Monday, September 27, 2010

ಬೆಳದಿಂಗಳಾಗಿ ಬಾ......!!!


ಬಹಳ ಹಿಂದೆ, ನಾನು ಬರೆಯಲು ಶುರು ಮಾಡಿದಾಗ, ಬರೆದಿದ್ದನ್ನು ಈ-ಪತ್ರಿಕೆಗಳಲ್ಲಿ ಪ್ರಕಟಿಸುವುದನ್ನು ಶುರು ಮಾಡಿದಾಗ ಬರೆದಂತಹ ಲೇಖನ ಇದು. ಈಗ ನನ್ನದೇ ಬ್ಲಾಗ್ ನಲ್ಲಿ, ಈ ನನ್ನ ಬರಹ ಇರಲಿ ಎಂದು ಇದನ್ನು ಇಲ್ಲೂ ಪ್ರಕಟಿಸುತ್ತಿದ್ದೇನೆ. ಈಗಾಗಲೆ ಇದನ್ನು ಓದಿದ್ದರೆ, ನೆನಪು ಮಾಡಿಕೊಳ್ಳುವ ಸಲುವಾಗಿ ಮತ್ತೆ ಓದಬಹುದು...ಇದನ್ನು ಓದಿಯೇ ಇಲ್ಲದಿದ್ದರೆ, ಈಗ ಓದಬಹುದು..:-)


************************************************************************************


ಹಾಯ್ " ಕ್ಯಾಂಟೀನ್ ಚೆಲುವೆ ...." ಹೇಗಿದ್ದೀಯಾ.....??!! ನಿನ್ನನ್ನ ಸರಿಯಾಗಿ ನೋಡಿ ಒಂದು ವಾರ ಆಯಿತು. ಹುಷಾರಾಗಿದ್ದೀ ತಾನೆ...?
ಓಹ್ !! ಇದೇನಿದು ’ಕ್ಯಾಂಟೀನ್ ಚೆಲುವೆ’ ಅಂತ ಕರೀತಿದ್ದೀನಿ ಅಂತ ಆಶ್ಚರ್ಯನಾ......!!!!?? ಒಂದೇ ಒಂದು ಸಲ ನೆನಪಿಸಿಕೊ.
ನಾನು ನಿನ್ನನ್ನ ಮೊದಲ ಸಲ ನೋಡಿದ್ದು ; ಈಗ ಪ್ರತಿದಿನ ನೋಡುತ್ತಿರುವುದು ಅದೇ ಕ್ಯಾಂಟೀನ್ ನಲ್ಲಿ ಅಲ್ವಾ....??!!
ದಿನಾ ಸರಿಯಾದ ಸಮಯಕ್ಕೆ ಕ್ಯಾಂಟೀನ್ ಗೆ ಹೋಗಬೇಕು ಅನ್ನೋ ಆತುರ, ಅಲ್ಲಿಗೆ ಹೋಗಿ ನಿನ್ನ ನೋಡಬೇಕು ಅನ್ನೋ ಮನಪೂರ ಕಾತುರ, ನೋಡಿದಾಗ ಜಿಗಿ ಜಿಗಿ ಅಂತ ಕುಣಿಯೋ ಮನಸ್ಸು; ಸಂತಸದ ನಗು ನಕ್ಕು ಆನಂದಪಡೋ ಹೃದಯ..... ಹೀಗೆ, ಇವಕ್ಕೆಲ್ಲ ಕಾರಣ ಆ ಕ್ಯಾಂಟೀನ್............ ಅಲ್ಲಲ್ಲ, ಅಲ್ಲಿಗೆ ಬರೋ ಚೆಲುವೆ ನೀನು ತಾನೆ ಕಾರಣ. ಅಷ್ಟಕ್ಕು ನನಗೆ ನಿನ್ನ ಹೆಸರು ಕೂಡ ಗೊತ್ತಿಲ್ಲವಲ್ಲ. !! ಅದಕ್ಕೆ ನಿನ್ನ ’ ಕ್ಯಾಂಟೀನ್ ಚೆಲುವೆ ’ ಅಂತ ಕರೆದಿದ್ದು. :-)


ನನಗೆ ಈಗಲೂ ಚೆನ್ನಾಗಿ ನೆನಪಿದೆ. ಅವತ್ತು ಶುಕ್ರವಾರ ; ನನ್ನ ಪಾಲಿಗೆ ’ ಶುಭ ಶುಕ್ರವಾರ ’ ! ಕ್ಯಾಂಟೀನ್ ನಲ್ಲಿ ತಟ್ಟೆ ಹಿಡಿದುಕೊಂಡು, ನಾನು ಕ್ಯೂ ನಲ್ಲಿ ನಿಂತಿದ್ದೆ. ಅದೆಲ್ಲಿಂದಲೋ ನೀನು ಬಂದೆ ; ಬಂದು, ’ಸ್ಪೂನ್ ಇದೆಯಾ ?’ ಅಂತ ಕ್ಯಾಂಟೀನ್ ಕೌಂಟರ್ ಬಾಯ್ ನ ಕೇಳಿದೆ. ನಿನ್ನ ಮುದ್ದಾದ ಅರಗಿಣಿಯಂತ ಮಾತುಗಳನ್ನ ಕೇಳಿ, ನನ್ನ ತಟ್ಟೆಯಲ್ಲಿದ್ದ, ನನಗಾಗಿ ತೆಗೆದುಕೊಂಡಿದ್ದ ಸ್ಪೂನನ್ನು ನಾನು ನಿನಗಾಗಲೇ ಕೊಟ್ಟುಬಿಟ್ಟಿದೆ....!!! ; ನನಗೇ ಗೊತ್ತಿಲ್ಲದೇ..........
ಸ್ಪೂನ್ ತೆಗೆದುಕೊಂಡ ನೀನು, ನಿನ್ನ ಬೊಗಸೆ ಕಣ್ಣುಗಳನ್ನು ಮಿಂಚಂತೆ ಒಮ್ಮೆ ಮಿಟುಕಿಸಿ, ಅರಳು ಮಲ್ಲಿಗೆಯಂಥ ನಗು ಚೆಲ್ಲಿ ಹೋದೆಯಲ್ಲ, ಆಗಲೇ ನನ್ನ ನಾ ಕಳೆದುಕೊಂಡಿದ್ದು.
ಬೆಳಂದಿಗಳ ತಂಗಾಳಿ ತಂಪು ಮೈಯನ್ನೆಲ್ಲಾ ಆವರಿಸಿಕೊಂಡಂತೆ ;
ಅದ್ಯಾವುದೋ ವಿಶಾಲವಾದ ಆಕಾಶದಲ್ಲಿ ಗೊತ್ತು - ಗುರಿಯಿಲ್ಲದೆ ಅಲೆಮಾರಿಯಂತೆ ಹಾರಾಡಿದಂತೆ ;
ಒಂದರ ಹಿಂದೊಂದು ಹರುಷದ ಅಲೆಗಳು ಉಕ್ಕಿ ಉಕ್ಕಿ ಮನದ ತೀರಕ್ಕೆ ಬಂದಪ್ಪಳಿಸಿದಂತೆ.....
’ಮನಸ್ಸು’ ಹೀಗೆ ಸಂತಸದಲ್ಲಿ ತೇಲಾಡುತ್ತಿರುವಾಗಲೇ,
" ಛೇ...!! ಏನ್ ಹುಡ್ಗೀರೋ.... ಒಂದು ಥ್ಯಾಂಕ್ಸ್ ಕೂಡ ಹೇಳಲಿಲ್ಲ.... " ಅಂತ ’ಬುದ್ದಿ ’ ಮನಸ್ಸನ್ನು ಎಚ್ಚರಗೊಳಿಸಿತು.
"ಥ್ಯಾಂಕ್ಸ್ , ಸಾರಿ ,,,,, ಇವೆಲ್ಲ ’ ಬುದ್ದಿ ’ ಗೆ ಗೊತ್ತಿರುವ ಭಾಷೆಗಳಾದರೆ ;
ನಗು, ಅಳು ಮನಸ್ಸಿನ ಭಾಷೆ...... " ಅಂತ ಹೇಳಿ ಮನಸ್ಸು, ಬುದ್ದಿಯ ಬಾಯಿ ಮುಚ್ಚಿಸಿತು.....!!!!


ಅವತ್ತಿನಿಂದ, ಕ್ಯಾಟೀನ್ ಗೆ ಬಂದಾಗಲೆಲ್ಲ ನನ್ನ ಕಣ್ಣುಗಳು ನಿನ್ನನ್ನೇ ಹುಡುಕುತ್ತವೆ. ನೀನು ಸಿಗದೇ ಹೋದಾಗ ಚಡಪಡಿಸುತ್ತವೆ.
ಪ್ರತಿದಿನ ನಾನು ಕ್ಯಾಂಟೀನ್ ಗೆ ಬರೋ ಸಮಯಕ್ಕೆ ಸರಿಯಾಗಿ ನೀನೂ ಬರ್ತೀಯ.... ಅಥವಾ
ನೀನು ಬರೋ ಸಮಯಕ್ಕೆ ನಾನೂ ಬರ್ತೀನಾ...... ? ? !! ಗೊತ್ತಿಲ್ಲ. ಆದ್ರೆ, ಹೀಗಾದಾಗಲೆಲ್ಲ ನನ್ನೊಳಗೆ ಸಂಭ್ರಮಿಸಲಾಗದ ಸಡಗರ. ಅಷ್ಟು ಜನರ ಮಧ್ಯೆ ನಾನು ನಿನ್ನ ಕದ್ದು ಕದ್ದು ನೋಡೋವಾಗ, ಚಕ್ಕನೆ ನೀನು ನನ್ನೆಡೆ ತಿರುಗಿ ನೋಡುತ್ತೀಯಲ್ಲ ಆಗೆಲ್ಲ ಹೇಳಿಕೊಳ್ಳಲಾಗದ ಮುಜುಗರ ಆಗುತ್ತೆ.. ಒಂದಂತೂ ಸತ್ಯ ಕಣೇ ಹುಡುಗಿ, ಕ್ಯಾಂಟೀನ್ ಗೆ ಅಥವಾ ಆಫ್ಹೀಸ್ ಗೆ ನಿನಗಿಂತ ಚೆನ್ನಾಗಿರುವವರು, ಸುಂದರಾಂಗಿಯರು, ಲಲನೆಯರು, ಮಿಟುಕಲಾಡಿಯರು ಬರಬಹುದು. ಆದರೆ, ಅವರ ಬಿಂಕ, ಬಿನ್ನಾಣ ಇವೆಲ್ಲ ಮಾದಕ, ಬರೀ ಮಾದಕ ಅಂತ ತಿಳಿದು ಮನಸ್ಸು ಜಾಗೃತವಾಗಿಬಿಡುತ್ತೆ. ಅದೇ ನಿನ್ನನ್ನು, ನಿನ್ನ ನಗು, ನೋಟ, ನಡೆ, ಹಾವ, ಭಾವ ಇವುಗಳನ್ನಿಲ್ಲ ಕಣ್ತುಂಬಿಕೊಳ್ಳುವ ನನ್ನೀ ಮನಸ್ಸು ಮೋಹಕ, ಮನಮೋಹಕ ಅಂತ ಹೇಳಿ ಹಿರಿ ಹಿರಿ ಹಿಗ್ಗುತ್ತೆ....! ! !
ಹುಡುಗಿ, ನನ್ನೆಡೆಗೆ ನೀ ಚೆಲ್ಲಿದ ಮುತ್ತಿನಂಥ ನಗು ; ಹೃದಯ ಮೀಟಿದ ಮಿಂಚಿನಂಥ ನೋಟ ನನ್ನಲ್ಲಿ ಸದಾ ಹಚ್ಚ ಹಸಿರಾದ ನೆನಪು. ನನ್ನೀ ಮನಸ್ಸಿನಲ್ಲಿ ನೂರಾಸೆಗಳೇನಿಲ್ಲ. ನಿನ್ನ ಪ್ರೇಮ ಕಾಣಿಕೆಯನ್ನು ಮನ ಬಯಸುವುದಿಲ್ಲ.
ಇರುವುದೊಂದೇ ಆಸೆ ; ಬಯಸುವುದೊಂದೇ ಬೇಡಿಕೆ ಪ್ರತಿದಿನ ಕ್ಯಾಂಟೀನ್ ನಲ್ಲಿ ತಪ್ಪದೆ ಸಿಗು.........
ಸಿಗ್ತೀಯಾ ಅಲ್ವಾ............ .... ???????? !!!!!!!!!

Thursday, August 5, 2010



ಮುಗಿಯದಿರಲಿ ಬಂಧನ.......


ಈ ಪ್ರಪಂಚದಲ್ಲಿ ನಿರೀಕ್ಷೆಗಿಂತ ದೊಡ್ಡ ನೋವು ಇನ್ನೊಂದಿಲ್ಲ. ಹೌದು, ನಿರೀಕ್ಷೆಯೇ ಎಲ್ಲ ನೋವಿಗೆ ಕಾರಣ. ಅವತ್ತು ಪ್ರತಿಸಲದಂತೆ ಈ ಸಲ ಕೂಡ ನನ್ನ ಹುಟ್ಟುಹಬ್ಬದಂದು ನಾನು ನಿನ್ನ ಕರೆಗಾಗಿ ಕಾಯುತ್ತಾ ಇದ್ದೆ. ನಿನ್ನ ಒಂದೇ ಒಂದು ಫೋನ್ ಕರೆಗೆ, ಶುಭಾಷಯದ ಮಾತಿಗೆ ನಾನಿಲ್ಲಿ ಕಾದು ಕೂತಿದ್ದಾಗಲೇ, ನೀನು ಅಲ್ಲಿ ಮದುವೆಯ ಸಡಗರದಲ್ಲಿ ಇರಬಹುದು...!!! ನಿನ್ನ ಗೆಳೆಯರಿಗೆ, ನೆಂಟರಿಷ್ಟರಿಗೆಲ್ಲ ಮದುವೆಯ ಕರೆಯೋಲೆಯನ್ನು ಹಂಚುತ್ತಿರಬಹುದು...ನಗುವಿನ ಮುಖವಾಡದೊಂದಿಗೆ, ಮನದೊಳಗಿನ ನೋವು ಯಾರಿಗೂ ಕಾಣದಂತೆ, ತಿಳಿಯದಂತೆ......


ಹೌದು, ನೀನು ಈವಾಗ ಇನ್ನೊಬ್ಬನನ್ನು ಮದುವೆ ಆಗೋಕೆ ಹೊರಟ್ಟಿದ್ದೀಯಾ....ಅಲ್ಲಲ್ಲ, ಈ ಕ್ರೂರ ವಿಧಿ ಹಾಗೆ ಮಾಡಿಸುತ್ತಿದೆ. ನಾನಿಲ್ಲದ ಕನಸನ್ನೂ ಕಾಣದ ನಿನ್ನನ್ನು, ನಾನಿಲ್ಲದ ಬದುಕಿಗೆ ತಳ್ಳುತ್ತಿದೆ. ಪರಿಸ್ಥಿತಿಯ ಕೈಗೊಂಬೆಗಳಾಗಿರುವ ನಾವು ಇದ್ಯಾವುದನ್ನು ಪ್ರಶ್ನಿಸುವ ಸ್ಥಿತಿಯಲ್ಲಿ ಇಲ್ಲ.

ಆದರೆ, ಒಂದು ವಿಷಯ ನೆನಪಿಟ್ಟುಕೋ ಗೆಳತಿ, ನೀನು ಬೇರೆಯವರ ಹೆಂಡತಿ/ಬಾಳ ಸಂಗಾತಿ ಆಗುತ್ತಿರುವ ಈ ಕ್ಷಣದಲ್ಲಿ ಕೂಡಾ ನಾ ನಿನ್ನನ್ನು ಪ್ರೀತಿಸುತ್ತಾ ಇದ್ದೀನಿ. ಇನ್ನು ಮುಂದೆ ಕೂಡ ಪ್ರ್ರೀತಿಸುತ್ತಾ ಇರುತ್ತೇನೆ. ಪ್ರೀತಿಗೆ ಮದುವೆಯೇ ಕೊನೆಯಲ್ಲ. ಪರಿಶುದ್ದ ಪ್ರೀತಿಗೆ ಯಾವುದೇ ಬಂಧದ ಅಡೆತಡೆಯಿಲ್ಲ. ಅದು ಹರಿಯುವ ನೀರಿನಂತೆ; ಸದಾಕಾಲ ಶಾಂತವಾಗಿ ಹರಿಯುತ್ತಲೇ ಇರುತ್ತದೆ. ನೀನು ಬರದೇ ಹೋಗಿದ್ದರೆ, ಈ ಹಾದಿಗೆ, ಹರಿವ ನದಿಗೆ, ಬೀಸುವ ಗಾಳಿಗೆ, ಸುರುಯುವ ಮಳೆಗೆ, ನನ್ನ ಬಾಳಿಗೆ ಅರ್ಥವೇ ಇರುತ್ತಿರಲಿಲ್ಲವೇನೋ... ನೀನು ನನ್ನ ಪ್ರೀತಿಗೆ ’ಹೂಂ’ ಅಂದ ದಿನದಿಂದ ಎದೆಯ ಬಾಗಿಲಲ್ಲಿ ಹೊಂಗನಸುಗಳ ರಂಗೋಲೆ ಬಿಡಿಸುತ್ತಾ ಸಂಭ್ರಮಿಸಿದ್ದೆ.

ಆಗಸದಲ್ಲಿರುವ ಬೆಳ್ಳಿಚುಕ್ಕಿಗಳನ್ನು ಸೇರಿಸಿ, ಸುಂದರವಾದ ಚಿತ್ತಾರ ಬಿಡಿಸುವುದನ್ನು ಆ ದೇವರು ಮರೆತಿದ್ದಾನ..?!! ಗೊತ್ತಿಲ್ಲ. ಆದರೆ, ಪರಸ್ಪರ ಮೆಚ್ಚುವ, ಪ್ರೀತಿ ತುಂಬಿದ ಎರಡು ಹೃದಯಗಳನ್ನು ಸೇರಿಸಲು ಆ ದೇವರು ಖಂಡಿತ ಮರೆತಿದ್ದಾನೆ...ನಮ್ಮಿಬ್ಬರ ಪ್ರೀತಿಗೆ ಯಾವುದೇ ಒಬ್ಬ ವ್ಯಕ್ತಿ ಅಡ್ಡಿಯಾಗಿರುತ್ತಿದ್ದರೂ, ನಾವು ಜೊತೆಯಾಗ ಬಹುದಾಗಿತ್ತು, ಒಟ್ಟಾಗಿ ಬಾಳಬಹುದಾಗಿತ್ತು. ಆದರೆ, ಈ ಜಾತಿ, ಕುಟುಂಬಗಳ ಆಚಾರ-ವಿಚಾರ ಇವುಗಳ ಕಾಲಡಿಗೆ ಸಿಕ್ಕು ನಮ್ಮ ಪ್ರೀತಿ ನಲುಗಿ ಹೋಯಿತು; ಒಂದಿಷ್ಟೂ ಪ್ರತಿರೋಧ ತೋರದೆ... ಎದೆಯ ತುಂಬೆಲ್ಲಾ ಗಾಯ ಮಾಡಿದ ವಿಧಿಯ ಆಟವನ್ನು ನೆನೆ ನೆನೆದು ರಕ್ತ ಕುದಿಯುತ್ತದೆ, ಅದರ ಬೆನ್ನ ಹಿಂದೆಯೆ ನಮ್ಮ ಅಸಹಾಯಕ ಸ್ಥಿತಿ ನೆನೆದು ಮನ ಮರುಗುತಿದೆ....

ನಮ್ಮ ಇಷ್ಟು ದಿನದ ಒಡನಾಟ, ನಾವಾಡಿದ ಮಾತುಗಳು, ನಾವು ಕಳೆದ ಕ್ಷಣಗಳು, ಇವುಗಳನ್ನೆಲ್ಲಾ ಮರೆಯುವುದಾದರೂ ಹೇಗೆ...!?! ಮನದ ಹಿತ್ತಲಲ್ಲಿ ನಮ್ಮೆಲ್ಲಾ ಭಗ್ನ ಕನಸುಗಳನ್ನು ಹೂತಿಡಬಹುದೇ...?! ಕಾಲ ಕಳೆದಂತೆ ಕನಸನ್ನು ಮರೆಯಬಹುದು, ಕಷ್ಟವಾದರೂ ನಿನ್ನನ್ನು ಕಾಣದ ನೋವನ್ನು ಸಹಿಸಬಹುದು. ಆದರೆ, ಅನುಭವ ತಂದ ಪ್ರೀತಿಯನ್ನು, ಪ್ರೀತಿ ತಂದ ನಿನ್ನನ್ನು ಹೇಗೆ ತಾನೆ ಮರೆಯಲಿ....?!!


ಒಂದಂತೂ ನಿಜ ಗೆಳತಿ, ನಾವಿಬ್ಬರೂ ಪರಿಶುದ್ದ ಮನಸ್ಸಿನಿಂದ ಪ್ರಿತಿಸಿದವರು. ದೀಪದ ಹುಳು ಬೆಳಕಿನ ಮೇಲಿನ ಮೋಹದಿಂದ ತನ್ನನ್ನೇ ತಾನು ಸುಟ್ಟುಕೊಳ್ಳುವಂತೆ ಪ್ರೀತಿಯಲ್ಲಿ ಬರೀ ನೋವು, ವೇದನೆ ಇದೆ ಅಂತ ಗೊತ್ತಿದ್ದರೂ ನಾವಿಬ್ಬರು ಪ್ರೀತಿಸಿದೆವು....ಅದುವೇ, ನಿಷ್ಕಲ್ಮಶ, ನಿಸ್ವಾರ್ಥ ಪ್ರೀತಿ ಎಂಬುದು ನನ್ನ ನಂಬಿಕೆ...

ಗೆಳತಿ, ನೀನು ನನಗೆ ಹುಟ್ಟುಹಬ್ಬದ ಶುಭಾಷಯ ತಿಳಿಸದಿರಬಹುದು, ಆದರೆ ನಿನ್ನು ಮದುವೆಗೆ ಶುಭಾಷಯಗಳನ್ನು ಮುಂಚಿತವಾಗಿಯೇ ತಿಳಿಸುತ್ತಿದ್ದೇನೆ...


ಸ್ವರ್ಗದಲ್ಲಿ ನಿಶ್ಚಯವಾಗಿರುವ ಮದುವೆ ನಿಮ್ಮದು,
ಸುಖ, ಶಾಂತಿ, ನೆಮ್ಮದಿಯ ಬಾಳು ನಿಮ್ಮದಾಗಲಿ,
ಪ್ರೀತಿ ತುಂಬಿದ ನಿಮ್ಮ ಸಂಸಾರ ಸ್ವರ್ಗವನ್ನು
ಈ ಭೂಬಿಯ ಮೇಲೆ ನಾವೆಲ್ಲ ಕಾಣುವಂತಾಗಲಿ..


-ಇಂತಿ ನಿನ್ನ ಪ್ರೀತಿಯ....