Saturday, November 6, 2010

ಕನ್ನಡವೇ ಸತ್ಯ, ಕನ್ನಡವೇ ನಿತ್ಯ...!!



"ಗುರು ಇನ್ನು ಎದ್ದಿದ್ದೀರಾ..!! ನಿದ್ದೆ ಮಾಡಿಲ್ಲ್ವ..??!!"- ಹೀಗಂತ ಗೆಳೆಯ ಕೌಶಿಕ್, ನನ್ನ ಮೆಸೇಜ್ ಒಂದಕ್ಕೆ ಪ್ರತಿಕ್ರಿಸಿದ್ದರು.


ಅದಾಗಲೇ ೧೩ ಘಂಟೆಯಾಗಿ, ೩೦ ನಿಮಿಷ ಕಳೆದಿದ್ದರಿಂದ ನವೆಂಬರ್ ೧ ಹಾಜರಾಗಿತ್ತು. ನನ್ನ ಕಂಪನಿ ಕೃಪಾಪೋಷಿತ ಲ್ಯಾಪ್ ಟಾಪ್ ನಲ್ಲಿ, ಆಫೀಸಿನ ಸಣ್ಣಪುಟ್ಟ ಕೆಲಸ ಮಾಡುತ್ತಾ, ಅಣ್ಣಾವ್ರು ಹಾಡಿರುವ ಕನ್ನಡ ನಾಡಿನ ಗೀತೆಗಳನ್ನು ಕೇಳುತ್ತಾ ಕನ್ನಡ ರಾಜ್ಯೋತ್ಸವವನ್ನು ಬರಮಾಡಿಕೊಳ್ಲುತ್ತಿದ್ದೆ. ಈ ಕೆಲಸದ ನಡುವೆ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ಗೆಳೆಯರೆಲ್ಲರಿಗೂ ರಾಜ್ಯೋತ್ಸವದ ಶುಭಾಷಯ ಅಂತ ಮೆಸೇಜ್ ಮಾಡಿದ್ದೆ.

ಅದಕ್ಕೆ ಪ್ರತಿಯಾಗಿ, ಕೌಶಿಕ್ "ಗುರು ಇನ್ನು ಎದ್ದಿದ್ದೀರಾ..!! ನಿದ್ದೆ ಮಾಡಿಲ್ಲ್ವ..??!!" ಅಂತ ಉತ್ತರಿಸಿದ್ದರು.

ಕೌಶಿಕ್ ರ ಈ ಮೆಸೇಜ್ ನೋಡಿ ನನಗೆ ಅದೇನನಿಸಿತೊ,

"ನಾವೆಲ್ಲ ಎಚ್ಚರವಾಗಿರೋ ಸಮಯದಲ್ಲಿ ನಿದ್ದೆ ಮಾಡಿದಕ್ಕೆ, ಕನ್ನಡ, ಕರ್ನಾಟಕ ಇವತ್ತು ಈ ಸ್ಥಿತಿ ತಲುಪಿರುವುದು; ಕನ್ನಡ ರಾಜ್ಯೋತ್ಸವದ ಶುಭಾಷಯಗಳು" ಅಂತ ಪ್ರತಿಕ್ರಿಯಿಸಿದ್ದೆ. :-)

ಅದಕ್ಕೆ ಕೌಶಿಕ್ ಸಹ "ಹೌದು, ಹೌದು, ನೀವು ಹೇಳೊದು ಸರಿ" ಅಂತ ಹೇಳಿ ನಕ್ಕು ಸುಮ್ಮನಾಗಿದ್ದರು.

ಆದರೆ, ನನಗೆ ಅಚ್ಚರಿ ಕಾದಿದ್ದು ಮರುದಿನ ಬೆಳಿಗ್ಗೆ ವಿಜಯ ಕರ್ನಾಟಕ ಪತ್ರಿಕೆಯ ’ಬತ್ತಳಿಕೆ’ಯಿಂದ ಪ್ರಕಟವಾಗಿದ್ದ ಈ ವ್ಯಂಗ್ಯ ಚಿತ್ರ ನೋಡಿದಾಗ..!! ಕಳೆದ ರಾತ್ರಿ ನಾನು ಕೌಶಿಕ್ ಮೆಸೇಜ್ ಗೆ ಪ್ರತಿಕ್ರಿಯಿಸಿದ ರೀತಿಗೆ ಸರಿಯಾಗಿ ಹೊಂದಾಣಿಕೆಯಾಗುವಂತೆ ಈ ವ್ಯಂಗ್ಯ ಚಿತ್ರ ಪ್ರಕಟವಾಗಿತ್ತು. ಈ ಚಿತ್ರ ಗಮನಿಸಿ, ವರ್ಷಪೂರ್ತಿ ಕನ್ನಡದ ವಿಷಯದಲ್ಲಿ ನಿದ್ದೆ ಮಾಡೊ ಕನ್ನಡಿಗರು, ಕನ್ನಡ ಸರ್ಕಾರ, ಕನ್ನಡ ಸಂಸ್ಥೆಗಳು, ನವೆಂಬರ್ ಬಂತೆಂದಾಗ ಮಾತ್ರ ಎಚ್ಚರವಾಗಿ ’ಕನ್ನಡ, ಕನ್ನಡ’ ಅಂತ ಬೊಬ್ಬೆ ಹಾಕಿ, ಅರ್ಥವಿಲ್ಲದ ಆಚರಣೆ ಮಾಡಿ ನವೆಂಬರ್ ಮುಗಿವ ಹೊತ್ತಿಗೆ ಮತ್ತೆ ಮಲಗಿಬಿಡುತ್ತಾರೆ. ಹಾಗೆ ಮಲಗುವಾಗ, ಮುಂದಿನ ನವೆಂಬರ್ ಗಷ್ಟೇ ಅಲಾರ್ಮ್ ಇಡುವ ರೂಢಿ. ಅಷ್ಟು ಹೊತ್ತಿಗೆ ಕನ್ನಡ ಮತ್ತಷ್ಟು ಹಳತಾಗಿ, ಅದರ ಮೇಲೆ ಧೂಳು ಕೂತು, ಜೇಡ ಬಲೆ ಕಟ್ಟುತ್ತೆ. ಆ ಬಲೆಯಲ್ಲಿ ಸಿಲುಕಿ ಕನ್ನಡ ನರಳುತ್ತೆ, ಅದರ ಕೂಗು ಮುಂದಿನ ನವೆಂಬರ್ ತನಕ ಗಾಡ ನಿದ್ದೆಯಲ್ಲಿರೋ ಯಾರಿಗೂ ಕೇಳುವುದೇ ಇಲ್ಲ.!! ನರಳಾಟ ಕೇಳಿ, ಸಹಾಯ ಹಸ್ತ ಚಾಚುವವರಿಗೆ ಸಿಗಬೇಕಾದ ಸೌಕರ್ಯ, ಸವಲತ್ತು, ನೆರವು..ಯಾವುದೂ ಸಿಗಲ್ಲ...!! ಇಂಥ ವಿಪರ್ಯಾಸದ ಸ್ಥಿತಿಯಲ್ಲೂ ಸಹ, ಯಾವುದೇ ಪ್ರತಿಫಲ ಬಯಸದೆ, ಕೇವಲ ಕನ್ನಡ ನಾಡು-ನುಡಿ ಅಭಿಮಾನದಿಂದ ಅಲ್ಲೊಮ್ಮೆ, ಇಲ್ಲೊಮ್ಮೆ ಸದಾಕಾಲ ಕನ್ನಡ ಡಿಂಡಿಮವನ್ನು ಬಾರಿಸುತ್ತಿರುವ ನಿಜವಾದ ಕನ್ನಡಾಭಿಮಾನಿಗಳಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು.!! : -)

ಇಂಥ ಒಂದು ಸಮಯೋಚಿತವಾದ ವ್ಯಂಗ್ಯಚಿತ್ರ ಬರೆದ ಚಂದ್ರ ಗಂಗೊಳ್ಳಿ ಯವರಿಗೂ ಹಾಗೂ ಅದನ್ನು ಪ್ರಕಟಿಸಿದ ಕನ್ನಡದ ಹೆಮ್ಮೆಯ ದಿನ ಪತ್ರಿಕೆ ’ವಿಜಯ ಕರ್ನಾಟಕ’ಕ್ಕೂ ವಂದನೆಗಳು.

No comments:

Post a Comment