Tuesday, December 25, 2012

ಸರಸಮ್ಮನ ಸಮಾಧಿ - ನಾನು ನೋಡಿದ ಚಿತ್ರ

ಈ ವರ್ಷದ ೫ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಾನು ನೋಡಿದ ಮೊದಲ ಚಿತ್ರ ಕನ್ನಡದ ’ಸರಸಮ್ಮನ ಸಮಾಧಿ’.  ಚಿತ್ರ ವೀಕ್ಷಣೆಯ ನಂತರ ಚಿತ್ರದ ಬಗ್ಗೆ ಬರೆದ ಚುಟುಕು ಬರಹವಿದು.  ಬರೆದು, ಚಿತ್ರ ಪತ್ರಿಕೆ ’ಸಾಂಗತ್ಯ’ ಕ್ಕೆ ಕಳುಹಿಸಿದ್ದೆ.  ಅಲ್ಲಿ ಪ್ರಕಟವಾಗಿದ್ದ ಈ ಬರಹವನ್ನು ಯಥಾವತ್ತಾಗಿ ನನ್ನ ಬ್ಲಾಗಿನಲ್ಲಿ ಸೇರಿಸುತ್ತಿದ್ದೇನೆ.

’ಸಾಂಗತ್ಯ’ದ ಕೊಂಡಿ -  http://wp.me/pph7v-Uc

-----------------------------------------------------------------------------------

ಸರಸಮ್ಮನ ಸಮಾಧಿ - ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಥವಾ ಯಾವುದೇ ಚಿತ್ರೋತ್ಸವದಲ್ಲಿ ನಾನು ನೋಡಿದ ಮೊದಲ ಚಿತ್ರ. ಕಾರಂತರ ಕಾದಂಬರಿಯೊಂದನ್ನಾಧರಿಸಿ ಮಾಡಿರುವ ಚಿತ್ರಗಳಲ್ಲಿ ಇದು ನಾನು ನೋಡಿದ ಮೂರನೇ ಚಿತ್ರ. ಮೊದಲ ಚಿತ್ರ ಚಿಗುರಿದ ಕನಸು ಹಾಗೂ ಎರಡನೇ ಚಿತ್ರ ಬೆಟ್ಟದ ಜೀವ ನೋಡುವ ಮೊದಲು ಕಾದಂಬರಿಯನ್ನು ಓದಿದ್ದೆ. ಆದರೆ, ಸರಸಮ್ಮನ ಸಮಾಧಿ ಕಾದಂಬರಿಯನ್ನು ಇನ್ನು ಓದಿಲ್ಲ. ಹಾಗಾಗಿ ಕಾದಂಬರಿ ಓದದೆ ನೋಡಿದ ಮೊದಲ ಚಿತ್ರ ಸರಸಮ್ಮನ ಸಮಾಧಿ!!




ಭಾರತದ ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಅಚರಣೆಯಲ್ಲಿದ್ದ ’ಸತಿ ಸಹಗಮನ’ ಎಂಬ ಕುರುಡು ಆಚರಣೆಗೆ ಬಲಿಯಾದವಳು ಸರಸಮ್ಮ. ಸಮಾಜ ಸುಧಾರಣೆಯ ಸಮಯದಲ್ಲಿ ಈಕೆಯ ಬಲಿದಾನ ಈಕೆಗೆ ಪತಿವ್ರತೇ ಎಂಬ ಪಟ್ಟವನ್ನು ತಂದುಕೊಡುತ್ತದೆ. ಅದರ ಫಲವಾಗಿ ಈಕೆಯ ಸಮಾಧಿ ಇರುವ ಸ್ಥಳ ಒಂದು ಪೂಜಾ ಸ್ಥಳವಾಗಿ ಮಾರ್ಪಡುತ್ತದೆ. ಸಂಸಾರದಲ್ಲಿ ಗಂಡ ಹೆಂಡತಿಯ ನಡುವೆ ಜಗಳವಿದ್ದರೆ, ಕೋಪ, ಹಠದಿಂದ ಇಬ್ಬರ ನೆಮ್ಮದಿ ಕೆಡುತ್ತಿದ್ದರೆ, ಸರಸಮ್ಮನ ಸಮಾಧಿಯ ಬಳಿ ಪ್ರತಿ ಗುರುವಾರ ರಾತ್ರಿ ಬಂದು ಪೂಜೆ ಸಲ್ಲಿಸಿದರೆ ಎಲ್ಲವೂ ಸರಿಹೋಗುತ್ತದೆ ಎಂಬ ನಂಬಿಕೆ ಬೆಳೆದಿರುತ್ತದೆ. ತಮ್ಮ ಸಂಸಾರ ತಾಪತ್ರಯಗಳಿಗೆ ಪರಿಹಾರ ಹುಡುಕಿಕೊಂಡು ಸರಸಮ್ಮನ ಸಮಾಧಿಯ ಬಳಿ ಬರುವವರ ಸುತ್ತವೇ ಕತೆ ಅರಳುತ್ತದೆ.

ತವರು ಮನೆ ಸೇರಿರುವ ಹೆಂಡತಿ ಭಾಗೀರಥಿಯನ್ನು ಮತ್ತೆ ತನ್ನ ಮನೆಗೆ ಕರೆತರಲು ಬಯಸುವ ಹಿರಣ್ಯ....ಕೇವಲ ದುಡ್ಡು, ದೇಹ ಬಯಸುವ ಗಂಡನನ್ನು, ಸೊಸೆ ಓದು-ಬರಹ ಕಲಿತಿರುವುದೇ ಅಪರಾಧವೆಂಬಂತೆ ನಡೆದುಕೊಳ್ಳುವ ಅತ್ತೆಯನ್ನೂ ಪಡೆದಿರುವ ಸುನಾಲಿನಿ...ಮಗಳ ಮದುವೆ ತಡವಾಗುತ್ತಿದೆ, ಗಂಡು ಸಿಗುತ್ತಿಲ್ಲ ಎಂದು ಚಿಂತಿಸುವ ಜಾನಕಿ, ಹೀಗೆ ಎಲ್ಲರೂ ಸರಸಮ್ಮನ ಸಮಾಧಿಯ ಮೊರೆ ಹೋಗುವವರೆ. ಜೊತೆಗೆ, ದೆವ್ವ, ಭೂತಗಳ ಅಸ್ತಿತ್ವದ ಬಗ್ಗೆ ಸದಾ ಪ್ರಶ್ನಿಸುತ್ತಾ, ಸರಸಮ್ಮನ ಸಮಾಧಿಯನ್ನೇ ಒಂದು ರೀತಿ ತನ್ನ ಅಧ್ಯಯನ ಕೇಂದ್ರ ಮಾಡಿಕೊಳ್ಳುವ, ವಿದ್ಯಾವಂತ, ವಿಚಾರವಂತ ಯುವಕ ಚಂದ್ರು ಒಂದು ಕಡೆಯಾದರೆ, ಸಮಾಧಿಯ ಬಳಿ ಪೂಜೆಗೆ ಬರುವ ಗಂಡಸರ ಪರಿಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡು ದುಡ್ಡು ಮಾಡಲೆತ್ನಿಸುವ ಬೆಳ್ಳಕ್ಕ ಹಾಗೂ ಅವಳ ಸಾಕು ಮಗಳು ಗುಲಾಬಿ ಮತ್ತೊಂದು ಕಡೆ. ಇಷ್ಟು ಜನರ/ಪಾತ್ರಗಳ ನಡುವೆ ಹೇಗೆ ನಂಟು ಉಂಟಾಗುತ್ತದೆ..?! ಅವರ ಸಂಸಾರದಲ್ಲಿನ ತೊಂದರೆಗಳು ಕರಗುತ್ತವೆಯಾ..? ಸರಸಮ್ಮನ ಸಮಾಧಿ ನಿಜಕ್ಕೂ ಒಂದು ಶಕ್ತಿ ಕೇಂದ್ರವಾ ಅಥವಾ ಭೂತ ಪ್ರೇತಗಳ ಕೊಂಪೆಯಾ..?! ಅದನ್ನು ನಾವು ಸಿನಿಮಾ ನೋಡಿಯೋ ಅಥವಾ ಕಾದಂಬರಿ ಓದಿಯೋ ತಿಳಿಯಬೇಕು.

ಸಮಾಜದ ಕಟ್ಟುಪಾಡುಗಳಿಂದ, ಅರ್ಥವಿಲ್ಲದ ಆಚರಣೆಗಳಿಂದ ಬಂಧಿತಳಾಗಿದ್ದ ಸರಸಮ್ಮ, ತಾನು ಬದುಕಿದ್ದ ವೇಳೆ ಜೀವಂತ ಶವದಂತಿದ್ದವಳು. ಆದರೆ, ತಾನು ಸತ್ತ ನಂತರ ಇತರರ ನಂಬಿಕೆಗಳಿಂದ ಇನ್ನೂ ಬದುಕಿರುವವಳು!! ಈ ಒಂದು ಹಿನ್ನೆಲೆಯೊಂದಿಗೆ ಕಥೆಯನ್ನು ಗಮನಿಸಿದಾಗ, ಇಲ್ಲಿ ಬರುವ ಹೆಣ್ಣು ಪಾತ್ರಗಳೆಲ್ಲಾ ಜೀವಂತ ಪ್ರೇತಗಳೆ! ತಮ್ಮ ಭಾವನೆಗಳನ್ನು, ಅನಿಸಿಕೆಗಳನ್ನು ವ್ಯಕ್ತಪಡಿಸಲಾಗದೆ, ಬದುಕಿದ್ದು ಸತ್ತಂತೆ ಇರುವ ಅತೃಪ್ತ ಜೀವಾತ್ಮಗಳು. ಈ ಪಾತ್ರಗಳು / ಹೆಣ್ಣು ಅರ್ಥವಿಲ್ಲದ ಸಮಾಜದ ಈ ಬಂಧನದಿಂದ ಹೊರಬಂದು, ತಮ್ಮ ತೃಪ್ತಿಯನ್ನು, ತಮ್ಮ ಸ್ಥಾನವನ್ನು ಪಡೆಯಲಿ ಎಂಬುದೇ ಕಥೆಯ ಆಶಯ.

ಲಕ್ಷ್ಮೀ ಹೆಗಡೆಯವರ ಅಭಿನಯ ಗಮನ ಸೆಳೆಯುತ್ತದೆ. ಛಾಯಾಗ್ರಹಣ ಕೆಲವು ಕಡೆ ಪಾತ್ರಗಳ ತಲೆ ಎಗರಿಸಿದ್ದರೆ, ಹಲವು ಕಡೆ ಫೋಕಸ್ ಕಳೆದುಕೊಂಡಿದೆ. ಸಂಕಲನದ ಕತ್ತರಿ ಇನ್ನೂ ಹರಿತವಾಗಿರಬೇಕಿತ್ತು. ಚಿತ್ರಕ್ಕಾಗಿ ಆರಿಸಿರುವ ಹಿನ್ನೆಲೆ ಪರಿಸರ ಅಚ್ಚುಕಟ್ಟಾಗಿದೆ. ಹವ್ಯಕ ಕನ್ನಡ ಶೈಲಿಯಲ್ಲಿರುವ ಸಂಭಾಷಣೆ, ಇದ್ದಕ್ಕಿದ್ದಂತೆ ಕೆಲವು ಕಡೆ ಮೈಸೂರು ಕನ್ನಡ ರೂಪ ಪಡೆಯುತ್ತದೆ. ತಾಂತ್ರಿಕವಾಗಿ ಚಿತ್ರವನ್ನು ನೋಡೆಬಲ್ ಆಗಿ ಮಾಡಿದ್ದರೆ, ಚಿತ್ರಕಥೆಯಲ್ಲಿ ಇನ್ನು ಸ್ವಲ್ಪ ಬಿರುಸು ತಂದಿದ್ದರೆ ಚಿತ್ರ ಮತ್ತಷ್ಟು ಜನರನ್ನು ತಲುಪುವಲ್ಲಿ ಯಶಸ್ವಿಯಾಗುತ್ತಿತ್ತು. ಆದರೆ, ಹಲವು ನೂನ್ಯತೆಗಳ ನಡುವೆಯು ಚಿತ್ರವನ್ನು ನೋಡಿಸಿಕೊಂಡು ಹೋಗುವುದು ಚಿತ್ರದ ಗಟ್ಟಿ ಕಥೆ. ಅದೇ ಈ ಚಿತ್ರದ ಜೀವಾಳ!!

Tuesday, November 13, 2012

ದೀಪ - ಬೆಳಕು

ನಾನೊಂದು ಪುಟ್ಟ ದೀಪ… ಬೆಳಕ ನೀಡುವುದೇ ನನ್ನ ಕೆಲಸ.

ಸುಡುವುದು ಬತ್ತಿ, ಬಿಸಿಯಾಗುವುದು ಎಣ್ಣೆ, ತಾಪ ಸಹಿಸುವುದೀ ಬಟ್ಟಲು.

ಯಾವುದಕ್ಕೂ ತಕರಾರಿಲ್ಲ ನನಗೆ, ಬೇಸರವೂ ಇಲ್ಲ;

ಎಲ್ಲವನ್ನೂ ಹೀರಿ, ಬೆಳಕ ನೀಡುವುದರಲ್ಲಿ ಖುಷಿ ಇದೆ.

ಬೆಳಕು ಆರದಂತೆ ಜೋಪಾನ ಮಾಡಿಬಿಡಿ ಸಾಕಷ್ಟೇ;

ಇಲ್ಲವಾದರೆ ಯಾರೊಬ್ಬರಿಗೂ ಬದುಕಿನ ಧನ್ಯತೆ ಇಲ್ಲ;

ನಿನ್ನ ನಾ ನೋಡಲಾಗುವುದಿಲ್ಲ…ನಿನಗೆ ನೀನೆ ಕಾಣುವುದೂ ಇಲ್ಲ...

Sunday, November 4, 2012

’31-10-2012, ಬುಧವಾರ - ದುರಂತಗಳ ದಿನ’


ಮುದೊಂದು ದಿನ ಈಗ ನಾನು ಮಾಡುತ್ತಿರುವ ಟಿಪ್ಪಣಿಗಳನ್ನು ನೋಡಿದಾಗ,  31-10-2012, ಬುಧವಾರ, ನನಗೆ ದುರಂತಗಳ ದಿನವೆಂದೇ ನೆನಪಾಗುವುದೇನೋ!! ಹಾಗೆಂದ ಮಾತ್ರಕ್ಕೆ, ಯಾವುದೋ ಸಹಿಸಲಸಾಧ್ಯ ಘಟನೆಯೊಂದು ನಡೆಯಿತೆಂದು ತಿಳಿಯ ಬೇಕಿಲ್ಲ. ಬೆಂಗಳೂರೆಂಬ ಯಂತ್ರಗಳ ನಗರಿಯಲ್ಲಿ, ರಸ್ತೆಗಳನ್ನು ಖಾಲಿ ಬಿಡುವುದೇ ಅಪರಾಧವೇನೋ ಎಂಬಂತೆ, ಸದಾ ರಸ್ತೆ ತುಂಬಿಕೊಂಡಿರುವ ವಾಹನಗಳು, ಹಠಾತ್ತನೆ ರಸ್ತೆಗಿಳಿಯದೇ, ಪಕ್ಕದಲ್ಲಿ ನಿಂತು, ಎಲ್ಲೆಲ್ಲೂ ಖಾಲಿ ಖಾಲಿಯಾದ ರಸ್ತೆಗಳೇ ಕಂಡರೆ, ಇದನ್ನು ದುರಂತವೆನ್ನಬೇಕೋ ಅಥವಾ ಇದರಿಂದ ಸಂತಸ ಪಡಬೇಕೋ..!?!!

ದುರಂತ ಪರಿಸ್ಥಿತಿಯ ನಡುವೆ, ದುರಂತಗಳ ಜೊತೆ ಜೊತೆಗೆ ಸಂತಸ ಅರಳಿದ ದಿನವದು.

ದುರಂತ - ೧
ಅವತ್ತಿನ ದಿನ ’ಸ್ಯಾಂಡಿ’ ಎಂಬ ಪ್ರಚಂಡ ಚಂಡಮಾರುತ ದೂರದ ಅಮೆರಿಕಾದಲ್ಲಿನ ಪೂರ್ವ ಕರಾವಳಿಯಲ್ಲಿ ನಡೆಸಿದ ಅಟ್ಟಹಾಸದಿಂದ ಮಿಲಿಯನ್ ಗಟ್ಟಲೆ ಜನರ ಬದುಕು ಅಸ್ತವ್ಯಸ್ತವಾಗಿ, ಅಪಾರ ಆರ್ಥಿಕ ನಷ್ಟ ಉಂಟಾಗಿತ್ತು. ಈ ಒಂದು ಘಟನೆ, ೨೦೧೨ ರ ಮಹಾಪ್ರಳಯಕ್ಕೆ ಮುನ್ಸೂಚನೆ ಎಂದು ಗುಸು ಗುಸು ಶುರುವಾಗಿತ್ತು.

ದುರಂತ – ೨

ಮಹಾಪ್ರಳಕ್ಕೆ ಮುನ್ಸೂಚನೆ ಎಂಬ ಗುಸು ಗುಸು, ಇನ್ನು ಹಸಿ ಹಸಿಯಾಗಿರುವಾಗಲೇ, ’ಚೆನ್ನೈನಲ್ಲಿ ’ನೀಲಂ’ ಎಂಬ ಮಹಾ ಮಾರುತದ ನಿರೀಕ್ಷೆ; ತೀರ ಪ್ರದೇಶದ ಜನರ ಸ್ಥಳಾಂತರ’ ಎಂಬ ಸುದ್ದಿ.  ಗಂಟೆಗೆ ೯೦ ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಗಾಳಿ, ಮಳೆಯಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ಚೆನೈನ ವ್ಯವಹಾರಗಳು ಅರ್ಧದಿನಕ್ಕೆ ನಿಂತು ಹೋಗಿವೆ.

ಯಥಾಪ್ರಕಾರ ಚೆನೈನಲ್ಲಿ ಸೈಕ್ಲೋನ್ ಬಂದರೆ, ಬೆಂಗಳೂರಿನಲ್ಲಿ ಮಳೆಯಾಗುವ ಅಭ್ಯಾಸ ಅಂದೂ ಕೂಡ ಮುಂದುವರಿದಿತ್ತು.  ಜೋರಾಗಿ ಸುರಿದು  ಸುಮ್ಮನೆ ನಿಂತುಬಿಡಬಹುದಾದ ಮಳೆಯಾಗಿರಲಿಲ್ಲ ಅದು. ಜಡಿ ಮಳೆ..ಒಮ್ಮೊಮ್ಮೆ ಜೋರು, ಒಮ್ಮೊಮ್ಮೆ ಸಣ್ಣ.

ದುರಂತ – ೩

ಅಂದು ಕುವೆಂಪು ಬರೆದಿರುವ ’ಹಾಳೂರು’ ಎಂಬ ನೀಳ್ಗವಿತೆಯ ಪರಿಚಯವಾಯಿತು. ಈ ನೀಳ್ಗವಿತೆಯಲ್ಲಿ ಕುವೆಂಪುರವರು ಜನ ಹಳ್ಳಿಗಳನ್ನು ತೊರೆದು ಪಟ್ಟಣ ಸೇರುವುದರಿಂದ ಸಮಾಜ, ಸಂಸ್ಕೃತಿಯಲ್ಲಿ ಆಗಿರುವ, ಆಗುತ್ತಿರುವ, ಆಗುವ ಭಯಾನಕ ಬದಲಾವಣೆಗಳನ್ನು ಬಹಳ ಮಾರ್ಮಿಕವಾಗಿ ವಿವರಿಸಿದ್ದಾರೆ. ಸದ್ಯದ ಭಾರತದಲ್ಲಿನ ದುರಂತ ಪರಿಸ್ಥಿತಿಗೆ ಕನ್ನಡಿ ಹಿಡಿದಂತಿರುವ ಈ ನೀಳ್ಗವಿತೆ ರಚಿತವಾದದ್ದು ಅಥವಾ ಮೊದಲ ಮುದ್ರಣ ಕಂಡಿದ್ದು ೧೯೨೬ರಲ್ಲಿ!! ಅದರೆ, ಇಂದಿಗೂ ನಾವು ಎಚ್ಚೆತ್ತುಕೊಳ್ಳದೇ ಇರುವುದು ದುರಂತವಲ್ಲವೇ?!

ದುರಂತ – ೪

ಅಂದು ಮೊಟ್ಟಮೊದಲ ಬಾರಿಗೆ ಶೇಕ್ಸ್ ಪಿಯರ್ ನ ನಾಟಕವನ್ನು ನೋಡುವ ಅವಕಾಶವಾಯಿತು. ಆದರೆ, ಅಂದು ನೋಡಿದ ಎರಡೂ ನಾಟಕಗಳು – ಲೇಡಿ ಮ್ಯಾಕ್ ಬೆತ್ ಮತ್ತು ಹ್ಯಾಮ್ಲೆಟ್ – ದುರಂತ ಕಥೆ ಇರುವಂತದ್ದು.!!!

ಉಪ ಸಂಹಾರ:

ನಾಟಕ ನೋಡಿ, ಮನೆಗೆ ಹಿಂದಿರುಗುವಾಗ ದುರಂತಗಳ ಸರಮಾಲೆಯಂತಿರುವ ಆ ದಿನದ ಬಗ್ಗೆ ಯೋಚಿಸುತ್ತಾ ಬರುತ್ತಿದೆ. ಈ ಎರಡೂ ದುರಂತ ನಾಟಕಗಳ ಪರಿಚಯ ನನಗಾಗಿದ್ದು, ಕುವೆಂಪುರವರ ’ಹಾಳೂರು’ ನೀಳ್ಗವಿತೆ ನನಗೆ ಸಿಕ್ಕಿದ್ದು, ದುರಂತ ದಿನ ಎಂದು ಆ ದಿನವನ್ನು ಕರೆಯಬೇಕೆಂದು ಯೋಚನೆ ಮೂಡಿದ್ದು ’ರಂಗ ಶಂಕರ’ ದಲ್ಲಿ. ಈ ’ರಂಗ ಶಂಕರ’ ದ ಹಿಂದಿರುವ ನಮ್ಮ ’ಶಂಕರ’, ಅಂದರೆ ’ಶಂಕರ್ ನಾಗ್’ ನ ಬದುಕಿನ ಅಂತ್ಯ ಕೂಡ ಒಂದು ದುರಂತವೇ…………

Sunday, April 1, 2012

ಕ್ರಿಕೆಟ್ ಬಗೆಗಿನ ಆತನ ಹಸಿವು ಇನ್ನೂ ಹಿಂಗಿಲ್ಲ…ಪ್ರೀತಿ ಕರಗಿಲ್ಲ

     ಇಡೀ ಕ್ರೀಡಾಂಗಣ ಕಿಕ್ಕಿರಿದು ತುಂಬಿದೆ. ಬಹಳ ದಿನಗಳಿಂದ ಎಲ್ಲರೂ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದ ’ಆ ಕ್ಷಣ’ ಇನ್ನೇನು ಸಂಭವಿಸ ಬಿಡಬಹುದೇ ಎಂಬ ನಿರೀಕ್ಷೆ, ಕುತೂಹಲ ; ಎಲ್ಲರ ಎದೆಯಲ್ಲೂ ಆತಂಕವಿರುವಾಗಲೇ, ಮಾಧ್ಯಮದವರಿಗೆ ಮೀಸಲಿಟ್ಟ ಜಾಗದಲ್ಲಿ ಒಂದು ಗಾಲಿ ಕುರ್ಚಿಯನ್ನು ತಂದಿರಸಲಾಗುತ್ತದೆ. ಹಿಂದೆಯೇ ಇಬ್ಬರು ಸಹಾಯಕರ ನೆರವಿನಿಂದ ಡಾಕ್ಟರ್ ಒಬ್ಬರು ವಯಸ್ಸಾದ ವ್ಯಕ್ತಿಯನ್ನು ಕರೆತಂದು ಆ ಕುರ್ಚಿಯಲ್ಲಿ ಕೂರಿಸುತ್ತಾರೆ. ಆ ವಯಸ್ಸಾದ ವ್ಯಕ್ತಿಗೆ ಯಾವುದೋ ಖಾಯಿಲೆ ಇದ್ದು, ಆತನ ಪರಿಸ್ಥಿತಿಯನ್ನು ನಿಭಾಯಿಸಲು ಡಾಕ್ಟರ್ ಅವಶ್ಯಕತೆಯಿದೆ ಎಂದು ನೋಡಿದವರೆಲ್ಲರಿಗೂ ಅನಿಸುವ ವೇಳೆಗೆ, ಆ ವಯಸ್ಸಾದ ವ್ಯಕ್ತಿಯ ಮುಂದೆ ಕ್ಯಾಮರ ಸ್ಟ್ಯಾಂಡ್ ಅನ್ನು ತಂದಿರಸಲಾಗುತ್ತದೆ; ಆ ವ್ಯಕ್ತಿ ಲೀಲಾಜಾಲವಾಗಿ ಕ್ಯಾಮರದ ಮೇಲೆ ಕೈಯಾಡಿಸುತ್ತಾ, ಫೋಟೋಗಳನ್ನು ಕ್ಲಿಕ್ಕಿಸ ತೊಡಗುತ್ತಾನೆ.!!



     ಆ ವಯಸ್ಸಾದ ವ್ಯಕ್ತಿಯ ಹೆಸರು ಅಲ್ ಹಜ್ ಮಹಮ್ಮದ್ ಜಹಿರುಲ್. ಬಾಂಗ್ಲಾದೇಶದ ’ಆಜ್ ಕಲ್’ ಎಂಬ ದಿನಪತ್ರಿಕೆಯ ಫೋಟೋ ಜರ್ನಲಿಸ್ಟ್. ಸುಮಾರು ೮೦ ವರ್ಷ ವಯಸ್ಸಿನ ಮಹಮ್ಮದ್ ಜಹಿರುಲ್ ಡಯಾಬಿಟಿಕ್ ಹಾಗೂ ಹೈಪರ್ ಟೆನ್ಸಿವ್ ಖಾಯಿಲೆಯಿಂದ ಬಳಲುತ್ತಿದ್ದು, ’ಅಂದಿನ ದಿನ’ ಅವರ ಆರೋಗ್ಯ ಹದಗೆಟ್ಟಿತ್ತು. ಆದರೂ, ಅನಿರೀಕ್ಷಿತವಾಗಿ ಆವರು ಅಂದು ಕ್ರೀಡಾಂಗಣಕ್ಕೆ ಹೋಗಲೇಬೇಕು ಎಂದು ಮನಸ್ಸು ಮಾಡಿ ಹೊರಟು ಬಂದಿದ್ದು ಸಚಿನ್ ಗಾಗಿ, ಸಚಿನ್ ಮೇಲಿನ ಅಭಿಮಾನದಿಂದಾಗಿ!! ಸಚಿನ್ ನ ಅಪ್ಪಟ ಅಭಿಮಾನಿಯಾಗಿರುವ ಮಹಮ್ಮದ್ ಜಹಿರುಲ್, ಸಚಿನ್ ಮಾಡಲಿರುವ ನೂರನೇ ಶತಕದ ಅಪೂರ್ವ ಕ್ಷಣಗಳನ್ನು ತಮ್ಮದೇ ಕ್ಯಾಮರಾದಲ್ಲಿ, ತಾವೇ ಸ್ವತ: ತಮ್ಮ ಕೈಯ್ಯಾರೆ ಸೆರೆ ಹಿಡಿಯುವ ಆಸೆಯಿಂದ, ಮುತುವರ್ಜಿಯಿಂದ.


ಇದು ಸಚಿನ್ ತೆಂಡೂಲ್ಕರ್ ಎಂಬ ಹೆಸರಿನ ಮಾಂತ್ರಿಕನ ಮಾಯೆ!!



 
ಸಚಿನ್ ತೆಂಡೂಲ್ಕರ್ ಎಂಬ ಹೆಸರೇ ಸಾಕು, ಅದೆಷ್ಟೋ ಜನ ಸೂಜಿಗಲ್ಲಿನಂತೆ ಆಕರ್ಷಿತರಾಗಿ ಬಿಡುತ್ತಾರೆ. ಹಿಂದೆಯೆ, ಆತನ ಬ್ಯಾಟಿಂಗ್ ಬಗ್ಗೆ, ಆತನ ಹೆಸರಿನಲ್ಲಿರುವ ದಾಖಲೆಗಳ ಬಗ್ಗೆ, ಏಕಾಂಗಿಯಾಗಿ ಹೋರಾಡಿ ಗೆಲ್ಲಿಸಿಕೊಟ್ಟ ಪಂದ್ಯಗಳ ಬಗ್ಗೆ ನೆನೆದು ’ಇವ ನಮ್ಮವ’ ಎಂಬ ಹೆಮ್ಮೆಯಿಂದ ಹಿರಿ ಹಿರಿ ಹಿಗ್ಗುತ್ತಾರೆ. ಜೊತೆಗೇ, ’ಭಾರತದಲ್ಲಿ ಕ್ರಿಕೆಟ್ ಧರ್ಮವಾದರೆ, ಸಚಿನ್ ದೇವರು’ ಎಂಬ ಪಟ್ಟ ನೀಡಿ ಸಂಭ್ರಮಿಸುತ್ತಾರೆ.



ನೋಡಿದಷ್ಟು ನೋಡಲೇ ಬೇಕೆನಿಸುವ, ತನ್ನಷ್ಟಕ್ಕೆ ತಾನಿರುವ, ಎಲ್ಲಾ ಸಂದರ್ಭದಲ್ಲೂ ತಂಡಕ್ಕೆ ಆಧಾರವಾಗುವ, ತಾನು ಏತಕ್ಕಾಗಿ ಕ್ರಿಕೆಟ್ ಆಡುತ್ತಿದ್ದೇನೆ ಎಂಬುದರ ಬಗ್ಗೆ ಸ್ಪಷ್ಟ ಅರಿವಿರುವ, ಸರಳ, ಸುಂದರ ಸಜ್ಜನಿಕೆಯ ಸಚಿನ್ ಬಗ್ಗೆ ಹೇಳಲು ಆತ ಮಾಡಿರುವ ದಾಖಲೆಗಳನ್ನು ಅಳತೆಗೋಲು ಮಾಡಿಕೊಳ್ಳುವುದು ಸಮಂಜಸವಲ್ಲ. ಯಾಕೆಂದರೆ, ಸಚಿನ್ ಕ್ರಿಕೆಟ್ ಆಟವನ್ನೂ ಮೀರಿ ನಮ್ಮೆಲ್ಲರನ್ನೂ ಆವರಿಸಿಕೊಂಡಿದ್ದಾನೆ. ಆತ ಯಾವತ್ತೂ ಭಾವೋದ್ವೇಗಕ್ಕೊಳಗಾಗುವುದಿಲ್ಲ, ಯಾವತ್ತೂ ಸಮಚಿತ್ತ, ಸಮಸ್ಥಿತಿಯನ್ನು ಕಳೆದುಕೊಳ್ಳುವುದಿಲ್ಲ. ಈ ರೀತಿಯ ಗುಣಗಳೇ ಆತನನ್ನು ಕ್ರಿಕೆಟ್ ಆಡುವವರ, ನೋಡುವವರ ಹೃದಯಕ್ಕೆ ಹತ್ತಿರವಾಗಿಸಿದೆ. ಅದಕ್ಕಾಗಿಯೇ ಸಚಿನ್ ನಮ್ಮ-ನಿಮ್ಮೆಲ್ಲರ ನಡುವಿನ ಜೀವಂತ ದಂತಕಥೆ ಎನಿಸಿರುವುದು.

 
 
ಭಾರತೀಯರು ಕ್ರಿಕೆಟ್ ನೋಡಲು ಪ್ರಾರಂಭಿಸಿದ ದಿನದಿಂದ ಸಚಿನ್ ನನ್ನು ನೋಡುತ್ತಿದ್ದಾರೆ. ಸಚಿನ್ ಕ್ರಿಕೆಟ್ ಮೇಲಿನ ತನ್ನ ಪ್ರೀತಿಯನ್ನು ತನ್ನ ಆಟದ ಮೂಲಕ ಭಾರತೀಯರಿಗೆ, ಇಡೀ ಕ್ರಿಕೆಟ್ ಜಗತ್ತಿಗೆ ಹಂಚಿದ್ದಾನೆ. ಸಮಸ್ತ ಭಾರತೀಯರು ಕ್ರಿಕೆಟ್ ಬಗ್ಗೆ ಒಂದಿಷ್ಟು ಆಸಕ್ತಿ ಇಟ್ಟುಕೊಳ್ಳುವಂತೆ, ಟಿ.ವಿ. ಮುಂದೆ ಕುಳಿತುಕೊಳ್ಳುವಂತೆ ಮಾಡಿದ್ದು ಸಚಿನ್ ಎಂದರೆ ಅತಿಶಯೋಕ್ತಿಯಲ್ಲ. ಭಾರತದಲ್ಲಿ ಇಂದು ಕ್ರಿಕೆಟ್ ಒಂದು ಧರ್ಮವೆನಿಸಿದ್ದರೆ, ಅದಕ್ಕೆ ಸಚಿನ್ ಹೊಣೆಯಾಗುತ್ತಾನೆ  ಇಂದಿನ ಹಿರಿಯರಿಗೆ ಸಚಿನ್ ಇಲ್ಲದೆ ಪಂದ್ಯ ನೋಡುವುದು ಕಷ್ಟವೆನಿಸಬಹುದು, ಆದರೆ ಇಂದಿನ ಕಿರಿಯರು ಸಂಭ್ರಮಿಸುತ್ತಿರುವ ಎಲ್ಲಾ ಆಟಗಾರರೂ (ಸೆಹ್ವಾಗ್, ಕೊಹ್ಲಿ, ರೈನಾ ಮುಂತಾದವರು) ಸಚಿನ್ ಯಿಂದ ಸ್ಪೂರ್ತಿ ಪಡೆದವರೇ!!



ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸಚಿನ್ ನ ಆರಂಭಿಕ ದಿನಗಳು ಅಷ್ಟೇನು ತೃಪ್ತಿಕರವಾಗಿರಲಿಲ್ಲ. ಅಂತರ ರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂದು ಬರುವಾಗಲೇ ದಾಖಲೆ ಮಾಡಿಕೊಂಡು ಬಂದ ಸಚಿನ್ ಹೆಸರುವಾಸಿಯಾದನೇ ಹೊರತು, ಯಶಸ್ವಿಯಾಗಲಿಲ್ಲ. ಆತನ ಮೊದಲ ಏಕದಿನ ಪಂದ್ಯದ ಶತಕ ಬಂದಿದ್ದು ೭೯ನೇ ಪಂದ್ಯದಲ್ಲಿ!!


ಆತನ ಆತ್ಮವಿಶ್ವಾಸ, ಸ್ವಸಾಮರ್ಥ್ಯದ ಬಗೆಗಿನ ನಂಬಿಕೆ, ಎಲ್ಲಕ್ಕಿಂತ ಮುಖ್ಯವಾಗಿ ಕ್ರಿಕೆಟ್ ಗೆ ಬೇಕಿರುವ ಡಿಸಿಪ್ಲೀನ್ ಆವನಲ್ಲಿದ್ದಿದ್ದರಿಂದ ಸಚಿನ್ ತಂಡದಲ್ಲಿ ಮುಂದುವರೆದು, ತನ್ನ ವಿರಾಟ್ ರೂಪ ಪ್ರದರ್ಶಿಸಿ, ಯಶಸ್ವಿಯಾಗಲು ಸಾಧ್ಯವಾಯಿತು.


ಸಚಿನ್ ಎದುರಾಳಿ ತಂಡಕ್ಕೆ ತಲೆನೋವಾಗಿ, ಬೌಲರ್ ಗಳ ಪಾಲಿಗೆ ದುಸ್ವಪ್ನವಾಗಿ, ಭಾರತದ ಹೆಮ್ಮೆಯ ಪ್ರತೀಕವಾಗಿ ಬೆಳೆದಂತೆ, ಯಶಸ್ಸು, ಕೀರ್ತಿ, ಪ್ರಶಸ್ತಿಗಳ ಜೊತೆ-ಜೊತೆಗೆ ಟೀಕೆಗಳೂ ಸಚಿನ್ ನನ್ನು ಬೆನ್ನತ್ತಿದ್ದವು. ’ಸಚಿನ್ ಕೇವಲ ದುರ್ಬಲ ತಂಡಗಳ ವಿರುದ್ದ ಆಡುತ್ತಾನೆ’, ’ಸಚಿನ್ ದಾಖಲೆಗಳಿಗಾಗಿ, ತನಗೋಸ್ಕರ ಆಡುತ್ತಾನೆ, ದೇಶಕ್ಕಾಗಿ ಅಲ್ಲ’, ’ಸಚಿನ್ ಸೆಂಚುರಿ ಮಾಡಿದರೆ ಭಾರತ ಸೋಲುತ್ತದೆ’, ’ಸಚಿನ್ ಪಂದ್ಯ ಗೆಲ್ಲಿಸಿಕೊಡಬಲ್ಲ ಆಟಗಾರ ಅಲ್ಲ’, ಹೀಗೆ ಹಲವು ಟೀಕಾ ಪ್ರಹಾರಗಳು. ಆದರೆ ಸಚಿನ್ ಯಾವುದೇ ಟೀಕೆಗಳಿಂದಲೂ ಎದೆಗುಂದುವುದಿಲ್ಲ. ಭಾವೋದ್ವೇಗಕ್ಕೊಳಗಾಗಿ ಪ್ರತಿಕ್ರಿಯಿಸುವುದಿಲ್ಲ. ಎಲ್ಲದಕ್ಕೂ ತನ್ನ ಆಟದಿಂದಲೇ ಉತ್ತರಕೊಟ್ಟು ಮಂದಹಾಸ ಬೀರಿ, ಟೀಕಾಕಾರರ ಬಾಯಿ ಮುಚ್ಚಿಸುವ ಜಾಣ.



೧೯೯೭-೯೮ ರಲ್ಲಿ, ಷಾರ್ಜಾದಲ್ಲಿ ನಡೆದ ಕೋಕಾ-ಕೋಲಾ ಕಪ್ ನ ಪಂದ್ಯಾವಳಿಯಲ್ಲಿ ನಡೆದ ಈ ಘಟನೆ ಬಹಳ ಜನರಿಗೆ ತಿಳಿದಿಲ್ಲ. ಆಸ್ಟ್ರೇಲಿಯಾ ವಿರುದ್ದದ ಆ ಪಂದ್ಯದಲ್ಲಿ ಗೆದ್ದರಷ್ಟೇ ಭಾರತಕ್ಕೆ ಫೈನಲ್ ಪ್ರವೇಶಿಸುವ ಅವಕಾಶ. ಕಡೇಪಕ್ಷ ೮೭ ಬಾಲ್ ಗಳಲ್ಲಿ ೯೫ ರನ್ ಗಳಿಸಿ, ಸೋತರೂ ರನ್ ಸರಾಸರಿ ಆಧಾರದ ಮೇಲೆ ಫೈನಲ್ ಪ್ರವೇಶಿಸಬಹುದಾಗಿತ್ತು. ಆದರೆ ಮೇಲ್ಪಂಕ್ತಿಯ ನಾಲ್ಕು ಪ್ರಮುಖ ಬ್ಯಾಟ್ಸ್ ಮನ್ ಗಳನ್ನು ಕಳೆದುಕೊಂಡು ಭಾರತ ತಂಡ ಶೋಚನೀಯ ಪರಿಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಇಡೀ ಭಾರತೀಯರ ನಿರೀಕ್ಷೆಯ ಭಾರವನ್ನು ಹೊತ್ತು, ಎದೆಗಾರಿಕೆಯಿಂದ, ಮ್ಯಾಚ್ ಗೆಲ್ಲಿಸುವ ಕಿಚ್ಚಿನಿಂದ ಕ್ರೀಸ್ ನಲ್ಲಿ ನಿಂತು ಆಡುತ್ತಿದ್ದದ್ದು ಸಚಿನ್!! ಪಂದ್ಯ ಮುಗಿದು, ಭಾರತ ಸೋತರೂ ಎಲ್ಲೆಡೆ ಸಂಭ್ರಮಾಚರಣೆ!! ಹೌದು, ಸಚಿನ್ ನ ಏಕಾಂಗಿ ಹೋರಾಟ ಭಾರತವನ್ನು ಫೈನಲ್ ತಲುಪಿಸಿಯಾಗಿತ್ತು. ಆದರೆ, ಡ್ರೆಸ್ಸಿಂಗ್ ರೂಮಿನಲ್ಲಿ ಕೋಚ್ ಆಂಶುಮಾನ್ ಗಾಯಕ್ ವಾಡ್ ಜೊತೆ, ಸಚಿನ್, “ಭಾರತ ಫೈನಲ್ ಪ್ರವೇಶಿಸಲಿ ಎಂದು ನಾನು ಆಡಿದ್ದಲ್ಲ..ಭಾರತ ಗೆಲ್ಲಲ್ಲು” ಎಂದು ಬೇಸರಿಸಿಕೊಂಡದ್ದು ಎಷ್ಟು ಜನರಿಗೆ ತಿಳಿದಿದೆ!!


ಆತನ ಇಪ್ಪತ್ತೊಂದು ವರುಷಗಳ ವೃತ್ತಿಬದುಕಿನಲ್ಲಿ ಈ ರೀತಿಯ ಹಲವಾರು ಸನ್ನಿವೇಶಗಳಿವೆ. ಆದರೆ ನಾಚಿಕೆ ಸ್ವಭಾವದ ಸಚಿನ್ ಎಲ್ಲಿಯೂ, ಯಾವುದನ್ನೂ ಹೇಳಿಕೊಳ್ಳುವುದಿಲ್ಲ. ಎಲ್ಲವೂ ಇತರರು ಬರೆದ ಪುಸ್ತಕಗಳಿಂದಲೋ, ಲೇಖನದಿಂದಲೋ, ಹಂಚಿಕೊಂಡ ಸಂಗತಿಗಳಿಂದಲೋ ತಿಳಿಯುತ್ತದೆ. ಸಚಿನ್ ಕ್ರಿಕೆಟ್ ಜಗತ್ತು ಕಂಡ ಅತ್ಯುತ್ತಮ ಶ್ರೇಷ್ಟ ಆಟಗಾರ. ಸಚಿನ್ ಮೇಲಿನ ಟೀಕೆಗಳು ಕೆಲವು, ಆದರೆ ಆತನ ಸಾಧನೆ ಹಲವು. ಇದು ಸಚಿನ್ ಬಗೆಗಿನ ಕುರುಡು ಅಭಿಮಾನದ ಮಾತಲ್ಲ.


ಗಮನಿಸಿ, ಆತನ ಮೇಲಿನ ಟೀಕೆಗಳೆಲ್ಲಾ, ಆತ ವಿಫಲವಾದಾಗ ಬರುವ ಕೇವಲ ಆ ಕ್ಷಣದ ಸಿಟ್ಟು ಮಾತ್ರ. ಅವು ಯಾವತ್ತೂ ಶಾಶ್ವತವಾದ ಟೀಕೆಗಳಲ್ಲ. ಆ ಟೀಕೆಗಳ ಹಿಂದೆಯೇ ಸಚಿನ್ ದಾಖಲೆ ಮಾಡಿದಾಗ ಸಂಭ್ರಮಿಸುವವರು ನಾವೇ, ಎಲ್ಲಾ ದಾಖಲೆಗಳೂ ಸಚಿನ್ ನ ಹೆಸರಿನಲ್ಲೇ ಇದ್ದರೆ ಚೆನ್ನ ಎಂದು ಬಯಸುವುದೂ ನಾವೇ.


ಕಳೆದ ವರ್ಷ ಭಾರತ ವಿಶ್ವಕಪ್ ಗೆದ್ದಾಗ, ಕ್ರಿಕೆಟ್ ಜಗತ್ತಿನಲ್ಲಿ ಸಚಿನ್ ಎಲ್ಲವನ್ನು ಗಳಿಸಿಯಾಗಿದೆ, ದೇಹವೂ ಮುಪ್ಪಿಡುತ್ತಿದೆ ಇನ್ನು ಆತ ನಿವೃತ್ತಿ ಹೊಂದಬಹುದಷ್ಟೇ ಎಂದು ಹಲವರು ನಿರೀಕ್ಷಿಸಿದ್ದರು. ಮೊನ್ನೆ ಮೊನ್ನೆ ಹಿರಿಯ ಆಟಗಾರ ರಾಹುಲ್ ದ್ರಾವಿಡ್ ಅಂತರ ರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳಿದಾಗಲೂ,’ಸಚಿನ್ ಸರದಿ ಯಾವಾಗ?’ ಎಂದು ಕೇಳಿದ್ದರು. ಆ ಸುದ್ದಿಯ ಹಿಂದೆಯೇ ಸಚಿನ್ ನೂರನೇ ಶತಕ ಸಿಡಿಸಿ ಮತ್ತೊಂದು ದಾಖಲೆ ಮಾಡಿ ತನ್ನೆಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಉಡುಗೊರೆಯನ್ನು ನೀಡಿದ್ದಾನೆ!!


ಇಲ್ಲ, ಕ್ರಿಕೆಟ್ ಬಗೆಗಿನ ಆತನ ಹಸಿವು ಇನ್ನೂ ಹಿಂಗಿಲ್ಲ…ಪ್ರೀತಿ ಕರಗಿಲ್ಲ.


೧೯೮೯ ರಲ್ಲಿ ಭಾರತ ತಂಡದ ಪರ, ಕ್ರೀಡಾಂಗಣಕ್ಕಿಳಿದ ೧೬ ವರ್ಷದ ಪೋರ, ಆ ನಂತರದಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ವರವಾಗಿದ್ದರ ಹಿಂದೆ, ಅ ವಾಮನ ಮೂರ್ತಿ, ದೈತ್ಯ ಪ್ರತಿಭೆಯಾಗಿ ಬೆಳೆದುದರ ಹಿಂದೆ ಕಠಿಣ ಪರಿಶ್ರಮ ಇದೆ, ಸಮರ್ಪಣಾ ಭಾವವಿದೆ, ಏಕಾಗ್ರತೆ ಇದೆ, ಸಹ ಆಟಗಾರರ ಬಗ್ಗೆ ಗೌರವವಿದೆ, ಕಿರಿಯ ಆಟಗಾರರ ಮೇಲಿನ ವಿಶ್ವಾಸವಿದೆ, ಹಿರಿಯರ ಬಗ್ಗೆ ಭಕ್ತಿಯಿದೆ, ಕುಟುಂಬದ ಮೇಲಿನ ಪ್ರೇಮವಿದೆ, ದೇಶದ ಬಗ್ಗೆ ಅಭಿಮಾನವಿದೆ, ಎಲ್ಲಕ್ಕಿಂತ ಮುಖ್ಯವಾಗಿ ಕ್ರಿಕೆಟ್ ಬಗೆಗಿನ ಅನನ್ಯವಾದ ಪ್ರೀತಿಯಿದೆ!!


ಕೆಲವರಿಗೆ ಹಣ ಮಾಡುವುದರಲ್ಲಿ ಖುಷಿ ಇರಬಹುದು, ಕೆಲವರಿಗೆ ಹೆಸರು ಮಾಡುವ ಗುರಿ ಇರಬಹುದು, ಆದರೆ ಸಚಿನ್ ಗೆ ಕ್ರಿಕೆಟ್ ಆಟವನ್ನಷ್ಟೇ ಪ್ರೀತಿಸುವುದರಲ್ಲಿ ಖುಷಿಯಿದೆ; ಸದಾ ಕ್ರಿಕೆಟ್ ಆಡುತ್ತಲೇ ಇರಬೇಕೆಂಬ ಆಸೆ ಇದೆ. ಕ್ರಿಕೆಟ್ ಬಗೆಗಿನ ಸಚಿನ್ ನ ಪ್ರೀತಿ ಕೇವಲ ಆತನನ್ನು ಮಾತ್ರ ಉನ್ನತ ಸ್ತರಕ್ಕೆ ಕೊಂಡೊಯ್ದಿಲ್ಲ….ಸ್ವತ: ಕ್ರಿಕೆಟ್ ಆಟವನ್ನೇ ಒಂದು ಎತ್ತರಕ್ಕೆ ಕರೆದೊಯ್ದಿದೆ ಮತ್ತು ನಮ್ಮ ಭಾರತದ ಘನತೆಯನ್ನೂ ಹೆಚ್ಚಿಸಿದೆ.



                       -------------------------------------------------
 
ಒಂದಷ್ಟು ಕುತೂಹಲ ವಿಷಯಗಳು.....
 
ಬಿ.ಬಿ.ಸಿ.ಯೊಂದಿಗಿನ ಸಂದರ್ಶನವೊಂದರಲ್ಲಿ ’ಕನಸಿನ ಮಹಿಳೆ’ಯ ಬಗ್ಗೆ ಕೇಳಿದಾಗ, ಸಚಿನ್ ತಡಮಾಡದೆ, ’ನನ್ನ ಪತ್ನಿ’ ಎಂದು ಹೇಳಿದ್ದರು.

ಮದುವೆಯಾದ ದಿನದಿಂದ, ಇಂದಿನವರೆಗೂ ಸಚಿನ್ ದೀಪಾವಳಿ ಹಬ್ಬವನ್ನು ಕುಟುಂಬದೊಂದಿಗೆ ಆಚರಿಸಲು ಸಾಧ್ಯವಾಗಿಲ್ಲ!!

೧೯೯೭-೯೮ ರಲ್ಲಿ ಷಾರ್ಜಾದಲ್ಲಿ ನಡೆದ ಕೋಕಾ-ಕೋಲಾ ಕಪ್ ಪಂದ್ಯದ ಶತಕವೊಂದನ್ನು ಸಚಿನ್ ತಮ್ಮ ಪತ್ನಿಗೆ ಅರ್ಪಿಸಿದ್ದರು.


ಸಚಿನ್ ನ ತಂದೆ ಕ್ರಿಕೆಟ್ ನ ಅಭಿಮಾನಿಯೇನಲ್ಲ…ಕ್ರಿಕೆಟ್ ಎಂದರೆ ಅವರಿಗೆ ಅಷ್ಟಕ್ಕಷ್ಟೆ.  ಒಬ್ಬ ಲೇಖಕನಾಗಿ, ಕವಿಯಾಗಿ ಗುರುತಿಸಿಕೊಂಡಿದ್ದ ಸಚಿನ್ ನ ತಂದೆಗೆ, ಮಗನ ಸಾಮರ್ಥ್ಯದ ಬಗ್ಗೆ ಅಪರಿಮಿತವಾದ ನಂಬಿಕೆ. ಸಚಿನ್ ಗೆ ಕ್ರಿಕೆಟ್ ಮತ್ತು ಶಿಕ್ಷಣದ ನಡುವಿನ ಆಯ್ಕೆಯ ವಿಷಯ ಬಂದಾಗ, “ನೀನು ಕ್ರಿಕೆಟ್ ಆಡಬಹುದು. ಕ್ರಿಕೆಟ್ ಯಾವತ್ತಿಗೂ ನಿನ್ನ ಮೊದಲ ಪ್ರೀತಿ.  ನನಗೆ ನಿನ್ನ ಮೇಲೆ ಸಂಪೂರ್ಣ ನಂಬಿಕೆ ಇದೆ” ಎಂದು ಹೇಳಿ ಮಗ ಸಚಿನ್ ನನ್ನು ಹುರಿದುಂಬಿಸಿದ್ದರು.  ಹಾಗೆ ಹೇಳುವ ಮುನ್ನ, ’ಯಶಸ್ಸಿಗೆ ಯವುದೇ ರೀತಿಯ ಅಡ್ಡದಾರಿಯನ್ನು ಹಿಡಿಯಬೇಡ, ಏರಿಳಿತ, ಸೋಲು-ಗೆಲುವು ಇದ್ದೇ ಇರುತ್ತದೆ, ನೀನು ನಿನ್ನಷ್ಟಕ್ಕೆ ನಿನ್ನ ಆಟ ಆಡುತ್ತಾ ಸಾಗು” ಎಂದು ಎಚ್ಚರಿಸಿದ್ದನ್ನು ಸಚಿನ್ ಮರೆತಿಲ್ಲ.



ಅನೇಕ ಕ್ರೀಡಾಪಟುಗಳಂತೆ ಅಥವಾ ಸಾಮಾನ್ಯ ಜನರಂತೆ, ಸಚಿನ್ ಕೂಡ ಕೆಲವು ಕುರುಡು ಆಚರಣೆಗಳನ್ನು ಪಾಲಿಸುತ್ತಾರೆ. ಸಚಿನ್ ಇವತ್ತಿಗೂ, ಮೊದಲು ತನ್ನ ಎಡಕಾಲಿನ ಪ್ಯಾಡ್ ಧರಿಸಿದ ನಂತರವೇ ಬಲಗಾಲಿನ ಪ್ಯಾಡ್ ಧರಿಸುವುದು.



ಸಚಿನ್ ನ ಶಾಲಾ ದಿನಗಳಲ್ಲಿ ಆತನ ಆಟ ಮೆಚ್ಚಿ, ಸುನಿಲ್ ಗವಾಸ್ಕರ್ ಸಚಿನ್ ಗೆ ಒಂದು ಜೊತೆ ಪ್ಯಾಡ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಸಚಿನ್ ತನ್ನ ಮೊದಲ ಅಂತರ ರಾಷ್ಟ್ರೀಯ ಪಂದ್ಯವಾಡಿದಾಗ ಧರಿಸಿದ್ದದ್ದು ಅದೇ ಪ್ಯಾಡ ಅನ್ನು!!



ಸಚಿನ್ ನನ್ನು ಸ್ಫೂರ್ತಿಯಾಗಿರಿಸಿಕೊಂಡು, ಆತನನ್ನೇ ಅನುಸರಿಸುತ್ತಿರುವವರು ಅದೆಷ್ಟೋ ಜನರಿದ್ದಾರೆ.  ಆದರೆ ಸಚಿನ್ ತನ್ನ ಬಾಲ್ಯದ ದಿನಗಳಲ್ಲಿ ಯಾರನ್ನು ಇಷ್ಟಪಡುತ್ತಿದ್ದರು?!  ಕ್ರಿಕೆಟ್ ಹೊರತಾಗಿ ಸಚಿನ್ ಇಷ್ಟ ಪಡುತ್ತಿದ್ದ ಕ್ರೀಡಾಪಟುವೆಂದರೆ, ಅಮೆರಿಕದ ಟೆನಿಸ್ ಆಟಗಾರ ಜಾನ್ ಮ್ಯಾಕನ್ ರನ್ನು.  ಎಲ್ಲರೂ ಸಚಿನ್ ನನ್ನು ’ಮ್ಯಾಕ್’ ಎಂದೇ ಕರೆಯುತ್ತಿದ್ದರು.  ಸಚಿನ್ ಕೂಡ ಅವರ ಶೈಲಿಯನ್ನೇ ಅನುಸರಿಸುತ್ತಿದ್ದರು.  ಅವರಂತೆಯೇ ಉದ್ದ ಕೂದಲು ಬಿಡುವುದು, ಅವರು ಬಳಸುವ ಸ್ವೆಟ್ ಬ್ಯಾಂಡ್, ಹೆಡ್ ಬ್ಯಾಂಡ್ ಅನ್ನು ಬಳಸುವುದು ಹೀಗೆ...

 

Sunday, March 18, 2012

ಸೈಕಲ್ ಸವಾರಿ – ಅವಿರತದ ದಾರಿ

ನಾವೆಲ್ಲಾ ಶಾಲಾ ವಿದ್ಯಾರ್ಥಿಗಳಾಗಿದ್ದ ದಿನಗಳಲ್ಲಿ, ಎಲ್ಲರ ಸಾಮಾನ್ಯ ಬಯಕೆ ಎಂದರೆ ಸೈಕಲ್!!! ಅಪ್ಪನ ಜೊತೆ ಬಜಾಜ್ ಸ್ಕೂಟರ್ ನಲ್ಲೋ, ಶಾಲೆಯ ಬಸ್ಸಿನಲ್ಲೋ ಅಥವಾ ದೂರದ ಹಳ್ಳಿಗಳಲ್ಲಾದರೆ ಗೆಳೆಯರ ಜೊತೆ ನಡೆದುಕೊಂಡೋ ಶಾಲೆಗೆ ಬರುತ್ತಿದ್ದರೂ ೬, ೭ನೇ ತರಗತಿ ಬರುವ ಹೊತ್ತಿಗೆ ನಮ್ಮದೇ ಒಂದು ಸೈಕಲ್ ತೆಗೆದುಕೊಂಡು, ಅದರಲ್ಲೇ ಶಾಲೆಗೆ ಬರುವ ತವಕ!! ಹಾಗಾಗಿಯೇ, ನಾವು ವರ್ಷದ ಪರೀಕ್ಷೆಯಲ್ಲಿ ಪಾಸಾದಾಗ ಯಾರಾದರೂ ’ಏನು ಬೇಕು?’ ಎಂದು ಕೇಳಿದರೆ, ತಕ್ಷಣವೇ ’ಸೈಕಲ್’ ಎಂದು ಹೇಳುತ್ತಿದ್ದೆವು!! ಹೀಗೆ ಬಾಲ್ಯದಲ್ಲಿ ಸೈಕಲ್ ಕನಸು ಕಂಡವರೆಷ್ಟೋ?! ಕನಸು ಈಡೇರಿ ಸಂತಸಪಟ್ಟವರೆಷ್ಟೋ?! ಕನಸು ಕರಗಿ ಬೇಸರಿಸಿದವರೆಷ್ಟೋ?! ಒಟ್ಟಾರೆ, ಹಾಗೆ ಇಷ್ಟಪಟ್ಟು ತೆಗೆದುಕೊಂಡ ಸೈಕಲ್, ನಾವೆಲ್ಲ ಜೀವನದಲ್ಲಿ ಹಂತ ಹಂತವಾಗಿ ಬೆಳೆಯುತ್ತಾ ಬಂದಂತೆ, ಬಾಲ್ಯದ ಒಂದು ನೆನಪಾಗಿ, ಈಡೇರದ ಒಂದು ಕನಸಾಗಿ ಉಳಿದುಬಿಡುತ್ತದೆ.



 
ಹೀಗೆ ಸೈಕಲ್ ಬಗೆಗಿನ ಗುಂಗು ಆವರಿಸಿದ್ದು, ಅದರ ನೆನಪಿನಲ್ಲೇ ಬರೆಯಬೇಕು ಎನಿಸುವಂತೆ ಮಾಡಿದ್ದು, ನಮ್ಮ ಅವಿರತ ಸಂಸ್ಥೆ ಆಯೋಜಿಸಿದ್ದ ’ಸೈಕಲ್ ಸವಾರಿ’ ಕಾರ್ಯಕ್ರಮದ ಸಂದರ್ಭದಲ್ಲಿ. ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಅವಿರತ ಸಂಸ್ಥೆಯ ವತಿಯಿಂದ ಹಿಂದುಳಿದ ಮತ್ತು ಗ್ರಾಮಾಂತರ ಶಾಲೆಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆಯ ಕಾರ್ಯಕ್ರಮಕ್ಕೆ ಹಣ ಸಂಗ್ರಹಣೆಯ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಸೈಕಲ್ ಸವಾರಿ, ಎಲ್ಲರನ್ನೂ ಕ್ಷಣಕಾಲದ ಮಟ್ಟಿಗಾದರೂ ತಮ್ಮ ಬಾಲ್ಯದ ದಿನಗಳಿಗೆ ಕರೆದೊಯ್ದುದರಲ್ಲಿ ಸಂಶಯವಿಲ್ಲವೆನ್ನಬಹುದು.


೧೦ ರಿಂದ ೪೫ ವರ್ಷ ವಯಸ್ಸಿನ ಸುಮಾರು ೬೦ ಜನ ಭಾಗಿಗಳನ್ನು ೧೦ ಜನರ ೬ ತಂಡಗಳಾಗಿ ವಿಂಗಡಿಸಿ, ಪ್ರತಿಯೊಂದು ತಂಡದಲ್ಲೂ ಇಬ್ಬರು ಸೈಕಲ್ ಪಟುವನ್ನು ನಿಯೋಜಿಸಿಲಾಗಿತ್ತು. ಈ ನಮ್ಮ ಸೈಕಲ್ ಸವಾರಿ ಪ್ರಾರಂಭವಾಗಿದ್ದು ಗಾಂಧಿ ಕೃಷಿ ವಿಶ್ವವಿದ್ಯಾಲಯ ಕೇಂದ್ರ (ಜಿ.ಕೆ.ವಿ.ಕೆ) ದ ಆವರಣದಲ್ಲಿ.




ಶಿಶುವಿಹಾರದಿಂದ ಪ್ರಾರಂಭವಾಗುವ ಮಕ್ಕಳ ವಿದ್ಯಾಭ್ಯಾಸವು, ಶಾಲಾ ಕಾಲೇಜಿನ ಮೂಲಕ ಸಾಗಿ ಒಂದು ಹಂತ ತಲುಪುವುದು ವಿಶ್ವವಿದ್ಯಾಲಯದಲ್ಲಿ!! ಹೀಗೆ ವಿಶ್ವವಿದ್ಯಾಲಯವೊಂದರಿಂದ ಪ್ರಾರಂಭವಾದ ಸೈಕಲ್ ಸವಾರಿ ಹೊರಟಿದ್ದು ಜವಾಹರ್ ನವೋದಯ ವಿದ್ಯಾಲಯಕ್ಕೆ (ಜೆ.ಎನ್.ವಿ). ನಿಜಕ್ಕೂ ಈಗಿನ ಜೀವನದಿಂದ ಬಾಲ್ಯದ ಕಡೆಗಿನ ಪಯಣ……..
 
 
 
 
೨೫ ಜನ ಸ್ವಯಂಸೇವಕರೊಂದಿಗೆ ೨೨ ಕಿಲೋ ಮೀಟರ್ ಉದ್ದದ ಸೈಕಲ್ ಸವಾರಿ ಪ್ರಾರಂಭವಾಗುವ ಹೊತ್ತಿಗೆ ನಿಗದಿತ ಸಮಯ ದಾಟಿತ್ತು, ಭಾನುವಾರದ ಬೆಳಗಿನ ಸೂರ್ಯನ ಬಿಸಿಲು ಚುರುಗುಟ್ಟುತ್ತಿತ್ತು. ಜಿ.ಕೆ.ವಿ.ಕೆ ಯಿಂದ ಹೊರಟು, ಅಮೃತಪುರ, ಥಣಿಸಂದ್ರ, ಕಣ್ಣೂರು, ಚಕ್ಕಲೆಟಿ ಮಾರ್ಗದ ಮೂಲಕ ಸಾಗಿ ಜವಾಹರ್ ನವೋದಯ ವಿದ್ಯಾಲಯ ತಲುಪುವುದು ಸವಾರಿಯ ಅಂತ್ಯ. ಮಾರ್ಗದ ಮಧ್ಯ ಪ್ರತಿ ೩-೪ ಕಿ.ಮೀ. ಗೆ ಒಂದರಂತ, ಸೈಕಲ್ ಸವಾರರ ದಣಿವು ತಣಿಸಲು, ಸಹಾಯ ಕೇಂದ್ರದ ವ್ಯವಸ್ಥೆ ಮಾಡಲಾಗಿತ್ತು ಹಾಗೂ ಸವಾರರ ಸುರಕ್ಷತೆಯ ದೃಷ್ಟಿಯಿಂದ ವೈದ್ಯರಿರುವ ಕಾರೊಂದು ಸವಾರರ ಜೊತೆಯಲ್ಲಿಯೇ ಚಲಿಸುವಂತೆ ವ್ಯವಸ್ಥೆ ಮಾಡಲಾಗಿತ್ತು.



ಯಾವುದೇ ರೀತಿಯ ತೊಂದರೆಯಾಗದೆ, ಅವಘಡ ಸಂಭವಿಸದೆ, ಮರ ಕಡಿದು, ನೆರಳಿನ ಸುಳಿವಿಲ್ಲದಂತೆ ಮಾಡಿದ್ದ ರಸ್ತೆಯಲ್ಲಿ ಸೈಕಲ್ ತುಳಿದು ಬಂದು ಜೆ.ಎನ್.ವಿ ತಲುಪಿದ ಎಲ್ಲಾ ಸೈಕಲ್ ಸವಾರರಿಗೂ, ಜೆ.ಎನ್.ವಿ ಯ ವಿದ್ಯಾರ್ಥಿಗಳು ಮಾಡಿದ್ದ ಕೈತೋಟದ ನೆರಳುತಂಪಿನ ಸ್ವಾಗತವನ್ನೇ ಕೋರಿ, ಬಂದವರ ದಣಿವಾರಲು ಸಹಾಯ ಮಾಡಿತು.


ನವೋದಯದ ಹಳೆಯ ವಿದ್ಯಾರ್ಥಿಗಳಾದ ಸತೀಶ್ ಗೌಡ್ರು, ಗಿರೀಶ್ ಅಂದಲಗಿ, ಆಂಜನೇ ಗೌಡ, ಚಂದ್ರಶೇಖರ್, ಧರಣೇಂದ್ರ, ಶರ್ಮ ಇನ್ನು ಕೆಲವರು ನವೋದಯ ವಿದ್ಯಾಲಯದಲ್ಲಿ ತಮ್ಮ ವಿದ್ಯಾರ್ಥಿ ಜೀವನದ ಕ್ಷಣಗಳನ್ನು ಮತ್ತೊಮ್ಮೆ ತಮ್ಮದಾಗಿಸಿಕೊಂಡು ಖುಷಿಪಟ್ಟರೆ; ಜೊತೆಯಲ್ಲಿದ್ದ ಉಳಿದವರು ತಮ್ಮ ತಮ್ಮ ಬಾಲ್ಯದ ಜೀವನವನ್ನು ನೆನೆದರು.


ಎಲ್ಲರ ಆಯಾಸ ಕಳೆದು, ಉಪಾಹಾರ ಮುಗಿಸಿದ ನಂತರ ಅಶ್ವಥ್ ರವರು ಎಲ್ಲರನ್ನೂ ಉದ್ದೇಶಿಸಿ ಆಡಿದ ಮಾತುಗಳು ತ್ರಿಕಾಲಗಳಸಂಗಮದಂತಿತ್ತು. ಅವರ ಮಾತುಗಳಲ್ಲಿ, ಅವಿರತದ ಹಿಂದಿನ ಕಾರ್ಯಗಳ ಒಂದು ಸಣ್ಣ ಅವಲೋಕನ, ಈಗಿನ ಕಾರ್ಯಗಳ ಸಮಾಲೋಚನ ಹಾಗೂ ಮುಂದಿನ ಕಾರ್ಯಗಳ ಅನಾವರಣವಿತ್ತು. ಅವಿರತದ ನೋಟ್ ಪುಸ್ತಕ ವಿತರಣೆಯ ಕಾರ್ಯವನ್ನು ಬೆಳೆಸಲು, ಧೃಡಗೊಳಿಸಲು, ’ನನ್ನ ಶಾಲೆ, ನನ್ನ ಹೆಮ್ಮೆ’ ಎಂದು ಅವರು ನೀಡಿದ ಹೊಸ ವ್ಯಾಖ್ಯಾನ ನಿಜಕ್ಕೂ ಅರ್ಥಪೂರ್ಣವಾದದ್ದು.
 
 
 
ಆ ನಂತರ ನಡೆದದ್ದೆಲ್ಲಾ ಜೆ.ಎನ್.ವಿ.ಯ ಮಕ್ಕಳೊಂದಿಗಿನ ಮನೋರಂಜನೆಯ ಕಾರ್ಯಕ್ರಮಗಳೇ…..ರಸಪ್ರಶ್ನೆ, ಹರಟೆ, ಹಾಸ್ಯ ಮತ್ತು ಹಾಡು. ಮಕ್ಕಳಂತೆ ಸೈಕಲ್ ತುಳಿದು ಶಾಲೆಗೆ ಹೋಗಿ, ಅವರೊಂದಿಗೆ ಬೆರೆತು ನಮ್ಮ ಬಾಲ್ಯದ ದಿನಗಳನ್ನು ನೆನೆದು, ನಾವೂ ಮಕ್ಕಳಾಗಿ, ಇಂದಿನ ಮಕ್ಕಳ – ಅದರಲ್ಲೂ ಹಿಂದುಳಿದ ಶಾಲೆಗಳ / ಗ್ರಾಮಾಂತರ ಪ್ರದೇಶದ ಶಾಲೆಗಳ ಮಕ್ಕಳ ಅವಶ್ಯಕತೆಗಳನ್ನು ಚರ್ಚಿಸಿ, ಅದರ ಅಗತ್ಯಕ್ಕೆ ತಕ್ಕಂತೆ ಸ್ಪಂದಿಸುವ ಸಂಕಲ್ಪ ತೊಡುವ ಮೂಲಕ ಅವಿರತ ತನ್ನ ವಿಶಿಷ್ಟತೆಯನ್ನು ಮೆರೆದಿದೆ. ಅಷ್ಟೇ ಅಲ್ಲದೆ, ಅವಿರತದ ಸದಸ್ಯರ ಬಾಂಧವ್ಯ ಬೆಸೆಯುವಲ್ಲಿ ಸಹಕರಿಸಿದ ಈ ಕಾರ್ಯಕ್ರಮವು, ಒಬ್ಬರ/ತಂಡದ ಪ್ರಯತ್ನಕ್ಕೆ, ಮತ್ತೊಬ್ಬರ/ಎಲ್ಲರ ಸಹಕಾರ ದೊರೆತಾಗ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿಯಂತಿತ್ತು.




 
ಕಾರ್ಯಕ್ರಮವನ್ನು ರೂಪಿಸುವಲ್ಲಿ (ರಂಗನಾಥ್), ಭಾಗವಹಿಸುವವರನ್ನು ಸಂಘಟಿಸುವುದರಲ್ಲಿ (ಜ್ಯೋತಿ) ಹಾಗೂ ಕಾರ್ಯಕ್ರಮವನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುವಲ್ಲಿ (ಕಿರಣ್, ಪ್ರಸನ್ನ, ಶಶಿ) ಶ್ರಮಿಸಿದ ಪ್ರತಿಯೊಬ್ಬರಿಗೂ (ಸವಾರರಿಗೂ, ಸ್ವಯಂ ಸೇವಕರಿಗೂ) ತಂಡದ ಪರವಾಗಿ ಮನ:ಪೂರ್ವಕ ಧನ್ಯವಾದಗಳು.


ಈ ರೀತಿಯ ಕಾರ್ಯಕ್ರಮಗಳು ಇನ್ನೂ ಹೆಚ್ಚಾಗಲಿ, ತಂಡದ ಬಾಂಧವ್ಯ ಧೃಡವಾಗಲಿ, ಅವಿರತ, ನಾಡಿಗಾಗಿ ನಿರಂತರವಾಗಲಿ
 
 


ಮುಗಿಸುವ ಮುನ್ನ, ನಗೆಯಿದ್ದರೆ ಚೆನ್ನ:



- ಸ್ವಯಂ ಸೇವಕರಾಗಿ ಬಂದಿದ್ದ ಸಿಂಧು ಅವರು, ಸೈಕಲ್ ಸವಾರಿ ಶುರುವಾದ ನಂತರ ಸ್ವಯಂ ಪ್ರೇರಿತರಾಗಿ ಸೈಕಲ್ ತುಳಿದು ಜೆ.ಎನ್.ವಿ ವರೆಗು ಬಂದಿದ್ದು!! :)


- ರಂಗನಾಥ್ ಅವರ ಅಕ್ಕ ನ ಮಗ ರಘುರಾಮ್ (೧೩ ವರ್ಷ), ಹೆಚ್ಚು ಬ್ರೇಕ್ ತೆಗೆದುಕೊಳ್ಳದೆ ಎಲ್ಲರಿಗಿಂತ ಮೊದಲು ಜೆ.ಎನ್.ವಿ ತಲುಪಿದ್ದು!! :)


- ಶಶಿ ಸರ್ ಹಾಗೂ ನಾನು ರಸ್ತೆ ಬದಿ ಮಾರ್ಗ ತೋರಿಸುವವರಂತೆ ನಿಂತು, ಜಗದೀಶ್ ಅವರನ್ನು ಜೆ.ಎನ್.ವಿ ಯಿಂದ ಇನ್ನೂ ಮುಂದೆ ಕಳುಹಿಸುವ ವ್ಯರ್ಥ ಪ್ರಯತ್ನ ಮಾಡಿದ್ದು. :)


- ಸೈಕಲ್ ವೇಗಕ್ಕೆ ಕಾರು ಓಡಿಸಿ, ಕಾಲು ನೋವೆಂದ ಶಶಿ ಸರ್ ಅವರನ್ನು, ಕುಮಾರ್ ಅವರು ತಮ್ಮ ಸೈಕಲ್ ನಲ್ಲಿ ಡಬ್ಬಲ್ ರೈಡಿಂಗ್ ಕರೆತಂದಿದ್ದು. :)


- ಶಶಿ ಸರ್, ಸಿಂಧು ಮತ್ತವರ ಕರಾವಳಿ ತಂಡ ’ಪುಷ್ಪಕ ವಿಮಾನ’ ಚಿತ್ರದ ಗೀತೆಯನ್ನು (?!!) ಹಾಡಿದ್ದು ಹಾಗೂ ಅದನ್ನು ರೆಕಾರ್ಡ್ ಮಾಡಲು ಅರುಣ್ ಕಾದು ನಿಂತದ್ದು!! :)


- ಕಾರ್ಯಕ್ರಮದ ಭಾಗಿಗಳನ್ನು ಸಂಘಟಿಸುವಲ್ಲಿ ಶ್ರಮಿಸಿದ ಜ್ಯೋತಿ ಅವರು, ಮೂರು ಚಕ್ರದ ಸೈಕಲ್ ಸಿಗಲಿಲ್ಲವೆಂದು ಸೈಕಲ್ ಸವಾರಿ ಮಾಡಲಾಗದಿದದ್ದು. :)