Tuesday, April 30, 2013

ಗೆಳತಿಯ ಹುಟ್ಟುಹಬ್ಬಕ್ಕೆ........


ಕೆಟ್ಟ ಕತ್ತಲ ನ೦ತರ ಮೂಡಿದ

'ಅರುಣೋ'ದಯದ ಮೋಹಕತೆಯ

ಸವಿಯುತ್ತಿರುವ ನಿನಗೆ,

ಈ ಮೊದಲ ಹುಟ್ಟುಹಬ್ಬ

ಕನಸಿಗಿಂತ ಸುಂದರವಾದ, ನಿರಂತರ

ವಿಸ್ಮಯ,ಅಚ್ಚರಿ,ಸಂತಸ ತರಲಿ :)


ಹುಟ್ಟುಹಬ್ಬದ ಶುಭಾಶಯಗಳು.... :)



(ಸೌಮ್ಯ - ಅರುಣ್ ಮದುವೆಯ ನಂತರದ ಮೊದಲ ಹುಟ್ಟುಹಬ್ಬ)

Monday, April 29, 2013

ಮದುಮಗಳ ಗುಂಗಿನಲ್ಲಿ......

ಸುಮಾರು ಒಂದು ತಿಂಗಳಿನಿಂದ ಕಾಯ್ದಿಟ್ಟುಕೊಂಡಿದ್ದ ಕುತೂಹಲ ಮೊನ್ನೆ, ಶನಿವಾರ, ತಣಿಯಿತು; ಅದರ ಹಿಂದೆಯೇ ಮತ್ತೊಂದು ಕಾತುರವು ಹುಟ್ಟಿಕೊಂಡಿದೆ. ಅದೇನೆಂದರೆ, ಈ 'ಮಲೆಗಳಲ್ಲಿ ಮದುಮಗಳು' ನಾಟಕವನ್ನು ಮತ್ತೊಂದು ಬಾರಿ ನೋಡಿಬಿಡಬೇಕು ಎಂದು!! ಹೌದು, ಈ ಮದುಮಗಳ ವೈಶಿಷ್ಟ್ಯವೇ ಅಂಥದ್ದು. ಮೊದಲು ಇದ್ದ ಕುತೂಹಲಕ್ಕೂ, ಈಗ ಹುಟ್ಟಿಕೊಂಡಿರುವ ಕಾತುರಕ್ಕೂ ಸಾಕಷ್ಟು ಕಾರಣಗಳಿವೆ.



ಕನ್ನಡ ಸಾಹಿತ್ಯಲೋಕದ, ಕವಿ ಕುವೆಂಪುರವರ ಮಹಾನ್ ಕಾದಂಬರಿ 'ಮಲೆಗಳಲ್ಲಿ ಮದುಮಗಳು' ಈ ನಾಟಕದ ಕಥಾವಸ್ತು ಎಂಬುದು ಮೊದಲ ಅಚ್ಚರಿಗೆ ಕಾರಣವಾದರೂ, ಕುತುಹೂಲ ಹುಟ್ಟಿಸಿದ್ದು ಈ ನಾಟಕವನ್ನು ಪ್ರಸ್ತುತ ಪಡಿಸುತ್ತಿರುವ ರೀತಿಗೆ. ಇತರೆ ನಾಟಕಗಳಂತೆ ಇಲ್ಲಿ ವೇದಿಕೆಯ / ರಂಗದ ಮೇಲೆ ಮಲೆನಾಡಿನ ಸೆಟ್ ಹಾಕಿಲ್ಲ. ಬದಲಿಗೆ, ಕಲ್ಲು, ಮಣ್ಣು, ಗಿಡ, ಮರವಿರುವ ಬಯಲಿನಲ್ಲಿ ಅಗತ್ಯಕ್ಕೆ ತಕ್ಕಂತೆ ಜಾಗವನ್ನು ಒಪ್ಪ ಓರಣ ಮಾಡಿ, ಮಲೆನಾಡಿನ ಸಣ್ಣ ಹಳ್ಳಿಯ, ತೋಟದ ಒಂದು ಭಾಗದ ತದ್ರೂಪವನ್ನೇ ಸೃಷ್ಟಿಸಿ ಅದನ್ನೇ ರಂಗಸ್ಥಳವನ್ನಾಗಿಸಿರುವುದು ಇದರ ವೈಶಿಷ್ಟ್ಯ.

 

ಇದೇ ರೀತಿ ಸಿದ್ದಗೊಂಡ ನಾಲ್ಕು ವಿವಿಧ ರಂಗಸ್ಥಳಗಳಲ್ಲಿ ನಾಟಕ ಸರದಿಯಲ್ಲಿ ಸಾಗುವುದನ್ನು ನೋಡುವಾಗ ನಮಗೆ ಸಿಗುವ 'ಫೀಲ್' ನಿಜಕ್ಕೂ ವಿಭಿನ್ನವಾದದ್ದು. ಮಲೆನಾಡಿನಲ್ಲಿ ತೋಟದ ಕಡೆ, ಕೇರಿಯ ಕಡೆ ಸುತ್ತಾಡಲು ಹೋದಾಗ, ಯಾರೋ ಕಿತ್ತಾಡುತ್ತಿರುವುದನ್ನು, ಮಾತನಾಡುತ್ತಿರುವುದನ್ನು, ಬೇಡಿಕೊಳ್ಳುತ್ತಿರುವುದನ್ನು ಮರೆಯಲ್ಲಿ ನಿಂತು ನೋಡಿದಂತೆ :)


ಇನ್ನು, ೭೫೦-೮೦೦ ಪುಟಗಳಷ್ಟು ಮಹಾ ಕಾದಂಬರಿಯನ್ನು , ಇಡೀ ರಾತ್ರಿ ೯ ಗಂಟೆಗಳ ಕಾಲ ನಾಟಕ ಮಾಡುತ್ತಾರೆ ಎಂದಾಗ,ಅಚ್ಚರಿಯ ಜೊತೆ, ಅನುಮಾನವೂ ನುಸುಳಿ ಬಂತು. ರಾತ್ರಿ ನಿದ್ದೆಗೆಟ್ಟು ಅಭ್ಯಾಸವಿಲ್ಲದ, ಹೆಚ್ಚೆಂದರೆ ರಾತ್ರಿ ೧ ರ ತನಕ ನಿದ್ದೆಯನ್ನು ಮುಂದೂಡ ಬಹುದಾದ ನಾನು ಬೆಳಿಗ್ಗೆ ೫.೩೦ರ ತನಕ ನಿದ್ದೆ ಬಿಟ್ಟು, ಎದ್ದು ಕೂತು ನಾಟಕ ನೋಡಬಲ್ಲೆನೆ, ನಾಟಕ ಬೋರ್ ಎನಿಸಿಬಿಟ್ಟರೆ ಅಥವಾ ಕಥಾವಸ್ತು ತುಂಬಾ 'ಹೆವಿ' ಎನಿಸಿ, ಆಸಕ್ತಿ ಜಾರಿ ಹೋದರೆ ಎಂದೆಲ್ಲ ಅನಿಸಿತ್ತು. (ನಾನು ಕಾದಂಬರಿಯನ್ನು ಓದಿಲ್ಲ) ನಾಟಕದ ಪ್ರದರ್ಶನ ಮುಗಿಯುವ ವೇಳೆಗೆ ಈ ಎಲ್ಲಾ ಅನುಮಾನಗಳು ಕೊಚ್ಚಿಕೊಂಡು ಹೋಗಿದ್ದವು.

ಇಲ್ಲಿ ಮಲೆನಾಡ ಪರಿಸರದ ಚಿತ್ರಣವಿದೆ, ಮುಗ್ದ, ಪ್ರಬುದ್ದ, ಬದ್ದ ಪ್ರೇಮಿಗಳ ಕಥೆಯಿದೆ, ವ್ಯವಸ್ಥೆಯ ವಿರುದ್ದದ ವ್ಯಂಗ್ಯವಿದೆ, ಆಚರಣೆಯಲ್ಲಿದ್ದ,ಈಗಲೂ ಇರುವ ಮೂಢಾಚಾರದ ಅಣಕವಿದೆ, ಹಾಸ್ಯವಿದೆ, ಕಳೆದು ಹೋದ ಮಗನ ಬರುವಿಕೆಗೆ ಕಾಯುವ ತಂದೆಯ ನೋವಿದೆ, ಮನುಷ್ಯ ಸಹಜವಾದ ಆಸೆ, ದುರಾಸೆ, ರಾಜಕೀಯದ ದರ್ಶನವಿದೆ, ಹೀಗೆ ಸಾಕಷ್ಟು ಆಸಕ್ತಿಕರ ವಿಷಯಗಳು ನಮ್ಮನ್ನು ಹಿಡಿದಿಡಬಲ್ಲವು. ಎಷ್ಟರ ಮಟ್ಟಿಗೆ ಎಂದರೆ, ಒಂದು ರಂಗಸ್ಥಳದಲ್ಲಿ ಪ್ರದರ್ಶನ ಮುಗಿದು, ಮತ್ತೊಂದು ಕಡೆ ನಾಟಕ ಮುಂದುವರಿಯುವುದು ಎಂದಾಗ, ಅಲ್ಲಿ ಸರಿಯಾದ ಜಾಗ ಹಿಡಿಯಲು ಓಡುತ್ತಿದ್ದೆ. ನನ್ನ ನಿದ್ದೆಯು ಓಡಿಹೋಗಿ, ಅದೆಲ್ಲೋ ಕಳೆದು ಹೋಗಿತ್ತು.


ವಿಶಿಷ್ಟವಾದ ರಂಗಭೂಮಿ, ವಿಸ್ತೃತವಾದ ಕಥೆ, ಇವುಗಳನ್ನು ಸಮರ್ಪಕವಾಗಿ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಕಲಾವಿದರ ಶ್ರಮ ನಿಜಕ್ಕೂ ಅಭಿನಂದನಾರ್ಹ. ಉತ್ತರದ ಗುಲ್ಬರ್ಗಾದಿಂದ, ದಕ್ಷಿಣದ ಚಾಮರಾಜನಗರದಂದ ಆಯ್ದ ಸುಮಾರು ೭೫ ಜನ ಕಲಾವಿದರು ಇದಕ್ಕಾಗಿ ಒಂದೂವರೆ ತಿಂಗಳು ಶ್ರಮಿಸಿ, ಪ್ರತಿಯೊಬ್ಬರೂ ಕನಿಷ್ಟ ೩ ಪಾತ್ರಗಳನ್ನು ನಿಭಾಯಿಸಿರುವುದು ಆಶ್ಚರ್ಯಕರ. ನಾಟಕ ಪ್ರಾರಂಭವಾಗಿ, ನಾಟಕದ ಕೊನೆಯ ಸಂಭಾಷಣೆ ಮುಗಿಸಿ, ಪ್ರೇಕ್ಷಕರಿಗೆ ವಂದನೆ ಸಲ್ಲಿಸುವವರೆಗೂ ಕಲಾವಿದರ ಹುಮ್ಮಸ್ಸು (ಎನರ್ಜಿ) ಒಂದೇ ಮಟ್ಟದಲ್ಲಿತ್ತು; ಎಲ್ಲಿಯೂ ಕಡಿಮೆಯಾದ ನೆನಪೇ ಇಲ್ಲ!! ಈ ಹುಮ್ಮಸ್ಸಿನ ಅಭಿನಯವೂ ಎಲ್ಲಿಯೂ ಕೃತಕವೆನಿಸದೆ, ಸಾಕಷ್ಟು ಸಹಜವಾಗಿರುವುದರಿಂದಲೇ, ನಾಯಿಗತ್ತಿ, ತಿಮ್ಮಿ, ಐತ, ಪೀಂಚಲು, ಮುಕುಂದ, ಚಿನ್ನು, ಸುಬ್ಬಣ್ಣ ಹೆಗಡೆ, ಕಾವೇರಿ, ಅಂತಕ್ಕ, ಸೇರೆಗಾರ ಇವರೆಲ್ಲಾ ನಾಟಕದ ಸಮಯದಲ್ಲೂ ಹಾಗೂ ನಾಟಕದ ನಂತರವೂ ನಿಮ್ಮನ್ನು ಹಿಡಿದಿಟ್ಟಿರುತ್ತಾರೆ. ಏನೂ ಸಂಭಾಷಣೆಯೇ ಇಲ್ಲದ, ಕೇವಲ ಅಭಿನಯದಿಂದಲೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗುವ 'ಗುತ್ತಿ ನಾಯಿ' ಯನ್ನು ನಾವು ನೋಡಿಯೇ ಎಂಜಾಯ್ ಮಾಡಬೇಕು.



ಇಷ್ಟು ದಿನ, ಸಿನಿಮಾ ಲೋಕದಲ್ಲಿ ಕಾಣೆಯಾಗಿದ್ದ ಹಂಸಲೇಖ, ಮದುಮಗಳಿಗಾಗಿ ಅದ್ಬುತವೆನಿಸುವಂತಹ ಸಂಗೀತ ಸಂಯೋಜಿಸಿ ತಮ್ಮ ದೇಸಿತನವನ್ನು ಪರಿಚಯಿಸಿದ್ದಾರೆ. ೪೨ ಹಾಡುಗಳಲ್ಲಿ ಯಾವೊಂದು ಹಾಡೂ ಬೋರ್ ಹೊಡೆಸಲಿಲ್ಲ. ನಾಟಕದ ಓಟಕ್ಕೆ ಪೂರಕವಾಗಿ ಬಂದು ಹೋಗುವ ಹಾಡುಗಳು ಎಷ್ಟರ ಮಟ್ಟಿಗೆ ಸೆಳೆಯುತ್ತವೆ ಎಂದರೆ, ನಾಟಕದ ನಂತರವೂ ಹಾಡುಗಳನ್ನು ಗುನುಗುನಿಸದೇ ಇರಲಾಗುತ್ತಿಲ್ಲ.



ಒಟ್ಟಿನಲ್ಲಿ, ಈ ಅಪರೂಪದ, ಅಪೂರ್ವ ಅನುಭವವನ್ನು ನಮ್ಮದಾಗಿಸಿಕೊಳ್ಳಲು ನಾವು ಮಾಡಬೇಕಿರುವುದು ಎರಡೇ ಕೆಲಸ.

-ಒಂದು, ಮುಂಗಡವಾಗಿ ಟಿಕೇಟ್ ಕಾಯ್ದಿರಿಸುವುದು.

-ಎರಡು, ನಿಗದಿತ ದಿನ ಪ್ರದರ್ಶನದ ವೇಳೆಗೆ ಸರಿಯಾಗಿ ಹೋಗಿ ಕುಳಿತುಕೊಳ್ಳುವುದು.

ಆನಂತರ ನಮ್ಮ ನಿದ್ದೆಯನ್ನು ಮಾಯವಾಗಿಸುವ, ಆಸಕ್ತಿಯನ್ನು ಕೆರಳಿಸುವ ಒಂದು ಮಾಯಾ ಮೋಡಿಗೆ ನಮಗೆ ಗೊತ್ತಿಲ್ಲದೇ ಒಳಗಾಗುತ್ತೇವೆ. ನಾಟಕ ಮುಗಿಯುವ ವೇಳೆಗೆ ನಮಗೇ ಅಚ್ಚರಿಯಾಗುತ್ತದೆ; ವಿಶಿಷ್ಟ ಅನುಭವವೊಂದು ನಮ್ಮ ಕೈ ಹಿಡಿದಿರುತ್ತದೆ. ತಂಡದ ಶ್ರಮ ಹಾಗೂ ಶ್ರದ್ದೆ ನಮ್ಮನ್ನು ಮೂಕರನ್ನಾಗಿಸುತ್ತದೆ.

ರಂಗಭೂಮಿಯ ಸಾಧ್ಯತೆಗಳನ್ನು ವಿಸ್ತಾರ ಮಾಡಿತೋರಿಸಿದ ನಾಟಕಕ್ಕೆ ಜೈ!!

'ಬರಲಾಗಲಿಲ್ಲ, ' ಎಂದು ಹೇಳದೆ,

ಹತ್ತಾರು ಕಾರಣಗಳ ಹುಡುಕದೆ,

ಸಮಯ ಬಿಡುವು ಮಾಡಿಕೊಂಡು ಹೋಗಿಬನ್ನಿ;

ಮಲೆನಾಡ'ಮದುಮಗಳು' ನಿಮ್ಮೂರಿಗೇ ಬಂದಿರುವಾಗ

ಹೋಗದೆ ತಪ್ಪಿಸಿಕೊಳ್ಳುವುದು ಸರಿಯಲ್ಲ...

ಪೋಷಕರಾಗಿ ಹೋಗಿ ಹರಸಿ, ಹರ್ಷಿಸಿ ಬನ್ನಿ;

ಪುಟ್ಟಪ್ಪನ ಕನಸಿನ ಪುಟ್ಟ ಮಗಳ ಸೋದರ ಮಾವ

ಬಸು ಮತ್ತವರ ತಂಡಕ್ಕೆ ಖುಷಿ ತನ್ನಿ








Saturday, April 20, 2013

ಮಾರೀ ಕಾಡು - ಯುಗಾದಿ - ಶ್ರೀ ಕೃಷ್ಣ ಸಂಧಾನ

ಈಚಿನ ದಿನಗಳಲ್ಲಿ ಬರೆಯುವುದಕ್ಕೆ ಸಾಧ್ಯವೇ ಆಗಿರಲಿಲ್ಲ. ಸಾಧ್ಯವೇ ಆಗಿರಲಿಲ್ಲ ಎನ್ನುವುದಕ್ಕಿಂತ, ನನ್ನ ಎಲ್ಲಾ ಸಮಯವನ್ನು ನಾಟಕಕ್ಕೆ ಮೀಸಲಿಟ್ಟಿದ್ದೆ ಎನ್ನುವುದೇ ಸರಿ. ಬೆಳಿಗ್ಗೆ ೪.೩೦ಕ್ಕೆ ನನ್ನ ದಿನಚರಿ ಪ್ರಾರಂಭವಾಗುತ್ತಿತ್ತು. ೫.೩೦ರ ವೇಳೆಗೆ, ಕಂಪೆನಿಯ ಗಾಡಿ ಬಂದು, ೬.೩೦ರ ವೇಳೆಗೆ ಆಫೀಸು ತಲುಪಿ, ೩.೩೦ರ ಹೊತ್ತಿಗೆ ಹೇಗಾದರೂ ಸರಿ (ಹಲವು ಬಾರಿ ಊಟ ತಪ್ಪಿಸಿಕೊಂಡಾದರೂ ಸರಿ) ಕೆಲಸ ಮುಗಿಸಿ ಅಥವಾ ಉಳಿದದ್ದನ್ನು ಮಾರನೇ ದಿನಕ್ಕೆ ಮುಂದೂಡಿ, ಆಫೀಸಿನಿಂದ ಹೊರಟರೆ ಮನೆ ತಲುಪುವ ವೇಳೆಗೆ ೫ ಆಗುತ್ತಿತ್ತು. ಮನೆಗೆ ಬಂದು ಕಂಪೆನಿಯ ಲ್ಯಾಪ್ ಟಾಪ್ ಅನ್ನು ಮನೆಯಲ್ಲಿರಿಸಿ, ವೀರೇಶ್ (ನಾಟಕದ ಗೆಳೆಯ) ಬರುವ ವೇಳೆಗೆ ರೆಡಿಯಾಗಿ, ೫.೪೫ ರ ವೇಳೆಗೆ ದಯಾನಂದ್ ಸಾಗರ್ ಕಾಲೇಜ್ ಬಳಿ ಇರುವ ಕೆ.ವಿ.ಸುಬ್ಬಣ್ಣ ಆಪ್ತ ರಂಗ ಮಂದಿರ ತಲುಪಿ, ೧೫-೨೦ ನಿಮಿಷ ವ್ಯಾಯಾಮ ಮಾಡಿ, ಆ ನಂತರ ನಮ್ಮ 'ಮಾರೀಕಾಡು' ನಾಟಕದ ತಾಲೀಮಿನಲ್ಲಿ ತೊಡಗಿಕೊಳ್ಳುತ್ತಿದ್ದೆವು. ಸೂರಿ ಸರ್ ನಿರ್ದೇಶನದಲ್ಲಿ ಆಸಕ್ತಿಕರವಾಗಿ ೮.೩೦ ರ ತನಕ ತಾಲೀಮು ನಡೆಯುತ್ತಿತ್ತು.  ಅಲ್ಲಿಂದ ಅರ್ಧ ಗಂಟೆಗಳ ಕಾಲ ನಾಟಕದ ಹುಡುಗರ ಜೊತೆ ಹರಟೆ. ೯ ಕ್ಕೆ ಅಲ್ಲಿಂದ ಹೊರಟು ಮನೆ ತಲುಪಿ ಊಟ ಮಾಡಿ, ರೂಮ್ ಸೇರಿದರೆ ಓದುತ್ತಿದ್ದದ್ದು ಕೂಡ ನಾಟಕಗಳನ್ನೇ; ೧೧ ರ ತನಕ. ಆ ನಂತರ ನಿದ್ದೆ. (ವಾರಾಂತ್ಯದಲ್ಲಿ ಬಿಡುವಾದರೂ, ಸಂಪೂರ್ಣ ಸಮಯವನ್ನು ಒಂದು ಪುಸ್ತಕ ರೂಪುಗೊಳಿಸುವ ಕಾರ್ಯಕ್ಕೆ ಮೀಸಲಿಡುತ್ತಿದ್ದೆ)  ಹೀಗೆ, ಸತತ ಒಂದೂವರೆ ತಿಂಗಳು 'ಮಾರೀಕಾಡು' ನಾಟಕಕ್ಕೆ ತಯಾರಾಗಿದ್ದು. ಆ ತಯಾರಿಯ ನಡುವೆ ಬಿಡುವು ದೊರೆತರೆ, ಸಮಯ ಕಳೆಯುತ್ತಿದ್ದದ್ದು ಕೂಡ ರಂಗ ಶಂಕರದಲ್ಲಿ ನಡೆಯುತ್ತಿದ್ದ ಇತರೆ ನಾಟಕಗಳನ್ನು ನೋಡಿಯೇ ಹೊರತು, ಯಾವುದೇ ಸಿನಿಮಾ, ಔತಣ ಕೂಟಗಳಲ್ಲಲ್ಲ. ಈ ಸಮಯದಲ್ಲೇ ನಾಟಕದ ಸೂಕ್ಷ್ಮತೆಗಳ ಬಗ್ಗೆ, ಅಭಿನಯದ ಬಗ್ಗೆ, ರಂಗ ವಿನ್ಯಾಸದ ಬಗ್ಗೆ, ಹೀಗೆ ಒಬ್ಬ ಸಾಮಾನ್ಯ ಪ್ರೇಕ್ಷಕನ ತಿಳುವಳಿಕೆಗೂ ಮೀರಿ ಇರುವಂತಹ ನಾಟಕದ ಇತರೆ ಆಯಾಮಗಳ ಬಗ್ಗೆ ನನ್ನ ಅರಿವಿನ ಬಾಗಿಲು ತೆರೆದುಕೊಂಡದ್ದು. ಆ ಗ್ರಹಿಕೆಯನ್ನು ವಿವರವಾಗಿ ಬರೆಯುವ ಆಸೆಯಿದೆ. ನನ್ನ ನೆನಪಿನ ದಾಖಲೆಗಾಗಿಯಾದರೂ ಬರೆಯಲೇ ಬೇಕು. :)

ಆ ನಾಟಕ ಮುಗಿದ ಕೂಡಲೇ, ನಮ್ಮ 'ಅವಿರತ' ದ ನಾಟಕ 'ಶ್ರೀ ಕೃಷ್ಣ ಸಂಧಾನ' ನಾಟಕದ ತಯಾರಿ!! ಆದರೆ, ನಿಗದಿಪಡಿಸಿದಂತೆ, 'ಶ್ರೀ ಕೃಷ್ಣ  ಸಂಧಾನ' ನಾಟಕದ ಪ್ರದರ್ಶನವಾಗಲಿಲ್ಲ. ಶ್ರೀ ರಾಮ ಸೇನೆ, ಹಿಂದೂ ಜಾಗರಣಾ ವೇದಿಕೆ, ಹೀಗೆ ಸ್ವಯಂಘೋಷಿತ ಧರ್ಮೋದ್ದಾರಕರ ಅರ್ಥಹೀನ ದಾಂಧಲೆಯ ಕಾರಣ ನಮ್ಮ ನಾಟಕ ಪ್ರದರ್ಶನವನ್ನು ಮುಂದೂಡ ಬೇಕಾಯಿತು.  ನಾಟಕದ ಉದ್ದೇಶ, ಅದರ ಹಿನ್ನೆಲೆಯನ್ನು ತಿಳಿದುಕೊಳ್ಳುವಷ್ಟು ತಾಳ್ಮೆ ತೋರದವರ ಅವಿವೇಕಿತನಕ್ಕೆ ನಮ್ಮೆಲ್ಲರ ಶ್ರಮ ವ್ಯರ್ಥವಾಯಿತು.  ಸತ್ಯ ತಿಳಿದುಕೊಳ್ಳುವ ಪ್ರಯತ್ನಪಡಲೂ ಸಾಧ್ಯವಾಗದ ದುರ್ಬಲ ಜನರೆದುರು ವೈಚಾರಿಕತೆಗೆ ಅವಕಾಶವಿಲ್ಲ ಎಂದು ಅರಿತ ಅವಿರತ ನಮ್ಮ ಆತ್ಮಾಭಿಮಾನವೂ ಉಳಿದು, ಬೆಳೆಯುವಂತೆ; ಅವರ ತಿಕ್ಕಲುತನವನ್ನೂ ತಿರಸ್ಕರಿಸುವಂತೆ  ತಕ್ಕ ತೀರ್ಮಾನವನ್ನು ತೆಗೆದುಕೊಂಡು, ನಾಟಕ ಪ್ರದರ್ಶನವನ್ನು ಮುಂದೂಡಿತು.



ಆನಂತರವಷ್ಟೆ, ಬರೆಯಲು ಸಮಯ ಮಾಡಿಕೊಂಡದ್ದು. ಆಗ ಬರೆದ ಸಾಲುಗಳೇ ಇವು.... ಚುಟುಕಾಗಿವೆ....        
 
 
ಕಂಬಾರರ 'ಮಾರೀಕಾಡು'
 
ಶಂಕರನ ರಂಗದ ಮೇಲೆ

 'ಸೂರೀ ಕಾಡು' ಆಗುವ ವೇಳೆಗೆ

ಬರಡು ಮರಗಳಂತಿದ್ದ ನಮ್ಮಲ್ಲಿ

ಹಸಿರು ಚಿಗುರೊಡೆಯುವ

ಖುಷಿ ಮೂಡಿತ್ತು.                                                                                                                                                                               ----------------------------------------------------------------------            
ಮಾವು ಚಿಗುರುವ ಕಾಲದ ಹಬ್ಬಕ್ಕೆ,

ಸಿಹಿ - ಕಹಿಯ ಜೊತೆಗೆ,

     ಮುಪ್ಪಾಗದ ಮರದ ಹುಳಿಯನ್ನು

ಚಪ್ಪರಿಸುವಂತೆ ಮಾಡಿ,

'ಏನಿದು ಸರ್?' ಎಂದು ಕೇಳಿದರೆ,

ತುಂಟನಂತೆ ಕಣ್ಣೊಡೆದು, ತುಟಿಯಂಚಿನಲಿ ನಕ್ಕರು

ನಮ್ಮ ಸೂರಿ ಸರ್ರು...
 
(ರಂಗ ಶಂಕರದಲ್ಲಿ ಸೂರಿ ಸರ್ ರೂಪಿಸಿದ್ದ ರಂಗ ಯುಗಾದಿಯ ಕುರಿತಾಗಿ) 
  -----------------------------------------------------------------------------
 
ಬೇರನ್ನು ಮರೆತು, ರೆಂಬೆಯನ್ನಷ್ಟೇ ಪರೀಕ್ಷಿಸುವವರನ್ನು

ಅವಿವೇಕಿಗಳೆನ್ನದೆ ವಿಧಿಯಿಲ್ಲ:


'ಕಟ್ಟುವುದು ಕಷ್ಟ, ಮೆಟ್ಟುವುದು ಸುಲಭ' ಎಂದರಿತ

ವಿಚಾರಿಗಳು ಎಡವಲು ಸಾಧ್ಯವಿಲ್ಲ! :)
 
 



ರಾಮ...ರಾಮ....

ಸೇನಾನಿಗಳಿವರಲ್ಲ; ಜಾಗೃತಿ ಮೂಡಿಸುವುದಿಲ್ಲ.
 
ವಿಚಾರ ಕೇಳುವಷ್ಟು ತಾಳ್ಮೆಯಿಲ್ಲ,

ಆಲೋಚಿಸುವಷ್ಟು ವಿವೇಕಿಗಳಲ್ಲ;

ಮೂಲ ತಿಳಿಸದ ಮುಖಹೇಡಿಗಳ ಸಂದೇಶಕ್ಕೆ

ವ್ಯಾಘ್ರರಾಗುವ ಇವರು

ನಮ್ಮೊಳಗೇ ಇರುವ ಪ್ರತಿಗಾಮಿಗಳು;

ಸಂಸ್ಕೃತಿಯ ವಿಸ್ತಾರಕ್ಕೆ, ಸಹಬಾಳ್ವೆಯ ಸಾಕಾರಕ್ಕೆ

ಅಡ್ಡಿ ಮಾಡುತ್ತಿರುವ ಸಂಕುಚಿತ ಮನಗಳು