Thursday, January 14, 2010

’ನೈಸ್’ ಸಣ್ಣ ಕಥೆ

ಒಮ್ಮೊಮ್ಮೆ ಹೀಗೆ ಹಾಗುತ್ತೆ. ತಪ್ಪು ಮಾಡಿರುವ ವ್ಯಕ್ತಿ ತನ್ನ ತಪ್ಪನ್ನು ಅರಿತು, ಆ ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡಿ, ಆ ಪ್ರಯತ್ನದಲ್ಲಿ ಯಶಸ್ವಿಯು ಆಗುತ್ತಾನೆ. ಆದರೆ, ಅದ್ಯಾಕೊ ಗೊತ್ತಿಲ್ಲ, ತಪ್ಪು ಮಾಡಿರುವ ವ್ಯಕ್ತಿ ಜೊತೆ ಇರುವವರು ಮಾತ್ರ ತುಂಬಾ ದಿನಗಳ ನಂತರ ಸಹ ಆ ತಪ್ಪನ್ನ ತಮ್ಮ ಪ್ರತಿ ಮಾತಿನಲ್ಲೂ ಹೇಳುತ್ತಿರುತ್ತಾರೆ. ತಪ್ಪು ಮಾಡಿರುವ ವ್ಯಕ್ತಿಗಿಂತ ಇವರೇ ಆ ತಪ್ಪಿನ ಬಗ್ಗೆ ತುಂಬಾ ಚಿಂತೆ ಮಾಡ್ತಾ, ಬಹಳ ಚಡಪಡಿಸುತ್ತಿರುತ್ತಾರೆ. ಈ ರೀತಿಯ ಸನ್ನಿವೇಶವನ್ನು ನಿರೂಪಿಸುವ ಸಣ್ಣಕಥೆಯೊಂದು ಇಲ್ಲಿದೆ:


ಇಬ್ಬರು ಸನ್ಯಾಸಿಗಳು ಜೊತೆಯಲ್ಲಿ ಹೋಗುತ್ತಿದ್ದರು. ಹಾದಿಯ ಮಧ್ಯೆ ತುಂಬಿ ಹರಿಯುವ ನದಿ ಸಿಕ್ಕಿತು. ದಾಟಲು ಸೇತುವೆಯೂ ಇರಲಿಲ್ಲ. ದೋಣಿಯೂ ಇರಲಿಲ್ಲ. ಹಠಯೋಗಿಗಳಾದ ಇಬ್ಬರೂ ನದಿಯನ್ನು

ದಾಟಲು ಸಿದ್ಧರಾದರು. ಆ ಹೊತ್ತಿಗೆ ಹೆಣ್ಣು ಧ್ವನಿಯೊಂದು ಕೇಳಿಸಿತು. ಸುಂದರ ಯುವತಿಯೊಬ್ಬಳು'ನನಗೆ ಈಜು ಗೊತ್ತಿಲ್ಲ. ಆಚೆ ದಡಕ್ಕೆ ಹೋಗಲೇಬೇಕಾಗಿದೆ. ನೀವು ಸಹಾಯ ಮಾಡುತ್ತೀರಾ?' ಎಂದು ಕೇಳುತ್ತಿದ್ದಾಳೆ.

ಇದನ್ನು ಸನ್ಯಾಸಿಗಳಲ್ಲಿ ಒಬ್ಬ 'ಸ್ತ್ರೀ ಸ್ಪರ್ಶದಿಂದ ತಮ್ಮ ಬ್ರಹ್ಮಚರ್ಯ ನಷ್ಟವಾಗಬಹುದು' ಎಂದು ತನ್ನ ಜೊತೆಗಾರನ ಬಳಿ ಅನುಮಾನ ವ್ಯಕ್ತಪಡಿಸಿದ. ಜೊತೆಗಾರ ಇದನ್ನು ಗಮನಕ್ಕೆ ತೆಗೆದುಕೊಳ್ಳದೆ ಆ ಯುವತಿಯನ್ನು ಹೊತ್ತು ನದಿ ದಾಟಿ ಆಕೆಯನ್ನು ಕೆಳಗಿಳಿಸಿದ. ಇದನ್ನು ಕಂಡ ಮತ್ತೊಬ್ಬನಿಗೆ ತಡೆಯಲಾರದಷ್ಟು ಕೋಪ ಬಂತು. ದಾರಿಯದ್ದಕ್ಕೂ ಸ್ತ್ರೀಯನ್ನು ಸ್ಪರ್ಶಿಸುವ ಮೂಲಕ ಮಾಡಿದ ಪಾಪದ ಪರಿಣಾಮಗಳನ್ನೂ ಹೇಳುತ್ತಾ ಹೋದ. ನಿನ್ನ ಸನ್ಯಾಸವೇ ವ್ಯರ್ಥವಾಯಿತು ಎಂದು ದೂಷಿಸಿದ. ಅಂದು ತಡರಾತ್ರಿಯ ತನಕವೂ ಈ ಟೀಕೆಗಳು ಮುಂದುವರಿದವು. ಯಾವ ಟೀಕೆಗೂ ಪ್ರತಿಕ್ರಿಯಿಸದ ಯುವತಿಯನ್ನು ಹೊತ್ತು ನದಿ ದಾಟಿಸಿದ ಸನ್ಯಾಸಿ ಕೊನೆಗೊಮ್ಮೆ ಪ್ರತಿಕ್ರಿಯಿಸಿದ 'ನಾನು ಆಕೆಯನ್ನು ನದಿ ದಾಟಿದ ತಕ್ಷಣ ಕೆಳಗಿಳಿಸಿದೆ. ನೀನಿನ್ನೂ ಅವಳನ್ನು ಹೊತ್ತುಕೊಂಡೇ ಇದ್ದೀಯ...'


ಇತ್ತೀಚೆಗೆ ’ನೈಸ್’ ರಸ್ತೆ ವಿವಾದದ ಸಲುವಾಗಿ ರೈತರ ಪರ (?) ಹೋರಾಟಕ್ಕಿಳಿದಿದ್ದ (ಈ ಹೋರಾಟವು ರಾಜಕೀಯ ತಂತ್ರವಷ್ಟೇ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ) ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಯಡಿಯುರಪ್ಪನವರ ವಿರುದ್ದ ಪ್ರತಿಭಟಿಸುವಾಗ ’ಬ್ಲಡಿ ಬಾಸ್ಟರ್ಡ್’ ಎಂದು ನಿಂದಿಸಿದ್ದು, ರಾಜಕೀಯ ಹಾಗು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಅವಕಾಶ ಮಾಡಿಕೊಟ್ಟಿತ್ತು.
ತನ್ನ ತಪ್ಪನ್ನು ಅರಿತು, ತನ್ನ ಹೇಳಿಕೆಯನ್ನು ಗೌಡರು ಹಿಂದಕೆ ಪಡೆದದ್ದೂ ಆಯಿತು. ಆದರೂ, ಮಾಧ್ಯಮದವರು ಮಾತ್ರ ಈ ಸುದ್ದಿಯನ್ನು ಮಾತ್ರ ಇನ್ನೂ ಜೀವಂತವಿರಿಸಿದ್ದಾರೆ.
ಗೌಡರು ಈ ದೇಶದ ಪ್ರಧಾನಿ ಹುದ್ದೆಯಲ್ಲಿದ್ದವರು, ಮೂರು, ನಾಲ್ಕು ದಶಕಗಳ ರಾಜಕೀಯ ಅನುಭವವಿರುವವರು. ಅಂಥವರು ಈ ರೀತಿ ಮಾತಾಡಬಾರದಿತ್ತು. ಆದರೇಕೊ ಸಂಯಮ ಕಳೆದುಕೊಂಡುಬಿಟ್ಟರು. ಈ ಮಾತು ಎಲ್ಲರಿಗೂ ಒಂದು ಪಾಠವಾಗಲಿ ಎಂದು ಮಾಧ್ಯಮಗಳೇಕೆ ಈ ವಿಷಯವನ್ನು ಇಲ್ಲಿಗೆ ನಿಲ್ಲಿಸಬಾರದು...??!!

1 comment:

  1. Thumba chenagide Rohit avare. Sanna katheyannu vasthavada sanniveshakke holisiruvudu prashamsaneeya.

    inda,
    Jyo,Manasa, Shwetha, Kore, Kaushik mathu balaga
    Dasthanu America

    ReplyDelete