯೇನಲ್ಲ…ಕ್ರಿಕೆಟ್ ಎಂದರೆ ಅವರಿಗೆ ಅಷ್ಟಕ್ಕಷ್ಟೆ.  ಒಬ್ಬ ಲೇಖಕನಾಗಿ, ಕವಿಯಾಗಿ ಗುರುತಿಸಿಕೊಂಡಿದ್ದ ಸಚಿನ್ ನ ತಂದೆಗೆ, ಮಗನ ಸಾಮರ್ಥ್ಯದ ಬಗ್ಗೆ ಅಪರಿಮಿತವಾದ ನಂಬಿಕೆ. ಸಚಿನ್ ಗೆ ಕ್ರಿಕೆಟ್ ಮತ್ತು ಶಿಕ್ಷಣದ ನಡುವಿನ ಆಯ್ಕೆಯ ವಿಷಯ ಬಂದಾಗ, “ನೀನು ಕ್ರಿಕೆಟ್ ಆಡಬಹುದು. ಕ್ರಿಕೆಟ್ ಯಾವತ್ತಿಗೂ ನಿನ್ನ ಮೊದಲ ಪ್ರೀತಿ.  ನನಗೆ ನಿನ್ನ ಮೇಲೆ ಸಂಪೂರ್ಣ ನಂಬಿಕೆ ಇದೆ” ಎಂದು ಹೇಳಿ ಮಗ ಸಚಿನ್ ನನ್ನು ಹುರಿದುಂಬಿಸಿದ್ದರು.  ಹಾಗೆ ಹೇಳುವ ಮುನ್ನ, ’ಯಶಸ್ಸಿಗೆ ಯವುದೇ ರೀತಿಯ ಅಡ್ಡದಾರಿಯನ್ನು ಹಿಡಿಯಬೇಡ, ಏರಿಳಿತ, ಸೋಲು-ಗೆಲುವು ಇದ್ದೇ ಇರುತ್ತದೆ, ನೀನು ನಿನ್ನಷ್ಟಕ್ಕೆ ನಿನ್ನ ಆಟ ಆಡುತ್ತಾ ಸಾಗು” ಎಂದು ಎಚ್ಚರಿಸಿದ್ದನ್ನು ಸಚಿನ್ ಮರೆತಿಲ್ಲ.



ಅನೇಕ ಕ್ರೀಡಾಪಟುಗಳಂತೆ ಅಥವಾ ಸಾಮಾನ್ಯ ಜನರಂತೆ, ಸಚಿನ್ ಕೂಡ ಕೆಲವು ಕುರುಡು ಆಚರಣೆಗಳನ್ನು ಪಾಲಿಸುತ್ತಾರೆ. ಸಚಿನ್ ಇವತ್ತಿಗೂ, ಮೊದಲು ತನ್ನ ಎಡಕಾಲಿನ ಪ್ಯಾಡ್ ಧರಿಸಿದ ನಂತರವೇ ಬಲಗಾಲಿನ ಪ್ಯಾಡ್ ಧರಿಸುವುದು.



ಸಚಿನ್ ನ ಶಾಲಾ ದಿನಗಳಲ್ಲಿ ಆತನ ಆಟ ಮೆಚ್ಚಿ, ಸುನಿಲ್ ಗವಾಸ್ಕರ್ ಸಚಿನ್ ಗೆ ಒಂದು ಜೊತೆ ಪ್ಯಾಡ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಸಚಿನ್ ತನ್ನ ಮೊದಲ ಅಂತರ ರಾಷ್ಟ್ರೀಯ ಪಂದ್ಯವಾಡಿದಾಗ ಧರಿಸಿದ್ದದ್ದು ಅದೇ ಪ್ಯಾಡ ಅನ್ನು!!



ಸಚಿನ್ ನನ್ನು ಸ್ಫೂರ್ತಿಯಾಗಿರಿಸಿಕೊಂಡು, ಆತನನ್ನೇ ಅನುಸರಿಸುತ್ತಿರುವವರು ಅದೆಷ್ಟೋ ಜನರಿದ್ದಾರೆ.  ಆದರೆ ಸಚಿನ್ ತನ್ನ ಬಾಲ್ಯದ ದಿನಗಳಲ್ಲಿ ಯಾರನ್ನು ಇಷ್ಟಪಡುತ್ತಿದ್ದರು?!  ಕ್ರಿಕೆಟ್ ಹೊರತಾಗಿ ಸಚಿನ್ ಇಷ್ಟ ಪಡುತ್ತಿದ್ದ ಕ್ರೀಡಾಪಟುವೆಂದರೆ, ಅಮೆರಿಕದ ಟೆನಿಸ್ ಆಟಗಾರ ಜಾನ್ ಮ್ಯಾಕನ್ ರನ್ನು.  ಎಲ್ಲರೂ ಸಚಿನ್ ನನ್ನು ’ಮ್ಯಾಕ್’ ಎಂದೇ ಕರೆಯುತ್ತಿದ್ದರು.  ಸಚಿನ್ ಕೂಡ ಅವರ ಶೈಲಿಯನ್ನೇ ಅನುಸರಿಸುತ್ತಿದ್ದರು.  ಅವರಂತೆಯೇ ಉದ್ದ ಕೂದಲು ಬಿಡುವುದು, ಅವರು ಬಳಸುವ ಸ್ವೆಟ್ ಬ್ಯಾಂಡ್, ಹೆಡ್ ಬ್ಯಾಂಡ್ ಅನ್ನು ಬಳಸುವುದು ಹೀಗೆ...