Tuesday, December 6, 2011

‘ಅವಿರತ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ’, ಶಾಲಿಗನೂರು

ಶಾಲಿಗನೂರು: ‘ಜಗದ ಗೊಂದಲ ಬೇಡಾss ನಮಗೆ...’ ಎಂದು ದೂರದ ತುಂಗಾನದಿಯ ತೀರದಲ್ಲಿ ಹೀಗೊಂದು ಹೆಸರಿನ ಪುಟ್ಟ ಗ್ರಾಮವಿದೆ ಎಂದು ಜಗತ್ತಿಗೇ ತಿಳಿದಿದ್ದು, ೨೦೦೯ರಲ್ಲಿ ಉತ್ತರ ಕರ್ನಾಟಕ ನೆರೆಹಾವಳಿಯಿಂದ ತತ್ತರಿಸಿದಾಗ! ಶಾಲಿಗನೂರಿನಂತಹ ಅನೇಕ ಪುಟ್ಟ ಗ್ರಾಮಗಳು ಹೀಗೆ ಪ್ರಕೃತಿಯ ವಿಕೋಪಕ್ಕೆ ಸಿಲುಕಿ ನಲುಗುತ್ತಿದ್ದಾಗ ಬೇಧಭಾವ ಮರೆತು, ಎಲ್ಲರೂ ಅಗತ್ಯಕ್ಕೆ ತಕ್ಕಂತೆ ಸ್ಪಂದಿಸಿದರು. ದಾನಿಗಳು ದೇಣಿಗೆ ನೀಡಿದರು, ಸ್ವಯಂ ಸೇವಾ ಸಂಸ್ಥೆಗಳು ಹಳ್ಳಿಗರ ಸಹಾಯಕ್ಕೆ ಧಾವಿಸಿದರು, ತಮ್ಮಿಂದ ಏನೂ ಕೊಡಲಿಕ್ಕಾಗದವರೂ ಪ್ರಾರ್ಥಿಸಿದರು, ಪಶ್ಚಾತ್ತಾಪ ಪಟ್ಟುಕೊಂಡರು. ಹೀಗೆ ಎಲ್ಲರೂ ತಮ್ಮ ತಮ್ಮ ಶಕ್ತಿಯಮಿತಿಯಲ್ಲಿ ಆ ತಕ್ಷಣಕ್ಕೆ ನೆರವುನೀಡಿ ಮಾನವೀಯತೆ ಮೆರೆದವರೇ.



ಆದರೆ, ಈ ಗ್ರಾಮಗಳ ಪುನರ್ನಿರ್ಮಾಣ ಕಾರ್ಯದಲ್ಲಿ ದೃಢ ಸಂಕಲ್ಪದೊಂದಿಗೆ, ನಿಸ್ವಾರ್ಥತೆಯಿಂದ ತಮ್ಮನ್ನು ತಾವು ತೊಡಗಿಸಿಕೊಂಡ, ಸರ್ಕಾರದ ಜೊತೆ ಕೈ ಜೋಡಿಸಿದ ಸೇವಾ ಸಂಸ್ಥೆಗಳು, ವ್ಯಕ್ತಿಗಳು ಅತಿ ವಿರಳ. ಆ ಸಾಲಿನಲ್ಲಿ ಮೊದಲು ಬರುವುದು, ’ನಾಡಿಗಾಗಿ ನಿರಂತರ’ ಎಂಬ ಧ್ಯೇಯವಾಣಿ ಹೊಂದಿರುವ ’ಅವಿರತ ಬಳಗ’/ ’ಅವಿರತ ಪ್ರತಿಷ್ಠಾನ’.




ಕನ್ನಡ ನಾಡು, ನುಡಿ, ಸಂಸ್ಕೃತಿ ಯನ್ನು ಎತ್ತಿ ಹಿಡಿಯುತ್ತಾ, ಕನ್ನಡಿಗರ ಪರಿಸರವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಮೌಲ್ಯಯುತ ಸಮಾಜವನ್ನು ಕಟ್ಟುವ ಕೆಲಸದಲ್ಲಿ ನಿರತವಾಗಿರುವ ಉತ್ಸಾಹದ ಯುವಪಡೆಯೇ ಅವಿರತ ಬಳಗ. ೨೦೦೭ರ ಮಾರ್ಚ್ ನಲ್ಲಿ ಆರಂಭವಾದ ಅವಿರತ ಪ್ರತಿಷ್ಠಾನವು ಶಿಕ್ಷಣ, ತರಬೇತಿ, ಆರೋಗ್ಯ, ಕಲೆ-ಸಾಹಿತ್ಯ, ಮಹತ್ವ ವಿಷಯಗಳ ಚಿಂತನೆ, ವಿಚಾರ ಗೋಷ್ಠಿ, ಹೀಗೆ ವಿವಿಧ ಕ್ಷೇತ್ರಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಾಡಿಗಾಗಿ ನಿರಂತರ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. ನಾಡಿನ ಸಮತೋಲನ ಅಭಿವೃದ್ದಿಗಾಗಿ ಮೌಲ್ಯಯುತ ಮತ್ತು ತರ್ಕಬದ್ದ ಸಂಘಟನೆಯಾಗಿ ಶ್ರಮಿಸುತ್ತಿರುವ ಅವಿರತ ಪ್ರತಿಷ್ಥಾನವು, ವೈದ್ಯರು, ಸಾಫ್ಟ್ ವೇರ್ ತಂತ್ರಜ್ಣರು, ಶಿಕ್ಷಕರು, ವಕೀಲರು, ಪತ್ರಕರ್ತರು, ಕಲಾವಿದರು, ಸಾಹಿತಿಗಳನ್ನೊಳಗೊಂಡಿದ್ದು, ಹಲವಾರು ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದೆ.



೨೦೦೯ರಲ್ಲಿ ಉತ್ತರ ಕರ್ನಾಟಕವು ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದಾಗ, ಘಟನೆಯ ಬಗ್ಗೆ ಅವಿರತವು ಕೇವಲ ಮರುಕ ಪಡದೆ, ’ಸಣ್ಣ ತಂಡ, ಕೈಲಾದ ಕನಿಷ್ಥ ಸಹಾಯ’ ಎಂದು ನಿರ್ಧರಿಸಿ, ಸುಮಾರು ೪೫-೫೦ ನೆರೆ ಸಂತ್ರಸ್ತರ ಕುಟುಂಬಗಳಿಗೆ ಆಹಾರ ಒದಗಿಸುವ ಯೋಜನೆಯೊಂದಿಗೆ ನೆರವಿಗೆ ಧಾವಿಸಿತು. ಇತರರೆಲ್ಲರಂತೆ, ಅವಿರತದ ಈ ಪರಿಹಾರ ಕಾರ್ಯವು ಆ ಕ್ಷಣಕ್ಕೆ ಸ್ಪಂದಿಸುವ ಕಾರ್ಯವಾಗಿತ್ತಷ್ಟೇ. ಆದರೆ, ಈ ಕಾರ್ಯ ಮುಗಿಸುವ ವೇಳೆಗಾಗಲೆ, ಅವಿರತಕ್ಕೆ ದಾನಿಗಳಿಂದ ಹಾಗೂ ತನ್ನದೇ  ಬಳಗದವರಿಂದ ಹರಿದು ಬಂದ ನೆರವು, ಸಹಾಯ ಹೇಗಿತ್ತೆಂದರೆ,  ೪೫-೫೦ ಕುಟುಂಬಗಳಿಗೆ ಎಂದು ಪ್ರಾರಂಭವಾದ ಪರಿಹಾರ ಕಾರ್ಯ ಸುಮಾರು ೫೦೦ ಕುಟುಂಬಗಳನ್ನು ತಲುಪಿತ್ತು!!   ಸಂತ್ರಸ್ತರಿಗೆ ಕೇವಲ ಕನಿಷ್ಠವನ್ನಲ್ಲದೆ, ಗರಿಷ್ಥ ಸಹಾಯವನ್ನು ನೀಡುವಂತೆ ಪ್ರಚೋದನೆಗೊಳಿಸಿತ್ತು!!




ಎಲ್ಲೆಡೆಯಿಂದ ಹರಿದುಬಂದ ನೆರವನ್ನು ಬಲು ವಿವೇಚನೆಯಿಂದ ಬಳಸಿದ ಅವಿರತವು, ಶಾಲಿಗನೂರು ಗ್ರಾಮದ ಪುನರ್ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ದೃಢನಿರ್ಧಾರ ಮಾಡಿತು. ಆದರೆ ಯಾವ ರೀತಿಯ ಯೋಜನೆ ಕೈಗೊಳ್ಳಬೇಕು ಎಂಬುದು ಪ್ರಶ್ನೆಯಾಗೇ ಉಳಿದಿದ್ದ ಸಂದರ್ಭದಲ್ಲಿ ಅವಿರತ ಆಯ್ದುಕೊಂಡಿದ್ದು ಶಿಕ್ಷಣ ಕ್ಷೇತ್ರವನ್ನು.

ಸರ್ಕಾರಿ ದಾಖಲೆಗಳ ಪ್ರಕಾರ, ೬ ರಿಂದ ೧೪ ವರ್ಷ ವಯಸ್ಸಿನ, ಪ್ರತಿಶತ ೫೦ರಷ್ಟು ಮಕ್ಕಳು ಶಾಲೆಗೆ ಹೋಗದೆ, ಶಿಕ್ಷಣದಿಂದ ವಂಚಿತರಾಗುತ್ತಾರೆ!! ಮೂರನೇ ಒಂದಕ್ಕಿಂತ ಸ್ವಲ್ಪ ಹೆಚ್ಚಿನ ಸಂಖ್ಯೆಯ ಮಕ್ಕಳು ಪ್ರೌಢಶಾಲಾ ಶಿಕ್ಷಣದ ವೇಳೆಗೆ ಶಾಲೆಯನ್ನು ತೊರೆಯುತ್ತಾರೆ!! ’೬ ರಿಂದ ೧೪ ವರ್ಷ ವಯಸ್ಸಿನ ಪ್ರತಿಯೊಂದು ಮಗುವಿಗೂ ಶಿಕ್ಷಣ ಮೂಲಭೂತ ಹಕ್ಕು’ ಎಂದು ಸಂವಿಧಾನದಲ್ಲಿ ಬರೆದುಕೊಂಡಿರುವ ನಮ್ಮ ಭಾರತದಲ್ಲಿನ ಸದ್ಯದ ಶಿಕ್ಷಣ ವ್ಯವಸ್ಥೆಯ ಸ್ಥಿತಿಯಿದು.
ಇದಕ್ಕೆ ಕಾರಣಗಳು ಹಲವಾರಿರಬಹುದು. ಆದರೆ, ಶಿಕ್ಷಣವನ್ನು ಸರ್ವವ್ಯಾಪಿಯಾಗಿಸಲು, ಅನಕ್ಷರತೆಯನ್ನು ಹೋಗಲಾಡಿಸುವ ಏಕೋದ್ದೇಶವನ್ನಿಟ್ಟುಕೊಂಡು ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಶ್ರಮಿಸುತ್ತಿರುವುದು ಸುಳ್ಳಲ್ಲ.




ಸರ್ಕಾರವು ಮಕ್ಕಳನ್ನು ಶಾಲೆಗೆ ತರಲು, ’ಮರಳಿ ಬಾ ಶಾಲೆಗೆ’, ’ಬಿಸಿಯೂಟ’, ’ಸೈಕಲ್ ವಿತರಣೆ’, ’ಸಮವಸ್ತ್ರ ವಿತರಣೆ’ ಹೀಗೆ ಹಲವಾರು ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಹಮ್ಮಿಕೊಂಡಿದೆ. ಸರ್ಕಾರದ ಜೊತೆಗೆ, ಹಲವು ಸೇವಾ ಸಂಸ್ಥೆಗಳಿಂದಲೂ ಸಹ ಮಕ್ಕಳು ಶಾಲೆಗೆ ಹೋಗುವುದನ್ನು ಉತ್ತೇಜಿಸಲು ನೋಟ್ ಬುಕ್ ವಿತರಸುವುದು, ಸಮವಸ್ತ್ರ ಕೊಡಿಸುವುದು, ಶಾಲಾ ವಾಹನ ಕೊಡಿಸುವುದು, ಮಕ್ಕಳ ಶೈಕ್ಷಣಿಕ ಖರ್ಚುವೆಚ್ಚವನ್ನು ಭರಿಸುವುದು. ಹೀಗೆ ಹಲವು ರೀತಿಯ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಆದರೆ, ಶಾಲೆ ನಡೆಸಲು ಅವಶ್ಯವಿರುವ ಶಾಲಾ ಕಟ್ಟಡವೇ ದುಸ್ಥಿತಿಯಲ್ಲಿದ್ದರೆ, ಸ್ಥಳದ ಅಭಾವವಾದರೆ ಅಥವಾ ಕಟ್ಟಡವೇ ಇಲ್ಲವಾದರೆ ಮಕ್ಕಳನ್ನು ಶಾಲೆಗೆ ತರಲು ಹಮ್ಮಿಕೊಂಡಿರುವ ಯೋಜನೆಗಳೆಲ್ಲವೂ ವ್ಯರ್ಥವಲ್ಲವೇ!? ಅನಾನುಕೂಲಕರವಾದ ಶಾಲಾ ಕಟ್ಟಡಗಳೂ ಕೂಡ ಮಕ್ಕಳು ಶಾಲೆಯಿಂದ ಹೊರಗುಳಿಯಲು ಒಂದು ಕಾರಣ.  ’ಅಣೆಕಟ್ಟುಗಳು ಆಧುನಿಕ ಭಾರತದ ದೇವಾಲಯಗಳು’ ಎಂದು ವಿಶ್ವೇಶ್ವರಯ್ಯನವರು ಹೇಳಿದ್ದಾರೆ. ಅಂತೆಯೇ, ’ಶಾಲೆಗಳು ನಾಗರೀಕ ಸಮಾಜದ ದೇವಾಲಯಗಳು’ ಎಂದು ಹೇಳಬಹುದಲ್ಲವೇ?!
ಹೀಗಾಗಿ, ಗ್ರಾಮದ ಪುನರ್ ನಿರ್ಮಾಣದಲ್ಲಿ ತೊಡಗಿಕೊಳ್ಳುವ ನಿರ್ಧಾರ ಮಾಡಿದ್ದ ಅವಿರತ ಬಳಗವು, ಮಾನವೀಯತೆ ಹಾಗೂ ಶೈಕ್ಷಣಿಕ ನೆಲೆಗಟ್ಟಿನ ಮೇಲೆ ಇಡೀ ಗ್ರಾಮಕ್ಕೆ ಒಂದು ಶಾಲಾ ಕಟ್ಟಡವನ್ನು ನಿರ್ಮಿಸಿಕೊಡುವ ಸಂಕಲ್ಪ ತೊಟ್ಟಿತು.


ಆ ನಂತರ ನಡೆದದ್ದೆಲ್ಲಾ ಸಂಕಲ್ಪಕ್ಕೆ ನಿಷ್ಠವಾದ ಕಾರ್ಯಗಳು, ಯೋಜನೆಯ ಒಟ್ಟು ಖರ್ಚು ವೆಚ್ಚಗಳ ಅಂದಾಜು, ಅಗತ್ಯ ಸಂಪನ್ಮೂಲಗಳ ಸಂಗ್ರಹ, ಸರ್ಕಾರಿ ಅಧಿಕಾರಿಗಳ ಜೊತೆ ಮಾತುಕತೆ, ಊರಿನವರ ಅಗತ್ಯಗಳ ಚರ್ಚೆ. ಹೀಗೆ ಅಗತ್ಯ ಸಿದ್ದತೆಗಳೊಂದಿಗೆ ೨೦೧೦ ರ ನವೆಂಬರ್ ತಿಂಗಳಿನಲ್ಲಿ ಪ್ರಾರಂಭವಾದ ಶಾಲಾ ಕಟ್ಟಡ ನಿರ್ಮಾಣ ಕಾರ್ಯವು ಕೆಲವು ಏರು-ಪೇರುಗಳನ್ನು ಕಂಡಿತಾದರೂ, ಅದನ್ನು ಸಮರ್ಥವಾಗಿ ಎದುರಿಸಿ, ೨೦೧೧ ರ ನವೆಂಬರ್ ತಿಂಗಳಿನಲ್ಲಿ ಪೂರ್ಣಗೊಂಡಿತು. ಇದೇ ತಿಂಗಳಿನ, ೨೬ನೇ ದಿನಾಂಕದಂದು ಶಾಲಾ ಕಟ್ಟಡದ ಉದ್ಘಾಟನೆಯೂ ನೆರವೇರಿತು.





ಕಟ್ಟಡದ ಉದ್ಘಾಟನೆಯ ದಿನ ಊರಿನಲ್ಲಿ ಅಕ್ಷರಶಃ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು. ೧ ರಿಂದ ೪ನೇ ತರಗತಿಯ, ಸುಮಾರು ೬೫-೭೦ ಮಕ್ಕಳಿಗಾಗುವಂತೆ, ೩ ಕೊಠಡಿಗಳಿರುವಂತೆ ನಿರ್ಮಿಸಿರುವ ’ಅವಿರತ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ’ಯು ನಿಸರ್ಗದ ಮಡಿಲಲ್ಲಿ, ಸ್ವಚ್ಛಂದದ ಪರಿಸರದಲ್ಲಿ ಸಿಂಗಾರಗೊಂಡು, ಉದ್ಘಾಟನೆಗೆ ಸಿದ್ದವಾಗಿತ್ತು.




ಕಛೇರಿ ಕೆಲಸದ ಒತ್ತಡದ ನಡುವೆ ಹಾಗೂ ವಾರಾಂತ್ಯದಲ್ಲಿ ಸಿಗುವ ಸಮಯದಲ್ಲೇ ನಿರ್ಮಾಣ ಕಾರ್ಯದ ಸಕಲ ಅಗತ್ಯತೆಗಳನ್ನು ಪೂರೈಸಿ, ಅಂದುಕೊಂಡಂತೆ ಕಟ್ಟಡ ನಿರ್ಮಾಣವನ್ನು ಪೂರ್ಣಗೊಳಿಸಿದ ಅವಿರತ ಬಳಗ ಹಿರಿಯರಿಗೆ, ಆ ದಿನ ಸಾರ್ಥಕತೆಯ ಕ್ಷಣವಾದರೆ, ಸಮಾಜಪರ ಕೆಲಸದಲ್ಲಿ ಕೈ ಜೋಡಿಸಿ ಸಹಕರಿಸಿದ ಸರ್ಕಾರಿ ಅಧಿಕಾರಿಗಳಿಗೆ ಹಾಗೂ ಗ್ರಾಮದ ಜನತೆಗೆ ಧನ್ಯತಾ ಭಾವ. ಉದ್ಘಾಟನಾ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಸ್ವಾಮೀಜಿಯವರು ಸಮಾಜದಲ್ಲಿನ ಸಂಘಟನೆ, ಸಹಬಾಳ್ವೆಯನ್ನು ಅವಿರತದ ಮೂಲಕ ಕಂಡು ಹರ್ಷಿತರಾಗಿ ತಮ್ಮ ಸಮಯೋಚಿತ ಹಿತನುಡಿಗಳಿಂದ ಆಶೀರ್ವಚನ ನೀಡಿ ಹರಸಿದರು. ಅಷ್ಟೇ ಅಲ್ಲದೆ, ಅವಿರತದ ಕೆಲಸವನ್ನು ಕಂಡು ತಾವೂ ಉತ್ತೇಜಿತರಾಗಿ, ಶಾಲೆಯ ಕಾಂಪೌಂಡ್ ಕಟ್ಟಿಸಲು ೫೦,೦೦೦/- ರೂಪಾಯಿಗಳ ನೆರವನ್ನೂ ತಮ್ಮ ಮಠದ ಮೂಲಕ ನೀಡುವುದಾಗಿ ತಿಳಿಸಿದರು. ಹೊಸ ಶಾಲೆಯನ್ನು ಪಡೆದ ಸಂಭ್ರಮದಲ್ಲಿದ್ದ ಶಿಕ್ಷಕರು ಮತ್ತು ಮಕ್ಕಳು ಬಂದವರನ್ನೆಲ್ಲಾ ಸ್ವಾಗತಿಸಿ, ಹಿರಿಯರನ್ನು, ದೇವರನ್ನು ನೆನೆದು, ವಂದಿಸಿದರು..



ಹೀಗೆ, ಹೆಸರಿನಲ್ಲೇ ಶಾಲೆಯನ್ನಿರಿಸಿಕೊಂಡಿರುವ ಊರಿಗೆ ( ’ಶಾಲಿ’ಗನೂರು ), ಅವಿರತ ಬಳಗ ಶಾಲೆಯನ್ನು ಕಟ್ಟಿಸಿಕೊಟ್ಟಿರುವುದು ಒಂದು ಸೋಜಿಗವೇ ಸರಿ.


ಇಂಗ್ಲೀಷಿನಲ್ಲಿ ಒಂದು ಅರ್ಥಪೂರ್ಣವಾದ ಮಾತಿದೆ;
“Give a man a fish; you have fed him for today.
Teach a man to fish; and you have fed him for a lifetime."
ಅವಿರತದ ಕಾರ್ಯ ಈ ಅರ್ಥಪೂರ್ಣವಾದ ಮಾತಿಗೆ ಒಂದು ಉತ್ತಮ ಉದಾಹರಣೆಯಾಗುವ ದಿಕ್ಕಿನಲ್ಲಿ ಮೊದಲ ಹೆಜ್ಜೆ.!! ಹೌದು, ಕೊಟ್ಟ ಮಾತಿನಂತೆ ಶಾಲಾ ಕಟ್ಟಡವನ್ನು ಯಶಸ್ವಿಯಾಗಿ ನಿರ್ಮಿಸಿರುವ ಅವಿರತದ ಜವಾಬ್ದಾರಿ ನಿಜಕ್ಕೂ ಈಗ ಪ್ರಾರಂಭವಾಗಿದೆ. ಈ ಜವಾಬ್ದಾರಿಯನ್ನು ಎಚ್ಚರಿಕೆಯಿಂದ ನಿರ್ವಹಿಸುವುದರ ಮೂಲಕ, ನಾಡಿಗಾಗಿ ನಿರಂತರ ತುಡಿಯುವ,  ನಿಸ್ವಾರ್ಥತೆಯಿಂದ ದುಡಿಯುವ ಮತ್ತಷ್ಟು ಉತ್ಸಾಹಿಗಳಿಗೆ ಅವಿರತ ಪ್ರೇರಣೆಯಾಗಬೇಕಿದೆ.












ಯೋಚನಾ ಲಹರಿಗೊಂದೆರಡು ತುತ್ತು:


೧. ಬಹುರಾಷ್ಟ್ರೀಯ ಕಂಪನೆಗಳಲ್ಲಿ ಉದ್ಯೋಗಿಗಳಾಗಿರುವ ಹಲವಾರು ಮಂದಿಯ ಒಂದು ಸಂಬಳದ ಸಣ್ಣ ಸಣ್ಣ ಭಾಗ ಕೂಡಿ, ಈ ರೀತಿಯ ಸಮಾಜ ಪರ ಕೆಲಸಕ್ಕೆ ನೆರವು ನೀಡುವ ಸಾಮಾರ್ಥ್ಯವಿದೆ ಎಂದಾದರೆ, ಆ ಕಂಪನೆಗಳಿಗೆ ಪರವಾನಗಿ ನೀಡಿ, ಕಾಲ ಕಾಲಕ್ಕೆ ಅವುಗಳಿಂದ ತೆರಿಗೆಯನ್ನು ಪಡೆಯುತ್ತಿರುವ ಸರ್ಕಾರ ಮತ್ತು ಅಧಿಕಾರಿಗಳು ಯೋಜಿತ ರೀತಿಯಲ್ಲಿ, ನಿಷ್ಠವಾಗಿ ನಡೆದುಕೊಂಡರೆ ಮತ್ತಷ್ಟು ಸಮಾಜಪರ ಕಾರ್ಯಗಳು ಸಿದ್ದಿಯಾಗುವುದರಲ್ಲಿ ಅನುಮಾನವಿಲ್ಲ, ಅಲ್ಲವೇ?


೨. ’ಶಾಲೆಗಳು, ನಾಗರೀಕ ಸಮಾಜದ ದೇವಾಲಯಗಳು’ಎಂದ ಮಾತನ್ನು ವಿಸ್ತರಿಸುವುದಾದರೆ, ಶಾಲೆಗಳು ನಾಗರೀಕ ಸಮಾಜದ ದೇವಾಲಯಗಳು, ಶಿಕ್ಷರೇ ಗುರುಗಳು/ ಅರ್ಚಕರು, ಅಕ್ಷರಗಳೇ ಮಂತ್ರಗಳು, ಜ್ಣಾನವೇ ದೇವರು, ವಿನಯವೇ ಪೂಜೆ.






ಇತರೆ ಅಂಕಿಅಂಶಗಳು:


೨೦೦೮ ರ ಮಾಹಿತಿಯ ಪ್ರಕಾರ,


- ಪ್ರತಿಶತ ೨೯ ರಷ್ಟು ಶಾಲೆಗಳಿಗೆ ಈಗಲೂ ಸುಸಜ್ಜಿತವಾದ ಕಟ್ಟಡವಿಲ್ಲ.


- ಪ್ರತಿಶತ ೪೨ ರಷ್ಟು ಶಾಲೆಗಳಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲ.


- ಇತ್ತಕಡೆ ಮಾಹಿತಿ ತಂತ್ರಜ್ಣಾನದ ಕ್ಷೇತ್ರದಲ್ಲಿ ಭಾರತವು ಪ್ರಪಂಚದ ಗಮನ ಸೆಳೆಯುತ್ತಿದ್ದರೆ, ಅತ್ತಕಡೆ ಕೇವಲ ೧೩ ಪ್ರತಿಶತ ಶಾಲೆಗಳಲ್ಲಿ ಕಂಪ್ಯೂಟರ್ ವ್ಯವಸ್ಥೆ ಇದೆ. ಇನ್ನು ಅಸ್ಸಾಂ, ಜಾರ್ಖಂಡ್, ಚತ್ತಿಸ್ ಘಡ್, ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಕೇವಲ ೬ ಪ್ರತಿಶತ ಶಾಲೆಗಳಲ್ಲಷ್ಟೇ ಕಂಪ್ಯೂಟರ್ ನ ಪರಿಚಯವಾಗಿದೆ.


- ೧೫ ಪ್ರತಿಶತ ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ.


- ೬ ರಿಂದ ೧೪ ವರ್ಷ ವಯಸ್ಸಿನ, ಪ್ರತಿಶತ ೫೦ರಷ್ಟು ಮಕ್ಕಳು ಶಾಲೆಗೆ ಹೋಗದೆ, ಶಿಕ್ಷಣದಿಂದ ವಂಚಿತರಾಗುತ್ತಾರೆ


- ಮೂರನೇ ಒಂದಕ್ಕಿಂತ ಸ್ವಲ್ಪ ಹೆಚ್ಚಿನ ಸಂಖ್ಯೆಯ ಮಕ್ಕಳು ಪ್ರೌಢಶಾಲಾ ಶಿಕ್ಷಣದ ವೇಳೆಗೆ ಶಾಲೆಯನ್ನು ತೊರೆಯುತ್ತಾರೆ


- ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುವ ನಾಲ್ಕು ಜನ ಮಕ್ಕಳಲ್ಲಿ, ಮೂರು ಜನರು ನೀಡುವ ಮುಖ್ಯ ಕಾರಣ: ೧. ದುಬಾರಿ ಶಿಕ್ಷಣ. ೨. ಕೆಲಸ ಮಾಡಿ ಸಂಸಾರದ ಕಷ್ಟಕ್ಕೆ ಹೆಗಲು ಕೊಡುವ ಅನಿವಾರ್ಯತೆ


- ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಪ್ರಗತಿ ಕಂಡುಬಂದಿದ್ದರೂ, ಏರುತ್ತಿರುವ ಜನಸಂಖ್ಯೆಯ ಜೊತೆ ಅದು ತಾಳೆಯಾಗುತ್ತಿಲ್ಲ.

Monday, September 19, 2011

ಬೆಟ್ಟದ ಜೀವವೂ, ಗೋಪಾಲಯ್ಯನೂ

     ’ಬೆಟ್ಟದ ಜೀವ’ ಸಿನಿಮಾ ನೋಡಿದೆ!!  ಈ ಕಾದಂಬರಿ ಓದಲು ಶುರುಮಾಡಿದ ದಿನದಿಂದ ನನಗೆ, ಪಂಜ, ಕಾಟುಮೂಲೆ, ಮಲೆನಾಡಿನ ದಟ್ಟ ಕಾಡಿನ ನಡುವೆ ಚೆಂದದ ತೋಟ ಮಾಡಿ, ತಮ್ಮದೇ ಆದ ಪ್ರಪಂಚ ಕಟ್ಟಿಕೊಂಡು ತುಂಬು ಜೀವನ ನಡೆಸುತ್ತಿರುವ ಗೋಪಾಲಯ್ಯ - ಶಂಕರಿ ಎಂಬ ಆ ವೃದ್ದ ದಂಪತಿಗಳ ಕಡೆಗೂ, ಅವರ ಪುಟ್ಟ ಪ್ರಪಂಚದ ಕಡೆಗೂ ಇದ್ದ ಆಸಕ್ತಿ, ಕಾದಂಬರಿ ಓದಿ ಮುಗಿಸುವ ವೇಳೆಗೆ ಬಹಳ ಆತ್ಮೀಯವಾಗಿತ್ತು, ಆಪ್ತವೆನಿಸಿತ್ತು; ಬಹಳ ದಿನಗಳವರೆಗೆ ನನ್ನನ್ನು ಕಾಡುವಷ್ಟು.
     ಈ ಕಾದಂಬರಿ ಓದುವ ವೇಳೆ, ನನಗೆ ಕಾದಂಬರಿ ಬಗೆಗಿನ ವಿಮರ್ಶೆಗಳು ಬೇಕಿರಲಿಲ್ಲ, ಕಾದಂಬರಿಯಲ್ಲಿನ ಒಳನೋಟಗಳನ್ನು ಅರ್ಥಮಾಡಿಕೊಳ್ಳಬೇಕು ಅಂತ ಕೂಡ ಅನಿಸಿರಲಿಲ್ಲ.  ಮಲೆನಾಡ ಪರಿಸರದ ವಿವರಣೆ, ಸನ್ನಿವೇಶಗಳ ನಿರೂಪಣೆ, ಇವುಗಳಷ್ಟೇ ನನ್ನನ್ನು ಸೆಳೆದಿದ್ದವು.  ಈ ಕಾದಂಬರಿಯನ್ನು ಓದಿದ್ದು, ತೀರಾ ಇತ್ತೀಚೆಗೆ.  ಓದಿ ಮುಗಿಸಿದ ಎರಡು - ಮೂರು ತಿಂಗಳ ಅಂತರದಲ್ಲಿ, ಶೇಷಾದ್ರಿಯವರು ಈ ಕಾದಂಬರಿಯನ್ನು ಸಿನಿಮಾ ಮಾಡುತ್ತಿದ್ದಾರೆ ಎಂದು ತಿಳಿದು, ಬಹಳ ಖುಷಿಪಟ್ಟಿದ್ದೆ.  ಅದೇ ಕಾರಣಕ್ಕೆ, ಕಾದಂಬರಿಯನ್ನು ಎರಡನೇ ಬಾರಿ ಓದಿದಾಗ, ಇಲ್ಲಿನ ಪಾತ್ರಗಳು ಹೇಳಬಯಸುತ್ತಿದ್ದುದು ಸ್ವಲ್ಪ ಮಟ್ಟಿಗೆ ದಕ್ಕಿತ್ತೋ, ಏನೋ, ಗೊತ್ತಿಲ್ಲ.  ಒಟ್ಟಿನಲ್ಲಿ, ಈ ಕಾದಂಬರಿ, ಸಿನಿಮಾ ಮೂಲಕ ಹೇಗೆ ದಕ್ಕುತ್ತದೆ? , ಎಷ್ಟು ದಕ್ಕುತ್ತದೆ? ಎಂದು ತಿಳಿಯಲು ಬಹಳ ಉತ್ಸುಕನಾಗಿದ್ದೆ.

     ಅಂತೂ, ಇಂದು ಈ ಸಿನಿಮಾ ನೋಡಿದೆ!!  ಶೇಷಾದ್ರಿ ಮತ್ತು ತಂಡದವರ ಕೆಲಸ ತೆರೆಮೇಲೆ ಎದ್ದು ಕಾಣುತ್ತದೆ;  ಅದರ ಬಗ್ಗೆ, ಸಿನಿಮಾದ ಬಗ್ಗೆ ಎರಡನೇ ಮಾತೇ ಇಲ್ಲ.  ಚಿತ್ರಕಥೆ ಮತ್ತು ನಿರ್ದೇಶನ, ಕಾದಂಬರಿಗೆ ಸಮಸ್ತ ರೀತಿಯಲ್ಲೂ ನ್ಯಾಯ ಸಲ್ಲಿಸಿರುವುದಷ್ಟೇ ಅಲ್ಲ, ಕಾದಂಬರಿಯನ್ನು ಈಗಿನ ಕಾಲಕ್ಕೆ ಪ್ರಸ್ತುತಪಡಿಸುವ ನಿಟ್ಟಿನಲ್ಲಿ, ಅದನ್ನು ಅರ್ಥಪೂರ್ಣವಾಗಿ  ವಿಸ್ತರಿಸುವುದರಲ್ಲಿ ಕೂಡ ಯಶಸ್ವಿಯಾಗಿದೆ.



     ಕಾದಂಬರಿಯ ಹಾಗೂ ಚಿತ್ರದ ಕಥಾವಸ್ತುವಿನ ಬಗ್ಗೆ, ಈಗಾಗಲೇ ಹಲವರಿಗೆ ಪರಿಚಯವಾಗಿದೆ. (ಅದರ ಪುನರಾವರ್ತನೆಯನ್ನು ಬದಿಗಿಟ್ಟು ಮುಂದುವರಿಸುತ್ತಾ...) ಕಥೆಯಲ್ಲಿ ಬರುವ ವೃದ್ದ ಗೋಪಾಲಯ್ಯ ಪಾತ್ರದ ಚುರುಕುತನ, ಜೀವನದೆಡೆಗಿನ ಅದಮ್ಯ ಉತ್ಸಾಹ ಎಲ್ಲರನ್ನೂ ಬೆರಗು ಗೊಳಿಸಿದೆ.  ಈ ಪಾತ್ರವನ್ನು ಸೃಷ್ಟಿಸಿದ ಕಾರಂತರಿಗೂ, ನಿರೂಪಿಸಿದ ಶೇಷಾದ್ರಿಯವರಿಗೂ ಮತ್ತು ನಟಿಸಿದ ದತ್ತಣ್ಣ ಅವರಿಗೂ ಅನಂತ ಅಭಿನಂದನೆಗಳು. 

    ನನ್ನನ್ನು ಕಾಡಿದ್ದು, ೬೫ - ೭೦ ವರ್ಷ ವಯಸ್ಸಿನ ಗೋಪಾಲಯ್ಯ, ಮಗನ ಸುಳಿವಿಲ್ಲದೆ, ಕಾಡಿನ ಯಾವುದೋ ಮೂಲೆಯಲ್ಲಿ ಬೇಸಾಯ ಮಾಡಿಕೊಂಡು, ಏಕಾಂಗಿಯಾಗಿ ತನ್ನ ಪ್ರಪಂಚದಲ್ಲಿ ಬದುಕುತ್ತಿರುವ ಈ ಇಳಿವಯಸ್ಸಿನ ವೃದ್ದ ಗೋಪಾಲಯ್ಯ ಜೀವನದೆಡೆಗಿನ ಆ ಉತ್ಸಾಹವನ್ನು ಕಾದಿಟ್ಟುಕೊಂಡಿದ್ದಾದರೂ ಹೇಗೆ?! ಸದಾ ಉಕ್ಕುವ ಚಿಲುಮೆಯ ಹಿಂದಿನ ಶಕ್ತಿಯಾದರೂ ಯಾವುದು?! ಎಂದು. 

     ಕಥೆಯ ಸನ್ನಿವೇಶವೊಂದರಲ್ಲಿ, "ನಿಮ್ಮಂಥ ಅತ್ತೆ - ಮಾವ ಸಿಕ್ಕಿ, ಕಾಟುಮೂಲೆಯಂತ ತೋಟ ಸಿಗುವುದಾದರೆ ನಾನು ಇಲ್ಲೆ ತಳವೂರಲು ಸಿದ್ದ" ಎಂದು ಶಿವರಾಮಯ್ಯ ಹೇಳಿದಾಗ, ಗೋಪಾಲಯ್ಯ ಹೀಗೆ ಹೇಳುತ್ತಾನೆ, "ಕಾಟುಮೂಲೆ ತೋಟ ನಾರಾಯಣನಿಗಾಯಿತು.  ನೀವು ನಿಜವಾಗಲೂ ಇಲ್ಲೇ ಇರುವಿರಾದರೆ, ಕುಮಾರ ಪರ್ವತದ ಮೇಲೆ ನಿಮಗೆ ನಾನೇ ತೋಟವೊಂದನ್ನು ಮಾಡಿಕೊಡುತ್ತೇನೆ.."  ಇದನ್ನು ಕೇಳಿ, "ತಮಾಷೆ ಸಾಕು, ಈ ವಯಸ್ಸಿನಲ್ಲಿ ಕುಮಾರ ಪರ್ವತದ ಮೇಲೆ ತೋಟ ಮಾಡುತ್ತಾರಂತೆ, ಮೊದಲು ಈ ಕೆಲಸ ಮುಗಿಸಿ" ಎಂದು ಶಂಕರಿ ಕುಹುಕವಾಡಿ ಹೊರಟಾಗ, ಸ್ವಲ್ಪವೂ ಬೇಸರಿಸಿಕೊಳ್ಳದ ಗೋಪಾಲಯ್ಯ, ಧೃಡ ಮನಸ್ಸಿಗನಾಗಿ ಶಿವರಾಮಯ್ಯನಿಗೆ, "ನಾನು ತಮಾಷೆ ಮಾಡುತ್ತಿಲ್ಲ...ನನಗೇ ಈಗಲೂ ತೋಟ ಮಾಡುವ ಶಕ್ತಿಯಿದೆ" ಎಂದು ಹೇಳುತ್ತಾನೆ!!

     ಗಮನಿಸಿ, ಆತನಿಗೆ ಅಷ್ಟು ವಯಸ್ಸಾಗಿದ್ದರೂ, ತಾನೆ ಹಂಡೆಗೆ ನೀರು ಹಾಕಿ, ಬಿಸಿ ಮಾಡಿ, ಪ್ರತಿ ರಾತ್ರಿ ತಪ್ಪದೇ ಎಣ್ಣೆ ಸ್ನಾನ ಮಾಡುತ್ತಾನೆ, ಹೊಟ್ಟೆ ತುಂಬಾ ಊಟ ಮಾಡುತ್ತಾನೆ, ಬೆಟ್ಟ ಹತ್ತಿ ಸುತ್ತಾಡುತ್ತಾನೆ, ಹರಿವ ಹೊಳೆ ನೋಡಿ ಮೀಯಲು ಇಳಿಯುತ್ತಾನೆ, ಅಡಕೆ ಬಿಡಿಸುತ್ತಾನೆ, ತೋಟದ ಕೆಲಸ ನೋಡಿಕೊಳ್ಳುತ್ತಾನೆ, ಅಷ್ಟೇ ಅಲ್ಲ, ತೋಟಕ್ಕೆ ನುಗ್ಗಿದ ಆನೆಗಳನ್ನು ಓಡಿಸಲು ಇಳಿಯುತ್ತಾನೆ, ಹುಲಿಯನ್ನೂ ಬೇಟೆಯಾಡುತ್ತಾನೆ.!! ಇಳಿವಯಸ್ಸಿನಲ್ಲೂ, ಎಳೆಯವನಾಗೇ ಇರುತ್ತಾನೆ.!!  ಓದುಗರಿಗೆ, ಪ್ರೇಕ್ಷಕರಿಗೆ ಗೋಪಾಲಯ್ಯ ಇಷ್ಟವಾಗುವುದೇ ಇಲ್ಲಿ, ಈ ಕಾರಣಗಳಿಗೆ.  ಹಾಗೆಯೇ, "ನಮ್ಮಂತೆ ಅಥವಾ ಇತರರಂತೆ ಗೋಪಾಲಯ್ಯನಿಗೇಕೆ ದಣಿವಾಗುವುದಿಲ್ಲ?!" ಎಂಬ ಪ್ರಶ್ನೆ ಹುಟ್ಟುವುದೂ ಈ ಸಂದರ್ಭಗಳಲ್ಲಿಯೇ.

     ಗೋಪಾಲಯ್ಯನಷ್ಟು ವಯಸ್ಸು ಬಿಡಿ, ಅವನಿಗಿಂತ ೧೦ - ೨೦ ವರ್ಷ ಕಡಿಮೆಯಿರುವ ಬಹಳಷ್ಟು ಮಂದಿಯಲ್ಲಿ ಇಂದು ಜೀವನದಲ್ಲಿ ಬೇಗನೆ ದಣಿವು ಕಾಣಿಸಿಕೊಳ್ಳುತ್ತದೆ.   ಇದಕ್ಕೆ ಕಾರಣ ಇಂದಿನ ಯಾಂತ್ರಿಕ ಬದುಕು, ಹೀಗೆ ಇರುವ ಬದುಕನ್ನು ಗೊತ್ತು ಗುರಿಯಿಲ್ಲದ ಓಟ ಮಾಡಿಕೊಂಡಿರುವುದು, ಪರಿಸರದ ಒಡನಾಟವನ್ನು ಬಿಟ್ಟು, ನಗರೀಕರಣವನ್ನು ಅಗತ್ಯಕ್ಕೂ ಮೀರಿ ಅಪ್ಪಿಕೊಂಡಿರುವುದು.  ಅಷ್ಟೇ ಅಲ್ಲ, ವ್ಯವಸಾಯ ಗೋಪಾಲಯ್ಯನ ಅಂತ: ಸತ್ವ, ಪ್ರಕೃತಿಯನ್ನು ಮಣಿಸಿ ಅಲ್ಲಿ ತನ್ನ ತೋಟಮಾಡುವುದೇ ಅವನ ಪ್ಯಾಶನ್.  ಅದು ಅವನು ಆರಿಸಿಕೊಂಡ ಕ್ಷೇತ್ರ! ಹಾಗಾಗಿ, ಇಷ್ಟಪಟ್ಟ ಕ್ಷೇತ್ರದಲ್ಲಿ, ಎಷ್ಟೇ ವಯಸ್ಸಾದರೂ, ಎಷ್ಟೇ ಕೆಲಸಮಾಡಿದರೂ ಯಾವತ್ತಿಗೂ ದಣಿವಾಗುವುದಿಲ್ಲ. ಹಾಗಾಗಿ, ಗೋಪಾಲಯ್ಯನಿಗೆ ಮಾತ್ರ ೭೦ನೇ ವಯಸ್ಸಿನಲ್ಲೂ, "ಪರ್ವತದ ಮೇಲೆ ಒಂದು ತೋಟ ಮಾಡಿಕೊಡುತ್ತೇನೆ" ಎಂದು ಹೇಳಲು ಸಾಧ್ಯ.  ಅದು ಅವನು ಕಂಡುಕೊಂಡ ಬದುಕು, ಹಾಗೆ ಕಂಡುಕೊಂಡ ಬದುಕನ್ನು ಅವನು ಕಟ್ಟಿಕೊಂಡ ಬಗೆ.  ಆದರೆ, ಈಗ ಎಷ್ಟು ಮಂದಿಗೆ ಅಂತಹ ಶಕ್ತಿಯಿದೆ?! ಬಹಳ ವಿರಳ.
ಕಾರಣ, ಇಂದು ಬದುಕನ್ನ ತಮ್ಮ ತಮ್ಮ ಸ್ವಂತ ಕಣ್ಣುಗಳಿಂದ ನೋಡಿಕೊಳ್ಳುವುದಕ್ಕಿಂತ ಹೆಚ್ಚಾಗಿ, ನಾಗರೀಕ, ನಗರ ಜೀವನದ ಪ್ರತಿಷ್ಟೆ, ಅಂತಸ್ತುಗಳ ದೃಷ್ಟಿಯಿಂದ ನೋಡಿ, ಕೊನೆಗೆ ಭ್ರಮನಿರಸನಗೊಳ್ಳುವವರೇ ಹೆಚ್ಚು; ಫಲಿತಾಂಶ ಬೇಗನೆ ದಣಿವು, ಬೇಗನೆ ಮುಪ್ಪು. ಇದು ಮುಖವಾಡದ ಬದುಕಿನ ಸ್ಥಿತಿ.  ಹಾಗಾಗಿ, ಅಷ್ಟು ವಯಸ್ಸಾದರೂ, ದಣಿವಾಗದ ಗೋಪಾಲಯ್ಯನನ್ನು ಕಂಡರೆ ಜನರಿಗೆ ಅಚ್ಚರಿ, ಅಚ್ಚುಮೆಚ್ಚು.

     ತನ್ನ ಬದುಕಿನ ಅಂತ:ಸತ್ವ, ಬೇಸಾಯ ಎಂದು ತಿಳಿದು, ಅದು ನಿಜ ಎಂದು ನಿರೂಪಿಸಿದವನಂತೆ ಬದುಕಿದ ಗೋಪಾಲಯ್ಯ, ತನ್ನ ಮಗ ಶಂಭು, ’ಸ್ವಾತಂತ್ರ್ಯ ಚಳುವಳಿ’,’ಹೋರಾಟ’ ನನ್ನ ಬದುಕು ಎಂದು ಹೇಳಿದಾಗ ಆಕ್ಷೇಪಣೆ ಮಾಡುವುದೇಕೆ?!  ಅಷ್ಟಕ್ಕೂ, ಶಂಭು ಮನೆ ಬಿಟ್ಟು ಹೋದದ್ದು, ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಳ್ಳಲು ತಂದೆ-ತಾಯಿ ಆಕ್ಷೇಪಣೆ ಮಾಡಿದ್ದಕ್ಕೋ ಅಥವಾ ಲಕ್ಷ್ಮೀ ಹೇಳಿದ ಘಟನೆಯಿಂದಾಗಿಯೋ?! 

     ಕಾದಂಬರಿಯನ್ನು , ಕಾರಂತರನ್ನು ಮತ್ತೆ ಓದಬೇಕೆನಿಸುತ್ತಿದೆ.................


ನೆನೆಯಬೇಕಾದದ್ದು:
     ಚಿತ್ರ ನೋಡಲು ಅವಕಾಶ ಮಾಡಿಕೊಟ್ಟ ’ಅವಿರತ’ದ ಸತೀಶ್ ಗೌಡರಿಗೂ, ನೋಡಿದ ನಂತರ ಬರೆಯುವಂತೆ ಹೇಳಿದ ’ಸಂವಾದ’ದ ರವಿ ಅರೇಹಳ್ಳಿಯವರಿಗೂ ನನ್ನ ವಂದನೆಗಳು. :)

Monday, September 12, 2011

ನಂದನವನ ಪ್ರಸಂಗ

                                                              (ಮನೆಯ ಒಳಗೆ)

ಅಮ್ಮ : ಬೇಕಾಗಿಲ್ಲ..!! ಯಾವುದೋ ಗೊತ್ತಿರದ ದೇಶಕ್ಕೆ ಹೋಗಿ, ದಿಕ್ಕಿಲ್ಲದ

           ಅನಾಥನಂತೆ ಬದುಕಿ, ಸಂಪಾದನೆ ಮಾಡಿ ಆ  ಸಂಪಾದನೆಯಲ್ಲಿ

           ನಮ್ಮನ್ನ ಸಾಕಬೇಕಿಲ್ಲ.
          
           ಮಗನಿಗೆ ಒಳ್ಳೆ ವಿದ್ಯೆ ಸಿಕ್ಕು, ಸಮಾಜದಲ್ಲಿ ನಾಲ್ಕು ಜನರ ಮಧ್ಯೆ 

           ಗೌರವವಾಗಿ ಬದುಕಲಿ ಅಂತ ಅವನನ್ನ ಓದಿಸಿ 
           
           ವಿದ್ಯಾವಂತನನ್ನಾಗಿ ಮಾಡಿಸಿದ್ದೇವೇ ಹೊರತು, ಹೀಗೆ ವಿದೇಶಿ ಹಣಕ್ಕೆ

           ತನ್ನನ್ನು ತಾನು ಮಾರಿಕೊಳ್ಳಲಿ ಅಂತ ಅಲ್ಲ!!  ಕರುಳ ಸಂಬಂಧವನ್ನು

           ಕತ್ತರಿಸಿಕೊಂಡು ಹೋಗಿ ಬೇರೆಲ್ಲೋ  ಬದುಕುವುದು ಇಷ್ಟು ಸಲೀಸಾಗಿ

           ಹೋಯಿತೆ  ಇವರಿಗೆ?!!



ಅಪ್ಪ : ಹೋಗಲಿ ಬಿಡು....ಅವರಿಗೆ ಎಲ್ಲಿ ಸಂತೋಷವೋ ಅಲ್ಲೇ ಇರಲಿ.  ನಮ್ಮ

          ನೆನಪುಗಳ ಜೊತೆ ಅವರ ಭವಿಷ್ಯವನ್ನು ಕಟ್ಟಿ  ಹಾಕುವುದು ಎಷ್ಟು ಸರಿ?!!

          ಅವರವರ ದಾರಿ ಅವರವರಿಗೆ....



                                                            

                                                               (ಮನೆಯ ಹೊರಗೆ)


ಗೆಳೆಯ :  ಇಂಥ ಅವಕಾಶ ಎಲ್ಲರಿಗೂ ಸಿಗುವುದಿಲ್ಲ ಕಣೋ.  ಸಾವಿರದಲ್ಲಿ ಒಬ್ಬರಿಗೆ

             ಈ ರೀತಿ ಅವಕಾಶ ಹುಡುಕಿಕೊಂಡು ಬರುವುದು.  ಈ ಕೆಲಸದಿಂದ

             ನಿನಗಾಗುವ ಸಂಪಾದನೆಯಲ್ಲಿ ನೀನು ನಿನ್ನ ಅಪ್ಪ-ಅಮ್ಮನನ್ನು ಚೆನ್ನಾಗಿ
             
             ನೋಡಿಕೊಳ್ಳಬಹುದು.  ಇನ್ನೊಂದು ಸಲ ಯೋಚಿಸಿ ನೋಡು....


ಮಗ :  ಇಲ್ಲ ಕಣೋ...ನಾನು ಚೆನ್ನಾಗಿ ಯೋಚಸಿಯೇ ಈ ನಿರ್ಧಾರ

           ಮಾಡಿರುವುದು.  ಸಾವಿರದ ಜನರಲಿ ಒಬ್ಬರಿಗೆ ಸಿಗುವ
         
           ಅವಕಾಶ ನನಗೇ ಸಿಕ್ಕಿ, ನನ್ನ ಯೋಗ್ಯತೆ ಏನು ಅಂತ ತಿಳಿಸಿದೆ; ನನಗೆ

           ಅಷ್ಟು ಸಾಕು.  ಅಷ್ಟಕ್ಕೂ, ಅಪ್ಪ-ಅಮ್ಮನ ಜೊತೆಯಲ್ಲಿದ್ದು, ಅವರಿಗೆ

           ಆಧಾರವಾಗಿದ್ದುಕೊಂಡು ಅವರನ್ನು ಚೆನ್ನಾಗಿ ನೋಡಿಕೊಳ್ಳಬಹುದೇ

           ಹೊರತು, ದುಡ್ಡಿನಿಂದ  ಅಲ್ಲ ಕಣೋ...ನನಗೆ ಆ ಕೆಲಸ ಬೇಡ

            ಅಂತ ಆಗಲೇ ಹೇಳಿ ಬಂದಾಯಿತು.. :)

Monday, June 27, 2011

ಅವಳು, ಅವನು ಮತ್ತು ನೆಟ್ ವರ್ಕ್.....

"ಅಲ್ಲಿ ಮೋಡಗಳ ದೊಡ್ಡ ಗುಂಪೇ ಇದೆ.

ಜೊತೆಗೆ, ಜೋರು ಗಾಳಿ ಬೀಸುತ್ತಾ ಇದೆ.

ಇದು, ಮಳೆ ಬರುವ ಸೂಚನೇನೊ ಅಥವಾ

ಮೋಡಗಳನ್ನ ಓಡಿಸೋ ಯೋಚನೇನೊ...?!!"






---------------------------------------------------------------------------------




ಕಳೆದ ೧೦ ನಿಮಿಷದಲ್ಲಿ, ಅವನು ಅವಳಿಗೆ ೮ ಮೆಸೇಜ್ ಕಳಿಸಿದ್ದ..!!


--


ಯಾವುದೋ ಒಂದು ಮಹತ್ತರ ಸತ್ವ ಪರೀಕ್ಷೆಗಾಗಿ, ಎರಡು ದಿನದಿಂದ ಅವಳು ಅವನೊಂದಿಗೆ ಮಾತಾಡುತ್ತಿರಲಿಲ್ಲ..!! ಈ ವಿಷಯದಲ್ಲಿ ಅವಳು ಸ್ಪಷ್ಟವಾಗಿದ್ದಷ್ಟು, ಅವನು ಸ್ಪಷ್ಟವಾಗಿರಲಿಲ್ಲ...ಮನಸನ್ನ ಗೊಂದಲದ ಗೂಡು ಮಾಡಿಕೊಂಡು,  ಹೇಗೋ ಒಂದು ರಾತ್ರಿ ಕಳೆದಿದ್ದ..


ಮಾರನೇ ದಿನ ಎದ್ದವನೇ, ಅವಳಿಗೆ ಮೆಸೇಜ್ ಮಾಡಿದ್ದ..! ಆದರೆ, ಅವಳು ತನ್ನ ಸ್ಟೈಕ್ ನಿಲ್ಲಿಸೋ ಸೂಚನೇನೆ ಇರಲಿಲ್ಲ..ಅವನ ಕಡೆಯಿಂದ ಮೆಸೇಜ್ ಗಳಿದ್ದವೇ ಹೊರತು ಅವಳ ಕಡೆಯಿಂದ ಉತ್ತರವಿರಲಿಲ್ಲ.....!!


ಅವಳು ಮೌನದ ಆಭರಣ ಧರಿಸಿ ಕೂತಿದ್ದರೆ, ಅವನು ಅವಳ ಮಾತಿಗೆ ಹಪಹಪಿಸಿ, ಧ್ಯಾನಿಸುತ್ತಿದ್ದ.....


ಅಂತು ಎರಡು ದಿನದ ನಂತರ ಮೆಸೇಜ್ ಮಾಡಿದಳು.!!! ಅವಳ ಪರೀಕ್ಷೆ ಮುಗಿದಿತ್ತೋ ಅಥವಾ ಅವಳಿಗೆ ಪರೀಕ್ಷೆ ಬೇಡವೆಂದೆನಿಸಿತ್ತೋ ಗೊತ್ತಿಲ್ಲ.


ಪ್ರತಿದಿನ ಮಧ್ಯಾಹ್ನ ಅವರಿಬ್ಬರು ಊಟ ಮಾಡುವ ಸಮಯಕ್ಕೆ ಸರಿಯಾಗಿ, ಅವತ್ತು ಸಹ "ಊಟ ಮಾಡೋಣ ಬಾ" ಅಂತ ಮೆಸೇಜ್ ಮಾಡಿ, ಮಾತಾಡುವ ಮೂಲಕ ತನ್ನ ಮೌನ ಮುರಿದ್ದಿದ್ದಳು..!!!


ಅವಳ ಆದೊಂದು ಮೆಸೇಜ್ ಅವನ ಎರಡು ದಿನಗಳ ಬೇಸರವನ್ನು ನೀವಾಳಿಸಿ ಎಸೆದಿತ್ತು.!! :)


ಅದೇ ಖುಷಿಯಲ್ಲಿ, "ಸರಿ, ಸರಿ ಊಟ ತನ್ನಿ, ನಾನು ತರುತ್ತೀನಿ" ಎಂದು ಉತ್ತರಿಸಿದ್ದ.


ಆದರೆ, ಆವಳಿಂದ ಯಾವುದೇ ಪ್ರತಿ ಉತ್ತರ ಬರಲೇ ಇಲ್ಲ..!! ಹಾಗಾಗಿ, ಮುಂದಿನ ೧೦ ನಿಮಿಷದಲ್ಲಿ ೮ ಮೆಸೇಜ್ ಕಳಿಸಿದ್ದ..!!


--


ಅವನಿಗೆ ಮತ್ತೆ ಆತಂಕ...!! ಅವಳ ಮತ್ತು ಅವಳ ಮೆಸೇಜಿಗಾಗಿ ಕಾದು ಕೂತಿದ್ದ ಅವನಿಗೆ, ಅವಳಿಂದ ಮೆಸೇಜ್ ಬಂದಿದ್ದೆ ಭ್ರಮೆಯೇನೊ ಎಂದೆನಿಸಿ, ಮೊಬೈಲ್ ನ ಇನ್ ಬಾಕ್ಸ್ ನೋಡಿ, ಮೆಸೇಜ್ ಬಂದಿರುವುದನ್ನು ಖಾತ್ರಿ ಮಾಡಿಕೊಂಡ.

ಹಾಗೆ, ಸೆಂಟ್ ಐಟೆಮ್ಸ್ ನೋಡಿದಾಗಲೆ ತಿಳಿದಿದ್ದು, ಅವನು ಕಳಿಸಿದ್ದ ಅಷ್ಟೂ ಮೆಸೇಜ್ ಗಳು ಅವಳಿಗೆ ತಲುಪೇ ಇಲ್ಲ ಎಂದು..!!!


--


     ಅವರಿಬ್ಬರ ಮಧ್ಯೆ ಸದ್ಯಕ್ಕೆ ಇದ್ದ ಏಕೈಕ ತೊಂದರೆ ಅಂದರೆ, ಇದೇ ಇರಬೇಕು. ಕ್ಷಮಿಸಿ!! ಅವರಿಬ್ಬರ ಮಧ್ಯೆ ಅಂದರೆ ತಪ್ಪಾಗುತ್ತೆ...ಅವರಿಬ್ಬರ ಮೊಬೈಲ್ ಮಧ್ಯೆ ಇದ್ದ ತೊಂದರೆ ಅಂತ ಹೇಳೋದೆ ಸರಿ.

ಅವನ ಮೊಬೈಲ್ ಬ್ಯಾಟರಿ ಅಗಾಗ ಆತ್ಮಹತ್ಯೆ ಮಾಡಿಕೊಳ್ಳುತಿತ್ತು.(ದೇಹವಿದ್ದೂ, ಜೀವವಿಲ್ಲದಂತ ಪರಿಸ್ಥಿತಿ.....)
ಅವಳ ಮೊಬೈಲ್ ನೆಟ್ ವರ್ಕ್ ಹೇಳದೆ, ಕೇಳದೆ ’ಕೋಮ’ ಸ್ಥಿತಿ ತಲುಪುತಿತ್ತು. (ಜೀವ ಇದ್ದು, ದೇಹಾನೂ ಇದ್ದು, ಚಲನೆ ಇಲ್ಲದಂತಹ,ಅರಿವೇ ಇಲ್ಲದಂತಹ ಪರಿಸ್ಥಿತಿ...)


ಈ ಪರಸ್ಪರ ಮೊಬೈ ಲ್ ತೊಂದರೆ ಇಂದ ಅವರಿಬ್ಬರ ನಡುವಿನ ಮಾತು ಎಷ್ಟೋ ಸಲ ನಿಧಾನ ಆಗಿದೆ...ಕೆಲವೊಂದು ಸಲ ನಿಂತೇ ಹೋಗಿದೆ.

ಇಂಥದೊಂದು ತೊಂದರೆ ಇದೆ ಅಂತ ಗೊತ್ತಿದ್ರು, ಅದನ್ನ ಅವರಿಬ್ಬರು ಒಪ್ಪದಿದ್ದರೂ, ಆ ತೊಂದರೆ ಇದ್ದದ್ದು, ಸೂರ್ಯ ಚಂದ್ರರ ಆಣೆಗೂ ಸತ್ಯ..ಸತ್ಯ..ಸತ್ಯ..!! :)


--


     "ಥತ್, ಡಬ್ಬಾ ನೆಟ್ ವರ್ಕ್...ಮತ್ತೆ, ಕೋಮ ಸ್ಟೇಜ್ ಗೆ ಹೋಗಿಬಿಡ್ತು..!! ಸರಿಯಾದ ಟೈಮಿಗೆ ಕೈ ಕೊಡ್ತು..!!"

ಅಂತ ಅವಳ ಮೊಬೈಲ್ ನೆಟ್ ವರ್ಕ್ ಮೇಲೆ  ಸಿಡುಕಿದ..!!

"ಅವಳು ಪರಿಸ್ಥಿತಿ ಅರ್ಥ ಮಾಡಿಕೊಂಡು ಮಾತಾಡ್ತಾ ಇದ್ದಾಳೇ...ಆದೇ ರೀತಿ ಈ ಮೊಬೈಲ್ ನೆಟ್ ವರ್ಕ್ ಅರ್ಥ ಮಾಡಿಕೊಳ್ಳೋ ಹಾಗಿದ್ರೆ, ಈ ಸಮಸ್ಯೆನೇ ಇರ್ತಿರಲಿಲ್ಲ..!! ಎಲ್ಲ ನಮ್ಮ ಹಣೆಬರಹ"

ಅಂತ ತನ್ನ ಮನಸ್ಸಲ್ಲೇ ಗೊಣಗಿಕೊಂಡ.






"ಮೈ ಡಿಯರ್ ಫ್ರೆಂಡ್,...."
ಆಂತ ಯಾರೊ ಆತ್ಮೀಯಾವಾಗಿ ಕರೆದಂತಾಯಿತು.

’ಯಾರಿರಬಹುದು?’ಅಂತ ನೊಡಿದರೆ, ಯಾರು ಇರಲಿಲ್ಲ.


ಮತ್ತೆ ಬಂದು ತಾನಿದ್ದ ಜಾಗದಲ್ಲಿ ಕೂತು, ಅವಳಿಂದ ಮೆಸೇಜ್ ಬಂದಿರಬಹುದ ಅಂತ ನೋಡುತ್ತಿರುವಾಗ..ಮತ್ತೆ ಅದೇ ಆತ್ಮೀಯ ದ್ವನಿ.


"ಹೆಲೋ ಫ್ರೆಂಡ್, ನನ್ನ ಗುರುತು ಹಿಡಿಯೋಲ್ವ, ನನ್ನ ಜೊತೆ ಮಾತಾಡೋಲ್ವ.." ಎಂದಿತು.


"ನನ್ನದೇ ನನಗಾಗಿದೆ,...ಇದ್ಯಾರಪ್ಪ ಈ ಹೊತ್ತಲ್ಲಿ...!! ಯಾರಿರ ಬಹುದು..?!"
ಅಂತ ಮನಸಲ್ಲೇ ಸಿಡುಕಿದ.


ಅವನ ಸಿಡುಕಿಗೆ, ಉತ್ತರವೆಂಬಂತೆ,

"ಹ್ಹ..ಹ್ಹ..ಹ್ಹ... ನಿನ್ನ ಸದ್ಯದ ಸಿಡುಕಿಗೆ, ಬೇಸರಕ್ಕೆ ಕಾರಣನಾದ ’ನೆಟ್ ವರ್ಕ್’" ಎಂದಿತು ಆ ಧ್ವನಿ..!!


"ಏನು..!? ನೆಟ್ ವರ್ಕಾ..?!! ನೆಟ್ ವರ್ಕ್ ನನ್ನ ಜೊತೆ ಮಾತಾಡ್ತಾ ಇದ್ಯಾ..!?!!"


"ಹೌದು...ಆಗೊಮ್ಮೆ, ಈಗೊಮ್ಮೆ, ನಿನ್ನ ಮೆಸೇಜ್ ನ ಅವಳಿಗೆ ಕಳುಹಿಸೊದರಲ್ಲಿ, ತಡ ಮಾಡುವ, ನಿನ್ನಿಂದ ’ಡಬ್ವಾ’ ಅಂಥ ಕರೆಯಿಸಿಕೊಳ್ಳುವ ನೆಟ್ ವರ್ಕ್ ಜೊತೇನೆ ನೀನು ಮಾತಾಡ್ತಾ ಇರೋದು.."


"ಸುಮ್ನೆ ಇರು..!! ಆಗೊಮ್ಮೆ, ಈಗೊಮ್ಮೆ ಅಂತೆ..!! ಆಗೊಮ್ಮೆ, ಈಗೊಮ್ಮೆ ಅಲ್ಲ... ಪದೇ ಪದೇ....ಪದೇ ಪದೇ ಹೀಗೆ, ಮೆಸೇಜ್ ಸರಿಯಾದ ಟೈಮಿಗೆ ತಲುಪಿಸದೆ, ಬಹಳ ತೊಂದರೆ ಕೊಡ್ತೀಯ ನೀನು..!!"


"ಕ್ಷಮಿಸಬೇಕು, ನಿಮಗೆ ತೊಂದರೆ ಕೊಡುವುದು ನನ್ನ ಉದ್ದೇಶ ಅಲ್ಲ... ದೇವರ ಸೃಷ್ಟಿ ನೀವು...ಮನುಷ್ಯರು...ನೀವೇ ಪೂರ್ಣ ಅಲ್ಲ...ಇನ್ನು, ನಿಮ್ಮಿಂದ ಆದವರು ನಾವು, ನಮಗೆ ದೋಷ ಇರೊದಿಲ್ವೇ...?! ಪ್ರಕೃತಿ ಮುಂದೆ, ಅಡೆ ತಡೆ ಇದ್ದೇ ಇರುತ್ತೆ....ನಾವು ಯಾವತ್ತಿಗೂ, ಪ್ರಕೃತಿನ ಮೀರೋಕೆ ಸಾಧ್ಯಾನೆ ಇಲ್ಲ.."


"ಮ್ ಮ್....ಹೌದು...ನೀನ್ ಹೇಳುವುದು ಸರಿಯಾಗಿಯೆ ಇದೆ....ಆದರೂ...ಒಂದೆರಡು ನಿಮಿಷ ನಿಧಾನ ಅಂದ್ರೆ ಪರವಾಗಿಲ್ಲ... ಸಹಿಸಬಹುದು...ಆದರೆ, ಅದಕ್ಕೂ ಮೀರಿ ಕೆಲವೊಮ್ಮೆ, ನೀನು ನಿಧಾನ ಮಾಡಿಬಿಡ್ತೀಯ..ಆಗೆಲ್ಲ ನಿನ್ನ ಮೇಲೆ ಸಿಟ್ಟು ಬರುತ್ತೆ.!!"


ಅವನು ಸಿಡುಕುತ್ತಾ ದೂರಿದ ಈ ಪರಿಗೆ, ಅಷ್ಟೇ ಶಾಂತವಾಗಿ ನಗುತ್ತಾ..


":) ನಿನಗೊಂದು ಮಾತು ಹೇಳ್ತೀನಿ, ಕೇಳು...ಹಾಗೆ ಒಬ್ಬರನ್ನೊಬ್ಬರು ಮಿಸ್ ಮಾಡಿಕೊಂಡಾಗಲೆ, ಆತ್ಮೀಯತೆ ಹೆಚ್ಚಾಗೋದು... ನಾನು ಮೆಸೇಜ್ ತಲುಪಿಸುವುದು ನಿಧಾನ ಆದಾಗ, ನನ್ನ ಮೇಲೆ, ಸಿಟ್ಟು ಮಾಡಿಕೊಳ್ಳಬೇಡ...ಬದಲಿಗೆ, ನೀವಿಬ್ಬರು, ಒಬ್ಬರನೊಬ್ಬರು ಎಷ್ಟು ಹಚ್ಚಿಕೊಂಡಿದ್ದೀರ ಅಂತ  ನೆನೆದು ಖುಷಿಯಾಗು.." ಅಂದಿತು.


ಈ ಮಾತಿಗೆ ಏನು ಹೇಳಬೇಕೆಂದು ತಿಳಿಯದೆ, ಮನಸ್ಸಲ್ಲೇ ಖುಷಿ ಪಟ್ಟು ಸುಮ್ಮನಾಗಿದ್ದ. ಹಿಂದೆಯೇ...ಮತ್ತೊಂದು ವಿಷಯ ನೆನಪಾಗಿತ್ತು...!!


"ಸರಿ.... ಹೀಗೆ ಒಂದೆರಡು ನಿಮಿಷ ತಡ ಆದರೆ ಪರವಾಗಿಲ್ಲ...ಆದರೆ, ಒಂದೆರಡು ದಿನಗಳಷ್ಟು ತಡವಾದರೆ ತುಂಬಾ ಬೇಸರ ಆಗುತ್ತೆ, ಸಿಟ್ಟು ಬರುತ್ತೆ.."


"ಓಹ್, ಒಂದು ತಿಂಗಳ ಹಿಂದೆ, ಊರಿಗೆ ಹೋಗಿದ್ದಾಗ, ನೆಟ್ ವರ್ಕ್ ಸಿಗದೆ, ನೀನು ಅವಳು ಒಂದು ದಿನ ಮಾತಾಡೊಕ್ಕೆ ಆಗದೇ ಇರದುದರ ಬಗ್ಗೆ ಹೇಳುತ್ತಿದ್ದೀಯ..?!"


"ಹೌದು ಮತ್ತೆ...!! ಅವಳ ಜೊತೆಯಿದ್ದ, ಎಲ್ಲರ ಮೊಬೈಲ್ ನಲ್ಲೂ ನೆಟ್ ವರ್ಕ್ ಇದೆ, ಅದರಿಂದ ಕಾಲ್ಸ್ ಹೋಗ್ತಾ ಇವೆ, ಅವರ ಮೊಬೈಲ್ ಗೆ ಕಾಲ್ಸ್ ಬರ್ತಾ ಇವೆ... ಅವಳೊಬ್ಬಳ ಮೊಬೈ ಲ್ ನಲ್ಲಿ ಮಾತ್ರ ನೆಟ್ ವರ್ಕ್ ಇಲ್ಲ, ಸಿಗ್ನಲ್ ಇಲ್ಲ... ಆ ಒಂದಿನ ಇಬ್ಬರೂ ಮಾತಾಡೋಕೆ ಆಗದೆ, ಒಬ್ಬರನ್ನೊಬ್ಬರು ವಿಚಾರಿಸಿಕೊಳ್ಳದೆ ಎಷ್ಟು ಕಷ್ಟ, ನೋವು, ಬೇಸರ ಆಗಿತ್ತು ಗೊತ್ತಾ...?!! ಕಡೇ ಪಕ್ಷ ನನಗಾದರು ಹಾಗೆ ಆಗಿತ್ತು..."


ಅಂತ ಒಂದೇ ಸಮನೆ ಹತಾಶೆ ಯಿಂದ ತನ್ನ ಅಸಹಾಯಕತೆಯನ್ನು, ನೋವನ್ನು ಬಡಬಡಿಸಿದನು...ಎಷ್ಟು ಕಷ್ಟದಿಂದ ತಡೆ ಹಿಡಿದಿದ್ದನೊ ಇಷ್ಟು ದಿನ.


"ಕ್ಷನಿಸು ಫ್ರೆಂಡ್....ಈ ವಿಷಯದಲ್ಲಿ, ನಿನ್ನಷ್ಟೇ ಅಸಹಾಯಕ ನಾನು. ನಿಮ್ಮಿಬ್ಬರ ಮಾತು ಕಥೆಗೆ ಸಾಕ್ಷಿಯಾಗಿರುವ ನಾನು ಅವತ್ತಿನ ದಿನ ನನ್ನ ಶಕ್ತಿ ಮೀರಿ, ಸಿಗ್ನಲ್ ಗೆ ಪ್ರಯತ್ನಪಟ್ಟರು, ಆಗಲಿಲ್ಲ.. ಇದರಲ್ಲಿ, ನನ್ನ ತಪ್ಪೇನು ಇಲ್ಲ..ಹಾಗೆ ಇದಕ್ಕೆ ನಾನು ಜವಾಬ್ದಾರನೂ ಅಲ್ಲ.. ಇದು ನನ್ನನು ಸಾಕುತ್ತಾ ಇರೊ ಕಂಪನಿಯದ್ದು.."


ಎಂದು ನಿರಾಶೆಯಿಂದ ಹೇಳಿತು.


"ನೀನು ಹೇಳುವುದೂ ಸರಿಯೇ...ಅವರು ನೆಟ್ ವರ್ಕ್ ಹೆಚ್ಚಿಸದ ಹೊರತು, ನಿನಗೆ ಸಿಗ್ನಲ್ ಸಿಗುವುದರಲ್ಲಿ ತೊಂದರೆ ತಪ್ಪಿದ್ದಲ್ಲ...."

ಇಷ್ಟು ಹೇಳಿ, ಇಬ್ಬರು ತಮ್ಮ ತಮ್ಮ ಅಸಹಾಯಕತೆ ಬಗ್ಗೆ ಒಂದರೆಕ್ಷಣ ಮೌನವಾದರು...ತಕ್ಷಣ ಅವನಿಗೆ ಏನೋ ನೆನಪಾದಂತಾಗಿ,




"ಹೇ, ನಿನ್ನ ಮೇಲೆ ಎಷ್ಟೋ ಬಾರಿ ರೇಗಿರುವಂತೆ ಈಗಲೂ ರೇಗಿದೆ..ಆದ್ರೆ, ಇವತ್ತು ಯಾಕೆ, ಹೇಗೆ ನನ್ನವರೆಗೂ ಬಂದೆ..?"


ಅಂತ ಸಂಶಯ ನಿವಾರಿಸಿಕೊಳ್ಳುವ ಸಲುವಾಗಿ ಕೇಳಿದ...


"ಯಾವಾಗಲು ನನ್ನನ್ನು, ’ಡಬ್ಬಾ ನೆಟ್ ವರ್ಕ್’ ಅಂತ ಕರೀತಿದ್ದ ನೀನು, ಇವತ್ತು ’ನನಗೆ ಪರಿಸ್ಥಿತಿ ಅರ್ಥ ಆಗೊದಿಲ್ಲ’ಅಂತ ಹೇಳಿದಕ್ಕೆ, ನನಗೆ ಬೇಜಾರಾಗಿ ಬಂದೆ.. ನಿನ್ನ ಜೊತೆ ಸ್ವಲ್ಪ ಮಾತಾಡಿ ಹೋಗುವುದಕ್ಕೆ.
ಅಲ್ಲ...’ನೀವು ಮಾತಾಡೊ ಮನಸ್ಸು ಮಾಡಿದ್ದೀರ..ಆದರೆ, ನಿಮ್ಮ ನೆಟ್ ವರ್ಕ್, ನಾನು ನಿಮ್ಮ ಜೊತೆ ಮಾತಾಡೋಕೆ ಅವಕಾಶ ಮಾಡಿಕೊಡುವ, ಮನಸ್ಸು ಮಾಡಿಲ್ಲ ಇನ್ನು" ಅಂತ ಎಷ್ಟು ಸುಲಭವಾಗಿ ಹೇಳಿದೆ ನೀನು...ನಿಮ್ಮಿಬ್ಬರ ಎಷ್ಟೋ ಮಾತಿಗೆ, ನಗುವಿಗೆ, ಬೇಸರಕ್ಕೆ ಸಾಕ್ಷಿಯಾಗಿದ್ದೇನೆ ನಾನು...ನಿಮ್ಮಿಬ್ಬರಿಗೆ
ಮೆಸೇಜ್ ಗಳನ್ನ ತಲುಪಿಸುವುದರಲ್ಲಿ ಖುಷಿ ಇದೆ ನನಗೆ..ಅದು ಎಷ್ಟರ ಮಟ್ಟಿಗೆ ಅಂದರೆ, ನನಗೆ ಅವಳ ಫ್ರೆಂಡ್ಸ್ ಗಳ ನಂಬರ್ರೇ ಮರೆತುಹೋಗಿವೆ...ಮೊನ್ನೆ ದಿವಸ ಅವಳು ಅವಳ ಫ್ರೆಂಡ್ಸ್ ಗಳಿಗೆ ಕಳುಹಿಸಿದ ಮೆಸೇಜ್ ಗಳು ಅವರಿಗೆ ತಲುಪಲೇ ಇಲ್ಲ.. ಆದರೆ, ಅದೇ ಸಮಯದಲ್ಲಿ, ನಿನಗೆ ಕಳುಹಿಸುತ್ತಿದ್ದ ಮೆಸೇಜ್ ಗಳು ಯಾವುದೇ ತೊಂದರೆ ಇಲ್ಲದೆ ನಿನ್ನನ್ನು ತಲುಪುತ್ತಲೇ ಇದ್ದವು..!!!’


ಅಂತ ನೆಟ್ ವರ್ಕ್ ತನ್ನ ಸೇವೆಯನ್ನು, ಅದರಲ್ಲಿನ ತನ್ಮಯತೆಯನ್ನು ಅವನ ಮುಂದೆ ಬಿಡಿಸಿಟ್ಟಿತು...
ಹೀಗೆ, ನೆಟ್ ವರ್ಕ್ ನ ಇಷ್ಟೆಲ್ಲ ಮಾತನ್ನು ಕೇಳಿ, ಅದರ ಸಹಾಯ ಗುಣವನ್ನು ಅರಿತ ಅವನು, ಈಗ ನೆಟ್ ವರ್ಕ್ ಅನ್ನು ಸಂತೈಸುವ ಸಲುವಾಗಿ...


"ಐ ಅಮ್ ವೆರಿ ಸ್ಸಾರಿ ನೆಟ್ ವರ್ಕ್.....ನಿನ್ನ ಬಗ್ಗೆ ನನಗೆ ಯಾವುದೇ ಶಾಶ್ವತವಾದಂತಹ ಕೋಪ ಇಲ್ಲ.. ನಿಜ ಹೇಳಬೇಕು ಅಂದ್ರೆ, ನಿನ್ನ ಸಹಾಯ ಇರೋದ್ರಿಂದಾನೆ ನಾವು ಪ್ರತಿ ದಿನ ಆರಾಮಾಗಿ ಮಾತಾಡೋದು..ನನಗೆ ಇದರ ಅರಿವಾಗಿದೆ...ನಾನು ಆ ಕ್ಷಣದ ಸಿಟ್ಟಿನಿಂದ ನಿನ್ನ ಮೇಲೆ ರೇಗಿರಬಹುದು..ಆದರೆ ಖಂಡಿತ ನಿನ್ನ ಮೇಲೆ ದ್ವೇಷ ಇಲ್ಲ..."


" :) ನನಗೆ ಗೊತ್ತು ಮೈ ಫ್ರೆಂಡ್...ಸರಿ.. ನಾನಿನ್ನು ಹೊರಡುತ್ತೀನಿ.. ಹ್ಹಾ...ನಿನ್ನೆಯಿಂದ, ’ಮೋಡ ಇದೆ, ಮಳೆ ಬರುತ್ತಿಲ್ಲ’ಅಂತಿದ್ದೆಯಲ್ಲ, ಈಗ ಸ್ವಲ್ಪ ಹೊತ್ತಲ್ಲಿ, ಮಳೆ ಬರುತ್ತೆ ಅನಿಸುತ್ತೆ.. ಆಗ ಸ್ವಲ್ಪ ನೆಟ್ ವರ್ಕ್ ತೊಂದರೆ ಆಗಬಹುದು...ಮತ್ತೆ ಸಿಡುಕಬೇಡ..ಮೊದಲೇ ಹೇಳಿದ್ದೀನಿ..


"ಹ್ಹ..ಹ್ಹ...ಹ್ಹ.... ಮಳೆ ಆಗಲೇ ಬಂತು..!!"
ಅಂತ ಯಾವುದೋ ಗುಟ್ಟು ಇವನೊಬ್ಬನಿಗೇ ತಿಳಿದಿರೊ ಹಾಗೆ ನಗಲಾರಂಭಿಸಿದ...

ನನಗೇ ಗೊತ್ತಾಗದಂತೆ, ಮಳೆ ಯಾವಾಗ ಬಂತು ಅನ್ನೋ ಗೊಂದಲದಲ್ಲೆ, ನೆಟ್ ವರ್ಕ್, "ಯಾವಾಗ?" ಅಂತ ಕೇಳಿತ್ತು...

ಅವನು ನಗುತ್ತಾ,
’ನನ್ನ, ಮೊಬೈಲ್ ಇನ್ ಬಾಕ್ಸ್ ಗೆ ಅವಳ ಮೆಸೇಜ್ ಬಂದಾಗಲೇ, ಅವಳು ಮೌನ ಮುರಿದು ಮಾತಾಡಿದಾಗಲೇ, ಇಲ್ಲಿ ಮಳೆ ಬರೋಕೆ ಶುರುವಾಯಿತು.. :) ’
ಅಂದಾಗ,

ನೆಟ್ ವರ್ಕ್ ಗೆ ಏನೂ ತಿಳಿಯಲಿಲ್ಲ...ಇದನ್ನು ಅರ್ಥಮಾಡಿಕೊಂಡವನಂತೆ,


"ಹೋಗ್ಲಿ ಬಿಡು, ಇದು ಅವಳಿಗೂ ಗೊತ್ತಾಗಲಿಲ್ಲ, ನಿನಗು ಗೊತ್ತಾಗೊಲ್ಲ.."
ಅಂತ ನಕ್ಕು ಸುಮ್ಮನಾದ...


ಆದರೆ, ಆ ನೆಟ್ ವರ್ಕ್ ಇವನನ್ನು ಬಿಡುವಂತಿರಲಿಲ್ಲ....
"ಸರಿಯಾಗಿ ಬಿಡಿಸಿ ಹೇಳು ಏನದು..?" ಅಂತ ಪಟ್ಟುಹಿಡಿಯಿತು...!


"ಸರಿ, ಹೇಳುತ್ತೇನೆ..!! ಗಮನಕೊಟ್ಟು ಕೇಳು.. :) ನಿನ್ನೆಯಿಂದ ವಾತಾವರಣ ಹೇಗಿದೆ..!?


ಬಿಸಿಲಿನ ಬೇಗೆಗೆ ಭೂಮಿ ಕಾದಿದೆ...ಅದೇ ಸಮಯಕ್ಕೆ ಆಕಾಶದಲ್ಲಿ ದೊಡ್ಡ ದೊಡ್ಡ ಮೋಡಗಳ ಗುಂಪೇ ಇದೆ..


ಇದು ಮಳೆ ಆಗುವ ಸೂಚನೆ ನೀಡಿದರೆ, ಈ ಹುಚ್ಚು ಗಾಳಿ ಮನಬಂದಂತೆ ಬೀಸಿ

ಮೋಡಗಳನ್ನ ಓಡಿಸೊ ಯೋಚನೆ ಮಾಡ್ತಿವೆ..!!


ಅದೇ ರೀತಿ, ಅವಳಿಗಾಗಿ, ಅವಳ ಮಾತಿಗಾಗಿ ಭೂಮಿಯಂತೆ ಕಾದು ಕೂತಿದ್ದ ನನಗೆ,..

ಎರಡೂ ದಿನಗಳಿಂದ ಅವಳು ನನ್ನೊಂದಿಗೆ ಮಾತಾಡದೇ ಇದ್ದ ಮಾತುಗಳೆಲ್ಲ  ಸೇರಿ ದೊಡ್ದ ಮೋಡಗಳಂತೆ ಹೆಪ್ಪುಗಟ್ಟಿರುವಂತೆ ಕಾಣುತ್ತಿದೆ...

ಮಹಾಪರೀಕ್ಷೆ ಎಂದು ಅವಳು ತೆಗೆದುಕೊಂಡ ಆ ಕಾರ್ಯ ಹುಚ್ಚುತನದ ಗಾಳಿಯಂತೆ, ಮೋಡಗಳನ್ನ  ಚದುರಿಸಿ, ಮಳೆಯಾಗದಂತೆ ಮಾಡಿ, ಅವಳ ಮಾತುಗಳು ನನ್ನನ್ನು ಸೇರದಂತೆ ಮಾಡುತ್ತಿವೆ ಏನೊ ಅನಿಸುತ್ತಿತ್ತು....!!

ಕೊನೆಗೂ, ಆ ಹುಚ್ಚು ಗಾಳಿ ಇಲ್ಲವಾಗಿ, ಹೆಪ್ಪುಗಟ್ಟಿದ್ದ ಮಾತಿನ ಮೋಡ ಕರಗಿ, ಮಳೆಯಾಗಿ ಕಾದ ನನ್ನನ್ನ ಸೇರಿದೆ.. :)’


"ಆಬ್ಬಾ..!!! ಕೇವಲ ಹವಾಮಾನದ ವರದಿಯಂತೆ ಇದ್ದ ನಿನ್ನ ಆ ಚಿಕ್ಕ ಮೆಸೇಜ್ ನಲ್ಲಿ ಇಷ್ಟು ದೊಡ್ಡ ವಿಚಾರ ಅಡಗಿದೆ ಅಂತ ನನಗೆ ನಿಜವಾಗಲೂ ಗೊತ್ತಿರಲಿಲ್ಲ... ನಿನ್ನನ್ನು ಮೆಚ್ಚಲೇ ಬೇಕು..!! ಈ ವಿಚಾರವಾಗಿ ಮಾತಾಡಲು ಮತ್ತೆ ಸಿಗುತ್ತೇನೆ..."


ಎಂದು ಹೇಳಿ ನೆಟ್ ವರ್ಕ್ ಆ ಕಡೆ ಹೊರಡುತ್ತಿದ್ದಂತೆ, ಈ ಕಡೆ ಮಳೆ ಸುರಿಯಲಾರಂಭಿಸಿತು...................